ಬೆಂಗಳೂರು ಗ್ರಾಮಾಂತರ, ಜು.07 www.bengaluruwire.com : ಪ್ರೀತಿಸಿದ್ದಾಳೆಂದು ಅಶ್ಲೀಲ ಮೆಸೇಜ್ ಕಳುಹಿಸಿದ ಮಾಜಿ ಪ್ರಿಯಕರನ ಮೇಲೆ, ಯುವತಿಯ ಮುಂದೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.
ಕುಶಾಲ್ ಎಂಬ ಯುವಕನಿಗೆ ಯುವತಿಯ ಹೊಸ ಪ್ರಿಯಕರ ಮತ್ತು ಆತನ ಸ್ನೇಹಿತರು ಸೇರಿ ಬಟ್ಟೆ ಬಿಚ್ಚಿಸಿ, ಗುಪ್ತಾಂಗಕ್ಕೆ ತುಳಿದು, ಹಾಡು ಹೇಳುವಂತೆ ಒತ್ತಾಯಿಸಿ ವಿಕೃತವಾಗಿ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ‘ರೇಣುಕಾಸ್ವಾಮಿ ಪ್ರಕರಣದ’ ಉಲ್ಲೇಖಿಸಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.
ಘಟನೆ ವಿವರ:
ಕುಶಾಲ್ ಮತ್ತು ಹಲ್ಲೆ ಮಾಡಿಸಿದ ಯುವತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ಸಂಬಂಧ ಮುರಿದುಬಿದ್ದಿದ್ದು, ಯುವತಿ ಮತ್ತೊಬ್ಬ ಹುಡುಗನನ್ನು ಪ್ರೀತಿಸಲು ಆರಂಭಿಸಿದ್ದಳು. ಇದನ್ನು ಸಹಿಸಲಾಗದೆ ಕುಶಾಲ್, ಯುವತಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ, ಯುವತಿ ತನ್ನ ಹೊಸ ಪ್ರಿಯಕರ ಮತ್ತು ಆತನ ಸ್ನೇಹಿತರೊಂದಿಗೆ ಸೇರಿ ಕುಶಾಲ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಹಾಡಹಗಲೇ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ವಿಕೃತಿ:
ಆರೋಪಿಗಳು ಕುಶಾಲ್‌ನ ಬಟ್ಟೆಗಳನ್ನು ಬಿಚ್ಚಿಸಿ, ಆತನ ಗುಪ್ತಾಂಗಕ್ಕೆ ತುಳಿದು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ “ಕಿತ್ನೇ ಆದ್ಮಿ ಹೇ ರೇ” ಎಂದು ಸಿನಿಮೀಯ ಶೈಲಿಯಲ್ಲಿ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ರೇಣುಕಾಸ್ವಾಮಿ ಪ್ರಕರಣವನ್ನು ಉಲ್ಲೇಖಿಸಿ, “ಎ1 ಹೇಮಂತ್, ಎ2 ನಾನು” ಎಂದು ಹೇಳುತ್ತಾ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯ ದೃಶ್ಯಗಳನ್ನು ವಿಡಿಯೋ ಮಾಡಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ಯುವಕನಿಗೆ ಜೀವಭಯ ಬರಿಸಿದ್ದ ಆರೋಪಿಗಳು, ಪರಿಪರಿಯಾಗಿ ಬೇಡಿಕೊಂಡರೂ ಬಿಡದೆ ವಿಕೃತಿ ಮೆರೆದಿದ್ದಾರೆ.
ಪ್ರಕರಣದ ಸೂತ್ರಧಾರಿ:
ಈ ಘಟನೆಗೆ 17 ವರ್ಷದ ಬಾಲಕಿ ಸೂತ್ರಧಾರಿಯಾಗಿದ್ದಾಳೆ. ಬಂಧಿತ ಬಾಲಕಿ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದು, ಆಕೆಯ ಪ್ರೇರಣೆಯ ಮೇರೆಗೆ ಈ ಹಲ್ಲೆ ನಡೆದಿದೆ. ಮಾಜಿ ಪ್ರಿಯಕರನ ಮೇಲೆ ಕಿಂಚಿತ್ತೂ ಕರುಣೆ ತೋರದ ಯುವತಿಯ ಮುಂದೆಯೇ ಈ ಘೋರ ಹಲ್ಲೆ ನಡೆದಿದೆ.
ಬಂಧನ ಮತ್ತು ಬಿಡುಗಡೆ:
ಪ್ರಕರಣ ಸಂಬಂಧ ಹೇಮಂತ್, ಯಶ್ವಂತ್, ಶಿವಶಂಕರ್, ಶಶಾಂಕ್ ಗೌಡ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿ ಸೇರಿ ಐವರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿಗಳನ್ನು ಹೊರತುಪಡಿಸಿ, ಬಂಧಿತರ ಪೈಕಿ ಎಲ್ಲ ಆರೋಪಿಗಳ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಹೇಮಂತ್ ಮೇಲೆ ಇದಕ್ಕೂ ಮೊದಲು ಹಲವು ಹಲ್ಲೆ ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ ಎಂದು ತಿಳಿದುಬಂದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















