ಬೆಂಗಳೂರು, ಮೇ.27 www.bengaluruwire.com : ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲಾ ಭಾನುವಾರಗಳಂದು ರಾಜ್ಯದ ಆಯ್ದ ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಈ ಕುರಿತು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಕಚೇರಿಯು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ/39/ಎಂಎನ್ ಎಂಯು/2024/ಇ 2025ರ ಮೇ 20 ರ ಆದೇಶದಂತೆ, ಪ್ರತಿ ಜಿಲ್ಲೆಗೆ ಒಂದು ಉಪನೋಂದಣಾಧಿಕಾರಿಗಳ ಕಚೇರಿ ಈ ಹೆಚ್ಚುವರಿ ದಿನಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಈ ಆದೇಶವು ಜೂನ್ 1 ರಿಂದ ಜಾರಿಗೆ ಬರಲಿದ್ದು, ಸಾರ್ವಜನಿಕರು ಈ ದಿನಗಳಲ್ಲೂ ತಮ್ಮ ಆಸ್ತಿಗಳ ನೋಂದಣಿ ಕಾರ್ಯಗಳನ್ನು ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯನಿರ್ವಹಿಸಲಿರುವ ಕಚೇರಿಗಳ ಪಟ್ಟಿ ಹೀಗಿದೆ:
* ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಸವನಗುಡಿ, ಗಾಂಧಿನಗರ, ಜಯನಗರ, ಮಾದನಾಯಕನಹಳ್ಳಿ (ರಾಜಾಜಿನಗರ), ಶಿವಾಜಿನಗರ ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ.

* ಬೆಂಗಳೂರು ಗ್ರಾಮಾಂತರದಲ್ಲಿ ದೇವನಹಳ್ಳಿ, ಚಿತ್ರದುರ್ಗದಲ್ಲಿ ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲಿ ಬಾಗೇಪಲ್ಲಿ, ದಾವಣಗೆರೆಯಲ್ಲಿ ದಾವಣಗೆರೆ, ರಾಮನಗರದಲ್ಲಿ ರಾಮನಗರ, ಶಿವಮೊಗ್ಗದಲ್ಲಿ ಶಿವಮೊಗ್ಗ, ತುಮಕೂರಿನಲ್ಲಿ ಕುಣಿಗಲ್ ಉಪನೋಂದಣಿ ಕಚೇರಿಗಳು ತೆರೆದಿರಲಿವೆ.

* ಕೋಲಾರದಲ್ಲಿ ಕೋಲಾರ, ಬೆಳಗಾವಿಯಲ್ಲಿ ಮೂಡಲಗಿ, ಬಾಗಲಕೋಟೆಯಲ್ಲಿ ಇಳಕಲ್, ಧಾರವಾಡದಲ್ಲಿ ಹುಬ್ಬಳ್ಳಿ ಉತ್ತರ, ಗದಗದಲ್ಲಿ ಗಜೇಂದ್ರಗಡ, ಕಾರವಾರ/ಉತ್ತರ ಕನ್ನಡದಲ್ಲಿ ಕುಮಟಾ, ಹಾವೇರಿಯಲ್ಲಿ ಹಾವೇರಿ, ವಿಜಯಪುರದಲ್ಲಿ ವಿಜಯಪುರ, ಚಾಮರಾಜನಗರದಲ್ಲಿ ಕುದೇರು, ಹಾಸನದಲ್ಲಿ ಸಕಲೇಶಪುರ, ಕೊಡಗಿನಲ್ಲಿ ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಮಂಗಳೂರು ಸಿಟಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.
* ಮಂಡ್ಯದಲ್ಲಿ ಮಳವಳ್ಳಿ, ಮೈಸೂರಿನಲ್ಲಿ ಮೈಸೂರು ದಕ್ಷಿಣ, ಉಡುಪಿಯಲ್ಲಿ ಉಡುಪಿ, ಕೊಪ್ಪಳದಲ್ಲಿ ಗಂಗಾವತಿ, ಬೀದರ್‌ನಲ್ಲಿ ಬೀದರ್, ಗುಲ್ಬರ್ಗಾದಲ್ಲಿ ಗುಲ್ಬರ್ಗಾ, ರಾಯಚೂರಿನಲ್ಲಿ ರಾಯಚೂರು, ಯಾದಗಿರಿಯಲ್ಲಿ ಯಾದಗಿರಿ, ಬಳ್ಳಾರಿಯಲ್ಲಿ ಬಳ್ಳಾರಿ, ಮತ್ತು ವಿಜಯನಗರದಲ್ಲಿ ಹೂವಿನಹಡಗಲಿ ಉಪನೋಂದಣಿ ಕಚೇರಿಗಳು ಸೇರಿ ಒಟ್ಟು 35 ಕಚೇರಿಗಳು ಕಾರ್ಯನಿರ್ವಹಿಸಲಿವೆ.
ಸಾರ್ವಜನಿಕರು ತಮ್ಮ ಆಯಾ ನೋಂದಣಿ ಜಿಲ್ಲೆಗಳಲ್ಲಿನ ಯಾವುದೇ ಆಸ್ತಿಗಳನ್ನು ಈ ನಿಗದಿತ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ದಯಾನಂದ ಅವರು ತಿಳಿಸಿದ್ದಾರೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.