ಬೆಂಗಳೂರು, ಮಾ.22 www.bengaluruwire.com : ತೇಲುವ ವೇದಿಕೆ ಮೇಲೆ ತಾಯಿ ಗಂಗಮ್ಮ ದೇವಿಗೆ ನಮನ, ತಲಕಾವೇರಿಯಿಂದ ತಂದ ಕಾವೇರಿ ನೀರನ್ನು ಹಾಕಿ ಕಾವೇರಿ ಆರತಿ, ವರ್ಣರಂಜಿತ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಮಂತ್ರ ಘೋಷಗಳ ಭಕ್ತಿ ಭಾವದ ಜತೆಗೆ ಜಲ ಹಾಗೂ ಜಲ ಮೂಲಗಳ ಸಂರಕ್ಷಣೆಗಾಗಿ ಪ್ರತಿಜ್ಞಾ ಸ್ವೀಕಾರ…
ಇದಲ್ಲಾ ಚಟುವಟಿಕೆಗಳು ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಯಾಂಕಿ ಕೆರೆಯಲ್ಲಿ ಶುಕ್ರವಾರ ನಡೆದ ಕಾವೇರಿ ಆರತಿ ಕಾರ್ಯಕ್ರಮದ ಚಿತ್ರಣ.

ರಾಜ್ಯ ಬೇಸಿಗೆ ಎದುರಿಸುತ್ತಿರುವ ಹೊತ್ತಿನಲ್ಲಿ, ಮಾ.22ರಂದು ವಿಶ್ವ ಜಲ ದಿನದ ಅಂಗವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಜಲ ಮಂಡಳಿ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಕಾವೇರಿ ಆರತಿ ಹಾಗೂ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ಜಲಸಂರಕ್ಷಣೆಯ ಪ್ರತಿಜ್ಞಾವಿಧಿಯಲ್ಲಿ ಸಾವಿರಾರು ಜನರು ಭಾಗವಹಿಸಿ ಹೊಸ ದಾಖಲೆ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ವಿಶ್ವ ಜಲ ದಿನ ಅಂಗವಾಗಿ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಅಭಿಯಾನಕ್ಕೆ ನಿಮ್ಮನ್ನು ಆಹ್ವಾನಿಸಿದ್ದೇನೆ. ಇಂದು ಪವಿತ್ರವಾದ ಕಾವೇರಿ ಆರತಿ ಮೂಲಕ ಚಾಲನೆ ನೀಡಲಾಗುತ್ತಿದೆ. ನೀವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮಗೆ ಸರ್ಕಾರದ ಪರವಾಗಿ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಶುಕ್ರವಾರ ಬೆಳಗ್ಗೆ ತಲಕಾವೇರಿಗೆ ಹೋಗಿ ಕಾವೇರಿ ಪೂಜೆ ಮಾಡಿ, ಪವಿತ್ರ ಕಾವೇರಿ ಜಲವನ್ನು ತಂದು ಮಲ್ಲೇಶ್ವರದಲ್ಲಿರುವ ಸ್ಯಾಂಕಿ ಕೆರೆಗೆ ಅರ್ಪಿಸಿ ಪವಿತ್ರವಾದ ಕಾರ್ಯಕ್ರಮ ನಡೆಸಲಾಗಿದೆ” ಎಂದು ತಿಳಿಸಿದರು.


“ನಮ್ಮ ದಿನನಿತ್ಯದ ಜೀವನ ಆರಂಭವಾಗುವುದೇ ನೀರಿನಿಂದ. ನೀರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ನೀರಿನಿಂದಲೇ ನಾಗರೀಕತೆ, ನೀರಿನಿಂದಲೇ ಧರ್ಮ, ನೀರಿಲ್ಲದೆ ಪರಮಾತ್ಮನಿಲ್ಲ. ಇಲ್ಲಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶಕ್ತಿ ದೇವತೆಗಳಾದ ಗಂಗಮ್ಮ, ಮಾರಮ್ಮ, ಕಾಡುಮಲ್ಲೇಶ್ವರ, ಲಕ್ಷ್ಮಿ ನರಸಿಂಹಸ್ವಾಮಿ, ದಕ್ಷಿಣಮುಖಿ ನಂದಿತೀರ್ಥ ದೇವಾಲಯಗಳಿವೆ. ಸ್ಥಳೀಯ ನಾಗರೀಕರು ಈ ಕಾರ್ಯಕ್ರಮಕ್ಕೆ ಅತ್ಯುತ್ತಮ ಸಹಕಾರ ನೀಡಿದ್ದಾರೆ. ಪ್ರಕೃತಿಯ ಜಲ ಮಾತೆಗೆ ನಮಿಸಿ ಪ್ರಾರ್ಥಿಸುವುದು ನಮ್ಮ ಕರ್ತವ್ಯ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಹೇಳುತ್ತಿರುತ್ತೇನೆ” ಎಂದರು.

ದಸರಾ ವೇಳೆಗೆ ಕೆಆರ್ ಎಸ್ ನಲ್ಲಿ ಕಾವೇರಿ ಆರತಿ :
“ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾವೇರಿ ಆರತಿ ಪ್ರಾರಂಭ ಮಾಡಿದ್ದೇವೆ. ಕೆಆರ್ ಎಸ್ ಜಲಾಶಯದ ಬಳಿಯೂ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ಅದಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ. ದಸರಾ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡುವ ಯೋಜನೆ ಇದೆ” ಎಂದು ಹೇಳಿದರು.
“ಬರಗಾಲ ಬಂದಾಗ, ಬಾವಿ ಬತ್ತಿದಾಗ ನಮಗೆ ನೀರಿನ ಮೌಲ್ಯ ಅರಿವಾಗುತ್ತದೆ. ನೀರಿನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಕಾವೇರಿ 5ನೇ ಹಂತದ ಯೋಜನೆ ಜಾರಿ ಮಾಡಲಾಗಿದೆ. ಆಮೂಲಕ 110 ಹಳ್ಳಿಗಳಿಗೆ ನೀರು ಒದಗಿಸಲಾಗಿದೆ. ಈ ವರ್ಷ ಎಷ್ಟೇ ಕಷ್ಟ ಬಂದರೂ ನೀರಿನ ಸಮಸ್ಯೆ ಎದುರಾಗಬಾರದು ಎಂದು ನಾವು ಸಂಕಲ್ಪ ಮಾಡಿದ್ದೇವೆ. ನೀರನ್ನು ಸಮರ್ಪಕವಾಗಿ ಬಳಸಿ, ನೀರಿನ ಸಂರಕ್ಷಣೆಗೆ ನೀವೆಲ್ಲರೂ ಪ್ರತಿಜ್ಞೆ ಮಾಡಬೇಕು” ಎಂದು ಕರೆ ನೀಡಿದರು. ಅಲ್ಲದೇ ನೀರು ಸಂರಕ್ಷಣೆ, ಮಿತಬಳಕೆ, ಮಳೆನೀರು ಕೊಯ್ಲು ವಿಧಾನ ಬಳಕೆ, ಜಲಮೂಲ ರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ವಿಶ್ವಜಲ ಪ್ರತಿಜ್ಞಾ ವಿಧಿ ಬೋಧಿಸಿದರು.
ಗಂಗಾರತಿ ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ನಮ್ಮ ಮೆಟ್ರೋ ಎಂಡಿ ಮಹೇಶ್ವರಾವ್ ಸೇರಿದಂತೆ ಮತ್ತಿತರ ಗಣ್ಯರು, ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.