– ವಿಶೇಷ ಲೇಖನ ಬರಹ : ಕೆ.ಎ.ದಯಾನಂದ, ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ
www.bengaluruwire.com : ಜನಸಾಮಾನ್ಯರ ಹಲವು ದೂರುಗಳನ್ನು ಪ್ರತಿನಿತ್ಯ ಕೇಳುತ್ತೇವೆ. ‘ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದುಡ್ಡಿಲ್ಲದೆ ನೋಂದಣಿ ಮಾಡುವುದಿಲ್ಲ. ಇನ್ನು ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಗ್ರಾಮ ಪಂಚಾಯತ್‌ಗಳಲ್ಲಿ ದುಡ್ಡು ಕೊಟ್ಟರೆ ಮಾತ್ರ ಖಾತೆ ಮಾಡಿಕೊಡುವುದು.
ದುಡ್ಡು ಕೊಟ್ಟರೆ ಯಾರದ್ದೋ ಜಮೀನನ್ನು ಯಾರಿಗೋ ನೋಂದಣಿ ಮಾಡಿ ಖಾತೆ ಮಾಡುತ್ತಾರೆ. ಕೆಲವು ರಿಯಲ್ ಎಸ್ಟೇಟ್ ವಹಿವಾಟುದಾರರು ಅಮಾಯಕರ ಜಮೀನಿಗೆ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಅದನ್ನು ಹಣಬಲ ಮತ್ತು ತೋಳ್ಬಲಗಳಿಂದ ಲಪಟಾಯಿಸಿಬಿಡುತ್ತಾರೆ. ನ್ಯಾಯ ಎಂಬುದು ಮರೀಚಿಕೆ’ ಹೀಗೆ, ಸಹಜವಾಗಿಯೇ ನಾವೆಲ್ಲರೂ ಜನಸಾಮಾನ್ಯರಿಂದ ಕೇಳುವ ಮಾತಿದು.
ಕಾನೂನು ಬಾಹಿರ ಬಡಾವಣೆ ನಿರ್ಮಿಸಿಕೊಂಡು ಒಂದೇ ನಿವೇಶನವನ್ನು ಹಲವರಿಗೆ ಮಾರುವುದು ಅಥವಾ ನಿವೇಶನಗಳನ್ನು ಮಾರಿದ ನಂತರ ಮೂಲ ಇರುವ ಒಟ್ಟು ಜಮೀನನ್ನೇ ಬೇರೊಬ್ಬರಿಗೆ ಮಾರಾಟ ಮಾಡುವುದು, ಅದನ್ನು ಕೊಂಡ ಕುಳಗಳು ಬಂದು ಬೇಲಿ ಹಾಕುವುದು. ಕೊಂಡ ನಿವೇಶನ ಪರರ ಪಾಲಾದರೆ, ಅವರ ಪರಿಸ್ಥಿತಿ ಊಹಿಸಲು ಅಸಾಧ್ಯ. ಇಂತಹ ನೂರಾರು ಭಾಧಿತರು ಜಿಲ್ಲಾಧಿಕಾರಿ ಕಚೇರಿ ಸುತ್ತುತ್ತಾ, ಕಣ್ಣೀರು ಸುರಿಸುವುದನ್ನು ಕಣ್ಣಾರೆ ಕಂಡರೂ ಜಿಲ್ಲಾಧಿಕಾರಿಯಾಗಿ ತಕ್ಷಣಕ್ಕೆ ಏನೂ ಮಾಡಲಾಗದ ಸ್ಥಿತಿಯನ್ನು ಕಂಡಿದ್ದೇನೆ. ಇವೆಲ್ಲ ಹಲವು ಇಲಾಖೆಗಳ ಸಹಕಾರದಿಂದ ವ್ಯವಸ್ಥಿತವಾಗಿ ನಡೆಯುವ ವ್ಯೂಹವಾಗಿದೆ.

ಐಪಿಎಸ್ ಸಂಬಂಧಿಕರಿಗೂ ತಪ್ಪದ ಆಸ್ತಿ ನಕಲಿ ದಾಖಲೆ ಫಜೀತಿ :

ಐಪಿಎಸ್ ಪಾಸಾಗಿ ತರಬೇತಿಯಲ್ಲಿರುವ ಭಾನುಪ್ರಕಾಶ್ ಎಂಬಾತ ಐದಾರು ತಿಂಗಳ ಹಿಂದೆ ತಮ್ಮ ಮಾವನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದು, ‘ಸರ್, ವಿಜಯನಗರದಲ್ಲಿ ನನ್ನ ಪತ್ನಿಯ ಅಜ್ಜ ಉಮೇಶ್ ಗೌಡರವರಿಗೆ ಬಿಡಿಎಯಿಂದ ನಿವೇಶನ ಮಂಜೂರಿ ಆಗಿತ್ತು. ಅವರು ಮರಣ ಹೊಂದಿ 10 ವರ್ಷವಾಯಿತು. 2 ತಿಂಗಳ ಹಿಂದೆ ತಾನೇ ಉಮೇಶ್ ಗೌಡ ಎಂದು ಅಪರಿಚಿತನೊಬ್ಬ ದಾಖಲೆ ಸೃಷ್ಟಿಸಿಕೊಂಡು ಯಾರಿಗೋ ಮಾರಾಟ ಮಾಡಿ, ಕ್ರಯಪತ್ರವೂ ನೋಂದಣಿ ಆಗಿದೆ. ಬಿಬಿಎಂಪಿಯಲ್ಲಿ ಖಾತೆ ಮಾಡಿಕೊಳ್ಳಲು ಓಡಾಡುತ್ತಿದ್ದಾರೆ. ಏನು ಮಾಡುವುದು ತಿಳಿಯುತ್ತಿಲ್ಲ’ ಎಂದು ಗೋಳು ತೋಡಿಕೊಂಡರು. ಎಷ್ಟಾದರೂ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಲ್ಲವೇ. ಠಾಣಾಧಿಕಾರಿಗಳು ಸ್ಪಂದಿಸಿದರು. ಐಜಿಆರ್ ಆಗಿ ನಮ್ಮಿಂದಲೂ ಸ್ಪಂದನೆ ಸಿಕ್ಕಿತು. ಸುಳ್ಳು ದಾಖಲೆ ಸೃಷ್ಟಿಸಿಕೊಂಡವನು ಹೆದರಿ ಕ್ರಯಪತ್ರವನ್ನು ರದ್ದುಪಡಿಸಿ ಮತ್ತೆ ನೋಂದಣಿ ಮಾಡಿಕೊಟ್ಟನು. ಇಲ್ಲದಿದ್ದಲ್ಲಿ ಕನಿಷ್ಠ 5 ವರ್ಷ ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತಿತ್ತು.

“ನಮ್ಮ ಮಾವನವರೂ ಭೂಮಿ ಕಳೆದುಕೊಂಡರು” :
ಹೀಗೆ ನಿವೇಶನ ಕಳೆದುಕೊಂಡ ಉದಾಹರಣೆಗಳಲ್ಲಿ ನಮ್ಮ ಮಾವನವರದ್ದೂ ಒಂದು. ಅವರ ಸ್ನೇಹಿತರು ಸೇರಿ ಕೋಣನಕುಂಟೆಯಲ್ಲಿ 2 ಎಕರೆ ಕಂದಾಯ ಭೂಮಿಯನ್ನು ಖರೀದಿಸಿ ಜಿಪಿಎ ಮೂಲಕ ಪಡೆದು, 50/80 ರಂತೆ ನಿವೇಶನ ಹಂಚಿಕೊಂಡು ನೋಂದಣಿ ಮಾಡಿಸಿಕೊಂಡಿದ್ದರು. ಒಟ್ಟು ಜಮೀನು ಮೂಲ ಖಾತೆದಾರನ ಹೆಸರಿನಲ್ಲಿದ್ದುದರಿಂದ ನಂತರ ಭೂ ಮಾಲೀಕ ಅದನ್ನು ಬೇರೊಬ್ಬನಿಗೂ ಮಾರಿದನು. ಖರೀದಿಸಿದ ಹೊಸ ಮಾಲೀಕ ಜಮೀನಿಗೆ ಬೇಲಿ ಹಾಕಿದ್ದರಿಂದ ನಿವೇಶನ ಕಳೆದುಕೊಂಡಿದ್ದೂ ಉಂಟು.
‘ಇತರೆ’ ಎಂಬ ಅವಕಾಶ ಬಳಸಿ ಕಾನೂನಿನ ದುರ್ಬಳಕೆ:
ಈಗಾಗಲೇ ಕಾವೇರಿ-2 ತಂತ್ರಾಂಶದೊಂದಿಗೆ, ಭೂಮಿ ತಂತ್ರಾಂಶವು ಸಂಯೋಜನೆಗೊಂಡು ಹತ್ತಾರು ವರ್ಷಗಳೇ ಆದರೂ ಕಾವೇರಿಯಲ್ಲಿ ಅನಿವಾರ್ಯ ಪ್ರಕರಣಗಳಲ್ಲಿ ಬಳಸಲು ಅವಕಾಶ ಕಲ್ಪಿಸಿದ್ದ ‘ಇತರೆ’ ಎಂಬ ಅವಕಾಶವನ್ನು ಬಳಸಿಕೊಂಡು ನಿಯಮಬಾಹಿರವಾಗಿ 11-ಇ ಇಲ್ಲದೆಯೂ ಅಥವಾ ಸುಳ್ಳು ಪಹಣಿ ಸೃಷ್ಟಿಸಿಕೊಂಡ ದಾಖಲೆ ಮೇಲೆಯೂ ನೋಂದಣಿ ಮಾಡಿಸಿಕೊಂಡಿರುವ ನೂರಾರು ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಈಗ ಈ ರೀತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಕಾವೇರಿ-2 ತಂತ್ರಾಂಶದಲ್ಲಿ ಇತರೆ (Others) ಎಂಬ ಅವಕಾಶವನ್ನೇ ತೆಗೆದು ಹಾಕಲಾಗಿರುತ್ತದೆ. ಇದು ಕಾವೇರಿ-2 ತಂತ್ರಾಂಶದೊಂದಿಗೆ ಇ-ಸ್ವತ್ತು, ಇ-ಆಸ್ತಿ ತಂತ್ರಾಂಶ ಸಂಪೂರ್ಣವಾಗಿ ಸಂಯೋಜನೆಯಾಗಿದ್ದರ ಪರಿಣಾಮವಾಗಿದೆ.
ನಮ್ಮ ಜಮೀನು ಅಥವಾ ನಿವೇಶನ ನೋಂದಣಿ ಮಾಡಿಸಬೇಕೆಂದರೆ ನಿವೇಶನಕ್ಕೆ ಸಂಬಂಧಿಸಿದಂತೆ ಒಂದು ದಾಖಲೆ ಮತ್ತು ಗುರುತಿನ ಚೀಟಿಯೊಂದಿಗೆ ಕಾವೇರಿಯಲ್ಲಿ ಸಿಟಿಜನ್ ಲಾಗಿನ್‌ನಿಂದ ನೋಂದಣಿಗೆ ಅರ್ಜಿ ಸಲ್ಲಿಸಿದರಾಯಿತು. ನೋಂದಣಾಧಿಕಾರಿಗಳು ಪರಿಶೀಲಿಸಿ ನೋಂದಣಿ ಮಾಡುತ್ತಿದ್ದರು. ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಸರ್ಕಾರಿ ಜಾಗವನ್ನು ಲಪಟಾಯಿಸುವುದು ಅಥವಾ ಅನುಮೋದಿತವಲ್ಲದ ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಶೇ.45ರಷ್ಟು ಸರ್ಕಾರಕ್ಕೆ ಸಲ್ಲಬೇಕಾದ ಸಿ.ಎ ನಿವೇಶನ, ಪಾರ್ಕ್ ಮತ್ತು ರಸ್ತೆಗಳನ್ನು ಲಪಟಾಯಿಸುವುದು, ನ್ಯಾಯಾಲಯಗಳಲ್ಲಿ ಒಂದು ಕೇಸು ತಗುಲಿ ಹಾಕಿ ಅವಶ್ಯವಿದ್ದರೆ ನೈಜ ವ್ಯಕ್ತಿಯ ವಿರುದ್ಧ ಪೋಲೀಸರಿಗೆ ದೂರು ಸಲ್ಲಿಸಿ, ಆಸ್ತಿಯ ವಿಷಯದಲ್ಲಿ ಗೊಂದಲ ಸೃಷ್ಟಿಸಿ ನಂತರ ಸಂಧಾನಕ್ಕೆ ಅಹ್ವಾನಿಸುವುದು, ಬರದಿದ್ದರೆ ನ್ಯಾಯಾಲಯ ಅಲೆಯುವಂತೆ ಮಾಡುವ ಮೂಲಕ ಹಣ ಮಾಡುವುದು ಕೆಲವು ಜನರು ದಂಧೆ ಮಾಡುತ್ತಿದ್ದರು.

ಕಾವೇರಿ-2 ತಂತ್ರಾಂಶದ ಜೊತೆ ಇ-ಆಸ್ತಿ, ಇ-ಸ್ವತ್ತು ಸಂಯೋಜನೆ ಎಂಬ ಐತಿಹಾಸಿಕ ನಿರ್ಧಾರ :
ಎಲ್ಲಾ ಸಮಸ್ಯೆಗಳ ಮೂಲದಲ್ಲಿ ಆಳುವ ಮತ್ತು ಆಳಿಸಿಕೊಳ್ಳುವವರ ಪಾತ್ರ ಸಮಾನವಾಗಿದೆ ಎಂಬುದಷ್ಟೇ ಮುಖ್ಯ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಒಂದು ನಿರ್ಣಯ ಐತಿಹಾಸಿಕವಾದದ್ದು ಮತ್ತು ದೇಶದಲ್ಲಿಯೇ ಪ್ರಪ್ರಥಮವಾಗಿ ಮಾದರಿಯಾದದ್ದು.
ಅದೇ ಕಾವೇರಿ-2 ತಂತ್ರಾಂಶದೊಂದಿಗೆ ಬಿಬಿಎಂಪಿ ಖಾತೆ ನಿರ್ವಹಿಸಲು ಬಳಸುವ ಇ-ಆಸ್ತಿ, ಕರ್ನಾಟಕದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಖಾತೆ ನಿರ್ವಹಿಸಲು ಬಳಸುವ ಇ-ಆಸ್ತಿ, ಬಿಡಿಎ ಆಸ್ತಿಗಳ ಖಾತೆ ನಿರ್ವಹಿಸಲು ಬಳಸುವ ಯು.ಎಲ್.ಎಂ.ಎಸ್ ಮತ್ತು ಕರ್ನಾಟಕದ ಎಲ್ಲಾ ಗ್ರಾಮಪಂಚಾಯಿತಿಗಳು ಖಾತೆ ದಾಖಲಿಸಲು ಬಳಸುವ ಇ-ಸ್ವತ್ತು ತಂತ್ರಾಂಶಗಳನ್ನು 2024ರ ಸೆಪ್ಟೆಂಬರ್‌ನಿಂದ ಹಂತ ಹಂತವಾಗಿ ಸಂಯೋಜನೆಗೊಳಿಸಿ 2024ರ ಅ.30ರಿಂದ ಶೇ.100 ರಷ್ಟು ಕಡ್ಡಾಯಗೊಳಿಸಲಾಯಿತು.
ಇ-ಖಾತೆ ಇದ್ದರಷ್ಟೇ ನೋಂದಣಿ ಪ್ರಕ್ರಿಯೆ ನಡೆಯುತ್ತೆ :

ಪ್ರಸ್ತುತ ನೀವು ಒಂದು ನಿವೇಶನ ಮಾರಾಟ ಮಾಡಿ ಅಥವಾ ಖರೀದಿಸಿ ನೋಂದಣಿ ಮಾಡಿಸಬೇಕೆಂದಿದ್ದರೆ, ಸಂಬಂಧಿಸಿದ ನಿವೇಶನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದರೆ ಇ-ಸ್ವತ್ತು ಅಥವಾ ನಗರ ಆಡಳಿತದ ವ್ಯಾಪ್ತಿಗೆ ಒಳಪಟ್ಟಿದ್ದರೆ ಇ-ಆಸ್ತಿ ತಂತ್ರಾಂಶದಲ್ಲಿ ಇ-ಖಾತೆ ಹೊಂದಿರಬೇಕು. ಅದರಿಂದ ಆ ನಿವೇಶನಕ್ಕೆ ಒಂದು ಪಿ.ಐ.ಡಿ ನಂಬರ್ ಸೃಜನೆಗೊಂಡಿರುತ್ತದೆ. ಆ ಪಿ.ಐ.ಡಿ
ನಂಬರ್ ಅನ್ನು ಕಾವೇರಿ-2 ತಂತ್ರಾಂಶದಲ್ಲಿ ನೋಂದಣಿ ಮಾಡಿಸಲು ಕ್ರಯದಾರರು ಸಿಟಿಜನ್ ಲಾಗಿನ್‌ನಲ್ಲಿ ನಮೂದಿಸಿದಾಗ ಅದು ಕಾವೇರಿ-2 ಮತ್ತು ಇ-ಸ್ವತ್ತು/ಇಆಸ್ತಿ ತಂತ್ರಾಂಶಗಳನ್ನು ಒಂದನ್ನೊಂದು ಸಂಯೋಜಿಸಿರುವುದರಿಂದ ಅವುಗಳು ಪರಸ್ಪರ ಪರಿಶೀಲಿಸಿಕೊಂಡು ಇ-ಖಾತೆ ಮಾರಾಟಗಾರನ ಹೆಸರಿನಲ್ಲಿರುವುದನ್ನು ಖಚಿತ ಪಡಿಸಿಕೊಂಡ ಮೇಲೆ ನೋಂದಣಿ ಪ್ರಕ್ರಿಯೆ ಮುಂದುವರೆಯಲು ಅವಕಾಶ ನೀಡುತ್ತದೆ.
ನೋಂದಣಿ ಪ್ರಕ್ರಿಯೆ ಪೂರ್ಣಗೊಂಡು XML ಪ್ರತಿಯು ಸಂಬಂಧಿಸಿದ ಪ್ರಾಧಿಕಾರಕ್ಕೆ ಕಂಪ್ಯೂಟರ್ ಮೂಲಕವೇ ರವಾನೆಯಾಗಿ ಆಟೋಮೇಟೆಡ್ ವಿಧಾನದಲ್ಲಿ ಕ್ರಯಕ್ಕೆ ಕೊಂಡವರ ಹೆಸರಿನಲ್ಲಿ ಖಾತೆ ದಾಖಲಾಗುತ್ತದೆ. ಜನರು ಖಾತೆ ಮಾಡಿಸಿಕೊಳ್ಳಲು, ವಿವಿಧ ಇಲಾಖೆಗಳಿಗೆ ಅಲೆಯುವುದು ತಪ್ಪುತ್ತದೆ.
ತಪ್ಪು ಅಥವಾ ಸುಳ್ಳು ಪಿ.ಐ.ಡಿ ಹಾಗೂ ಪಹಣಿ ಆಗಿದ್ದರೆ ಪ್ರಾರಂಭಿಕ ಹಂತದಲ್ಲಿಯೇ ತಿರಸ್ಕೃತಗೊಳ್ಳುತ್ತದೆ. ನೋಂದಣಿ ಪ್ರಕ್ರಿಯೆಯನ್ನು ಕಾವೇರಿ-2 ತಂತ್ರಾಂಶ ತಡೆಯುತ್ತದೆ. ಇದರಿಂದ ಕೇವಲ ಪೇಪರ್‌ನಲ್ಲಿ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡುತ್ತಿದ್ದುದನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಇದು ಹಲವು ಅಕ್ರಮಗಳಿಗೆ ತಡೆ ಹಾಕಿದೆ.
ಕಾನೂನು ಬಾಹಿರ ಪರಭಾರೆಗೆ ಅಂತ್ಯ ಹಾಡಿದ ಸರ್ಕಾರ :

ಸಂಯೋಜನೆ ಪೂರ್ವದಲ್ಲಿ ಭೂ ಪರಿವರ್ತನೆ ಮಾಡಿಸದೆ ಅಥವಾ ಭೂ ಪರಿವರ್ತನೆ ಆಗಿದ್ದು ಯೋಜನಾ ಇಲಾಖೆ ಅನುಮೋದನೆ ಪಡೆಯದೆ, ಸರಿಯಾದ ರಸ್ತೆ, ಚರಂಡಿ ನಿರ್ಮಿಸದೆ, ಪಾರ್ಕ್ ಜಾಗವನ್ನೂ ಬಿಡದೆ, ಸಿ.ಎ. ಸೈಟ್ ನೀಡದೆ, ಯೋಜಿತ ರೀತಿಯಲ್ಲಿ ಬಡಾವಣೆ ನಿರ್ಮಿಸದೆ, ನೋಟಕ್ಕೆ ಬಡಾವಣೆಯಂತೆ ಕಾಣುವಂತೆ ಮಾಡಿ, 30/40 ನಿವೇಶನವನ್ನು ನೇರವಾಗಿ ವಿಭಜಿಸಿ ನೋಂದಣಿ ಮಾಡಿಸುತ್ತಿದ್ದರು. ಆ ನಿವೇಶನಗಳ ಖರೀದಿದಾರರು ನಂತರ ಬಿಬಿಎಂಪಿಯಲ್ಲಿ ‘ಬಿ’ ಖಾತೆ ಮಾಡಿಸಿಕೊಳ್ಳುತ್ತಿದ್ದರು.
ಕಾರಣ ನಿಯಮಾನುಸಾರವಲ್ಲದ್ದರಿಂದ ‘ಎ’ ಖಾತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕ್ರಯಪತ್ರದ ಮೇಲೆ ಖಾತೆ ಇಲ್ಲದೆಯೂ ಹಲವಾರು ಪರಭಾರೆ ಆಗುತ್ತಿದ್ದವು. ಆದ್ದರಿಂದ ನೋಂದಣಿ ಕಚೇರಿ ಎಲ್ಲಾ ನಿಯಮಬಾಹಿರವಾದ ಹಕ್ಕು ದಾಖಲೆ ಸೃಜನೆಗೆ ಕೇಂದ್ರವಾಗಿತ್ತು. ಪ್ರಸ್ತುತ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತೆ ಇಲ್ಲದೆ ನೋಂದಣಿಯಾಗುವುದಿಲ್ಲ. ಇ-ಖಾತೆ ಆಗಬೇಕೆಂದರೆ ಯೋಜನಾ ಇಲಾಖೆಯಿಂದ ಬಡಾವಣೆ ಅನುಮೋದನೆಯಾಗಬೇಕು.
ರಸ್ತೆ, ಪಾರ್ಕ್ ಮತ್ತು ಸಿ.ಎ. ನಿವೇಶನಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಯೋಜನಾ ಇಲಾಖೆಯು ಬಿಡುಗಡೆ ಮಾಡಿದ ನಿವೇಶನಗಳಿಗೆ ಸ್ಥಳೀಯ ಸಂಸ್ಥೆಗಳು ಇ-ಖಾತೆ ದಾಖಲಿಸುವುದಿಲ್ಲ. ಇ-ಖಾತೆ ದಾಖಲಿಸದೇ ನೋಂದಣಿಯಾಗುವುದಿಲ್ಲ. ಇದರಿಂದ ನಿಯಮಬಾಹಿರ ಪರಭಾರೆಗಳಿಗೆ ಅಂತ್ಯ ಹಾಡಿದಂತಾಗಿದೆ.
ಪರಭಾರೆಗೆ ಫ್ಲ್ಯಾಟ್‌ಗಳು ಮಾಲೀಕನ ಹೆಸರಿನಲ್ಲಿ ಇ-ಖಾತೆ ಇದ್ದರಷ್ಟೆ ಸಾಧ್ಯ:
ಇದು ನಿವೇಶನಗಳಿಗಾದರೆ ಇನ್ನು ಫ್ಲ್ಯಾಟ್‌ಗಳದ್ದು ಮತ್ತೊಂದು ಮಾರ್ಗವಾಗಿತ್ತು. ಬಿಬಿಎಂಪಿಯಿಂದ ಅನುಮೋದನೆ ಪಡೆದ ನಕ್ಷೆಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವುದು. ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿಗೆ ಒಸಿ (occupancy certificate) ನೀಡಲು ಬರುವುದಿಲ್ಲವಾದ್ದರಿಂದ, ಮಾಲೀಕರು ಪ್ಲ್ಯಾಟ್ ಅನ್ನು ಖರೀದಿದಾರರಿಗೆ ಕ್ರಯಪತ್ರ ನೋಂದಣಿ ಮಾಡಿಕೊಡುವುದು. ಖರೀದಿದಾರರು ಕ್ರಯಪತ್ರ ಹಿಡಿದುಕೊಂಡು ಬಿಬಿಎಂಪಿ ಸುತ್ತಿ ಸುತ್ತಿ ‘ಎ’ ಖಾತೆ ಮಾಡಲು ಬರುವುದಿಲ್ಲವಾದ್ದರಿಂದ ‘ಬಿ’ ಖಾತೆ ಮಾಡಿಸಿಕೊಳ್ಳುವುದು. ಈ ರೀತಿ ನಿಯಮ ಮೀರಿ ಪರಭಾರೆಯಾಗಿ ‘ಬಿ’ ಖಾತೆ ಆಗಿರುವ ಅಥವಾ ಖಾತೆಯೇ ಆಗದಿರುವ ಫ್ಲ್ಯಾಟ್‌ಗಳ ಸಂಖ್ಯೆ ಬೆಂಗಳೂರಿನಲ್ಲಿ ಅಂದಾಜು ಶೇ.40ರಿಂದ 50 ಇರಬಹುದು ಎಂದರೆ ಆಶ್ಚರ್ಯವೇನಲ್ಲ.
ಇದು ಮುಂದೆ ಆಗದಂತೆ ನಿಯಮ ಬದ್ಧಗೊಳಿಸುವ ನಿಟ್ಟಿನಲ್ಲಿ ಕಾವೇರಿ-2 ಮತ್ತು ಇ-ಸ್ವತ್ತು/ ಇ-ಆಸ್ತಿ ತಂತ್ರಾಂಶದಲ್ಲಿ ಒಂದನ್ನೊಂದು ಸಂಯೋಜಿಸಿರುವುದು ಒಂದು ಪರಿಹಾರವಾಗಿದೆ. ಈಗ ಖರೀದಿದಾರರು ನೋಂದಣಿ ಮಾಡಿಸಿಕೊಳ್ಳಬೇಕಾದರೆ ಪ್ರತಿ ಫ್ಲ್ಯಾಟ್ ಅನ್ನು ಪ್ರತ್ಯೇಕವಾಗಿ ಮಾಲೀಕನ ಹೆಸರಿನಲ್ಲಿ ಇ-ಖಾತೆ ಮಾಡಿಸಿಕೊಂಡಿರಲೇಬೇಕು.
ಇಲ್ಲದಿದ್ದರೆ ನೋಂದಣಿ ಪ್ರಕ್ರಿಯೆಗೆ ಕಾವೇರಿ-2 ತಂತ್ರಾಂಶದಲ್ಲಿ ಅವಕಾಶ ನೀಡುವುದಿಲ್ಲ. ಮಾಲೀಕರ ಹೆಸರಿಗೆ ಪ್ರತ್ಯೇಕ ಖಾತೆ ಆಗಬೇಕಾದರೆ ನಿಯಮಾನುಸಾರ ಒಸಿ (occupancy certificate) ಪಡೆಯಬೇಕು. ಒಸಿ ಪಡೆಯಬೇಕಾದರೆ ಅನುಮೋದಿತ ನಕ್ಷೆಯಂತೆ ನಿಯಮಾನುಸಾರವೇ ಕಟ್ಟಡ ನಿರ್ಮಿಸಿರಬೇಕು. ಆದ್ದರಿಂದ ಇನ್ನು ಮುಂದೆ ಅಕ್ರಮ ನಿರ್ಮಾಣಕ್ಕೆ ಅಂತ್ಯ ಹಾಡಿದಂತಾಗಿದೆ.
ಸರ್ಕಾರಿ ಭೂಮಿ ಒತ್ತುವರಿಗೂ ತಡೆ:
ರೆವೆನ್ಯೂ ನಿವೇಶನ ನಿರ್ಮಿಸುವ ನೆಪದಲ್ಲಿ ಅಕ್ಕಪಕ್ಕ ಇರುವ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿ ತಮ್ಮ ಜಮೀನಿನ ಲೆಕ್ಕದಲ್ಲಿ ನಿವೇಶನಗಳನ್ನು ಮಾರಾಟ ಮಾಡುವ ದಂಧೆಗೆ ಕಡಿವಾಣ ಬಿದ್ದಿದೆ. ಈ ಎಲ್ಲಾ ಅಕ್ರಮಗಳ ಪ್ರಾರಂಭಿಕ ಕೇಂದ್ರಸ್ಥಾನ ನೋಂದಣಿ ಕಚೇರಿಯೇ ಆಗಿತ್ತು. ನೋಂದಣಿ ಮಾಡಿಕೊಡುವ ಮೂಲಕ ನಿಯಮವಲ್ಲದ ದಾಖಲೆ ಸೃಷ್ಟಿಸಿಕೊಳ್ಳಲು ಅವಕಾಶವಾಗುತ್ತಿತ್ತು. ಈ ರೀತಿಯ ಅಕ್ರಮಗಳ ತಡೆಗೆ ನಾಂದಿ ಹಾಡಿದ್ದು ಈ ತಂತ್ರಾಂಶ ಸಂಯೋಜನೆ. ಕಾವೇರಿ-2 ಮತ್ತು ಇ-ಸ್ವತ್ತು ಹಾಗೂ ಇ-ಆಸ್ತಿ ತಂತ್ರಾಂಶಗಳನ್ನು ಒಂದನ್ನೊಂದು ಸಂಯೋಜಿಸಿದ್ದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವೆಂದಾಗಲಿ ಅಥವಾ ಇನ್ನು ಮುಂದೆ ನಿಯಮಬಾಹಿರ ನೋಂದಣಿ ಆಗುವುದಿಲ್ಲವೆಂತಲೂ ಇಲ್ಲ.
ನಾವು ಚಾಪೆ ಕೆಳಗಡೆ ತೂರಿದರೆ ಅವರು ರಂಗೋಲಿ ಕೆಳಗೆ ತೂರುವ ಸಂಭವವೂ ಇದೆ. ಆದ್ದರಿಂದ ಕಾಲ ಕಾಲಕ್ಕೆ ಅಂತಹ ಮಾರ್ಗಗಳನ್ನು ಮುಚ್ಚುವ ಕೆಲಸವೂ ನಡೆಯುತ್ತಲೇ ಇರಬೇಕಾಗುತ್ತದೆ. ಯಾವುದೇ ಹೊಸದೊಂದು ವ್ಯವಸ್ಥೆಯೊಂದನ್ನು ಜಾರಿಗೆ ತಂದಾಗ ಕೆಲವು ದಿನಗಳು ಇಂತಹ ಸಮಸ್ಯೆಗಳು ಇದ್ದೆ ಇರುತ್ತವೆ. ಪ್ರಸ್ತುತ ಇವೆಲ್ಲ ಸಮಸ್ಯೆಗಳು ಬಹುಪಾಲು ಪರಿಹಾರವಾಗಿವೆ.

ಕಾವೇರಿ-2 ತಂತ್ರಾಂಶ ಮತ್ತು ಸಂಯೋಜನೆ ದೇಶದಲ್ಲೇ ಕರ್ನಾಟಕ ಮೊದಲು:
ಏನೇ ಇರಲಿ ಕಾವೇರಿ-2 ತಂತ್ರಾಂಶ ಮತ್ತು ಇ-ಸ್ವತ್ತು ಹಾಗೂ ಇ-ಆಸ್ತಿ ತಂತ್ರಾಂಶವನ್ನು ಒಂದನ್ನೊಂದು ಸಂಯೋಜಿಸುವ ಮೂಲಕ ಕ್ರಾಂತಿಕಾರಕವಾದ ಮಾರ್ಗವೊಂದಕ್ಕೆ ನಾಂದಿ ಹಾಡಿದ ದೇಶದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕವು ಪಾತ್ರವಾಗಿದೆ. ಇತರ ರಾಜ್ಯಗಳ ತಂತ್ರಜ್ಞರ ತಂಡಗಳು ಬೆಂಗಳೂರಿನ ನೋಂದಣಿ ಮತ್ತು ಮುದ್ರಾಂಕ ಆಯುಕ್ತರ ಕಚೇರಿಗೆ ಬಂದು ಕಾವೇರಿ-2 ತಂತ್ರಾಂಶ ಮತ್ತು ಸಂಯೋಜನೆಯನ್ನು ತಮ್ಮಲ್ಲಿಯೂ ಅನುಷ್ಠಾನ ಮಾಡಲು ಅಧ್ಯಯನ ಮಾಡುತ್ತಿರುವುದು ಹೆಮ್ಮೆಯ ವಿಷಯ.
ಸಿಎಂ, ಸಚಿವರ ದೃಢ ನಿರ್ಧಾರ:
ರಿಯಲ್ ಎಸ್ಟೇಟ್ ಮಾಡುವವರ ಶಕ್ತಿ ಸಾಮರ್ಥ್ಯ, ಅವರ ಸಂಪರ್ಕ, ಅವರ ಸ್ಥಾನಮಾನ ಎಂತಹದ್ದು ಎಂದು ನಾನು ಹೇಳಬೇಕಿಲ್ಲ. ಅಂತಹವರೆಲ್ಲರ ಒತ್ತಡಗಳ ನಡುವೆಯೂ ನಮ್ಮ ಕಂದಾಯ ಸಚಿವರು ಅನುಷ್ಠಾನ ಮಾಡುವ ಒತ್ತಾಸೆಯಿಂದ ಪ್ರಾಮಾಣಿಕವಾಗಿ ಎಲ್ಲ ಒತ್ತಡಗಳನ್ನು ಮೆಟ್ಟಿ ನಿಂತರು.
ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ಇಲ್ಲಿಯವರೆಗೆ ನೋಂದಣಿಯಾಗಿ ಖಾತೆಯಾಗದ ಕೋಟ್ಯಂತರ ಆಸ್ತಿಗಳಿಗೆ ಒಂದು ಬಾರಿಗೆ ‘ಬಿ’ ಖಾತೆಯನ್ನು ನೀಡುವಂತೆ, ಮುಂದೆ ಈ ರೀತಿಯ ನೋಂದಣಿ ಮತ್ತು ‘ಬಿ’ ಖಾತೆ ದಾಖಲಾಗದಂತೆ ತಾಕೀತು ಮಾಡಿ ಅನುಷ್ಠಾನಕ್ಕೆ ಮಾರ್ಗದರ್ಶನ ಮಾಡಿದರು. ನಗರಾಭಿವೃದ್ದಿ ಇಲಾಖೆ, ಬಿಬಿಎಂಪಿ, ಬಿಡಿಎ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಹಿರಿಯ ಅಧಿಕಾರಿಗಳು ಆ ನಿಟ್ಟಿನಲ್ಲಿ ಸಹಕರಿಸಿದರು.
ಆದ್ದರಿಂದ ಈ ರೀತಿಯ ಕ್ರಾಂತಿಕಾರಕ ಪರಿಣಾಮ ಬೀರಬಹುದಾದ ತಂತ್ರಾಂಶಗಳ ಸಂಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗಿದೆ. ಆದ್ದರಿಂದ ಅವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲೇಬೇಕು. ಇಂತಹ ಬದಲಾವಣೆಯ ಪರ್ವದಲ್ಲಿ ನಾನು ಒಬ್ಬ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತನಾಗಿ ನನ್ನ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಇದನ್ನು ಸಾಧ್ಯಗೊಳಿಸುವ ಕಾರ್ಯದಲ್ಲಿ ಭಾಗಿದಾರನೆಂಬುದೇ ನನ್ನ ಹೆಮ್ಮೆ.