ಬೆಂಗಳೂರು, ಜು.13 www.bengaluruwire.com : ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ proposed ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ (high-tech defence and aerospace park) ಸ್ಥಾಪನೆಗೆ ಸಂಬಂಧಿಸಿದ ಭೂ ಸ್ವಾಧೀನ ಬಿಕ್ಕಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇದೇ ಮಂಗಳವಾರ, ಜುಲೈ 15ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವುದು ಸರ್ಕಾರದ ಆಶಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ (MB Patil) ಭಾನುವಾರ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, “ಕೆಲವು ರೈತರು ಭೂಸ್ವಾಧೀನ ಬೇಡವೆಂದು ಹೋರಾಟ ಮಾಡುತ್ತಿದ್ದಾರೆ. ಆದರೆ, ಮತ್ತೆ ಕೆಲವರು 449 ಎಕರೆ ಜಮೀನನ್ನು ಬಿಟ್ಟುಕೊಡಲು ಸಿದ್ಧರಿದ್ದು, ಎಕರೆಗೆ 3.5 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ರೈತರಲ್ಲೇ ಭಿನ್ನಾಭಿಪ್ರಾಯಗಳಿದ್ದು, ಸರ್ಕಾರ ಸಾಧಕ-ಬಾಧಕಗಳೆರಡನ್ನೂ ಪರಿಶೀಲಿಸುತ್ತಿದೆ” ಎಂದು ಮಾಹಿತಿ ನೀಡಿದರು.
ರೈತ ಹೋರಾಟ ಸಮಿತಿಯಿಂದ ಸಿಎಂ ಭೇಟಿ :

ಶನಿವಾರದಂದು ‘ಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿ’ಯ ಹೆಸರಿನಲ್ಲಿ ಕೆಲವು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, 449 ಎಕರೆ ಭೂಮಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಯೋಜನೆಯ ಪ್ರಾರಂಭಿಕ ಅಧಿಸೂಚನೆಯಲ್ಲಿ ಇಷ್ಟು ಭೂಮಿಯನ್ನೇ ಗುರುತಿಸಲಾಗಿತ್ತು. “ನಿಜವಾದ ರೈತರ ಧ್ವನಿಗೆ ಸರ್ಕಾರ ಬೆಲೆ ಕೊಡುತ್ತದೆ ಹೊರತು, ರೈತರ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಅಲ್ಲ” ಎಂದು ಪಾಟೀಲ್ ಖಡಾಖಂಡಿತವಾಗಿ ನುಡಿದರು.
ಬಿಲ್ಡರ್‌ಗಳು, ರಾಜಕಾರಣಿಗಳ ಪಾತ್ರದ ಬಗ್ಗೆ ಎಚ್ಚರಿಕೆ :
ದೇವನಹಳ್ಳಿ ಸುತ್ತಮುತ್ತ ಯಾವ ಬಿಲ್ಡರ್‌ಗಳು ಎಷ್ಟು ಭೂಮಿ ಖರೀದಿಸಿದ್ದಾರೆ, ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ, ಯಾವ ರಾಜಕಾರಣಿಗಳ ಜಮೀನು ಎಷ್ಟಿದೆ ಹಾಗೂ ರೈತ ಹೋರಾಟದ ಹಿಂದೆ ಯಾರ ಕುಮ್ಮಕ್ಕಿದೆ ಎಂಬುದು ಸರ್ಕಾರಕ್ಕೆ ತಿಳಿದಿದೆ ಎಂದು ಸಚಿವರು ಎಚ್ಚರಿಸಿದರು.
ದೇವನಹಳ್ಳಿ ಸುತ್ತಲಿನ ಪ್ರದೇಶದಲ್ಲಿ ಕೃಷಿ ಉಳಿಯಬೇಕು ಎಂಬ ಕೂಗು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರ ಶಾಶ್ವತ ಕೃಷಿ ವಲಯ ಮಾಡುವ ಬಗ್ಗೆಯೂ ಚಿಂತಿಸುತ್ತಿದೆ ಎಂದ ಅವರು, ಈ ವಿಚಾರದಲ್ಲಿ ಕೆಲವರು “ಬೇಡ” ಎನ್ನುವುದು ಸರಿಯಾದ ನಿಲುವಲ್ಲ ಎಂದು ಪ್ರತಿಪಾದಿಸಿದರು.
ಕೆಲವು ಸಾಹಿತಿಗಳು ಮತ್ತು ಚಿಂತಕರು ಭೂಸ್ವಾಧೀನ ಬೇಡವೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿದ ಪಾಟೀಲ್, “ಅದನ್ನು ನಾನು ವಿರೋಧಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಡುವ ಹಕ್ಕಿದೆ. ನಾವು ಎಲ್ಲಾ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇವೆ” ಎಂದು ತಿಳಿಸಿದರು.
ನಾಯಕತ್ವದಲ್ಲಿ ಗೊಂದಲವಿಲ್ಲ, ಬಿಜೆಪಿ-ಜೆಡಿಎಸ್‌ಗೆ ತಿರುಗೇಟು :
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಗೊಂದಲದ ವದಂತಿಗಳನ್ನು ಸಚಿವ ಎಂ.ಬಿ. ಪಾಟೀಲ್ ತಳ್ಳಿಹಾಕಿದರು. ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಶಾಸಕರ ಅಭಿಪ್ರಾಯ ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. “ಕೊನೆಗೂ ದುಡ್ಡು ಕೊಡುವುದು ಮುಖ್ಯಮಂತ್ರಿಗಳೇ ತಾನೇ” ಎಂದು ಸಚಿವರು ಸ್ಪಷ್ಟಪಡಿಸಿದರು.
ಬಿಜೆಪಿ ತಮ್ಮ 50-60 ಶಾಸಕರ ಮೇಲೆ ಕಣ್ಣಿಟ್ಟಿದೆ ಮತ್ತು ಏಜೆಂಟರನ್ನು ಕಳುಹಿಸುತ್ತಿದೆ ಎಂಬ ಕಾಂಗ್ರೆಸ್ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, “ನಮ್ಮಲ್ಲಿ 140ಕ್ಕೂ ಹೆಚ್ಚು ಶಾಸಕರಿದ್ದಾರೆ. ಪಕ್ಷಾಂತರ ಆಗಬೇಕಾದರೆ 80-90 ಶಾಸಕರು ಹೋಗಬೇಕಾಗುತ್ತದೆ. ಈಗ ಯಾರೂ ಅಷ್ಟು ಮೂರ್ಖರಿಲ್ಲ. ಹಿಂದೆ 17 ಶಾಸಕರು ಬಿಜೆಪಿಗೆ ಹೋದರು. ಈಗ ಅದೆಲ್ಲ ನಡೆಯುವುದಿಲ್ಲ” ಎಂದರು. ವಾಸ್ತವವಾಗಿ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ 18-20 ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.






















