ಬೆಂಗಳೂರು, ಮಾ.27 www.bengaluruwire.com : ರಾಜ್ಯದ ಜನತೆಗೆ ನಿರೀಕ್ಷೆಯಂತೆ ವಿದ್ಯುತ್ ನಿಯಂತ್ರಣ ಆಯೋಗ (KERC) ಕರೆಂಟ್ ಶಾಕ್ ಕೊಟ್ಟಿದೆ. ಅದೇ ರೀತಿ ರಾಜ್ಯ ಸರ್ಕಾರವು ನಂದಿನಿ ಹಾಲಿ (Nandini Milk) ನ ಬೆಲೆಯನ್ನು ಪ್ರತಿ ಲೀಟರ್ ಗೆ 4 ರೂ. ಹೆಚ್ಚಳ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಸಾಮಾನ್ಯ ಜನರ ದೈನಂದಿನ ಅವಶ್ಯಕತೆಗಳಾದ ಹಾಲು ಮತ್ತು ವಿದ್ಯುತ್ ದರ ಏರಿಕೆಯ ಬಿಸಿಯನ್ನು ನೀಡಿದೆ.
ಪ್ರತಿ ಯೂನಿಟ್ ವಿದ್ಯುತ್ ದರ 36 ಪೈಸೆ ಏರಿಕೆ ಮಾಡಿ ಕೆಇಆರ್‌ಸಿ (KERC) ಆದೇಶ ಹೊರಡಿಸಿದೆ. ಇನ್ನೊಂದೆಡೆ ಪ್ರತಿ ಲೀಟರ್ ಹಾಲಿನ ದರ 4 ರೂ. ಏರಿಕೆಯಾಗಲಿದೆ. ಇವೆರಡರ ಪರಿಷ್ಕೃತ ದರಗಳು ಏಪ್ರಿಲ್ 1 ರಿಂದಲೇ ಪರಿಷ್ಕೃತ ಜಾರಿಗೆ ಬರಲಿದೆ. ಏಪ್ರಿಲ್ ತಿಂಗಳ ಪರಿಷ್ಕೃತ ವಿದ್ಯುತ್ ಏರಿಕೆ ಮೇ ತಿಂಗಳ ಬಿಲ್ ನಲ್ಲಿ ಕಂಡುಬರಲಿದೆ. ಈಗಾಗಲೇ ಬಸ್ ಪ್ರಯಾಣ ದರ, ಮೆಟ್ರೋ ಪ್ರಯಾಣ ದರ ಏರಿಕೆಯು ಸಾಮಾನ್ಯ ಜನರ ಆದಾಯವನ್ನು ಕಸಿದುಕೊಂಡಿದೆ.
ಪ್ರತಿ ಯೂನಿಟ್‌ಗೆ ಪಿಂಚಣಿ ಹಾಗೂ ಗ್ರಾಜ್ಯುಟಿ (P&G) ಕಲಮ್ ಅಡಿಯಲ್ಲಿ ಸರ್ ಚಾರ್ಜ್ (Surcharge) ದರ 36 ಪೈಸೆ ದರ ವಿಧಿಸಿ ಕೆಇಆರ್‌ಸಿ ಆದೇಶಿಸಿದೆ. ಇನ್ನುಳಿದಂತೆ ವಾರ್ಷಿಕ ವಿದ್ಯುತ್ ಶುಲ್ಕ (Annual electricity charges) ಏರಿಕೆ ಮಾಡುವ ಗೋಜಿಗೆ ಹೋಗಿಲ್ಲ. ಬದಲಿಗೆ ಗೃಹಬಳಕೆ ಸೇರಿದಂತೆ ಕೆಲವೊಂದು ವರ್ಗಗಳಿಗೆ ವಿದ್ಯುತ್ ದರ ಕಡಿತ ಮಾಡಿದೆ. ಒಟ್ಟಾರೆ ಪಿ& ಜಿ ವರ್ಗದಡಿ ಸರ್ಕಾರದ ದರ ಏರಿಕೆ ಪ್ರಸ್ತಾವನೆಗೆ ಕೆಇಆರ್ ಸಿ ಒಪ್ಪಿಗೆ ಸೂಚಿಸಿದೆ.

ಇನ್ನು ಕರ್ನಾಟಕ (Karnataka) ದಲ್ಲಿ ಹಾಲಿನ ಬೆಲೆಗಳು ಏಪ್ರಿಲ್ 1 ರಿಂದ ಲೀಟರ್‌ಗೆ ₹4 ರಷ್ಟು ಹೆಚ್ಚಾಗಲಿವೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ (Cooperation Minister KN Rajanna) ಗುರುವಾರ (ಮಾರ್ಚ್ 27, 2025) ಹೇಳಿದ್ದಾರೆ. ಹಾಲು ಒಕ್ಕೂಟಗಳು ಮತ್ತು ರೈತರ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಇಂದಿಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, “ಹಾಲಿನ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರವನ್ನು ಹಾಲು ಒಕ್ಕೂಟ ತೆಗೆದುಕೊಂಡಿದೆ. ಒಕ್ಕೂಟಗಳು ಲೀಟರ್‌ಗೆ ₹5 ಹೆಚ್ಚಳ ಕೇಳುತ್ತಿದ್ದರು, ಸರ್ಕಾರ 4 ರೂ. ಹೆಚ್ಚಳಕ್ಕೆ ಒಪ್ಪಿಕೊಂಡು ಏಪ್ರಿಲ್ 1 ರಿಂದ ನೂತನ ದರ ಅನುಷ್ಠಾನಕ್ಕೆ ನಿರ್ಧರಿಸಿತು. ಹೆಚ್ಚಿಸಲಾದ ಸಂಪೂರ್ಣ ₹4 ರೈತರಿಗೆ ಹೋಗಲಿದೆ” ಎಂದು ಅವರು ತಿಳಿಸಿದರು.

ಮಾಸಿಕ ವಿದ್ಯುತ್ ಸರಾಸರಿ ನಿಗದಿತ ಶುಲ್ಕ 25 ರೂ. ಏರಿಕೆ :
ಆದರೆ ಮಾಸಿಕ ವಿದ್ಯುತ್ ಬಿಲ್ ನಲ್ಲಿ ನಿಗದಿತ ಶುಲ್ಕ (Fixed Charges) ದರವನ್ನು ಸರಾಸರಿಯಾಗಿ 25 ರೂ. ಏರಿಕೆ ಮಾಡಲಾಗಿದೆ. ಇದರಿಂದಾಗಿ ನಿಗದಿತ ಶುಲ್ಕ 120 ರೂ.ನಿಂದ 145 ರೂ.ಗೆ ಏರಿಕೆಯಾಗಲಿದೆ. ಒಂದು ಕಡೆ ವಿದ್ಯುತ್ ದರ ತುಸು ಕಡಿಮೆ ಮಾಡಿದಂತೆ ಮಾಡಿ ನಿಗದಿತ ಶುಲ್ಕ ಏರಿಸಿ ಕೆಇಆರ್ ಸಿ ಗ್ರಾಹಕರ ಜೇಬಿಗೆ ವಿದ್ಯುತ್ ಏರಿಕೆಯ ಭರಪೂರ ಭಾರವನ್ನು ಹೊರೆಸಿದೆ.

ಎಲ್ ಟಿ ಗೃಹಬಳಕೆ (LT Household) ಗಾಗಿ 2025-26 ರಲ್ಲಿ 10 ಪೈಸೆ ಮತ್ತು 2027-28 ರಲ್ಲಿ 5 ಪೈಸೆಯನ್ನು ವಿದ್ಯುತ್ ಶುಲ್ಕದಲ್ಲಿ ಕಡಿತ ಮಾಡಲಾಗಿದೆ. ಈ ದರಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ ಒಂದು ರೂಪಾಯಿ ಮತ್ತು ಹತ್ತು ಪೈಸೆ ಕಡಿತ ಮಾಡಲಾಗಿದೆ ಎಂದು ಕೆಇಆರ್ ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾನ್ಯ ಗ್ರಾಹಕನ ಮೇಲೆ ವಿದ್ಯುತ್ ಶುಲ್ಕ, ಹಾಲಿನ ದರ ಏರಿಕೆ ಒಟ್ಟಾರೆ ಎಷ್ಟು ಹೆಚ್ಚಾಗಲಿದೆ?
ಉದಾಹರಣೆಯೊಂದಿಗೆ ಇಂಧನ ಶುಲ್ಕದ ಲೆಕ್ಕಾಚಾರ
ರಾಜ್ಯದ ಸಾಮಾನ್ಯ ವಿದ್ಯುತ್ ಗ್ರಾಹಕನೊಬ್ಬ ತಿಂಗಳಿಗೆ 3 ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕ ಪಡೆದಿದ್ದು, 100 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ, ಕೆಇಆರ್ ಸಿ ವಿದ್ಯುತ್ ದರ ಪರಿಷ್ಕರಣೆಯಿಂದ ಮಾಸಿಕ ವಿದ್ಯುತ್ ದರದಲ್ಲಿ 65 ರೂ. ಏರಿಕೆಯನ್ನು ಅನುಭವಿಸುತ್ತಾನೆ. ಪ್ರಸ್ತುತ 3 ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕದ ನಿಗದಿತ ಶುಲ್ಕ 360 ರೂ. ಹಾಗೂ ಪ್ರತಿ ಯೂನಿಟ್ ವಿದ್ಯುತ್ ದರ 5.90 ರೂ. ನಂತೆ 590 ರೂ.ನಷ್ಟು ಇಂಧನ ಶುಲ್ಕ ಸೇರಿದಂತೆ 950 ರೂ. ಕಟ್ಟುತ್ತಿದ್ದಾನೆ. ಇದು 2025-26 ಆರ್ಥಿಕ ವರ್ಷದಲ್ಲಿ ಫಿಕ್ಸೆಡ್ ಚಾರ್ಜಸ್ ದರ 360 ರೂ. ಇದ್ದಿದ್ದು 435 ರೂ. ಅಂದರೆ 75 ರೂ. ನಷ್ಟು ಏರಿಕೆಯಾದರೆ, ಇಂಧನ ಶುಲ್ಕ 590 ರೂ. ಇದ್ದಿದ್ದು, 10ರೂ. ಕಡಿಮೆಯಾಗಿ 580 ರೂ. ನಷ್ಟಾಗಲಿದೆ. ಒಟ್ಟಾರೆ ಪ್ರತಿ ತಿಂಗಳು 950 ರೂ. ಕಟ್ಟುವ ಕಡೆ 1015 ರೂ. ಕಟ್ಟಬೇಕಾಗುತ್ತದೆ.
ಇನ್ನು ಗಂಡ ಹೆಂಡತಿ, ಇಬ್ಬರು ಮಕ್ಕಳಿರುವ ಮನೆಯಲ್ಲಿ ಪ್ರತಿದಿನ ಒಂದು ಲೀ. ಹಾಲು ಖರೀದಿಸುತ್ತಿದ್ದರೆ ಅವರಿಗೆ ಈತನಕ ಪ್ರತಿ ತಿಂಗಳಿಗೆ 1,320 ರೂ. ವೆಚ್ಚವಾಗುತ್ತಿತ್ತು. ಇದೀಗ ಹಾಲಿನ ದರ ಏರಿಕೆಯಿಂದ ಇನ್ನು ಮುಂದೆ 1,440 ರೂ. ವೆಚ್ಚವಾಗಲಿದೆ. ಅಂದರೆ ತಿಂಗಳಿಗೆ 120 ರೂ. ಹೆಚ್ಚವಾಗಲಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಗೃಹ ವಿದ್ಯುತ್ ಬಳಕೆದಾರರಿಗೆ ಪರಿಷ್ಕೃತ ವಿದ್ಯುತ್ ದರ ಏರಿಕೆ ಬಿಸಿ ಅಷ್ಟಾಗಿ ತಟ್ಟದು. ಆದರೆ ಮಾಸಿಕ 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸುವವರಿಗೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಇಂಧನ ಕ್ಷೇತ್ರದ ತಜ್ಞರು ಹೇಳಿದ್ದಾರೆ.
ಪ್ರತಿ ಯೂನಿಟ್ ವಿದ್ಯುತ್ ಕಡಿತ ಯಾರಿಗೆಲ್ಲಾ?:
ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸುವ ಹೋಂಸ್ಟೇ (Homestay)ಗಳಿಗೆ ಇನ್ಮುಂದೆ ಗೃಹಬಳಕೆಯ ವಿದ್ಯುತ್ ಬಿಲ್ ಜಾರಿಯಾಗಲಿದೆ. ಬಿಎಂಆರ್‌ಸಿಎಲ್ (BMRCL)ಗೆ ರಿಯಾಯಿತಿ ದರ ಇರಲಿದೆ. ಎಲ್ ಟಿ ವರ್ಗದಲ್ಲಿ ಬರುವ ಉದ್ಯಮಗಳಿಗೆ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 160 ಪೈಸೆ ಕಡಿತ. ಹೈಟೆನ್ಶನ್ (HT) ಉದ್ಯಮದ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 30 ಪೈಸೆ ಕಡಿತ. ಹೈಟೆನ್ಶನ್ (HT) ವಾಣಿಜ್ಯದ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 205 ಪೈಸೆ ಕಡಿತ. ಎಲ್‌ಟಿ ವಾಣಿಜ್ಯದ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 100 ಪೈಸೆ ಹೊರೆ ಕಡಿಮೆಯಾಗಲಿದೆ. ಹೈಟೆನ್ಶನ್ (HT) ವರ್ಗದ ವಸತಿ ಸಂಕೀರ್ಣಗಳಿಗೆ ಪ್ರತಿ ಯೂನಿಟ್‌ಗೆ 35 ಪೈಸೆಯಷ್ಟು ವಿದ್ಯುತ್ ಶುಲ್ಕ ಕಡಿತ. ಎಲ್ ಟಿ ವರ್ಗದಲ್ಲಿನ ಖಾಸಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 50 ಪೈಸೆಯಷ್ಟು ಕಡಿತ. ಹೆಚ್‌ಟಿ ವಾಣಿಜ್ಯ ವರ್ಗದಲ್ಲಿ ಮಾಲ್ ಹಾಗೂ ಫೈವ್ ಸ್ಟಾರ್ ಹೋಟೆಲ್‌ಗಳಿಗೆ ಪ್ರತಿ ಯೂನಿಟ್‌ನಲ್ಲಿ 205 ಪೈಸೆಗಳಷ್ಟು ವಿದ್ಯುತ್ ದರ ಕಡಿತವಾಗಲಿದೆ.
ಸೌರ ಮೇಲ್ಛಾವಣಿ, ಇವಿ ಚಾರ್ಜಿಂಗ್ ಕೇಂದ್ರಗಳಿಗೆ ರಿಯಾಯಿತಿ :
10 ಕಿಲೋ ವ್ಯಾಟ್ ವರೆಗೆ ಸೌರ ಮೇಲ್ಛಾವಣಿ (Solar roof Top ) ವ್ಯವಸ್ಥೆಗಳನ್ನು ಹೊಂದಿರುವ ಎಲ್ ಟಿ ಗೃಹ ಬಳಕೆದಾರರಿಗೆ ಅನ್ವಯವಾಗುವ ಸ್ಥಿರ ಶುಲ್ಕಗಳ ಮೇಲೆ ಪ್ರತಿ ಕಿಲೋ ವ್ಯಾಟ್ ಗೆ ₹25 ರಿಯಾಯಿತಿ ಅನುಮತಿ ನೀಡಲಾಗಿದೆ. ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳಿಗೆ ವಿದ್ಯುತ್ ಸುಂಕವು ಪ್ರತಿ ಯೂನಿಟ್‌ಗೆ ₹4.50 ಆಗಿ ಮುಂದುವರಿಯುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳಿಂದ ಇಂಧನ ಖರೀದಿ ಮತ್ತು ಬಳಕೆಯನ್ನು ಉತ್ತೇಜಿಸಲು, ಹೈಟೆನ್ಶನ್ ವರ್ಗದ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 50 ಪೈಸೆಯ ಹಸಿರು ಸುಂಕವು (Green tariff) ಮುಂದುವರಿಯುತ್ತದೆ.