ಬೆಂಗಳೂರು, ಏ.05 www.bengaluruwire.com : ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಬೇಸಿಗೆ ಬಿಸಿಲಿನಂತೆ ತೆಂಗಿನಕಾಯಿ (Coconut) ಹಾಗೂ ಎಳನೀರಿನ (Tender coconut) ದರವೂ ಹೆಚ್ಚಾಗಿದೆ. ವಿದ್ಯುತ್, ಬಸ್, ಹಾಲು, ಡೀಸೆಲ್ ಹೀಗೆ ನಿತ್ಯ ಬಳಕೆಯ ವಸ್ತುಗಳ ಜೊತೆಗೆ ತೆಂಗಿನಕಾಯಿ ರೇಟು ಗಗನಮುಖಿಯಾಗಿದೆ.
ಕೇರಳ ಬಿಟ್ಟರೆ ದೇಶದಲ್ಲೇ ಅತೀ ಹೆಚ್ಚು ತೆಂಗಿನಕಾಯಿ ಬೆಳೆಯುವ ಕರ್ನಾಟಕದಲ್ಲೂ ಹವಾಮಾನದ ವೈಪರೀತ್ಯ, ರೋಗಬಾಧೆ, ಬಿಸಿಲಿನ ಪ್ರಮಾಣ ಹೆಚ್ಚಳದ ಕಾರಣದಿಂದ ಈ ಬಾರಿ ಶೇ.25ರಿಂದ 30ರಷ್ಟು ಇಳುವರಿ ಕೊರತೆಯಿದ್ದು, ದಿನೇದಿನೇ ಬೆಲೆ ಏರಿಕೆಯಾಗುತ್ತಿದೆ. ಈ ಬಾರಿ ಹೆಚ್ಚು ತೆಂಗು ಬೆಳೆಯುವ ಕೇರಳ, ತಮಿಳುನಾಡು, ಆಂಧ್ರದಲ್ಲೂ ಇಳುವರಿ ಕಡಿಮೆಯಿದೆ. ಎಲ್ಲಿಂದಲೂ ಸರಬರಾಜು ಆಗುತ್ತಿಲ್ಲ.
ಇದೇ ಮೊದಲ ಬಾರಿಗೆ ಒಂದು ತೆಂಗಿನಕಾಯಿ ಬೆಲೆ 60 ರೂ. ಗಡಿ ದಾಟಿ 80 ರೂ. ತನಕವೂ ಮಾರಾಟವಾಗುತ್ತಿದೆ. ಇದು ತೆಂಗಿನಕಾಯಿ ಮಾರುಕಟ್ಟೆಯ ಸಾರ್ವಕಾಲಿಕ ಗರಿಷ್ಠ ಧಾರಣೆಯಾಗಿದೆ ಎಂದು ಹೇಳುತ್ತಾರೆ ತೆಂಗಿನಕಾಯಿ ವ್ಯಾಪಾರಸ್ಥರು. ಹೋಟೆಲ್, ಬೇಕರಿ, ತೆಂಗಿನ ಎಣ್ಣೆ, ತೆಂಗಿನ ಕಾಯಿ ಪೌಡರ್ ಮತ್ತಿತರ ಆಹಾರ ಉದ್ಯಮಗಳಲ್ಲಿ ತೆಂಗಿನಕಾಯಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಕೂಡ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ತೆಂಗಿನ ತೋಟ ಹೊಂದಿದ ರೈತರಿಂದಲೇ ಉತ್ತಮ ಗುಣ ಮಟ್ಟದ ಹಾಗೂ ದೊಡ್ಡ ಗಾತ್ರದ ಕಾಯಿಗಳನ್ನು 50-55 ರೂ. ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದು, ಅಂಗಡಿಗಳಲ್ಲಿ ಸಣ್ಣ ಗಾತ್ರದ ತೆಂಗಿನಕಾಯಿ ಬೆಲೆ 30-40 ರೂ. ಇದೆ. ಮಧ್ಯಮ ಗಾತ್ರ ಹಾಗೂ ದೊಡ್ಡ ಗಾತ್ರದ ಕಾಯಿ ಬೆಲೆ 60 ರಿಂದ 80-85 ರೂ.ಗೆ ತನಕ ಮಾರುತ್ತಿದ್ದಾರೆ. ಈ ಹಿಂದೆ ಸಾಧಾರಣ ಗಾತ್ರದ ಕಾಯಿ ಬೆಲೆ 10-15ರೂ. ಗಳಿಗೆ ಅಂಗಡಿಗಳಲ್ಲಿ ಸಿಗುತ್ತಿತ್ತು.

ಇತ್ತೀಚಿನ ಮಾರುಕಟ್ಟೆ ದರಗಳ ಪ್ರಕಾರ, ರಾಜ್ಯದಲ್ಲಿ ಸರಾಸರಿ ತೆಂಗಿನಕಾಯಿ ಪ್ರತಿ ಕೆಜಿ ಬೆಲೆ 220ರೂ. ನಷ್ಟಿದೆ. ಬೆಂಗಳೂರಿನ ತೆಂಗಿನಕಾಯಿ ಮಂಡಿಯಲ್ಲಿ ಕಾಯಿ ಸರಾಸರಿ ಬೆಲೆ ಕ್ವಿಂಟಲ್‌ಗೆ ₹30000. ಕನಿಷ್ಠ ಮಾರುಕಟ್ಟೆ ಬೆಲೆ ಕ್ವಿಂಟಲ್‌ಗೆ ₹25000, ಗರಿಷ್ಠ ಬೆಲೆ ಕ್ವಿಂಟಲ್‌ಗೆ ₹35000 ನಷ್ಟಿದೆ.

ಕಳೆದ ಮಾರ್ಚಿನಲ್ಲೇ ತೆಂಗಿನಕಾಯಿ ಹಾಗೂ ಎಳನೀರಿನ ಬೆಲೆ ಏರಿಕೆಯಾಗಿತ್ತು. ಈ ಬಾರಿ ಎಳನೀರಿನ ಇಳುವರಿಯೂ ಕಡಿಮೆಯಾಗಿರುವ ಕಾರಣ ಅದರ ಬೆಲೆಯೂ ಹೆಚ್ಚಾಗಿದೆ. ಸದ್ಯ ಬೆಂಗಳೂರಿನ ಬೀದಿ ಬದಿಗಳಲ್ಲಿ ಒಂದು ಎಳನೀರಿನ ಬೆಲೆ ₹45 ರಿಂದ ₹60 ನಂತೆ ಮಾರಾಟ ಮಾಡಲಾಗುತ್ತಿದೆ. ಕಳೆದ ಬಾರಿ ಇದು 40-45 ರೂ. ಆಸುಪಾಸಿನಲ್ಲಿತ್ತು. ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಮದುವೆ, ಮುಂಜಿಯಂಥ ಶುಭಕಾರ್ಯಗಳ ಈ ಸೀಸನ್ ನಲ್ಲಿ ದಿನನಿತ್ಯ ಅಡುಗೆಗೆ ಅಗತ್ಯವಾದ ತೆಂಗಿನ ಕಾಯಿ ದರ ಏರಿಕೆ ಗ್ರಾಹಕರಿಗೆ ಬಿಸಿ ತಟ್ಟಿದೆ.
ರೈತರ ತೋಟದಿಂದಲೇ ನೇರವಾಗಿ ಖರೀದಿ :
ಚಿಲ್ಲರೆ ಮಾರುಕಟ್ಟೆಯಲ್ಲಿ ಎಳನೀರು ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸ್ವತಃ ರೈತರ ತೋಟಕ್ಕೆ ನೇರವಾಗಿ ಹೋಗಿ ಕಡಿಮೆ ಬೆಲೆಗೆ ಎಳನೀರು ಖರೀದಿಸುತ್ತಿದ್ದಾರೆ. ಕೆಲವರು ಮುಂಗಡ ಕಾಯ್ದಿರಿಸುತ್ತಿದ್ದಾರೆ. ಉತ್ತಮ ದರ ತೋಟದಲ್ಲೇ ಸಿಗುತ್ತಿರುವ ಕಾರಣ ಎಳನೀರು ಮಾರಾಟಕ್ಕೆ ಹೆಚ್ಚಿನ ತೆಂಗಿನ ಬೆಳೆಗಾರರು ಆಸಕ್ತಿ ವಹಿಸಿದ್ದಾರೆ. ತೆಂಗಿನಮರದಿಂದ ಒಣಗಿದ ಕಾಯಿ ಇಳಿಸುವ, ಸುಲಿಯುವ ಹಾಗೂ ಮಾರುಕಟ್ಟೆಗೆ ಹೋಗುವ ಸಾಗಾಟ ವೆಚ್ಚ ಎಲ್ಲವೂ ರೈತರಿಗೆ ಉಳಿತಾಯ ವಾಗುವುದರಿಂದ ಎಳನೀರು ಯಥೇಚ್ಛ ಪ್ರಮಾಣದಲ್ಲಿ ರೈತರ ತೋಟದಲ್ಲೇ ಮಾರಾಟವಾಗುತ್ತಿದೆ. ಹೀಗಾಗಿ ಪ್ರಸ್ತುತ ತೆಂಗಿನ ಕಾಯಿ ಕೊರತೆ ಉಂಟಾಗಿದ್ದು, ದರ ಏರಿಕೆಯಾಗಿದೆ.
ದೊಡ್ಡ ಮಟ್ಟದ ಬೆಲೆ ಏರಿಕೆ ಆಗಿರಲಿಲ್ಲ :
ಕೆಲವು ವರ್ಷಗಳಿಂದ ಹೊಸ ತೆಂಗಿನ ತೋಟಗಳೂ ಆಗಿಲ್ಲ. 20-30 ವರ್ಷಗಳಲ್ಲಿ ಎಲ್ಲಾ ವಾಣಿಜ್ಯ ಬೆಳೆಗಳ ದರ ಏರಿಕೆಯಾಗಿದ್ದರೂ, ತೆಂಗಿನಕಾಯಿಗೆ ದೊಡ್ಡ ಮಟ್ಟದಲ್ಲಿ ಬೆಲೆ ಹೆಚ್ಚಾಗಿರಲಿಲ್ಲ. ಆದರೆ ಈ ವರ್ಷ ಬೆಲೆ ಏರಿಕೆಯಾದರೂ ರೈತರಲ್ಲಿ ಬೇಡಿಕೆಯಷ್ಟು ತೆಂಗಿನಕಾಯಿಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ತೆಂಗಿನಕಾಯಿ ವ್ಯಾಪಾರಸ್ಥರಾದ ನಾಗರಾಜ್.
ರಾಜ್ಯದಲ್ಲಿ ತೆಂಗು ಬೆಳೆಯುವ ಪ್ರದೇಶವೂ ಇಳಿಕೆ :
ರಾಜ್ಯದಲ್ಲಿ ತೆಂಗು ಬೆಳೆಯು ಪ್ರದೇಶಗಳಲ್ಲಿ ತುಮಕೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಸೇರಿದಂತೆ 8-10 ಜಿಲ್ಲೆಗಳು ಪ್ರಮುಖವಾಗಿವೆ. ಮೊದಲು ರೈತರಿಗೆ ಒಂದು ತೆಂಗಿನಕಾಯಿಗೆ 8-12 ರೂ. ದರ ಸಿಗುತ್ತಿತ್ತು. ತೆಂಗು ಕೃಷಿ ಅಷ್ಟಾಗಿ ಲಾಭದಾಯಕವಲ್ಲ ಎಂಬ ಕಾರಣಕ್ಕಾಗಿ ಬೆಳೆಗಾರರು ಅಡಕೆ, ದಾಳಿಂಬೆಯಂಥ ಇತರ ವಾಣಿಜ್ಯ ಬೆಳೆಯತ್ತ ಒಲವು ತೋರಿದ್ದರಿಂದ ಕಳೆದ 10 ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಶೇ. 30-40 ತೆಂಗು ಪ್ರದೇಶ ಕ್ಷೀಣಿಸಿದೆ ಎನ್ನುತ್ತಾರೆ ಕೃಷಿ ಅರ್ಥಶಾಸ್ತ್ರಜ್ಞರು.
ಜೂನ್ ತನಕ ತೆಂಗಿನಕಾಯಿ ಬೆಲೆ ಕಡಿಮೆಯಾಗದು :
“ಶೇ.50ರಷ್ಟು ತೆಂಗಿನಕಾಯಿ ಬೆಳೆ ಇಳುವರಿ ಕಡಿಮೆಯಾಗಿದೆ. ಕೊಬ್ಬರಿ ಬೆಲೆ ಕ್ವಿಂಟಾಲಿಗೆ ಆಗ ಕಡಿಮೆಯಿತ್ತು. ಹೀಗಾಗಿ ರೈತರು ಕಳೆದ ವರ್ಷ ಎಳನೀರು ಮಾರಿದ್ರು, ಆಮೇಲೆ ಕಾಯಿಗೆ ಏಟು ಬಿದ್ದು ಈಗ ಅದರ ಪರಿಣಾಮ ಕೊಬ್ಬರಿಗೂ ಮೇಲಾಗಿ ಇದರ ಬೆಲೆಯೂ ಏರಿಕೆಯಾಗಿದೆ. ತೆಂಗಿನಕಾಯಿ ಹೊಸ ಬೆಳೆ ಜೂನ್ ಬರುತ್ತೆ. ಸದ್ಯ ಶೇ.10 ಕಾಯಿಗಳು ತೆಂಗಿನಮರದಲ್ಲಿದೆ. ಅಲ್ಲಿ ತನಕ ತೆಂಗಿನಕಾಯಿ ಬೆಲೆ ಕಡಿಮೆಯಾಗಲ್ಲ. ಆನಂತರ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ.”
– ಚಂದ್ರಶೇಖರ್, ತೆಂಗಿನಕಾಯಿ ವ್ಯಾಪಾರಸ್ಥರು