ಬೆಂಗಳೂರು, ಫೆ.27 www.bengaluruwire.com : ರಾಜ್ಯದಲ್ಲಿ ಲಿಂಗಾಯತರನ್ನು ಒಡೆದು ಆಳುವ ಒಂದು ಅಜೆಂಡಾ ಕೆಲಸ ಸಕ್ರಿಯವಾಗಿ ಮಾಡಲಾತ್ತಿದೆ. ‘ವಚನ ದರ್ಶನ’ ಪುಸ್ತಕವು ಇದರ ಭಾಗವಾಗಿದೆ. ಇದಕ್ಕೆ ಸಮುದಾಯವು ಸಂಘಟಿತವಾಗಿ ಮತ್ತು ಸತ್ಯಪಕ್ಷಪಾತಿಯಾಗಿ ಉತ್ತರಿಸಬೇಕಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ಹೇಳಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಜಂಟಿಯಾಗಿ ಇಲ್ಲಿನ ಬಸವ ಸಮಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ವಚನ ದರ್ಶನ: ಸತ್ಯ v/s ಮಿಥ್ಯ’ ಕೃತಿ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ವಚನಗಳು ಬರದೆ ಇದ್ದಿದ್ದರೆ ಇಂದು ನಾವ್ಯಾರೂ ಇರುತ್ತಿರಲಿಲ್ಲ. ವಚನಗಳ ಬಗೆಗಿನ ಚರ್ಚೆಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಅದರ ಹಿಂದೆ ಇರುವ ಕೆಟ್ಟ ಅಜೆಂಡಾವನ್ನು ನಾವು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಲಿಂಗಾಯತ ಸ್ವಾಮೀಜಿಗಳು ಮತ್ತು ಮಠಗಳು ಮಾಡಬೇಕಾದ ಕೆಲಸ ಅಗಾಧವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಚನಗಳ ಸ್ವೋಪಜ್ಞತೆ (Self Awareness)ಯನ್ನು ವಿರೋಧಿಸುವ ವಚನ ದರ್ಶನ ಪುಸ್ತಕಕ್ಕೆ ಲೇಖನ ಬರೆದಿರುವವರೂ ಲಿಂಗಾಯತರೇ. ಅದರ ಬಿಡುಗಡೆ ಕಾರ್ಯಕ್ರಮಗಳು ನಡೆದಿರುವುದು ಕೂಡ ಲಿಂಗಾಯತರ ಮಠಗಳಲ್ಲೇ. ಆದರೆ ಅದನ್ನು ಬಿಡುಗಡೆ ಮಾಡಿದವರು ಮಾತ್ರ ಲಿಂಗಾಯತರಲ್ಲ. ಇದು ರಾಜ್ಯದಲ್ಲಿ ಸಮುದಾಯದ ಅವಸ್ಥೆಯಾಗಿದೆ ಎಂದು ಅವರು ವಿಷಾದಿಸಿದರು.
ಒಕ್ಕಲಿಗರಲ್ಲಿ 104 ಉಪಪಂಗಡಗಳಿದ್ದರೂ ಅವರಲ್ಲಿ ಒಡಕಿಲ್ಲ. ಆ ಸಮುದಾಯಕ್ಕೆ ಒಬ್ಬರೇ ಸ್ವಾಮೀಜಿ ಮತ್ತು ಒಂದೇ ಅಧಿಕಾರ ಕೇಂದ್ರವಿದೆ. ಆದರೆ ಲಿಂಗಾಯತರು ಉಪಪಂಗಡಗಳ ಕಿತ್ತಾಟದಲ್ಲಿ ಹರಿದು ಹಂಚಿಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲಿಂಗಾಯತರ ಜನಸಂಖ್ಯೆ 2 ಕೋಟಿಯಷ್ಟಿದೆ. ಆದರೆ ಉಪಪಂಗಡಗಳ ಕಚ್ಚಾಟದಿಂದ ಜಾತಿ ಗಣತಿಯಲ್ಲಿ ನಮ್ಮ ಜನಸಂಖ್ಯೆ 65 ಲಕ್ಷವಷ್ಟೆ ಇದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಇದಕ್ಕೆ ಮತ್ತೊಂದು ಜಾತಿಗಣತಿ ಉತ್ತರವಲ್ಲ. ಇಡೀ ವೀರಶೈವ ಲಿಂಗಾಯತರೆಲ್ಲ ಒಂದೇ ಶೀರ್ಷಿಕೆಯಡಿ ಬರಬೇಕು. ಆಗ ಮಾತ್ರ ಸಮುದಾಯದ ಯುವಜನರಿಗೆ ಮೀಸಲಾತಿ ಸಿಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಲಿಂಗಾಯತ ಸಮುದಾಯದಲ್ಲಿ ಉಪಪಂಗಡಗಳ ಮೇಲಾಟ ಕೊನೆಯಾಗದೆ ಇದ್ದರೆ ಉಳಿಗಾಲವಿಲ್ಲ. ಅಂತಹ ಪ್ರಯತ್ನ ಇಂದು ಆರಂಭವಾಗಿದೆಯಷ್ಟೆ. ಸಮುದಾಯದ ಒಳಗೆ ಇರುವ ವ್ಯತ್ಯಾಸಗಳು ಇನ್ನು ಇರಬಾರದು’ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವರುದ್ರ ಮಹಾಸ್ವಾಮೀಜಿ, ಗಂಗಾ ಮಾತಾಜಿ, ಪ್ರಭು ಚನ್ನಬಸವ ಸ್ವಾಮಿಗಳು, ಶಾಮನೂರು ಶಿವಶಂಕರಪ್ಪ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ,
ಸಾಹಿತಿ ಗೊ ರು ಚನ್ನಬಸಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್, ಲೇಖಕ ಟಿ ಆರ್ ಚಂದ್ರಶೇಖರ್, ಪ್ರೊ.ವೀರಭದ್ರಯ್ಯ ಮುಂತಾದವರು ಭಾಗವಹಿಸಿದ್ದರು.
ಸಲಹೆ ಕೊಡಲಿ, ಟೀಕೆ ಬಿಡಲಿ : ಮೋಹನದಾಸ್ ಪೈಗೆ ಕುಟುಕಿದ ಸಚಿವರು
ಇದಕ್ಕೂ ಮುನ್ನ ಸಚಿವ ಎಂ ಬಿ ಪಾಟೀಲ್ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬೆಂಗಳೂರಿನ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿದರು. ಉದ್ಯಮಿ ಮೋಹನದಾಸ್ ಪೈ ಅವರು ಬೆಂಗಳೂರು ನಗರದ ವ್ಯವಸ್ಥೆ ಸುಧಾರಣೆಗೆ ಸಲಹೆ ಕೊಡಲಿ, ಆದರೆ ವಿನಾ ಕಾರಣ ಟೀಕಿಸುವುದನ್ನು ಬಿಡಲಿ. ಪದೇ ಪದೇ ಹೀಗೆ ಮಾತನಾಡುತ್ತಿರುವ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕುಟುಕಿದ್ದಾರೆ.
‘ಪೈ ಕೂಡ ಬೆಂಗಳೂರಿನಿಂದಲೇ ಲಾಭ ಮಾಡಿಕೊಂಡಿರುವವರು. ಇಲ್ಲಿಂದಲೇ ಎಲ್ಲವನ್ನೂ ಪಡೆದುಕೊಂಡಿರುವವರು. ಈಗ ಅವರು ಇಲ್ಲಿಂದ ಹುಬ್ಬಳ್ಳಿಗಾಗಲಿ, ಮೈಸೂರಿಗಾಗಲಿ ಹೋಗಲು ತಯಾರಿಲ್ಲ’ ಎಂದು ಹರಿಹಾಯ್ದಿದ್ದಾರೆ. ಸಂಚಾರ ದಟ್ಟಣೆ ಬರೀ ಬೆಂಗಳೂರಿನ ಸಮಸ್ಯೆಯಲ್ಲ. ಲಂಡನ್, ಸ್ಯಾನ್ ಫ್ರಾನ್ಸಿಸ್ಕೊ, ಚೆನ್ನೈ ಎಲ್ಲ ಕಡೆಗಳಲ್ಲೂ ಇದೆ. ಈ ಬಗ್ಗೆ ಪೈ ಯಾಕೆ ಮಾತನಾಡುವುದಿಲ್ಲ? ಲಂಡನ್ನಿನಲ್ಲಿ ನಾನೇ ಒಂದೂವರೆ ಮೈಲುದ್ದದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹದಿನೈದಿಪ್ಪತ್ತು ಮೈಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿದ್ದಿದೆ ಎಂದು ಅವರು ಉತ್ತರಿಸಿದ್ದಾರೆ.
ಬೆಂಗಳೂರು ‘ಗ್ರೋಯಿಂಗ್ ಸಿಟಿ’ಯ ಜತೆಗೆ ‘ಗ್ಲೋಬಲ್ ಸಿಟಿ’ ಕೂಡ ಆಗಿದೆ. ಹೀಗಾಗಿಯೇ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಮೋದಿ ಸರಕಾರ ಏನು ಮಾಡಿದರೂ ಸರಿ, ಸಿದ್ದರಾಮಯ್ಯ ಸರಕಾರ ಮಾಡಿದ್ದೆಲ್ಲವೂ ತಪ್ಪು ಎನ್ನುವುದಲ್ಲ. ಇಂತಹ ಟೀಕೆಗಳಿಂದ ಪೈ ದೊಡ್ಡ ಮನುಷ್ಯರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯಾರೇ ಆಗಲಿ, ಸರಕಾರಕ್ಕೆ ರಚನಾತ್ಮಕ ಸಲಹೆ ಕೊಡಬಹುದು. ಪೈ ಅವರು ನನ್ನನ್ನಗಾಲಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಗಳನ್ನಾಗಲಿ ಅಥವಾ ಐಟಿ ಸಚಿವರನ್ನೇ ಆಗಲಿ ಕಾಣಬಹುದು. ಇದೇ ಪೈ ಮಳೆಗಾಲದಲ್ಲಿ ಬೆಂಗಳೂರಿನ ಒಂದು ಕಡೆ ಪ್ರವಾಹ ಉಂಟಾದಾಗ ವಾಗ್ದಾಳಿ ಮಾಡಿದ್ದರು. ಆದರೆ ಆಗ ಇಡೀ ಚೆನ್ನೈ ನಗರವೇ ಜಲಾವೃತವಾದರೂ ಜಾಣಮೌನ ವಹಿಸಿದ್ದರು. ಬಿಜೆಪಿ ನಮ್ಮ ಕಾರ್ಯಕ್ರಮಗಳನ್ನೇ ನಕಲು ಮಾಡುತ್ತಿದೆ. ಇದನ್ನು ಕಂಡರೂ ಇವರೇಕೆ ಸುಮ್ಮನಿದ್ದಾರೆ ಎಂದು ಪಾಟೀಲ ನೆನಪಿಸಿದ್ದಾರೆ.
ತೆಲಂಗಾಣಕ್ಕೆ ಕೃಷ್ಣಾ ನೀರು, ತಪ್ಪೇನಿಲ್ಲ ಎಂದು ಸಮರ್ಥನೆ :
ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಆಣೆಕಟ್ಟೆಯಿಂದ ತೆಲಂಗಾಣಕ್ಕೆ 1.24 ಟಿಎಂಸಿ ಅಡಿ ನೀರನ್ನು ಬಿಟ್ಟಿರುವುದರಲ್ಲಿ ತಪ್ಪೇನೂ ಇಲ್ಲ. ಕೆಲವೊಂದು ವಿಚಾರಗಳನ್ನು ನಾವು ಮಾನವೀಯವಾಗಿ ನೋಡಬೇಕಾಗುತ್ತದೆ ಎಂದು ಸಚಿವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.