ಬೆಂಗಳೂರು, ಮಾ.27 www.bengaluruwire.com : ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆಯಿಂದ ನಗರದ ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರ ಬಿಬಿಎಂಪಿಯಿಂದ ರಾಜ್ಯ ಸರ್ಕಾರ ಕಸಿದುಕೊಳ್ಳುತ್ತಿದೆ ಎಂಬ ಕೂಗು ಎಲ್ಲೆಡೆ ಪ್ರಬಲವಾಗಿದೆ.
ಈ ಹೊತ್ತಿನಲ್ಲೇ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಜನದಟ್ಟಣೆ ಹಾಗೂ ವಾಹನ ದಟ್ಟಣೆ ನಿಭಾಯಿಸುವ ಹೆಸರಲ್ಲಿ ನೂರಾರು ಕೋಟಿ ರೂ. ಮೊತ್ತದ ದೊಡ್ಡ ದೊಡ್ಡ ಮೂಲಭೂತ ಸೌಕರ್ಯ ಯೋಜನೆಗಳು ಪಾಲಿಕೆಯಿಂದ ಕೈತಪ್ಪುವ ಸಮಯ ಬಂದಾಗಿದೆ.
ರಾಜ್ಯ ಸರ್ಕಾರ 2025-26ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಪ್ರಕಟಿಸಿದಂತೆ ಬೆಂಗಳೂರಿನಲ್ಲಿ ತೀವ್ರ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ, ಇದೀಗ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (Bengaluru Smart Infrastructure Limited (B-SMILE) ಚಿಕ್ಕದಾಗಿ ಹೇಳುವುದಾದರೆ ಬಿ-ಸ್ಮೈಲ್ ಎಂಬ ಹೊಸ ವಿಶೇಷ ಉದ್ದೇಶದ ಘಟಕವನ್ನು (Special Purpose Vehicle – SPV) ಸ್ಥಾಪಿಸಲು ಸಜ್ಜಾಗಿದೆ.
ಬೆಂಗಳೂರಿನ ಸ್ವಚ್ಛತೆಗಾಗಿ ಬಿಬಿಎಂಪಿಯಲ್ಲಿನ ಅಧಿಕಾರವನ್ನು ವಿಭಜಿಸಿ ರಾಜ್ಯ ಸರ್ಕಾರವು ಈಗಾಗಲೇ “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ” (BSWML) ಎಂಬ ಕಂಪನಿಯನ್ನು ಹುಟ್ಟು ಹಾಕಿದೆ. ರಾಜ್ಯ ಸರ್ಕಾರದ ನೂರಾರು ಕೋಟಿ ಅನುದಾನ, ಭಾರೀ ಯೋಜನೆಯ ಹೆಸರಿನಲ್ಲಿ ದೊಡ್ಡ ದೊಡ್ಡ ಪ್ಯಾಕೇಜ್ ಗಳನ್ನು ಮೂಲಭೂತ ಸೌಕರ್ಯ ಕಲ್ಪಿಸುವ ಹೆಸರಿನಲ್ಲಿ, ಒಂದೇ ಬಾರಿಗೆ ಗುತ್ತಿಗೆದಾರಿಗೆ ಒಪ್ಪಿಸುವ ನಿಟ್ಟಿನಲ್ಲಿ ಪ್ರಭಾವಿಗಳಿಗೆ ಸ್ವಚ್ಛಂದವಾಗಿ “ಮೇಯಲು” ಹೊಸ ಬಿ-ಸ್ಮೈಲ್ ಕಂಪನಿ ಕಾನೂನಾತ್ಮಕ ವರದಾನದಂತಾಗಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗುತ್ತಿಗೆದಾರರು, ಅಧಿಕಾರಿಗಳು ತಿಳಿಸಿದ್ದಾರೆ.


ಬಿಬಿಎಂಪಿ ಮುಖ್ಯ ಆಯುಕ್ತರು ಮಾ.24ರಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಬಿ-ಸ್ಮೈಲ್ ಎಸ್ ಪಿವಿ ಕಂಪನಿಯ ರಚನೆ, ಸ್ವರೂಪ, ಉದ್ದೇಶ, ಕಂಪನಿಯ ಕಾರ್ಯವ್ಯಾಪ್ತಿ, ಯಾವೆಲ್ಲಾ ಯೋಜನೆಗಳು ಕಂಪನಿ ಕೈಗೆತ್ತಿಕೊಳ್ಳಬಹುದು, ಅದರ ಅಧಿಕಾರ ಮತ್ತಿತರ ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ಬಿ-ಸ್ಮೈಲ್ ಕಂಪನಿ ಸೃಜನೆಗೆ ಒಪ್ಪಿಗೆ ಸೂಚಿಸುವಂತೆ ಕೋರಿದ್ದಾರೆ.

ಬಿ-ಸ್ಮೈಲ್ ಎಸ್‌ಪಿವಿಯ ಪ್ರಮುಖ ಮುಖ್ಯಾಂಶಗಳು :
*ಮಾಲೀಕತ್ವ ರಚನೆ: ಬಿ-ಸ್ಮೈಲ್ ರಾಜ್ಯ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ಸರ್ಕಾರವು ಶೇ.90 ರಷ್ಟು ಪಾಲನ್ನು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೇ.10 ರಷ್ಟು ಪಾಲನ್ನು ಹೊಂದಿರುತ್ತದೆ.
ಉದ್ದೇಶಗಳು: ಸ್ಮಾರ್ಟ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳ ಮೂಲಕ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಪರಿಹರಿಸುವುದು ಎಸ್‌ಪಿವಿ ಗುರಿಯಾಗಿದೆ.
ಆಡಳಿತ: ಎಸ್‌ಪಿವಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಂಪನಿಯ ಅಧ್ಯಕ್ಷರಾಗಿದ್ದರೆ, ಬಿಬಿಎಂಪಿ ಮುಖ್ಯ ಆಯುಕ್ತರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಮೇಯರ್, ಬಿಡಿಎ ಆಯುಕ್ತರು, ಬಿಡಬ್ಲ್ಯೂಎಸ್ಎಸ್ ಬಿ ಅಧ್ಯಕ್ಷರು, ಮೂಲಸೌಕರ್ಯದಲ್ಲಿ ಪರಿಣಿತ ಮಹಿಳೆ ಮತ್ತು ಇಬ್ಬರು ಸ್ವತಂತ್ರ ತಜ್ಞರು ಕಂಪನಿಯ ನಿರ್ದೇಶಕರಾಗಿರುತ್ತಾರೆ. ಇನ್ನು ಬಿಬಿಎಂಪಿಯ ಎಂಜಿನಿಯರ್-ಇನ್-ಚೀಫ್ ತಾಂತ್ರಿಕ ನಿರ್ದೇಶಕರನ್ನು ಒಳಗೊಂಡ ಮಂಡಳಿಯನ್ನು ಹೊಂದಿರುತ್ತದೆ ಎಂದು ಮುಖ್ಯ ಆಯುಕ್ತರ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಯೋಜನೆಯ ವ್ಯಾಪ್ತಿ: ಬೆಂಗಳೂರು ನಗರ ಜಿಲ್ಲೆಯೊಳಗಿನ ವಿವಿಧ ಮೂಲಸೌಕರ್ಯ ಯೋಜನೆಗಳ ವಿನ್ಯಾಸ, ಮೌಲ್ಯಮಾಪನ, ನಿರ್ಮಾಣ, ಅಭಿವೃದ್ಧಿ, ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಬಿ-ಸ್ಮೈಲ್ ನಿರ್ವಹಿಸುತ್ತದೆ.
ಸಂಚಾರ ದಟ್ಟಣೆಗೆ ಪರಿಹಾರಗಳು :
ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಕ್ರಮಗಳನ್ನು ಅನುಷ್ಠಾನಗೊಳಿಸುವತ್ತ ಎಸ್‌ಪಿವಿ ಗಮನಹರಿಸುತ್ತದೆ, ಅವುಗಳೆಂದರೆ:
* ವೈಟ್-ಟಾಪಿಂಗ್ ಪ್ರಮುಖ ರಸ್ತೆಗಳು
* ಭೂಗತ ಸುರಂಗ ಮಾರ್ಗಗಳನ್ನು ನಿರ್ಮಿಸುವುದು
* ಕಾಲುವೆ ಬಫರ್ ವಲಯಗಳೊಳಗೆ ಎಲ್ಲಾ ಹವಾಮಾನಕ್ಕೆ ಸರಿಹೊಂದುವ ರಸ್ತೆಗಳನ್ನು ನಿರ್ಮಿಸುವುದು.
* 200 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ 100 ಕಿಮೀ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು.
ಬಿ-ಸ್ಮೈಲ್‌ನ ಕಾರ್ಯಾಚರಣೆಯ ರಚನೆಯು ಇವುಗಳನ್ನು ಒಳಗೊಂಡಿರುತ್ತದೆ:
* ವಿವಿಧ ಕ್ಷೇತ್ರಗಳ ತಜ್ಞರನ್ನು ಹೊಂದಿರುವ ಸ್ವತಂತ್ರ ನಿರ್ದೇಶಕರ ಮಂಡಳಿ.
* ಲೆಕ್ಕಪತ್ರ ಪುಸ್ತಕಗಳ ಕುರಿತು ಲೆಕ್ಕಪರಿಶೋಧಕರಿಂದ ನಿಯಮಿತ ಲೆಕ್ಕಪರಿಶೋಧನೆಗಳು.
* ಯೋಜನೆಯ ಟೆಂಡರ್ ಮತ್ತು ಖರೀದಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ
* ಸರ್ಕಾರಕ್ಕೆ ತ್ರೈಮಾಸಿಕ ಪ್ರಗತಿ ವರದಿಗಳು.
* ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು
* ಎಸ್‌ಪಿವಿ ಅಧಿಕಾರಿಗಳಿಗೆ ಕಾರ್ಯಕ್ಷಮತೆ ಆಧಾರಿತ ಲೆಕ್ಕಪರಿಶೋಧನೆ.
ಒಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿಯಿಂದ ರಾಜ್ಯ ಸರ್ಕಾರ ಒಂದೊಂದೇ ಅಧಿಕಾರವನ್ನು ಆಡಳಿತದ ಹೆಸರಿನಲ್ಲಿ ಪರೋಕ್ಷವಾಗಿ ಅಭಿವೃದ್ಧಿ ಹೆಸರಿನಲ್ಲಿ ಮೊಟಕುಗೊಳಿಸುತ್ತಿರುವ ಬಗ್ಗೆ ಈಗಾಗಲೇ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗಿದೆ. ಮತ್ತೊಂದೆಡೆ ಪಾಲಿಕೆಗೆ ಚುನಾವಣೆ ನಡೆಸುವ ಬಗ್ಗೆ ಹೆಚ್ಚು ಆಸಕ್ತಿ ತೋರದೇ ಆಡಳಿತಾಧಿಕಾರಿಗಳ ಮೂಲಕ ತನ್ನ ಕಿರುಬೆರಳಿನಲ್ಲಿ ಬಿಬಿಎಂಪಿಯನ್ನು ತೊಗಲುಗೊಂಬೆಯಂತೆ ರಾಜ್ಯ ಸರ್ಕಾರ ಆಟವಾಡಿಸುತ್ತಿರುವುದು ದುರಂತವೇ ಸರಿ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.