ಬೆಂಗಳೂರು, ಜೂ.25 www.bengaluruwire.com : ಸುಮಾರು 23 ದೇಶಗಳಲ್ಲಿ ತನ್ನ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳ ಮಾರಾಟ ವ್ಯವಸ್ಥೆ ಹೊಂದಿರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಸಂಸ್ಥೆಗೆ, ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರಾನ್ ಮತ್ತು ಕರ್ನಾಟಕ-ಕೇರಳ ವ್ಯಾಪ್ತಿಯಲ್ಲಿನ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಬುಧವಾರ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಅವರಿಬ್ಬರೂ ಕೆಎಸ್ ಡಿಎಲ್ ಇತಿಹಾಸ, ಕಾರ್ಯವಿಧಾನ, ಮಾರುಕಟ್ಟೆ ಜಾಲ, ಆದಾಯ, ಭವಿಷ್ಯದ ಯೋಜನೆಗಳ ಬಗ್ಗೆ ವಿವರವಾಗಿ ತಿಳಿದುಕೊಂಡರು.
ಕೆಎಸ್ ಡಿಎಲ್ ಗೆ ಭೇಟಿ ನೀಡಿದ ಈ ಇಬ್ಬರು ಗಣ್ಯರನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆತ್ಮೀಯವಾಗಿ ಬರಮಾಡಿಕೊಂಡರು. ಅವರ ಜೊತೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸಿ ಎಸ್ ನಾಡಗೌಡ ಕೂಡ ಇದ್ದರು. ಈ ಸಂದರ್ಭದಲ್ಲಿ, ಕೆಎಸ್ ಡಿಎಲ್ ಚರಿತ್ರೆಯನ್ನು ಕಟ್ಟಿಕೊಡುವ ಪ್ರಾತ್ಯಕ್ಷಿಕೆಯನ್ನು ಲಿಂಡಿ ಮತ್ತು ಅಯ್ಯರ್ ಇಬ್ಬರಿಗೂ ಪ್ರದರ್ಶಿಸಲಾಯಿತು. ಸಂಸ್ಥೆಯ ಉಗಮದ ಹಿನ್ನೆಲೆಯಲ್ಲಿ ಬ್ರಿಟನ್ನಿನ ಪಾತ್ರವಿರುವುದನ್ನು ಕೇಳಿ, ಇಬ್ಬರೂ ಅಚ್ಚರಿ ವ್ಯಕ್ತಪಡಿಸಿದರು. ಜತೆಯಲ್ಲೇ ಕೆಎಸ್ ಡಿಎಲ್ ಉತ್ಪನ್ನಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಲಿಂಡಿ ಮತ್ತು ಅಯ್ಯರ್ ಇಬ್ಬರೂ ಸಂಸ್ಥೆಯ ಉತ್ಪನ್ನಗಳ ತಯಾರಿಕೆ ವಿಧಾನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಿಂಡಿ ಕ್ಯಾಮರಾನ್, “ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವಾಣಿಜ್ಯ ಒಪ್ಪಂದ ಏರ್ಪಟ್ಟಿರುವುದರಿಂದ ಎರಡೂ ದೇಶಗಳಿಗೂ ಸಾಕಷ್ಟು ಲಾಭವಾಗಲಿದೆ. ನಾವು ನಮ್ಮ ನಮ್ಮ ನೈಪುಣ್ಯಗಳನ್ನು ಪರಸ್ಪರರ ಹಿತಗಳಿಗೆ ಧಕ್ಕೆಯಾಗದಂತೆ ವಿನಿಮಯ ಮಾಡಿಕೊಳ್ಳಬೇಕು. ಈ ಒಡಂಬಡಿಕೆಯ ಲಾಭವು ಕೈಗಾರಿಕಾ ಬೆಳವಣಿಗೆ ಮತ್ತು ವಾಣಿಜ್ಯ ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೂ ಸಿಗಲಿದೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ನೂರಾ ಎಂಟು ವರ್ಷಗಳ ಹಿಂದೆ, ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಸ್ಥಾನದಿಂದ ಪರಿಣತರೊಬ್ಬರನ್ನು ಬ್ರಿಟನ್ನಿಗೆ ಕಳುಹಿಸಿ, ಸಾಬೂನು ತಯಾರಿಕೆ ತಂತ್ರಜ್ಞಾನದ ಪರಿಚಯ ಮಾಡಿಕೊಂಡರು. ಆಮೇಲೆ, ನಾಲ್ವಡಿ ಮತ್ತು ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಸ್ಥಾಪನೆಗೊಂಡ ಕೆಎಸ್ ಡಿಎಲ್ ಸಂಸ್ಥೆಯು ಉತ್ಕೃಷ್ಟ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವ ಪಾಟೀಲ ತಿಳಿಸಿದರು.
`ಕೆಎಸ್ ಡಿಎಲ್ ಉತ್ಪನ್ನಗಳನ್ನು ಸದ್ಯಕ್ಕೆ 23 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಯೂರೋಪಿಯನ್ ರಾಷ್ಟ್ರಗಳಿಗೂ ಮೈಸೂರು ಸ್ಯಾಂಡಲ್ ಸೋಪ್, ಶವರ್ ಜೆಲ್ ಮುಂತಾದ ಗುಣಮಟ್ಟದ ಉತ್ಪನ್ನಗಳನ್ನು ಮತ್ತಷ್ಟು ರವಾನಿಸಲಾಗುವುದು. ಇದಕ್ಕೆ ಬ್ರಿಟನ್ನಿನ ಸಹಕಾರವೂ ನಮಗೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಾರುಕಟ್ಟೆ ವಿಸ್ತರಣೆ ನಡೆಯುತ್ತಿದೆ’ ಎಂದು ವಿವರಿಸಿದರು.
ಸಂಸ್ಥೆಯು ಕಳೆದ ಸಾಲಿನಲ್ಲಿ 416 ಕೋಟಿ ರೂ. ಲಾಭ ಗಳಿಸಿದ್ದು, 2028ರ ವೇಳೆಗೆ ವಾರ್ಷಿಕ ವಹಿವಾಟನ್ನು 3,000 ಕೋಟಿ ರೂ.ಗಳಿಗೆ ಕೊಂಡೊಯ್ಯಲಾಗುವುದು. ಜತೆಗೆ ವಿಜಯಪುರದಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಉತ್ಪಾದನಾ ಘಟಕವನ್ನೂ ಆರಂಭಿಸಲಾಗುವುದು. ಸದ್ಯದಲ್ಲೇ ಸಂಸ್ಥೆಯ ವತಿಯಿಂದ ನಾನಾ ತರಹದ ಸುಗಂಧ ದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದರು.
ಜೊತೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.






















