ಬೆಂಗಳೂರು: ಏ.07 www.bengaluruwire.com : ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಅದಿಶಕ್ತಿ ದೇವಾಲಯ ನವೀಕರಣಕ್ಕಾಗಿ 50 ಲಕ್ಷ ರೂ. ದೇಣಿಗೆಯ ಚೆಕ್ ಅನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ದೇವಸ್ಥಾನ ಆಡಳಿತ ಮಂಡಳಿಗೆ ಇಂದು ಹಸ್ತಾಂತರಿಸಿದರು.
ದೇವಸ್ಥಾನದ ನವೀಕರಣಕ್ಕೆ ಆರ್ಥಿಕ ಕೊರತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದವರಿಗೆ ದೇವಸ್ಥಾನ ಆಡಳಿತ ಮಂಡಳಿಯ ಅರ್ಚಕರು ಆರ್ಥಿಕ ಸಹಕಾರ ನೀಡುವಂತೆ ಮನವಿ ಸಲ್ಲಿಸಿದ್ದರು.
ಮುಂದುವರಿದು, ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಯಂ ಅಧಿಕಾರಿ ಮತ್ತು ನೌಕರರಿಂದ (ಪೌರಕಾರ್ಮಿಕರನ್ನು ಹೊರತುಪಡಿಸಿ) ಮಾರ್ಚ್-2025ರ ಮಾಸಿಕ ವೇತನದಲ್ಲಿ ತಲಾ 1000 ರೂ. ಗಳನ್ನು ಕಡಿತ ಮಾಡಿ ದೇವಾಲಯ ನವೀಕರಣ ಜೀರ್ಣೋದ್ದಾರಕ್ಕಾಗಿ ಆರ್ಥಿಕ ನೆರವು ನೀಡಲು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ಮುಖ್ಯ ಆಯುಕ್ತರಲ್ಲಿ ಮನವಿ ಮಾಡಿತ್ತು.
ಅದರಂತೆ, ಇಂದು ದೇವಾಲಯ ನವೀಕರಣ ಕಾರ್ಯಕ್ಕಾಗಿ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಕಟಾವು ಮಾಡಿದ 50 ಲಕ್ಷ ರೂ. ಚೆಕ್ ಅನ್ನು ದೇವಸ್ಥಾನ ಆಡಳಿತ ಮಂಡಳಿಯ ಅರ್ಚಕರಿಗೆ ಹಸ್ತಾಂತರಿಸಿ ಕೂಡಲೆ ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸಿದರು.

ಈ ವೇಳೆ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು, ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
