ಬೆಳಗಾವಿ, ಡಿ.26 www.bengaluruwire.com : ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಅಪಘಾತ (Army Vehicle Accident)ಕ್ಕೀಡಾಗಿ ಹುತಾತ್ಮರಾದ ಕರ್ನಾಟಕ ಮೂಲದ ಹುತಾತ್ಮ ಯೋಧರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಅಂತಿಮ ಗೌರವ ಸಲ್ಲಿಸಿದರು.
ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ಗೌರವ ಸಲ್ಲಿಸಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, “ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ. ನಾಲ್ವರು ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ” ಎಂದರು.
“ಸರ್ಕಾರದಿಂದ ನಿಯಮಾನುಸಾರ ಹುತಾತ್ಮರ ಕುಟುಂಬಕ್ಕೆ ಸಲ್ಲಬೇಕಾದ ಸಕಲ ನೆರವನ್ನೂ ಒದಗಿಸಲಾಗುವುದು. ಬೆಳಗಾವಿ ದಯಾನಂದ ತಿರುಕಣ್ಣನವರ್, ಚಿಕ್ಕೋಡಿ ಧನರಾಜ್ ಸುಭಾಷ್, ಬಾಗಲಕೋಟೆಯ ಮಹೇಶ್ ನಾಗಪ್ಪ, ಕುಂದಾಪುರದ ಅನೂಪ್ ಪೂಜಾರಿ ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಅಂತ ಪ್ರಾರ್ಥನೆ ಮಾಡುತ್ತೇನೆ” ಎಂದು ಮುಖ್ಯಮಂತ್ರಿಗಳು ಹೇಳಿದರು.
ಜಮ್ಮು ಮತ್ತು ಕಾಶ್ಮೀರ (Jammu And Kashmir)ದ ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ 5:30ಕ್ಕೆ 300 ಅಡಿ ಕಂದಕಕ್ಕೆ ಸೇನಾ ವಾಹನ ಬಿದ್ದು ಮರಾಠಾ ರೆಜಿಮೆಂಟ್‌ನ ಐವರು ಮೃತಪಟ್ಟಿದ್ದರು. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ ನಾಲ್ವರು ಕರ್ನಾಟಕದ ಮೂಲದವರಾಗಿದ್ದರು.
ಅನೂಪ್ ಪೂಜಾರಿ ಅವರು 13 ವರ್ಷದ ಹಿಂದೆ ಸೇನಾಪಡೆಗೆ ಸೇರಿದ್ದು, ಮರಾಠಾ ರೆಜಿಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಎರೆಉ ವರ್ಷದ ಹೆಣ್ಣು ಮಗುವಿದೆ. ಡಿ.21ರಂದು ರಜೆ ಮುಗಿಸಿ ಪುನಃ ಕರ್ತವ್ಯಕ್ಕೆ ಮರಳಿದ್ದರು ಎಂದು ಮೂಲಗಳು ತಿಳಿಸಿವೆ.
ಗುರುವಾರ ಮುಂಜಾನೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Mangalore International Airport) ದಿಂದ ಅನೂಪ್ ಅವರ ಪಾರ್ಥೀವ ಶರೀರವನ್ನು ಆಂಬುಲೆನ್ಸ್ ನಲ್ಲಿ ಅವರ ಸ್ವಗೃಹದತ್ತ ಕೊಂಡೊಯ್ಯಲಾಯಿತು ಎಂದು ಎಎನ್ ಐ ವರದಿ ಮಾಡಿದೆ.