ಬೆಂಗಳೂರು,ಮೇ.18 www.bengaluruwire.com : ರಾಜ್ಯದಲ್ಲಿ 30 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಸ್ಥಿರಾಸ್ತಿ ನೋಂದಣಿ ಮಾಡುವಾಗ, ಖರೀದಿದಾರರು ಮತ್ತು ಮಾರಾಟಗಾರರು ತಮ್ಮ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಇದರಲ್ಲಿ ಅವರ ಪ್ಯಾನ್ ಸಂಖ್ಯೆ ಕೂಡ ಸೇರಿರುತ್ತದೆ. ಈ ಕುರಿತು ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಖರೀದಿದಾರರು ಮತ್ತು ಮಾರಾಟಗಾರರ ಸಮಗ್ರ ಮಾಹಿತಿ ಕಡ್ಡಾಯ:
ಇನ್ನು ಮುಂದೆ, ಇಂತಹ ಆಸ್ತಿಗಳ ನೋಂದಣಿ ಸಮಯದಲ್ಲಿ, ಖರೀದಿದಾರರು ಮತ್ತು ಮಾರಾಟಗಾರರಿಂದ ಸಹಿ ಮಾಡಿದ ಪ್ರತ್ಯೇಕ ನಮೂನೆಯಲ್ಲಿ ಅವರ ಪೂರ್ಣ ವಿವರಗಳನ್ನು ಪಡೆಯಲಾಗುತ್ತದೆ. ಈ ಮಾಹಿತಿಯನ್ನು ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗುವುದು. ಒಂದು ವೇಳೆ ಈ ಮಾಹಿತಿಯನ್ನು ನೀಡಲು ವಿಫಲವಾದರೆ, ಅಂತಹ ದಾಖಲೆಗಳನ್ನು ನೋಂದಣಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಖರೀದಿದಾರ ಮತ್ತು ಮಾರಾಟಗಾರರಿಂದ ಪಡೆದ ಆಸ್ತಿಯ ವಿವರಗಳು, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವಿಳಾಸ ಮತ್ತು ಇತರ ಸಂಬಂಧಿತ ದಾಖಲೆಗಳ ಪ್ರಮಾಣೀಕೃತ ಪ್ರತಿಯನ್ನು ನೋಂದಣಿ ಪತ್ರದೊಂದಿಗೆ ಸ್ಕ್ಯಾನ್ ಮಾಡಬೇಕು. ಈ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಕಾವೇರಿ-2 ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
ಕಪ್ಪು ಹಣಕ್ಕೆ ಕಡಿವಾಣ, ಬೇನಾಮಿ ಆಸ್ತಿಗೆ ತಡೆ:
ಈ ಹೊಸ ನಿಯಮಗಳ ಜಾರಿಗೆ ಪ್ರಮುಖ ಕಾರಣವೆಂದರೆ ಆಸ್ತಿ ಖರೀದಿ ಮತ್ತು ಮಾರಾಟದ ವೇಳೆ ನಡೆಯುತ್ತಿದ್ದ ಕಪ್ಪು ಹಣದ ವಹಿವಾಟು ಮತ್ತು ಬೇನಾಮಿ ಆಸ್ತಿಗಳ ಹಾವಳಿ. ಇಂತಹ ಅಕ್ರಮಗಳಿಂದ ಖರೀದಿದಾರರು ಮತ್ತು ಮಾರಾಟಗಾರರು ತೆರಿಗೆ ವಂಚಿಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ನೆರವಾಗಲು ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.
ಈ ನಿಯಮವನ್ನು ಈ ಹಿಂದೆಯೇ ಜಾರಿಗೊಳಿಸಲಾಗಿದ್ದರೂ, ನೋಂದಣಿ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಇದರಿಂದಾಗಿ ಕಂದಾಯ ಇಲಾಖೆಯ ಸಹಕಾರ ದೊರೆಯುತ್ತಿಲ್ಲ ಎಂದು ಆದಾಯ ತೆರಿಗೆ ಅಧಿಕಾರಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ಇಲಾಖೆಗೆ ನಿಖರವಾದ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಹೊಸ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.