ಬೆಂಗಳೂರು, ಮಾ.22 www.bengaluruwire.com : ಕಾದ ಕೆಂಡದಂತಾಗಿದ್ದ ಬೆಂಗಳೂರಿಗೆ ಈ ವರ್ಷದಲ್ಲಿ ಮೊದಲ ಮುಂಗಾರು ಪೂರ್ವ ಮಳೆಯು ತಂಪೆರೆದಿದೆ. ಹಲವು ದಿನಗಳಿಂದ ಒಣಹವೆ, ಬಿಸಿಲಿನ ತಾಪಕ್ಕೆ ಬಸವಳಿದಿದ್ದ ನಗರದ ಜನತೆಗೆ ಇಂದು ಸಂಜೆ ಹಲವು ಕಡೆಗಳಲ್ಲಿ ಭಾರೀ ಗಾಳಿಯೊಂದಿಗೆ ಸುರಿದ ಮಳೆ ಸಮಾಧಾನ ತಂದಿತು. ಬಿಸಿಲಿನಿಂದ ಕಾದಿದ್ದ ನೆಲಕ್ಕೆ ಬಿದ್ದ ಮಳೆಯ ನೀರು, ಅಪರೂಪದ ಮಣ್ಣಿನ ಪರಿಮಳವನ್ನು ಹಲವರು ಅನುಭವಿಸಿ ಆನಂದಪಟ್ಟರು. ವಾರಾಂತ್ಯದ ಮೂಡ್ ನಲ್ಲಿದ್ದವರು ಎಲ್ಲಿಲ್ಲದ ಸಂತಸಪಟ್ಟರು.
ಬೆಂಗಳೂರಿನಲ್ಲಿ ನಿನ್ನೆ ಮೊತ್ತ ಮೊದಲ ಬಾರಿಗೆ ಸ್ಯಾಂಕಿ ಕರೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ತಲಕಾವೇರಿಯಿಂದ ತಂದ ಕಾವೇರಿ ನೀರನ್ನು ಇಲ್ಲಿನ ಕೆರೆಗೆ ಹಾಕಿ 30 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಭಕ್ತಿಭಾವದಿಂದ ಕಾವೇರಿ ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಮರುದಿನವೇ ನಗರದಲ್ಲಿ ಉತ್ತಮ ಮಳೆಯಾಗಿರುವುದು ಕಾಕತಾಳಿಯವೇ ಸರಿ.

ಕಾವೇರಿ ಆರತಿ ಮಹಿಮೆ ; ಬೆಂಗಳೂರಿಗೆ ಪ್ರಕೃತಿಯ ಕೊಡುಗೆ :
“ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಕಾವೇರಿ ತಾಯಿಗೆ ಆರತಿಯ ಮೂಲಕ ಪೂಜಿಸಿದೆವು. ಕಾವೇರಿ ಮಾತೆಯು, ಆರತಿಯಾದ 24 ಗಂಟೆಗಳಲ್ಲಿ ಬೆಂಗಳೂರಿಗೆ ಉತ್ತಮ ಮಳೆಯನ್ನು ಸುರಿಸುವಂತೆ ಹರಸಿದ್ದಾಳೆ ಎಂದು ನಾನು ನಂಬುತ್ತೇನೆ. ಜೈ ಕಾವೇರಿ”.

“ಭಕ್ತಿ ಮತ್ತು ಸಮರ್ಪಣೆಯೊಂದಿಗೆ ನಮ್ಮ ಸಾಮೂಹಿಕ ಪ್ರಾರ್ಥನೆಗಳು ಯಾವಾಗಲೂ ನಮಗೆ ಪ್ರಕೃತಿಯ ದೈವಿಕ ಆಶೀರ್ವಾದವನ್ನು ನೀಡುತ್ತವೆ. ಆದ್ದರಿಂದ ನೀರು ಮತ್ತು ನದಿ, ಸರೋವರಗಳು ಮುಂತಾದ ಜಲಮೂಲಗಳು ಸೇರಿದಂತೆ ಪ್ರಕೃತಿಗೆ ನಮ್ಮ ಕೃತಜ್ಞತೆಯನ್ನು ತೋರಿಸುವುದು ಮುಖ್ಯ”.

- ರಾಮ್ ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷರು
ಬಿಐಎಎಲ್ ರಸ್ತೆಯಲ್ಲಿ ಅತಿ ಹೆಚ್ಚು ಅಂದರೆ 40.4 ಮಿಮೀ ಮಳೆಯಾಗಿದ್ದು, ನಂತರ ಯಲಹಂಕದಲ್ಲಿ 33.4 ಮಿಮೀ ಮತ್ತು ಸಹಕಾರ ನಗರದಲ್ಲಿ 29.4 ಮಿಮೀ ಮಳೆಯಾಗಿದೆ. ಆರ್‌ಟಿ ನಗರ ಮತ್ತು ಕಮ್ಮನಹಳ್ಳಿಯಂತಹ ಇತರ ಪ್ರದೇಶಗಳಲ್ಲಿ ಕ್ರಮವಾಗಿ 22.2 ಮಿಮೀ ಮತ್ತು 17.4 ಮಿಮೀ ಮಳೆಯಾಗಿದೆ.
ಸಂಜೆ 5:30 ರ ಹೊತ್ತಿಗೆ, ವೈಟ್‌ಫೀಲ್ಡ್, ಹೂಡಿ, ಮಹದೇವಪುರ, ಕೆ.ಆರ್.ಪುರಂ ಮತ್ತು ಕಾಡುಗೋಡಿಯಲ್ಲಿ ಭಾರಿ ಮಳೆಯಾಗಿದೆ ಎಂದು ವರದಿಯಾಗಿದೆ. ಆದರೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಮಧ್ಯ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹಗುರವಾದ ಮಳೆಯಾಗಿದೆ.

ಸಾಮಾಜಿಕ ಮಾಧ್ಯಮ ಬಝ್ ಏನು?:
ಅನಿರೀಕ್ಷಿತ ಮಳೆಯು ಬೆಂಗಳೂರಿಗರಲ್ಲಿ ಸಂತೋಷವನ್ನುಂಟುಮಾಡಿದೆ. ನಗರದ ನಿವಾಸಿಗಳು ಸಿಲಿಕಾನ್ ಸಿಟಿಯಲ್ಲಿ ಬಿದ್ದ ಮಳೆಯ ಬಗ್ಗೆ ಕೆಲವರು ಸಂತೋಷ ವ್ಯಕ್ತಪಡಿಸಿದರೆ, ಹಲವು ಕಡೆಗಳಲ್ಲಿನ ರಸ್ತೆಯಲ್ಲಿ ನೀರು ನುಗ್ಗಿರುವ ಬಗ್ಗೆ, ಸಂಚಾರ ದಟ್ಟಣೆಯ ಬಗ್ಗೆ ಕೆಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರು ಹವಾಮಾನದಲ್ಲಿನ ಉಲ್ಲಾಸಕರ ಹಾಗೂ ತಂಪನೆಯ ವಾತಾವರಣದ ಬಗ್ಗೆ ಹಲವು ವಿಡಿಯೋ, ಫೊಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಹವಾಮಾನ ಮುನ್ಸೂಚನೆ:
ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರೂ, ನೈಋತ್ಯ ಬೆಂಗಳೂರು ಮತ್ತು ಪಶ್ಚಿಮ ಭಾಗವು ಒಣಹವೆಯಿಂದ ಕೂಡಿತ್ತು. ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಶನಿವಾರ ಸಂಜೆ 5.30ಕ್ಕೆ ಕೊನೆಗೊಂಡ ಬೆಂಗಳೂರು ಹವಾಮಾನ ಇಲಾಖೆ ವರದಿಯ ಪ್ರಕಾರ ನಗರದಲ್ಲಿ ಗರಿಷ್ಠ ತಾಪಮಾನ 33.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 22.09 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, 0.2 ಮಿ.ಮೀ ಮಳೆಯಾಗಿದೆ ಎಂದು ತಿಳಿಸಿದೆ.
ಇನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, 38.6 ಮಿ.ಮೀ ಮಳೆಯಾಗಿದೆ ಎಂದು ವರದಿ ಮಾಡಿದೆ. ಅದೇ ರೀತಿ ಎಚ್ ಎಎಲ್ ಹಳೆಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 20.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.