ಬೆಂಗಳೂರು, ಡಿ.31 www.bengaluruwire.com : ರಾಜಧಾನಿಯ ಪ್ರಮುಖ ಆಕರ್ಷಣೆಗಳಲ್ಲೊಂದಾದ ಲಾಲ್ ಬಾಗ್ ಗಣರಾಜ್ಯೋತ್ಸವ ಪುಷ್ಪ ಪ್ರದರ್ಶನ (Republic Day Flower Show) ಈ ಬಾರಿ ಜನವರಿ 16ರಿಂದ 26ರ ತನಕ ನಡೆಯಲಿದೆ. ತೋಟಗಾರಿಕಾ ಇಲಾಖೆಯು ಮಹರ್ಷಿ ವಾಲ್ಮೀಕಿ ಜೀವನ ಆಧಾರಿತ ವಿಷಯ ಹಾಗೂ ರಾಮಾಯಣ ಮಹಾಕಾವ್ಯವನ್ನು ಆಕರ್ಷಕ ಪುಷ್ಪಗಳಲ್ಲಿ ಅರಳಿಸುವ ಬಗ್ಗೆ ತೀರ್ಮಾನಿಸಿದೆ. ಇದು 215ನೇ ಆವೃತ್ತಿಯ ಫಲಪುಷ್ಪ ಪ್ರದರ್ಶನವಾಗಿದೆ.
ಲಾಲ್ ಬಾಗ್ ಗೆ ಈ ಬಾರಿ ಭೇಟಿ ನೀಡುವ ಪ್ರವಾಸಿಗರು, ಬೆಂಗಳೂರಿನ ಜನತೆಯನ್ನು ಸೆಳೆಯಲು ಮಹರ್ಷಿ ವಾಲ್ಮೀಕಿ (Maharishi Valmiki) ವಿಷಯಾಧಾರಿತ ಹೂವಿನ ಪ್ರತಿಕೃತಿ ಹಾಗೂ ರಾಮಾಯಾಣ ಮಹಾಕಾವ್ಯ (Ramayana epic) ದ ಪ್ರಮುಖ ಘಟನೆಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಮೂಡಿಬರಲಿದೆ. ಹೂ ಅಲಂಕಾರಕ್ಕಾಗಿ ದೇಶ ವಿದೇಶಗಳಿಂದ ಹೂಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 2025ರ ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆಯ ಆಚೆಗೆ, ಹೂವಿನ ಕಲಾಕೃತಿಗಳು ನೋಡುಗರನ್ನು ಆಕರ್ಷಿಸುತ್ತವೆ. ಬ್ಯಾಂಡ್‌ಸ್ಟ್ಯಾಂಡ್ ಮತ್ತು ರಾಕ್ ಗಾರ್ಡನ್ ಸೆಲ್ಫಿ ಪಾಯಿಂಟ್ ಸಂದರ್ಶಕರನ್ನು ಸೂಜಿಗಲ್ಲಿನಂತೆ ಸೆಳೆಯುವ ರೀತಿಯಲ್ಲಿ ಅಲಂಕರಿಸಲು ಲಾಲ್ ಬಾಗ್ ಆಡಳಿತ ಮಂಡಳಿ ನಿರ್ಧರಿಸಿದೆ. ಬೋನ್ಸೈ ಮತ್ತು ಇಕಾಬಾನಾ ಪ್ರದರ್ಶನವು ಈ ಪ್ರದರ್ಶನಕ್ಕೆ ಕಲಾತ್ಮಕ ಸ್ಪರ್ಶವನ್ನು ನೀಡಲಿದೆ. ಹೂವಿನ ತಾಜಾತನವನ್ನು ಕಾಪಾಡಿಕೊಳ್ಳಲು, ಆರು ದಿನಗಳ ನಂತರ ಹೂವುಗಳನ್ನು ಬದಲಾಯಿಸಲಾಗುತ್ತದೆ.
ಉದ್ಯಾನವನಕ್ಕೆ ಬರುವ ಜನರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಂದರ್ಶಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಶಾಲಾ ಮಕ್ಕಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ನಿಗದಿತ ಕೌಂಟರ್ ನಲ್ಲಿ ತೋರಿಸುವ ಮೂಲಕ ಉಚಿತ ಪ್ರವೇಶ ಪಡೆಯಬಹುದು. ಆದರೆ ವಯಸ್ಕರಿಗೆ ಪ್ರವೇಶ ಶುಲ್ಕವನ್ನು ಇನ್ನೂ ಅಂತಿಮಗೊಳಿಸದಿದ್ದರೂ, ಇದನ್ನು ಹಿಂದಿನ ಸ್ವಾತಂತ್ರ್ಯ ದಿನಾಚರಣೆಯ ಪ್ರದರ್ಶನದಲ್ಲಿ 80 ರೂ. ನಿಗದಿಪಡಿಸಲಾಗಿತ್ತು. ಪ್ರದರ್ಶನ ಸಮಿತಿ ಸಭೆ ನಡೆಸಿ ಶುಲ್ಕದ ಕುರಿತು ನಿರ್ಧರಿಸಲಿದೆ. ಈ ಬಾರಿ 9 ರಿಂದ 10 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು 11 ದಿನಗಳ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಹೊರ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಲಕ್ಷಾಂತರ ಪ್ರವಾಸಿಗರು ಲಾಲ್ ಬಾಗ್ ಗೆ ಭೇಟಿ ನೀಡುವ ಸಾಧ್ಯತೆಯಿದೆ. ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯ ಪ್ರತಿಮೆಯನ್ನು ರಚಿಸಲು ಪ್ರಧಾನವಾಗಿ ಸೇವಂತಿಗೆ, ಗುಲಾಬಿ, ಆರ್ಕಿಡ್, ಲಿಲಿ ಸೇರಿದಂತೆ 10 ವಿವಿಧ ರೀತಿಯ ಹೂವುಗಳನ್ನು ಬಳಸಲಾಗುತ್ತಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್ ಮಾತನಾಡಿ, “ವಾಲ್ಮೀಕಿ ಅವರ ಜೀವನದ ಘಟನೆಗಳನ್ನು ಹೂವಿನ ಮೂಲಕ ಮನಮೋಹಕವಾಗಿ ಪ್ರದರ್ಶಿಸಲು ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ರಾಮಾಯಣ ಮಹಾಕಾವ್ಯದ ಪ್ರಮುಖ ಘಟನೆಗಳನ್ನು ಪುಷ್ಪಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುವುದು. ವಾಲ್ಮೀಕಿ ರಾಮಾಯಣ ರಚಿಸುತ್ತಿರುವ ಪ್ರತಿಮೆಯನ್ನು ಹೂವಿನಿಂದ ಅಲಂಕೃತಗೊಳಿಸಲಾಗುತ್ತದೆ. ಈ ಬಾರಿ ಒಟ್ಟಾರೆ ಫಲಪುಷ್ಪ ಪ್ರದರ್ಶನದಲ್ಲಿ 25 ಲಕ್ಷ ಹೂಗಳನ್ನು ಬಳಸಲಾಗುತ್ತದೆ” ಎಂದು ಹೇಳಿದ್ದಾರೆ.
ಒಟ್ಟಾರೆ 25 ಲಕ್ಷ ಹೂಗಳಲ್ಲಿ, ಹೂ ಕುಂಡದಲ್ಲಿ ಬೆಳೆಯುವ ಹಾಗೂ ಲಾಲ್ ಬಾಗ್ ನಲ್ಲಿ ಬೆಳೆಯುವ ಪ್ರದೇಶದಲ್ಲಿ ಬೆಳೆಯುವ ಹೂಗಳು ಲಾಲ್ ಬಾಗ್ 25 ಸ್ಥಳಗಳಲ್ಲಿ ಬೆಳೆಯುವ 15 ಲಕ್ಷ ಹೂಗಳು ಹಾಗೂ 10 ಲಕ್ಷ ಪ್ರತ್ಯೇಕಿಸಿದ ಹೂಗಳಾದ ಗುಲಾಬಿ, ಸೇವಂತಿಗೆ ಸೇರಿದಂತೆ 10 ವಿವಿಧ ಜಾತಿಯ ಪುಷ್ಪಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರದರ್ಶನಕ್ಕೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ರಾಜ್ಯದ ಹಲವು ಭಾಗಗಳಲ್ಲಿನ ತೋಟಗಾರಿಕಾ ಇಲಾಖೆಯ ಉದ್ಯಾನವನಗಳಲ್ಲಿನ ಹೂಗಳನ್ನು ಪ್ರದರ್ಶನಕ್ಕೆ ಬಳಸಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ. ಲಾಲ್ ಬಾಗ್ ಫ್ಲವರ್ ಶೋ ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಯನ್ನು ಹೂವಿನ ಕಲಾತ್ಮಕ ಪ್ರದರ್ಶನದೊಂದಿಗೆ ಮತ್ತಷ್ಟು ಹೆಚ್ಚಿಸಲು ಪೂರಕವಾಗಿದೆ.