ತುಮಕೂರು, ಏ.01 www.bengaluruwire.com : ನಡೆದಾಡುವ ದೇವರು ಎಂದು ಕರೆಯುವ ಲಿಂಗೈಕ್ಯರಾದ ಡಾ.ಶಿವಕುಮಾರ ಸ್ವಾಮೀಜಿ (Dr.Shivakumara swamiji)ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠ (Siddaganga Mutt) ದಲ್ಲಿ ಸಂಭ್ರಮ ಕಳೆಗಟ್ಟಿದೆ. ಶಿವಕುಮಾರ ಶ್ರೀಗಳ ಗದ್ದುಗೆಗೆ ವಿವಿಧ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಳಗ್ಗೆ 5 ಗಂಟೆಯಿಂದಲೇ ಶ್ರೀಗಳ ಗದ್ದುಗೆಗೆ ಮಹಾಭಿಷೇಕಾ, ರುದ್ರಾಭಿಷೇಕಾ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆದವು. ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳ ಸಮ್ಮುಖದಲ್ಲಿ ಹರಗುರುಚರಣರಿಂದ ಪೂಜಾ ಕೈಂಕರ್ಯ ನಡೆಯಿತು. ಬೆಳಗ್ಗೆಯಿಂದಲೇ ಶ್ರೀ ಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಗುರುವಂದನಾ ಮಹೋತ್ಸವ ಆಯೋಜಿಸಲಾಗಿದೆ.
ಮಠದ ಆವರಣದಲ್ಲಿ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರವನ್ನು ಬಿಡಿಸಲಾಗಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ. ಮೈಸೂರಿನ ಪುನೀತ್ ಹಾಗೂ 5 ಜನರ ತಂಡದಿಂದ ಒಟ್ಟು 125 ಅಡಿ ಉದ್ದ, 65 ಅಡಿ ಅಗಲ ಸೇರಿದಂತೆ ಒಟ್ಟಾರೆ 8125 ಚದರ ಅಡಿ ವಿಸ್ತೀರ್ಣದ ಬೃಹತ್ ಗಾತ್ರದ ರಂಗೋಲಿಯನ್ನು ಬಿಡಿಸಲಾಗಿದ್ದು, ರಂಗೋಲಿ ಬಿಡಿಸಲು 12 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಾಗಿದೆ.

ಇಂದು ಶಿವಕುಮಾರ ಶ್ರೀಗಳ 118 ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ವಿ.ಸೋಮಣ್ಣ (V. Somanna), ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y. Vijayendra) ಈಗಾಗಲೇ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Union Defense Minister Rajnath Singh) ಸಿದ್ದಗಂಗಾ ಮಠಕ್ಕೆ ಭೇಟಿ ಕೊಡಲು ತುಮಕೂರಿಗೆ ಆಗಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಶ್ರೀಮಠದ ಸುತ್ತಮುತ್ತ ಭಾರೀ ಭಿಗಿ ಭದ್ರತೆ ಒದಗಿಸಲಾಗಿದೆ.

ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡುತ್ತಾ, 118 ವರ್ಷದ ಗುರುವಂದನ ಕಾರ್ಯಕ್ರಮ ಮಠದಲ್ಲಿ ನೆರವೇರಿಸಲಾಗುತ್ತಿದೆ. ಶ್ರೀಗಳ ಕೊಡುಗೆಯನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳಿಗೆ ಭಾರತ ರತ್ನ ಕೊಡುವಂತೆ ನಾವೆಲ್ಲಾ ಬಯಸುತ್ತೇವೆ. ಅನೇಕರು ಅನೇಕ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ.

ಮಠಕ್ಕೆ ಶ್ರೀಗಳು ಇದ್ದಾಗ ಹಲವು ಬಾರಿ ಪ್ರಧಾನಿಗಳು ಬಂದಿದ್ದರು. ಸ್ವಾಮೀಜಿಗಳು ಇನ್ನು ಜೀವಂತವಾಗಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ.
ಶ್ರೀಗಳು ದೇಶಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸುವಂತೆ ಮೊದಲಿನಿಂದಲೂ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿಕೊಂಡು ಬಂದಿದ್ದೇನೆ. ಭಾರತ ರತ್ನವನ್ನು ಗುರುಗಳಿಗೆ ಕೊಟ್ಟಾಗ, ಭಾರತ ರತ್ನಕ್ಕೆ ಶಕ್ತಿ ಬರುತ್ತದೆ. ಪರಮಪೂಜ್ಯರು ಭಾರತ ರತ್ನವಲ್ಲದೆ ವಿಶ್ವದ ರತ್ನ ರಾಗಿದ್ದಾರೆ.
ಸಿದ್ದರಾಮಯ್ಯ ನಾಳೆ ದೆಹಲಿಯಲ್ಲಿ ಕನ್ನಡ ಭವನ ಉದ್ಘಾಟನೆಗೆ ಬರುತ್ತಿದ್ದಾರೆ. ರೈಲ್ವೆ ಸ್ಟೇಷನ್ ಮಾಡುವುದು ಕೇಂದ್ರ ಸರ್ಕಾರ. ತುಮಕೂರು ರೈಲ್ವೇ ನಿಲ್ದಾಣಕ್ಕೆ ಸ್ವಾಮೀಜಿ ಹೆಸರಿಡುವ ವಿಚಾರದಲ್ಲಿ ಸಿದ್ದರಾಮಯ್ಯ ಯಾಕಿನ್ನು ಈ ಕುರಿತ ಕಡತ ನೋಡಿಲ್ಲ ಅಂತ ಗೊತ್ತಿಲ್ಲ. ಗೃಹ ಸಚಿವ ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಡಿಸಿಎಂ ಶಿವಕುಮಾರ್ ಅವರ ಗಮನಕ್ಕೂ ಈ ವಿಷಯ ತರುತ್ತೇನೆ. ನಾಳೆ ಸ್ವತಃ ಮುಖ್ಯಮಂತ್ರಿಗಳನ್ನ ಭೇಟಿ ಮಾಡುವೆ. ಅವರಿಗೆ ಈ ಕಡತ ಕಳುಹಿಸಿ ಐದು ತಿಂಗಳ ಮೇಲಾಗಿದೆ. ನಾನು ಇದಕ್ಕೆ ಉಪ್ಪುಖಾರ ಹಾಕಲ್ಲ. ಶ್ರೀ ಮಠ ಯಾರಿಗೂ ಸೀಮಿತವಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿ ನಮನ ಸಲ್ಲಿಸಿದ್ದಾರೆ.