ಬೆಂಗಳೂರು, ಮಾ.14 www.bengaluruwire.com : ಕರ್ನಾಟಕ ರಾಜ್ಯ ಖನಿಜ ನಿಗಮ ಲಿಮಿಟೆಡ್ (Karnataka State Minerals Corporation Limited – KSMCL) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ರಾಜ್ಯ ಸರ್ಕಾರಕ್ಕೆ 1402 ಕೋಟಿ ರೂ. ಮೌಲ್ಯದ ಚೆಕ್‌ಗಳನ್ನು ಶುಕ್ರವಾರ ವಿತರಿಸಿದೆ.
ಈ ವರ್ಷದ ಮುಖ್ಯಮಂತ್ರಿಗಳ ಪರಿಹಾರ ನಿಧಿ (Chief Minister’s Relief Fund)ಗೆ ದೇಣಿಗೆ, ನಿಗಮದ ಷೇರುದಾರನಾಗಿರುವ ಸರ್ಕಾರಕ್ಕೆ ಲಾಭಾಂಶ ಹಾಗೂ ವಿಶೇಷ ಲಾಭಾಂಶದ ಚೆಕ್ ಸೇರಿ 1402 ಕೋಟಿ ರೂ. ಮೊತ್ತವನ್ನು ಮೂರು ಪ್ರತ್ಯೇಕ ಚೆಕ್ ಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಅವರು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.
ದಾಖಲೆ ಮುರಿಯುವ ವಹಿವಾಟು ಮತ್ತು ಲಾಭ :
ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮವಾದ ಕೆಎಸ್ಎಂಸಿಎಲ್, 2023-24ನೇ ಸಾಲಿನಲ್ಲಿ 1403.58 ಕೋಟಿ ರೂ. ವಹಿವಾಟು ನಡೆಸಿದೆ. ಈ ಅವಧಿಯಲ್ಲಿ ಕಂಪನಿಯು 867.33 ಕೋಟಿ ರೂ. ತೆರಿಗೆ ಪೂರ್ವ ಲಾಭ ಮತ್ತು 643.20 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದೆ.

ಲಾಭಾಂಶ ಮತ್ತು ವಿಶೇಷ ಲಾಭಾಂಶ ಪಾವತಿಗಳು :

ಕೆಎಸ್ಎಂಸಿಎಲ್ ನ ನಿರ್ದೇಶಕರ ಮಂಡಳಿಯು 2023-24ನೇ ಸಾಲಿನ ನಿಗಮದಲ್ಲಿನ ಷೇರುದಾರನಾಗಿರುವ ಸರ್ಕಾರಕ್ಕೆ ಶೇ.30ರ ಲಾಭಾಂಶವಾದ 191.43 ಕೋಟಿ ರೂ.ಗಳನ್ನು ಪಾವತಿಸಲು ಅನುಮೋದನೆ ನೀಡಿದೆ. ಹೆಚ್ಚುವರಿಯಾಗಿ, ಕಂಪನಿಯು ಹಣಕಾಸು ಇಲಾಖೆಯ ಆದೇಶದಂತೆ 1195.63 ಕೋಟಿ ರೂ.ಗಳ ವಿಶೇಷ ಲಾಭಾಂಶವನ್ನು ಅನುಮೋದಿಸಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ :
ಇದಲ್ಲದೆ ಕೆಎಸ್ ಎಂಸಿಎಲ್ ತನ್ನ ವಾರ್ಷಿಕ ಹಂಚಿಕೆಯ ಭಾಗವಾಗಿ 15 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದೆ. ಕಂಪನಿಯು ಪ್ರತಿ ವರ್ಷ ಈ ದೇಣಿಗೆಯನ್ನು ನೀಡುತ್ತಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ಲಿಮಿಟೆಡ್‌ನ ಅಧ್ಯಕ್ಷ ಜಿ.ಎಸ್. ಪಾಟೀಲ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ರಮಣ್ ದೀಪ್ ಚೌಧರಿ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಅವರು ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.