ಬೆಂಗಳೂರು, ಮೇ.30 www.bengaluruwire.com : ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೇಜರ್ ಮಣಿವಣ್ಣನ್ ಪಿ ಅವರಿಗೆ ರಾಜ್ಯ ಸರ್ಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ)ಆಯುಕ್ತರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿದೆ. ಈ ಕುರಿತು ಇಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಹಾಲಿ ಆಯುಕ್ತರಾಗಿದ್ದ ಜಯರಾಮ್ ಎನ್., ಅವರು ನಾಳೆ (ಮೇ 31)ರಂದು ನಿವೃತ್ತಿ ಹೊಂದುತ್ತಿದ್ದು, ಆ ಹುದ್ದೆ ಖಾಲಿಯಾಗಲಿದೆ. ಈ ಹಿನ್ನೆಲೆಯಲ್ಲಿ ಮೇ 31ರ ಅಪರಾಹ್ನದಿಂದ ಜಾರಿಗೆ ಬರುವಂತೆ ಮಣಿವಣ್ಣನ್ ಅವರಿಗೆ ಈ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಮೇಜರ್ ಮಣಿವಣ್ಣನ್ ಪಿ., ಕರ್ನಾಟಕ ಕೇಡರ್‌ನ 1998 ಬ್ಯಾಚ್‌ನ ಅಧಿಕಾರಿ. ಪ್ರಸ್ತುತ ಅವರು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವರ ಅನುಭವವು, ಬೆಂಗಳೂರಿನ ವಿವಿಧ ವರ್ಗಗಳ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ಬಿಡಿಎ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮಣಿವಣ್ಣನ್ ಅವರು ಈ ಹಿಂದೆ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ, ವಿವಿಧ ಇಲಾಖೆಗಳಲ್ಲಿ ಮುಖ್ಯಸ್ಥರಾಗಿ ಮತ್ತು ಹಲವಾರು ರಾಜ್ಯ ಮಟ್ಟದ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದ ಗುಣಗಳು, ಆಡಳಿತಾತ್ಮಕ ಅನುಭವ ಮತ್ತು ದಕ್ಷತೆಗಾಗಿ ಅವರು ಹೆಸರುವಾಸಿಯಾಗಿದ್ದಾರೆ. ಬಿಡಿಎ ಆಯುಕ್ತರಾಗಿ ಅವರ ನೇಮಕಾತಿಯು ನಗರದ ಅಭಿವೃದ್ಧಿ ಯೋಜನೆಗಳಿಗೆ ಹೊಸ ಚೈತನ್ಯವನ್ನು ನೀಡುವ ನಿರೀಕ್ಷೆಯಿದೆ.

ಬಿಡಿಎಗೆ ಹೊಸ ದಿಕ್ಕು:
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಬಳಿಕ ಕವಲುದಾರಿಯಲ್ಲಿರುವ ಬಿಡಿಎ ಆಯುಕ್ತರಾಗಿ ಮಣಿವಣ್ಣನ್ ಅವರ ನೇಮಕಾತಿಯು ಬೆಂಗಳೂರಿನ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡುವ ಸಾಧ್ಯತೆಯಿದೆ. ಮೂಲಸೌಕರ್ಯ, ವಸತಿ ಯೋಜನೆಗಳು, ಮತ್ತು ನಗರ ಯೋಜನೆಗಳಲ್ಲಿ ಅವರು ಯಾವ ಬದಲಾವಣೆಗಳನ್ನು ತರುತ್ತಾರೆ ಎಂಬುದನ್ನು ಕಾದು ನೋಡಬೇಕು. ಸಮಾಜ ಕಲ್ಯಾಣ ಇಲಾಖೆಯ ಅವರ ಅನುಭವವು ಬಿಡಿಎ ಯೋಜನೆಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಬಹುದು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅವರ ಆದೇಶದ ಮೇರೆಗೆ ಈ ನೇಮಕಾತಿ ನಡೆದಿದೆ.
ಬಿಡಿಎ ಆಯುಕ್ತರ ಹುದ್ದೆಗೆ ಭೂದಾಖಲೆಗಳ ಆಯುಕ್ತರಾದ ಮಂಜುನಾಥ್, ಬಿಡಬ್ಲ್ಯುಎಸ್ ಎಸ್ ಬಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್, ಹಿರಿಯ ಐಎಎಸ್ ಅಧಿಕಾರಿ ರವಿಶಂಕರ್, ಬಿಬಿಎಂಪಿ ಯಲಹಂಕ ವಲಯ ಆಯುಕ್ತರಾದ ಕರೀಗೌಡ, ಹಿಂದೆ ಬಿಡಿಎ ಆಯುಕ್ತರಾಗಿದ್ದ ರಾಜೇಶ್ ಗೌಡ, ಕೆಬಿಜೆಎಂಎಲ್ ಎಂಡಿ ಮೋಹನ್ ರಾಜ್ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಅಂತಿಮವಾಗಿ ಮೇಜರ್ ಮಣಿವಣ್ಣನ್ ಆಯುಕ್ತರಾಗಿ ನೇಮಕರಾಗಿದ್ದಾರೆ.






















