ಬೆಂಗಳೂರು, ಜೂ.23 www.bengaluruwire.com : ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ, ಕಾಡುಗೋಡಿ ಪ್ಲಾಂಟೇಶನ್‌ನ ಸರ್ವೆ ನಂ.1ರಲ್ಲಿ ಒತ್ತುವರಿಯಾಗಿದ್ದ ಸುಮಾರು 4,000 ಕೋಟಿ ರೂಪಾಯಿ ಮೌಲ್ಯದ 120 ಎಕರೆ ಅರಣ್ಯ ಭೂಮಿಯನ್ನು ಇಂದು ತೆರವುಗೊಳಿಸಿ ಮರುವಶಪಡಿಸಿಕೊಳ್ಳಲಾಗಿದೆ.
ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ, ಬೆಂಗಳೂರು ನಗರ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ, ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ, ಸೋಮವಾರ ಬೆಳಗ್ಗೆಯೇ ಜೆಸಿಬಿಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ಒತ್ತುವರಿ ತೆರವುಗೊಳಿಸಿ, ಗಡಿ ಗುರುತಿಸಿ, ಸ್ಥಳೀಯ ಪ್ರಭೇದದ ಸಸಿಗಳನ್ನು ನೆಡುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು, “ಬೆಂಗಳೂರು ವ್ಯಾಪಕವಾಗಿ ಬೆಳೆಯುತ್ತಿದ್ದು, ಹಸಿರು ಹೊದಿಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಶ್ವಾಸತಾಣಗಳ ಸಂರಕ್ಷಣೆ ಮಾಡಬೇಕು, ನಿಯಮಾನುಸಾರ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಬೇಕು” ಎಂದು ಸ್ಪಷ್ಟ ಸೂಚನೆ ನೀಡಿದ್ದರು. ಇದೇ ಸೂಚನೆಯ ಭಾಗವಾಗಿ ಇಂದಿನ ಕಾರ್ಯಾಚರಣೆ ನಡೆದಿದೆ.
₹8,000 ಕೋಟಿ ಮೌಲ್ಯದ ಸಂಪತ್ತು ವಶ!

ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಕಳೆದ 2 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಒಟ್ಟು 128 ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲಾಗಿತ್ತು. ಇಂದಿನ 120 ಎಕರೆ ಒತ್ತುವರಿ ತೆರವು ಸೇರಿದಂತೆ, ಇದುವರೆಗೂ ಒಟ್ಟು 248 ಎಕರೆ ಅರಣ್ಯ ಭೂಮಿಯನ್ನು ಮರುವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 8 ಸಾವಿರ ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂಬುದನ್ನು ಈ ಕಾರ್ಯಾಚರಣೆಗಳು ತೋರಿಸಿಕೊಟ್ಟಿವೆ.






















