ಬೆಂಗಳೂರು, ಮಾ.27 www.bengaluruwire.com : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ-2025 (All Karnataka Brahmin Mahasabha Elections-2025) ಹಿನ್ನಲೆಯಲ್ಲಿ ನಗರದ ಮಹಾಸಭಾ ಕೇಂದ್ರ ಕಛೇರಿಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ರವರು ಇಂದು ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಎಸ್.ರಘುನಾಥ್ (S.Raghunath) ರವರು ಸಾವಿರಾರು ವಿಪ್ರ ಮುಖಂಡರ ಜೊತೆಯಲ್ಲಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಪಾದಯಾತ್ರೆ ಮೂಲಕ ದೊಡ್ಡ ಬಸವನಗುಡಿ ದೇವಸ್ಥಾನ ರಸ್ತೆಯಿಂದ, ಎನ್.ಆರ್.ಕಾಲೋನಿ, ತ್ಯಾಗರಾಜನಗರ ರಸ್ತೆ ಮೂಲಕ ಗಾಯಿತ್ರಿ ಭವನಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಎಸ್.ರಘುನಾಥ್, ರಾಜ್ಯದಲ್ಲಿ 30ಲಕ್ಷಕ್ಕೂ ಹೆಚ್ಚು ಜನರು ಬ್ರಾಹ್ಮಣ ಸಮುದಾಯದವರು ಇದ್ದಾರೆ. ಆ ಪೈಕಿ ಹಲವು ಜನರು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಲ್ಲಿ ಅವಕಾಶ ವಂಚಿತರಾಗಿದ್ದಾರೆ. ಜಿಲ್ಲೆ, ಗ್ರಾಮಾಂತರ, ಹೋಬಳಿ ಮಟ್ಟದಲ್ಲಿ ವಿಪ್ರರಿಗೆ ಮಹಾಸಭಾ ಸ್ಪಂದಿಸುವ ಕಾರ್ಯ ಮಾಡಬೇಕು ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.
ತಾವು ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರಕ್ಕೆ ಬಂದಲ್ಲಿ, ಪದ್ಮನಾಭನಗರದಲ್ಲಿರುವ ಸುವರ್ಣ ಭವನ ನಿರ್ಮಿಸಿ ಮಹಾಸಭಾಗೆ ಶಾಶ್ವತ ಅದಾಯ ಬರುವಂತೆ ಕ್ರಮ ಕೈಗೊಳ್ಳುವುದು, ಮೇಲ್ವರ್ಗ ಮೀಸಲಾತಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುವುದು ಮತ್ತು ಮಹಿಳೆಯರು, ಯುವ ಸಮುದಾಯಕ್ಕೆ ಮಹಾಸಭಾದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.


ತ್ರಿಮತಸ್ಥ ಬ್ರಾಹ್ಮಣರೆಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಸಂಘಟನೆ ಮಾಡುವುದು, ಮಹಾಸಭಾದಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು, ಮಹಾಸಭಾ ಬೈಲಾ ತಿದ್ದುಪಡಿ, ಆರ್ಥಿಕವಾಗಿ ಸದೃಢ ಮಾಡುವುದು, ಸರ್ಕಾರದ ಸವಲತ್ತುಗಳನ್ನು ಅರ್ಹ ವಿಪ್ರ ಕುಟುಂಬಗಳಿಗೆ ತಲುಪಿಸಲು ಇ-ಸೇವಾ ಕೇಂದ್ರ ಸ್ಥಾಪನೆ ಮಾಡುತ್ತೇವೆ ಎಂದು ತಮ್ಮ ಚುನಾವಣಾ ಭರವಸೆಗಳ ಬಗ್ಗೆ ತಿಳಿಸಿದರು.

ರಾಜ್ಯಾದ್ಯಂತ ಇರುವ ವಿಪ್ರ ಸಮುದಾಯದವರು ಮತ್ತು ಮುಖಂಡರುಗಳು ತಮಗೆ ಹೆಚ್ಚಿನ ಸಹಕಾರ, ಬೆಂಬಲ ನೀಡುತ್ತಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹೊಸ ದಿಕ್ಕಿನತ್ತ ಕೊಂಡೊಯ್ಯುವ ಅಗತ್ಯವಿದೆ ಎಂದು ಎಸ್.ರಘುನಾಥ್ ಹೇಳಿದರು.
ನಿಕಟಪೂರ್ವ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು ಮಾತನಾಡಿ ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ಮತ್ತು ನಾನು ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇವೆ, ನಾವು ಭೇಟಿಕೊಟ್ಟ ಜಿಲ್ಲೆಗಳಲ್ಲಿ ವಿಪ್ರ ಸಮುದಾಯದವರು, ಮುಖಂಡರುಗಳು ಮಹಾಸಭಾದಲ್ಲಿ ಬದಲಾವಣೆಗಾಗಿ ತಮ್ಮ ತಂಡಕ್ಕೆ ಬೆಂಬಲಿಸುತ್ತೇವೆ ಎಂದು ಸ್ವಯಂಪೇರಿತರಾಗಿ ಹೇಳಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹೊಸ ದಿಕ್ಕು, ನವಶಕ್ತಿಯ ಜೊತೆಯಲ್ಲಿ ರಾಜ್ಯ ವಿಪ್ರರ ಜೊತೆಯಲ್ಲಿ ಬ್ರಾಹ್ಮಣರ ಅಭವೃದ್ದಿಗೆ ಶ್ರಮಿಸಲಾಗುವುದು. ವಿಪ್ರರ ಸಂಘಟನೆ, ಅಭಿವೃದ್ದಿ, ಅವರಲ್ಲಿ ನವಚೈತನ್ಯ ಶಕ್ತಿ ತುಂಬುವ ನಿಟ್ಟಿನಲ್ಲಿ ಬೃಹತ್ ಪಾದಯಾತ್ರೆ ಮೂಲಕ ನಾಮಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷರಾದ ಎಂ.ಆರ್.ವಿ.ಪ್ರಸಾದ್, ನಿಕಟಪೂರ್ವ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್, ವಿಪ್ರ ಮುಖಂಡರಾದ ಅರುಳು ಮಲ್ಲಿಗೆ ಪಾರ್ಥಸಾರಥಿ, ಕೆ.ಪಿ.ಪುತ್ತುರಾಯ, ಪ್ರಹ್ಲಾದ್ ಬಾಬು, ಎಸ್.ದತ್ತಾತ್ರಿ, ನರಸಿಂಹನ್, ಸತ್ಯಪ್ರಕಾಶ್, ರವಿಶಂಕರ್, ಚಿದಾನಂದ್ ರವರು ಉಪಸ್ಥಿತರಿದ್ದರು. ಮಹಾಸಭಾ ಜಿಲ್ಲಾ ಪ್ರತಿನಿಧಿ ಸ್ಪರ್ಧಿಗಳು, ವಿಪ್ರ ಸಮುದಾಯದ ಮುಖಂಡರುಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.