ಬೆಂಗಳೂರು, ಏ.11 www.bengaluruwire.com : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ)ಯ ದತ್ತಾಂಶಗಳ ಅಧ್ಯಯನ ವರದಿಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು.
ಈ ಕುರಿತು ವಿಸ್ತೃತ ಚರ್ಚೆ ನಡೆಸಲು ಇದೇ ಏಪ್ರಿಲ್ 17 ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅವರು ತೆರೆದರು. ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ ಶೆಟ್ಟೆಣ್ಣನವರ ಅವರು ವರದಿಯ ಮುಖ್ಯ ಅಂಶಗಳನ್ನು ಸಚಿವ ಸಂಪುಟಕ್ಕೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2024ರ ಫೆಬ್ರವರಿ 29 ರಂದು ಸಲ್ಲಿಸಿರುವ 2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳ ಅಧ್ಯಯನ ವರದಿ ಹಾಗೂ ಅಂಕಿ ಅಂಶಗಳ ಸಮೀಕ್ಷಾ ವರದಿಯನ್ನು ಸಚಿವ ಸಂಪುಟದ ಮುಂದೆ ಪರಿಶೀಲನೆಗಾಗಿ ಮಂಡಿಸಲಾಗಿದೆ ಎಂದು ತಿಳಿಸಿದರು.

ಏಪ್ರಿಲ್ 17 ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯ ಕುರಿತು ವಿಸ್ತೃತವಾಗಿ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದರು.

2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯಾದ್ಯಂತ 54 ಮಾನದಂಡಗಳ ಆಧಾರದ ಮೇಲೆ ನಡೆಸಲಾಗಿತ್ತು. ರಾಜ್ಯದ 6.35 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಜನರ ಗಣತಿ ಈ ಸಮೀಕ್ಷೆಯಲ್ಲಿ ನಡೆದಿದೆ. ಒಟ್ಟು 1.35 ಕೋಟಿ ಕುಟುಂಬಗಳು ಮಾಹಿತಿ ಸಂಗ್ರಹಣೆಯಲ್ಲಿ ಭಾಗವಹಿಸಿದ್ದು, ಇದು ಶೇ 94.17 ರಷ್ಟಿದೆ. ಸುಮಾರು 37 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.
2015ರಲ್ಲಿ ಶ್ರೀ ಹೆಚ್. ಕಾಂತರಾಜ ಅವರ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏಪ್ರಿಲ್ 11 ರಿಂದ ಮೇ 30 ರವರೆಗೆ ರಾಜ್ಯಾದ್ಯಂತ ಈ ಸಮೀಕ್ಷೆಯನ್ನು ನಡೆಸಿತ್ತು. ಪ್ರತಿ ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು 54 ಮಾನದಂಡಗಳ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಲಾಗಿತ್ತು.
ಸಮೀಕ್ಷೆಯ ಕಾರ್ಯಕ್ಕಾಗಿ ಆರು ಜನ ವಿಷಯ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ವರದಿಗೆ ಬೇಕಾದ ಅಂಶಗಳು ಮತ್ತು ಮಾನದಂಡಗಳನ್ನು ಸಿದ್ಧಪಡಿಸಲು ಒಟ್ಟು 16 ವಿಷಯ ತಜ್ಞರ ಸಭೆಗಳನ್ನು ನಡೆಸಲಾಗಿತ್ತು ಎಂದು ಸಚಿವರು ವಿವರಿಸಿದರು. ಈ ಸಮಿತಿಯಲ್ಲಿ ಪ್ರೊ. ಜೋಗನ್ ಶಂಕರ್, ಪ್ರೊ. ಅಬ್ದುಲ್ ಅಜೀಜ್, ಡಾ. ಆಂಬ್ರೋಸ್ ಪಿಂಟೋ, ಡಾ. ಸಿ.ಎಂ. ಲಕ್ಷö್ಮಣ್, ಶ್ರೀ ಲಕ್ಷಿö್ಮÃಪತಿ ಹಾಗೂ ಪ್ರೊ. ರಾಜಲಕ್ಷಿö್ಮ ಕಾಮತ್ ಅವರ ಪರವಾಗಿ ಶ್ರೀ ನವೀನ್ ಭಾರತಿ ಅವರು ಸೇರಿದ್ದರು.
ಸಮೀಕ್ಷೆಯಲ್ಲಿ ಲಭ್ಯವಿದ್ದ ಅಂಕಿ ಅಂಶಗಳನ್ನು ಆಯಾ ಜಿಲ್ಲೆಗಳಲ್ಲಿಯೇ ಗಣಕೀಕರಣಗೊಳಿಸಲಾಗಿದ್ದು, ಇದಕ್ಕಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BHARAT ELECTRONICS LTD) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಗಣಕೀಕರಣಕ್ಕಾಗಿ ಒಟ್ಟು 43.09 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿತ್ತು. ಈ ಸಮೀಕ್ಷೆಗಾಗಿ ಕೇಂದ್ರ ಸರ್ಕಾರದಿಂದ 7.00 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 185.79 ಕೋಟಿ ರೂಪಾಯಿಗಳು ಸೇರಿದಂತೆ ಒಟ್ಟು 192.79 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದುವರೆಗೆ ಒಟ್ಟು 165.51 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
2015ರ ಸಮೀಕ್ಷೆಯ ದತ್ತಾಂಶಗಳನ್ನು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (Indian Institute of Management) ಸಂಸ್ಥೆಯು ಮೌಲ್ಯೀಕರಣಗೊಳಿಸಿ ವರದಿಯನ್ನು ನೀಡಿದ್ದು, 2015ರ ಎಸ್.ಇ.ಎಸ್. ದತ್ತಾಂಶವು 2011ರ ಜನಗಣತಿಯೊಂದಿಗೆ ಸ್ಥಿರವಾಗಿದೆ ಎಂದು ದೃಢಪಡಿಸಿದೆ. 2019ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಹೆಚ್. ಕಾಂತರಾಜ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದ್ದರಿಂದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ.
ನಂತರ ಕೆ. ಜಯಪ್ರಕಾಶ ಹೆಗ್ಡೆ ಅವರ ನೇತೃತ್ವದಲ್ಲಿ ಹೊಸ ಆಯೋಗವನ್ನು 2020ರಲ್ಲಿ ನೇಮಿಸಲಾಯಿತು. ಈ ಆಯೋಗವು 2015ರ ದತ್ತಾಂಶಗಳನ್ನು ಬಳಸಿಕೊಂಡು 2024ರ ಫೆಬ್ರವರಿ 29 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.