ಬೆಂಗಳೂರು, ಡಿ.26 www.bengaluruwire.com : ಕರ್ನಾಟಕ ಹಾಲು ಒಕ್ಕೂಟ (KMF) ಮತ್ತೆ ನಂದಿನಿ ಹಾಲಿನ ದರ ಪರಿಷ್ಕರಣೆ (Nandini Milk Rate Revision)ಗೆ ಮುಂದಾಗಿದ್ದು, ಹೊಸ ವರ್ಷದಿಂದ ಪ್ರತೀ ಲೀಟರ್ ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಕೇವಲ ಆರು ತಿಂಗಳ ಹಿಂದೆಯಷ್ಟೇ ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳವಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್ ಮುಂದಾಗಿದೆ. ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಏರಿಕೆ ಮಾಡುವ ಕುರಿತು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಲ್. ಭೀಮಾನಾಯ್ಕ (L Bhimanaika) ಅವರು ಗುರುವಾರ ಸುಳಿವು ನೀಡಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದ ಹಂತದಲ್ಲಿ ದರ ಏರಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ತಿಳಿಸಿದ್ದಾರೆ.
ನೂತನ ವರ್ಷದಲ್ಲಿ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡುವ ನಿರೀಕ್ಷೆ :
‘ಹಾಲು ಉತ್ಪಾದಿಸುವ ರೈತರು ತೀವ್ರ ಸಂಕಷ್ಟದಲ್ಲಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ರೈತರಿಗೆ ಕನಿಷ್ಠ 5 ರೂ.ನಷ್ಟು ಹಾಲಿನ ದರ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಲಿದ್ದಾರೆ. ಸಿಎಂ ಶೀಘ್ರದಲ್ಲೇ ರಾಜ್ಯದ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಹಾಲು ಉತ್ಪಾದಿಸುವ ರೈತರ ಪರ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ‘ದಕ್ಷಿಣ ಭಾರತದ ಇತರೆ ರಾಜ್ಯಗಳು ಮತ್ತು ಅಮುಲ್ ಹಾಲಿಗೆ ಹೋಲಿಸಿದರೆ ಕರ್ನಾಟಕ (Karnataka)ದ ನಂದಿನಿ ಹಾಲಿನದರ ಕಡಿಮೆಯಿದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕೆಎಂಎಫ್ ನೀಡುತ್ತಿದೆ ಎಂದು ಆರು ತಿಂಗಳ ದರ ಏರಿಕೆ ಮಾಡಿದಾಗ ಭೀಮಾನಾಯ್ಕ ಹೇಳಿಕೆ ನೀಡಿದ್ದರು.
50 ಎಂಎಲ್ ಹೆಚ್ಚುವರಿ ಹಾಲು ಕಡಿತ, ದರವೂ ಇಳಿಕೆ :
ಇದೇ ವೇಳೆ ಈ ಹಿಂದೆ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 50 ಎಂಎಲ್ ಹೆಚ್ಚುವರಿ ಹಾಲನ್ನು ಕಡಿತ ಮಾಡಿ ಅದರ ದರವನ್ನೂ ಕೂಡ 2 ರೂ.ನಷ್ಟು ಇಳಿಕೆ ಮಾಡಲಾಗುತ್ತೆ ಎಂದು ಭೀಮಾನಾಯ್ಕ್ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಕೆಎಂಎಫ್‌ಗೆ ಹೆಚ್ಚಿನ ಹಾಲು ಸಂಗ್ರಹವಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ಯಾಕೆಟ್‌ನಲ್ಲಿ ನೀಡಲಾಗುತ್ತಿದ್ದ ಹಾಲಿನ ಪ್ರಮಾಣವನ್ನು 50 ಎಂಎಲ್ ಹೆಚ್ಚಿಸಿ ದರವನ್ನೂ 2 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ಹಾಲಿನ ಜೊತೆಗೆ ದರವನ್ನೂ ಹಿಂಪಡೆಯುವುದಾಗಿ ಭೀಮಾನಾಯ್ಕ್ ತಿಳಿಸಿದ್ದಾರೆ.
ಈ ಹಿಂದೆ ಜೂನ್ 25ರಂದು 1000 ಎಂಎಲ್ ಹಾಲಿಗೆ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡುವ ಘೋಷಣೆ ಮಾಡಲಾಗಿತ್ತು. ಜೂನ್ 26ರಿಂದಲೇ ಹೊಸ ತೀರ್ಮಾನ ಅನುಷ್ಠಾನಕ್ಕೆ ಬಂದಿತ್ತು. ಈ ವೇಳೆ ಹಾಲಿನ ದರವನ್ನು ಲೀಟರ್‌ಗೆ 44 ರೂ.ನಿಂದ 46 ರೂ.ಗೆ ಏರಿಕೆ ಮಾಡಲಾಗಿತ್ತು. ಹಾಗೆಯೇ 22 ರೂ. ಇದ್ದ 500 ಎಂಎಲ್ ಪ್ಯಾಕೆಟ್ ಹಾಲಿಗೂ 50 ಎಂಎಲ್ ಹೆಚ್ಚುವರಿ ಸೇರಿಸಲಾಗಿತ್ತು. ಹಾಗೂ ದರವನ್ನು 24 ರೂ.ಗೆ ಏರಿಕೆ ಮಾಡಲಾಗಿತ್ತು.
ಇದಕ್ಕೂ ಮುನ್ನ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂದಿನಿ ವತಿಯಿಂದ ಪ್ರಥಮ ಬಾರಿಗೆ ತಯಾರಿಸಿರುವ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವ ವೆಂಕಟೇಶ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಮಾರ್ಕೆಟಿಂಗ್ ನಿರ್ದೇಶಕರಾದ ರಘುನಂದನ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.