ಬೆಂಗಳೂರು, ಜೂ.22 www.bengaluruwire.com : ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳು ಎಷ್ಟು ಕೆಟ್ಟದಾಗಿವೆ ಎಂಬುದಕ್ಕೆ ಅಂಬೇಡ್ಕರ್ ವೀದಿಯಿಂದ ಪ್ರೆಸ್ ಕ್ಲಬ್ ಮೂಲಕ ಕಬ್ಬನ್ ಪಾರ್ಕ್ ಕಡೆಗೆ ಸಾಗುವ ರಸ್ತೆಯೇ ಒಳ್ಳೆಯ ಉದಾಹರಣೆಯಾಗಿದೆ.
ಹೈಕೋರ್ಟ್ ಆವರಣ, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್, ಚುನಾವಣಾ ಆಯೋಗದ ಕಚೇರಿ ಹಾಗೂ ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿರುವ ಇಲ್ಲಿನ ಡಾಂಬರ್ ರಸ್ತೆಯನ್ನು ಗುಂಡಿಗಳೇ ಆಕ್ರಮಿಸಿಕೊಂಡಿವೆ. ಬೆಳಗ್ಗೆಯಿಂದ ಸಂಜೆಯ ತನಕ ಕಚೇರಿ ಅವಧಿಯಲ್ಲಿ ದೈನಂದಿನ ಕೋರ್ಟ್ ಕೆಲಸ ಕಾರ್ಯಗಳಿಗೆ, ಪತ್ರಕರ್ತರು ಸಾಗುವ ಈ ರಸ್ತೆಯಲ್ಲಿ ಬಿಬಿಎಂಪಿಯು ಟಾರ್ ಹಾಕದೆ ಹಲವು ವರ್ಷಗಳೇ ಕಳೆದಿವೆ. ಹೀಗಾಗಿ ಈ ಭಾಗದಲ್ಲಿ ವಾಹನ ಚಾಲನೆ ಮಾಡಲು ವಾಹನ ಸವಾರರು ಸಾಕಷ್ಟು ಪ್ರಯಾಸ ಪಡಬೇಕಿದೆ. ಪಾದಾಚಾರಿಗಳು ಈ ಭಾಗದಲ್ಲಿ ಸಾಗಲೂ ಹರಸಾಹಸ ಪಡುತ್ತಾರೆ.
ಈ ರಸ್ತೆಯಲ್ಲಿ ಪ್ರಮುಖ ಸರ್ಕಾರಿ ಕಚೇರಿಗಳು ಇದ್ದಾಗಿಯೂ ಈ ರಸ್ತೆಯಲ್ಲಿ ದಿನನಿತ್ಯ ಅನೇಕಾನೇಕ ಉನ್ನತ ಅಧಿಕಾರಿಗಳು, ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ವಕೀಲರುಗಳು ಸಂಚರಿಸುತ್ತಾದರೂ ಈ ಗುಂಡಿಮಯ ರಸ್ತೆಯ ರಿಪೇರಿಗೆ ಬಿಬಿಎಂಪಿ ಅಧಿಕಾರಿಗಳು ಗಮನ ನೀಡದೆ ಹೋದದ್ದು ವಿಸ್ಮಯವೇ ಸರಿ. ಬೆಳಗ್ಗೆ ಒಂಬತ್ತು ಗಂಟೆಯಿಂದ ಮುಸ್ಸಂಜೆವರೆಗೂ ವಾಹನ ಮತ್ತು ಜನದಟ್ಟಣೆ ಅಧಿಕವಾಗಿರುತ್ತದೆ. ಇಂತಹ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲದೆ, ಅಪಾಯಕರವಾಗಿದ್ದು ಈ ಕೆಟ್ಟ ರಸ್ತೆಯಲ್ಲಿ ವಾಹನ ಚಲಿಸುವುದೇ ಚಾಲಕರಿಗೆ ದುಸ್ತರವಾಗಿ ಪರಿಣಮಿಸಿದೆ ಎಂದು ಸಂಚಾರಿ ಪೊಲೀಸರೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಈ ಮೃತ್ಯು ಕೂಪದ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲಕರು ಅನುಭವಿಸುವ ಯಾತನೆ ವರ್ಣತೀತ. ದ್ವಿಚಕ್ರ ವಾಹನ ಚಾಲಕರು, ಹಳ್ಳ ತಪ್ಪಿಸಿಕೊಳ್ಳಲು ಸ್ವಲ್ಪ ಅಜಾಗರೂಕರಾದರೂ ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರುವುದಂತೂ ಶತಃಸಿದ್ಧ. ರಾಜ್ಯದ ಆಡಳಿತ ನಡೆಸುವ ವಿಧಾನಸೌಧದ ಮುಂದೆಯೇ ಈ ರೀತಿಯಾಗಿ ಗುಂಡಿಗಳಿಂದ ಭರ್ಜರಿತವಾಗಿರುವ ರಸ್ತೆ ಇರುವುದು ನಿಜಕ್ಕೂ ಆಡಳಿತಕ್ಕೊಂದು ಕಪ್ಪು ಚುಕ್ಕಿಯೇ ಆಗಿದೆ. ಹಾಗಾಗಿ ಸುಗಮ ಸಂಚಾರ ಮತ್ತು ವಾಹನ ಚಾಲಕರಿಗಾಗುತ್ತಿರುವ ಘಾಸಿ ತಪ್ಪಿಸಲು ಶೀಘ್ರವೇ ರಸ್ತೆ ದುರಸ್ತಿ ಮಾಡಬೇಕು” ಎಂದು ದಿನನಿತ್ಯವಾಗಿ ಈ ಭಾಗವಾಗಿ ವಾಹನ ಚಲಾಯಿಸುವ ವಾಹನ ಸವಾರ ಶಿವಪ್ರಸಾದ್.ಎಸ್ ಬಿಬಿಎಂಪಿಯನ್ನು ಆಗ್ರಹಿಸಿದ್ದಾರೆ.

ಬಿಬಿಎಂಪಿ ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ, ಚಾಲಕರಿಗೆ ಯಮ ಮಾರ್ಗವಾಗಿರುವ ಈ ರಸ್ತೆಯನ್ನು ದುರಸ್ತಿ ಮಾಡಿ, ವಾಹನ ಚಾಲಕರಿಗಾಗಿರುವ ಬವಣೆ ಮತ್ತು ಸಂಭವಿಸುವ ಅಪಾಯಗಳನ್ನು ತಪ್ಪಿಸಬೇಕಾದದ್ದು ಅತ್ಯಂತ ಜರೂರು ಕೆಲಸವಾಗಿದೆ ಎಂದು ಸಾರ್ವಜನಿಕರು, ವಕೀಲರು ಹಾಗೂ ಸಂಚಾರಿ ಪೊಲೀಸರು ಪಾಲಿಕೆಯನ್ನು ಒತ್ತಾಯಿಸಿದ್ದಾರೆ.























