ಬೆಂಗಳೂರು, ಮೇ.30 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೂತನ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ನಗರದ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಮತ್ತು ಅಡೆತಡೆಗಳ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕೋರಮಂಗಲ ವ್ಯಾಪ್ತಿಯಲ್ಲಿ 3.5 ಕಿ.ಮೀ.ಗಳಷ್ಟು ದೂರ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಈಜೀಪುರ ಮೇಲುಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಜೀಪುರ ಮೇಲುಸೇತುವೆ ಕಾಮಗಾರಿ ತ್ವರಿತಗೊಳಿಸಲು ಸೂಚನೆ:

ದಕ್ಷಿಣ ವಲಯದ ಡೈರಿ ವೃತ್ತದಿಂದ ಕಾಲ್ನಡಿಗೆ ಮೂಲಕ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಈಜೀಪುರ ಮೇಲುಸೇತುವೆಯ ಪ್ರಗತಿಯನ್ನು ವೀಕ್ಷಿಸಿದರು. ಕಾಮಗಾರಿಗೆ ಅಗತ್ಯವಿರುವ ಜಾಗವನ್ನು ಭೂಸ್ವಾಧೀನಪಡಿಸಿಕೊಂಡು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೆಂಟ್ ಜಾನ್ಸ್ ಬಳಿ ರಾಂಪ್‌ಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಿ, ರಾಂಪ್ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದರು.
ಗುಣನಿಯಂತ್ರಣ ವಿಭಾಗದ ಮುಖ್ಯ ಅಭಿಯಂತರರಾದ ಡಾ.ರಾಘವೇಂದ್ರ ಈ ಕುರಿತು ಮಾಹಿತಿ ನೀಡಿ, ಈಜಿಪುರ ಮೇಲ್ಸೇತುವೆಯ ಬಾಕಿ ಉಳಿದ ಕಾಮಗಾರಿಯನ್ನು ಬಿ.ಎಸ್.ಸಿ.ಪಿ.ಎಲ್ ಇನ್ಫ್ರಾಸ್ಟ್ರಕ್ಚರ್ ಲಿ. ಗುತ್ತಿಗೆದಾರರಿಂದ ನಡೆಸಲಾಗುತ್ತಿದೆ. ಪ್ರಸ್ತುತ 762 ಸೆಗ್ಮೆಂಟ್‌ಗಳಲ್ಲಿ 416 ಸೆಗ್ಮೆಂಟ್ ಕಾಸ್ಟಿಂಗ್ ಹಾಗೂ 291 ಸೆಗ್ಮೆಂಟ್ ಜೋಡಣೆ ಮಾಡಲಾಗಿದೆ ಎಂದು ವಿವರಿಸಿದರು.

ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಿರ್ವಹಣೆಗೆ ಆದ್ಯತೆ:
ಮೇಲ್ಸೇತುವೆಯ ಕೆಳಭಾಗದ ರಸ್ತೆಯನ್ನು ಸರಿಯಾಗಿ ನಿರ್ವಹಿಸಲು ಮತ್ತು ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳನ್ನು ಕೂಡಲೇ ದುರಸ್ತಿಪಡಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದರು. ಅಲ್ಲದೆ, ಮಳೆ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದರು.
ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಗೆ ಒತ್ತು:
ಮಡಿವಾಳ ಬಸ್ ಪಿಕ್ ಅಪ್ ಪಾಯಿಂಟ್ ಬಳಿ ರಸ್ತೆ ಬದಿಯಲ್ಲಿ ಸಾಕಷ್ಟು ತ್ಯಾಜ್ಯ ಬಿಸಾಡಿರುವುದನ್ನು ಗಮನಿಸಿದ ಮಹೇಶ್ವರ್ ರಾವ್, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬಂದು ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಹೆಚ್ಚು ಜನ ಸಂಚರಿಸುವ ಸ್ಥಳವಾದ್ದರಿಂದ ಸದಾ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಜಂಕ್ಷನ್ ಅಭಿವೃದ್ಧಿಗೆ ಸೂಚನೆ:
ಮಡಿವಾಳ ಕೆಳಸೇತುವೆಯ ಮೇಲ್ಭಾಗದಲ್ಲಿರುವ ಜಂಕ್ಷನ್ ಬಳಿ ಪಾದಚಾರಿ ಮಾರ್ಗಗಳು, ರಸ್ತೆ ಅಭಿವೃದ್ಧಿ ಸೇರಿದಂತೆ ಜಂಕ್ಷನ್‌ನ ಸಮಗ್ರ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಂಕ್ಷನ್‌ನಲ್ಲಿರುವ ಪೊಲೀಸ್ ಚೌಕಿಯಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿರುವುದನ್ನು ಸರಿಪಡಿಸುವಂತೆ ತಿಳಿಸಿದರು.
3.5 ಕಿ.ಮೀ ಪಾದಯಾತ್ರೆ ಮೂಲಕ ಪರಿಶೀಲನೆ:
ಡೈರಿ ಸರ್ಕಲ್ ಬಳಿಯಿರುವ ಕ್ರೈಸ್ಟ್ ಕಾಲೇಜು ಬಳಿಯಿಂದ ಸೆಂಟ್ ಜಾನ್ಸ್ ಕಾಲೇಜು ಜಂಕ್ಷನ್, ಮಡಿವಾಳ ಕೆಳಸೇತುವೆ, ಕೋರಮಂಗಲ 100 ಅಡಿ ರಸ್ತೆ, ಕೇಂದ್ರೀಯ ಸದನ, ಈಜೀಪುರ ಮೇಲ್ಸೇತುವೆ ರಸ್ತೆ, ಸೋನಿ ಜಂಕ್ಷನ್ ವರೆಗೆ ಸುಮಾರು 3.5 ಕಿ.ಮೀ ನಡಿಗೆ ಮೂಲಕ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸಿದರು. ಉತ್ತಮ ರಸ್ತೆಗಳ ನಿರ್ಮಾಣದ ಜೊತೆಗೆ ಪಾದಚಾರಿ ಮಾರ್ಗಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ವಲಯ ಆಯುಕ್ತರಾದ ದಿಗ್ಜಯ್ ಬೋಡ್ಕೆ, ಮುಖ್ಯ ಅಭಿಯಂತರರಾದ ಡಾ. ರಾಘವೇಂದ್ರ ಪ್ರಸಾದ್, ರಾಜೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.






















