ಬೆಂಗಳೂರು, ಜ.03 www.bengaluruwire.com : ಬಹುಕಾಲದಿಂದ ಸಿಲಿಕಾನ್ ಸಿಟಿಯ ಜನತೆ ಕಾಯುತ್ತಿರುವ ಪೆರಿಫಿರಿಯಲ್ ರಿಂಗ್ ರಸ್ತೆ (Peripheral Ring Road- PRR) ಅಥವಾ ಹೊಸದಾಗಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (Bengaluru Business Corridor – BBC) ಎಂದು ಕರೆಯಲ್ಪಡುವ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಕಂಡು ಬಂದಿದೆ. ಕೇಂದ್ರದ ಗೃಹ ಮತ್ತು ನಗರಾಭಿವೃದ್ಧಿ ನಿಗಮ (Housing and Urban Development Corporation – HUDCO) ಬಿಡಿಎ ಕೈಗೊಂಡಿರುವ 27,000 ಕೋಟಿ ರೂ. ಬೃಹತ್ ಮೊತ್ತದ ಯೋಜನೆಗೆ ಶೇ.100ರಷ್ಟು ಸಾಲ ನೀಡಲು ಒಪ್ಪಿಗೆ ಸೂಚಿಸಿದೆ.
ಈ ಕುರಿತಂತೆ ಹುಡ್ಕೋ ಮತ್ತು ಬಿಡಿಎ ಮಧ್ಯೆ ಒಪ್ಪಂದ ಏರ್ಪಡಬೇಕಿದೆ. ವಾರ್ಷಿಕ ಶೇ.9ರಷ್ಟು ಬಡ್ಡಿದರದಲ್ಲಿ ಬೃಹತ್ ಮೊತ್ತದ ಸಾಲ ನೀಡುವುದಾಗಿ ಹುಡ್ಕೋ ಬಿಡಿಎಗೆ ತಿಳಿಸಿತ್ತು. ಆನಂತರ ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಹುಡ್ಕೋ ಅಧಿಕಾರಿಗಳೊಂದಿಗೆ ಚೌಕಾಶಿ ನಡೆದು ಅಂತಿಮವಾಗಿ ಶೇ.8.95 ಬಡ್ಡಿ ದರದಲ್ಲಿ ಸುಮಾರು 24 ವರ್ಷಗಳ ದೀರ್ಘಾವಧಿ ಸಾಲವನ್ನು ಬಿಡಿಎ ಪಡೆದುಕೊಂಡಿದೆ. ಮೊದಲ 4 ವರ್ಷದ ಕಾಲ ಸರ್ಕಾರವೇ ಬಡ್ಡಿಯನ್ನು ಭರಿಸಲಿದೆ. ಆ ಬಳಿಕ ಬಿಡಿಎ ಯೋಜನೆಗಾಗಿ ಹುಡ್ಕೋದಿಂದ ಹಣ ಪಡೆದಂತೆಲ್ಲಾ ಶೇ.8.95ರಷ್ಟು ಬಡ್ಡಿಯನ್ನು ಕಟ್ಟಬೇಕಿದೆ. ಸಾಲವನ್ನು ಅವಧಿಗೆ ಮುನ್ನವೇ ತೀರಿಸುವ ಅವಕಾಶವನ್ನು ಹೊಂದಿದೆ ಎಂದು ಬಿಡಿಎ ಮೂಲಗಳು ಬೆಂಗಳೂರು ವೈರ್ ತಿಳಿಸಿದೆ.
ದಶಕಗಳಿಗೂ ಹೆಚ್ಚು ಅವಧಿಯಿಂದ ಬಾಕಿ ಉಳಿದಿದ್ದ ಈ ಯೋಜನೆಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಸರ್ಕಾರಿಂದ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ. ಬಿಬಿಸಿ ಯೋಜನೆ ಜಾರಿಗಾಗಿ ಬಿಡಿಎ 2560 ಎಕರೆ ಭೂಸ್ವಾಧೀನಪಡಿಸಿಕೊಳ್ಳಬೇಕಿದೆ. ಆ ಪೈಕಿ 2007ರಲ್ಲಿ ಬಿಡಿಎ 1810 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇನ್ನು 2022ನೇ ಇಸವಿಯಲ್ಲಿ 608 ಎಕರೆ ಜಮೀನು ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಅಂತಿಮ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟಾರೆ 27,000 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ 21,000 ಕೋಟಿ ರೂ. ಹಣವನ್ನು ಭೂಸ್ವಾಧೀನಕ್ಕೆ ಹಾಗೂ ಉಳಿದ 6,000 ಕೋಟಿ ರೂ. ಹಣವನ್ನು ಪಿಆರ್ ಆರ್ ರಸ್ತೆ ನಿರ್ಮಾಣಕ್ಕೆ ಬಿಡಿಎ ಬಳಸಿಕೊಳ್ಳಲಿದೆ.
ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಈ ಯೋಜನೆಗೆ ಹುಡ್ಕೋ ಸಾಲ ಖಾತರಿಯು ಬಹುದೊಡ್ಡ ಶಕ್ತಿಯಾಗಿದ್ದು, ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಸವಾಲು ನಿವಾರಣೆಯಾದಂತಾಗಿದೆ. ಭೂಸ್ವಾಧೀನ ಕಾಯ್ದೆ ಹಾಗೂ ಪುನರ್ವಸತಿ ಕಾಯ್ದೆಯಡಿ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ನೀಡಲಾಗುತ್ತದೆ. ಆನಂತರವಷ್ಟೇ ಬಿಡಿಎ ಭೂಸ್ವಾಧೀನ ವಿಭಾಗದಿಂದ ಭೂಮಿ ಪಡೆದು ಯೋಜನೆ ಅನುಷ್ಠಾನ ಕೈಗೊಳ್ಳಲಾಗುತ್ತದೆ. ಬಿಬಿಸಿ ಯೋಜನೆಗಾಗಿ ಬಿಡಿಎ ಈಗಾಗಲೇ ವಿಸ್ತ್ರತ ಯೋಜನಾ ವರದಿ (DPR)ಯನ್ನು ತಯಾರಿಸಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯಡಿ ಒಟ್ಟು 77 ಹಳ್ಳಿಗಳು ಬರಲಿದೆ. ಈ ಪ್ರದೇಶದಲ್ಲಿ ಭೂಸ್ವಾಧೀನಕ್ಕಾಗಿ 9 ವಿಶೇಷ ಭೂಸ್ವಾಧೀನಾಧಿಕಾರಿ (Special Land Acquisition Officers – SLAO)ಗಳು, 7 ಸರ್ವೇಯರ್, ಒಬ್ಬರು ಭೂದಾಖಲೆಗಳ ಸಹಾಯಕ ನಿರ್ದೇಶಕರಗಳನ್ನು ಸರ್ಕಾರ ಈಗಾಗಲೇ ಪಿಆರ್ ಆರ್ ಯೋಜನೆಗೆ ನಿಯೋಜಿಸಿದೆ. ಪ್ರತಿಯೊಬ್ಬ ಎಸ್ಎಲ್ಎಒಗಳಿಗೂ 7 ಹಳ್ಳಿಗಳಲ್ಲಿ ಸರಾಸರಿಯಾಗಿ 250 ಎಕರೆ ಭೂಮಿಯನ್ನು ಬಿಡಿಎಗೆ ಸ್ವಾಧೀನಪಡಿಸಿಕೊಳ್ಳಲು ಗುರಿ ನಿಗದಿಪಡಿಸಲಾಗಿದೆ. ಯೋಜನೆಗೆ ಅಗತ್ಯವಾದ ಶೇ.70ರಷ್ಟು ಭೂಸ್ವಾಧೀನ ಅಧಿಸೂಚನೆಗೊಳಿಸುವ ಕಾರ್ಯವು ಮುಗಿದಿದ್ದು, ಅಂತಹ ಅಧಿಸೂಚನೆಯಾದ ಭೂಮಾಲೀಕರಿಗೆ ಪರಿಹಾರ ನೀಡಿ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಳ್ಳಬೇಕಿದೆಯಷ್ಟೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಬೆಂಗಳೂರಿನ ಬೃಹತ್ ವಾಹನ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ 73 ಕಿ.ಮೀ ಉದ್ದ ಹಾಗೂ 100 ಮೀಟರ್ ಅಗಲದ ಬಿಬಿಸಿ ಯೋಜನೆ ಪ್ರಮುಖವಾಗಿದ್ದು, ತುಮಕೂರು ಹಾಗೂ ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಹೊಸ ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಗೆ ಹೆಚ್ಚು ಅಗತ್ಯವಿರುವ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ, ಅಸ್ತಿತ್ವದಲ್ಲಿರುವ ರಸ್ತೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಟ್ರಾಫಿಕ್ ಹರಿವನ್ನು ಸುಧಾರಿಸುತ್ತದೆ. ಹೆಚ್ಚುವರಿಯಾಗಿ, ಯೋಜನೆಯು ಬೆಂಗಳೂರು ಮತ್ತು ಸುತ್ತಮುತ್ತಲಿನ ಪಟ್ಟಣಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ.
ಪಿಆರ್ ಆರ್ ಯೋಜನೆಗೆ ಹೆಚ್ಚುವರಿಯಾಗಿ, ಪೆರಿಫೆರಲ್ ರಿಂಗ್ ರೋಡ್-2 (PRR-2) ಯೋಜನೆಯಡಿ ಆರು ಹೊಸ ಲೇಔಟ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಬಿಡಿಎ ಪ್ರಕಟಿಸಿದೆ. ಈ ಲೇಔಟ್‌ಗಳು 50,000 ಹೊಸ ವಸತಿ ನಿವೇಶನಗಳನ್ನು ಒದಗಿಸಲಿದ್ದು, ಬೆಂಗಳೂರಿನಲ್ಲಿನ ವಸತಿಗಾಗಿ ಹೆಚ್ಚಿನ ಬೇಡಿಕೆಯನ್ನು ಪೂರೈಸುತ್ತವೆ. ಪಿಆರ್ ಆರ್-2 ಯೋಜನೆಯು ಹೊಸೂರು ರಸ್ತೆಯಿಂದ ಬೆಂಗಳೂರು-ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಬನ್ನೇರುಘಟ್ಟ ಮತ್ತು ಕನಕಪುರ ರಸ್ತೆಗಳ ಮೂಲಕ ಹಾದುಹೋಗುತ್ತದೆ. ಈ ಯೋಜನೆಯು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪೆರಿಫೆರಲ್ ರಿಂಗ್ ರೋಡ್ ಯೋಜನೆಯು ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸುವಷ್ಟು ಪ್ರಭಾವಶಾಲಿಯಾಗಿದೆ. ಇದು ನಗರದ ಸಂಚಾರ ದಟ್ಟಣೆ ಮತ್ತು ಸಂಪರ್ಕ ಸಮಸ್ಯೆಗಳಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸುತ್ತದೆ. ಹುಡ್ಕೊದಿಂದ ಆರ್ಥಿಕ ಉತ್ತೇಜನ ಮತ್ತು ಸುಸ್ಥಿರ ಅಭಿವೃದ್ಧಿ ಅಭ್ಯಾಸಗಳ ಅಳವಡಿಕೆಯೊಂದಿಗೆ, ಯೋಜನೆಯು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಿದ್ಧವಾಗಿದೆ. ಬೆಂಗಳೂರು ಬೆಳೆಯುತ್ತಿರುವಂತೆ, ನಗರದ ಭವಿಷ್ಯವನ್ನು ರೂಪಿಸುವಲ್ಲಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.