ಬೆಂಗಳೂರು, ಡಿ.25 www.bengaluruwire.com : ರಾಜ್ಯದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಾಗೂ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಪಂಪ್ ಸೆಟ್ ಅಳವಡಿಸಿದ ರೈತರ ಜಮೀನಿಗೆ ಸೌರ ಕೃಷಿ ಪಂಪ್ ಸೆಟ್ ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕರ ಸಬ್ಸೀಡಿ ವಿತರಿಸುವ ಕುಸಮ್ ಬಿ ಯೋಜನೆ ಜಾರಿಗೆ ಬಂದು 9 ತಿಂಗಳು ಕಳೆದರೂ ಈತನಕ ಸೂಕ್ತ ರೀತಿ ಅನುಷ್ಠಾನವಾಗಿಲ್ಲ.
ರಾಜ್ಯದಲ್ಲಿ ಕುಸುಮ್-ಬಿ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL),ಯೋಜನೆ ಜಾರಿಗೆ ಬಂದು ಒಂಭತ್ತು ತಿಂಗಳು ಆಗುತ್ತಾ ಬಂದಿದ್ದು ತೀರ ಕೆಲವು ದಿನಗಳ ಹಿಂದಷ್ಟೇ ಸಬ್ಸೀಡಿ ದದಲ್ಲಿ ಸೌರ ಕೃಷಿ ಪಂಪ್ ಸೆಟ್ ಗೆ ಡಿಡಿ ರೂಪದಲ್ಲಿ ಅರ್ಜಿದಾರರಿಂದ ಹಣ ಸ್ವೀಕರಿಸಲು ಸರ್ಕಾರದಿಂದ ಒಪ್ಪಿಗೆ ಪಡೆದಿದೆ. ಮತ್ತು ಯೋಜನೆಯ ಅನುಷ್ಠಾನದಲ್ಲಿ ಸರ್ಕಾರ ಹೆಚ್ಚಿನ ಆಸ್ಥೆವಹಿಸದ ಕಾರಣ ಯೋಜನೆ ಹಳ್ಳ ಹಿಡಿದಿದೆ ಎಂಬ ಬಲವಾದ ಆರೋಪ ಕೇಳಿಬರುತ್ತಿದೆ.
ಇದುವರೆಗೆ ಆನ್ ಲೈನ್ ನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರು (10,151 ಅರ್ಜಿ), ಹೊಸದಾಗಿ ಸೌರ ಕೃಷಿ ಪಂಪ್ ಸೆಟ್ ಗಾಗಿ ಈತನಕ ಅಕ್ರಮ-ಸಕ್ರಮ ಎಲ್ಲಾ ಸೇರಿ 38,247 (ಡಿ.9ರ ತನಕದ ಮಾಹಿತಿಯಂತೆ) ಆನ್ ಲೈನ್ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಪೈಕಿ 217 ಮಂದಿ ಹಣ ಕಟ್ಟಿದವರಿಗೆ ಮಾತ್ರ ಸೋಲಾರ್ ಕೃಷಿ ಪಂಪ್ ಸೆಟ್ ಹಾಕಲು ಆದೇಶವಾಗಿದೆ. ಆದರೆ ಇಡೀ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸೋಲಾರ್ ಪಂಪ್ ಸೆಟ್ ಅಳವಡಿಕೆಯಾಗಿದೆ ಎಂದು ಇಂಧನ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಕುಸುಮ್ – ಬಿ (Pradhan Mantri Kisan Urja Suraksha evam Utthan Mahabhiyan – PM-KUSUM) ಎಂದು ಕರೆಯುವ ಈ ಯೋಜನೆಯನ್ನು 2019ರಲ್ಲೇ ಜಾರಿಗೆ ತಂದರೂ, ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬಂದಿದ್ದು ಈ ವರ್ಷದ 19 ಮಾರ್ಚಲ್ಲಿ. ಎಸ್ಕಾಂ ವ್ಯಾಪ್ತಿಯಲ್ಲಿ ರೈತರ ಜಮೀನಿನಿಂದ ವಿದ್ಯುತ್ ಪರಿವರ್ತಕ (Transfearmers) 500 ಮೀಟರ್ ಆಚೆ ಇರುವಂತಹ ರೈತರು ಅಕ್ರಮವಾಗಿ ವೈರ್ ಅಳವಡಿಸಿ ವಿದ್ಯುತ್ ಸಂಪರ್ಕ ಪಡೆದಿದ್ದರೆ ಅವುಗಳನ್ನು ಪತ್ತೆಹಚ್ಚಿ ಕುಸುಮ್ – ಬಿ ಯೋಜನೆಯಡಿ ಅವರಿಗೆ ಸಬ್ಸೀಡಿ ದರದಲ್ಲಿ ಸೌರ ವಿದ್ಯುತ್ ಪಂಪ್ ಸೆಟ್ ಅಳವಡಿಸುವ ಹಾಗೂ ವಿದ್ಯುತ್ ಸಂಪರ್ಕ ಅಳವಡಿಸಲು ಎಸ್ಕಾಂಗಳಿಗೆ ಹೆಚ್ಚು ವೆಚ್ಚವಾಗುವ ಕಡೆ ಆಫ್ ಗ್ರಿಡ್ ನಲ್ಲಿ ಕೃಷಿ ಜಮೀನು ಹೊಂದಿದ ರೈತರು ಸಬ್ಸೀಡಿ ದರದಲ್ಲಿ ಸೌರ ಕೃಷಿ ಪಂಪ್ ಸೆಟ್ ಅಳವಡಿಸಲು https://kusumyojna.in/page/apply-now ಆನ್ ಲೈನ್ ಮೂಲಕ ಈ ಲಿಂಕ್ ಒತ್ತಿ, ನೋಂದಣಿ ಮಾಡಿಕೊಳ್ಳಬೇಕು.
ಹೀಗೆ ನೋಂದಣಿಯಾದ ಬಳಿಕ ಸಂಬಂಧಿಸಿದ ಜಮೀನಿನ ಮಾಲೀಕರು ಕೃಷಿ ಜಮೀನಿನಲ್ಲಿ ಹಾಜರಿದ್ದು ಆಯಾ ವಿದ್ಯುತ್ ಸರಬರಾಜು ಕಂಪನಿ (Escoms)ಯ ಸೆಕ್ಷನ್ ಆಫೀಸರ್, ಸೌರ ಪಂಪ್ ಸೆಟ್ ಅಳವಡಿಸುವ ಮಾನ್ಯತೆ ಪಡೆದ ಸಂಸ್ಥೆ ಪ್ರತಿನಿಧಿ ಜಂಟಿ ಸಮೀಕ್ಷೆ ಮಾಡಿ ಆ ಕೃಷಿ ಜಮೀನು ಟ್ರಾನ್ಸ್ ಫಾರ್ಮರ್ ನಿಂದ 500 ಮೀಟರ್ ಆಚೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಂಡ ಮೇಲೆ ಸೌರ ಪಂಪ್ ಸೆಟ್ ಅಳವಡಿಸಲಾಗುತ್ತೆ.
ಪಿಎಮ್ ಕುಸುಮ್ ಯೋಜನೆಯಲ್ಲಿ ಹಲವು ಲೋಪದೋಷಗಳು :
ಮಾಧ್ಯಮ ವರದಿ ಮಾಡಿರುವಂತೆ ಇದೇ ಡಿಸೆಂಬರ್ ಆರಂಭದಲ್ಲಿ ಪಿಎಮ್ ಕುಸುಮ್ ಯೋಜನೆ ಬಗ್ಗೆ ಸಂಸದೀಯ ಸಮಿತಿ ಪರಿಶೀಲನೆ ನಡೆಸಿತ್ತು. ಯೋಜನೆಯಲ್ಲಿ ಹಲವಾರು ಲೋಪದೋಷಗಳು ಕಂಡುಬಂದಿರುವುದರಿಂದ ಅದನ್ನು ಪರಿಶೀಲಿಸುವಂತೆ ಸಂಸದೀಯ ಸಮಿತಿಯು ಕರೆ ನೀಡಿತ್ತು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಯೋಜನೆಯಡಿಯಲ್ಲಿ ನಿಧಾನಗತಿಯ ಪ್ರಗತಿಗೆ ಕಾರಣಗಳು ಕಾಂಪೊನೆಂಟ್-ಎ ಅಡಿಯಲ್ಲಿ ಸೌರ ಶಕ್ತಿ ಉತ್ಪಾದನೆಗೆ ಭೂಮಿ ಬಳಕೆ ಮಾಡಿಕೊಡಲು ರೈತರಿಗೆ ಹಣಕಾಸಿನ ಕೊರತೆ, ಕಾಂಪೊನೆಂಟ್-ಬಿ ಅಡಿಯಲ್ಲಿ ಸೌರ ಪಂಪ್‌ಗಳ ಸ್ಥಾಪನೆಗೆ ಸಂಬಂಧಿಸಿದ ಯೋಜನೆಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ರಾಜ್ಯಗಳ ಆಸಕ್ತಿಯ ಕೊರತೆಯನ್ನು ಸಮಿತಿ ಎತ್ತಿಹಿಡಿದಿದೆ.
ಅಲ್ಲದೆ, ಕಾಂಪೊನೆಂಟ್-ಸಿ ಅಡಿಯಲ್ಲಿ ವೈಯಕ್ತಿಕ ಪಂಪ್ ಸೆಟ್ ನಲ್ಲಿ ಡೀಸೆಲ್ ಪಂಪ್‌ಗಳನ್ನು ಸೌರಶಕ್ತಿ ಚಾಲಿತ ಸೋಲಾರೈಸೇಶನ್ ಗೆ ಬದಲಾಯಿಸುವುದರಲ್ಲಿ ರೈತರ ಆಸಕ್ತಿಯ ಕೊರತೆ ಯೋಜನೆಯ ನಿಧಾನಗತಿಯ ಪ್ರಗತಿಗೆ ಕಾರಣವಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ರಚಿಸಿದ ಸಂಸದೀಯ ಸಮಿತಿ ಗುರ್ತಿಸಿದೆ.
7.5 ಅಶ್ವಶಕ್ತಿಯ ಸೋಲಾರ್ ಪಂಪ್ ಯಾತಕ್ಕೂ ಸಾಲದು :
ಕಾಂಪೊನೆಂಟ್-ಬಿಗೆ ಸಂಬಂಧಿಸಿದಂತೆ, 7.5 ಅಶ್ವಶಕ್ತಿಯ (ಎಚ್‌ಪಿ) ಸೋಲಾರ್ ಪಂಪ್‌ಗಳಿಗೆ ಮಾತ್ರ ಸಬ್ಸಿಡಿ ರೈತರಿಗೆ ಸಾಕಾಗುವುದಿಲ್ಲ. ಏಕೆಂದರೆ ದೇಶದ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ನೀರಿನ ಕೊರತೆಯನ್ನು ಎದುರಿಸುತ್ತಿರುವುದರಿಂದ 7.5 ಎಚ್‌ಪಿ ಪಂಪ್ ಸಾಮರ್ಥ್ಯವು ಎಲ್ಲಾ ಪ್ರದೇಶಗಳಿಗೆ ಸೂಕ್ತವಲ್ಲ ಎಂದು ಸಾಬೀತುಪಡಿಸುತ್ತದೆ ಎಂದು ಸಮಿತಿಯು ಗಮನಸೆಳೆದಿತ್ತು.
ಯೋಜನೆಯ ವಿವಿಧ ಅಂಶಗಳ ಅಡಿಯಲ್ಲಿ ಗುರಿಗಳನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಸಮಿತಿಯು ಗಮನಿಸಿದೆ ಮತ್ತು ಆದ್ದರಿಂದ ಯೋಜನೆಯ ಅವಧಿಯನ್ನು ಮಾರ್ಚ್ 2026 ರವರೆಗೆ ವಿಸ್ತರಿಸಲಾಗಿದೆ ಎಂದಿದೆ.
ಕುಸುಮ್-ಬಿ ಯೋಜನೆ ಅನುಷ್ಠಾನ ನಿರಾಸಕ್ತಿಗೆ ರೈತರ ಕಿಡಿ :
ಆಗಸ್ಟ್ ನಲ್ಲಿ ಕೋಲಾರಕ್ಕೆ ಭೇಟಿ ನೀಡಿದ್ದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ರಾಜ್ಯದಲ್ಲಿ ಕುಸುಮ್ ಬಿ ಮತ್ತು ಕುಸುಮ್ ಸಿ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ ಎಂದು ಶುಕ್ರವಾರ ಘೋಷಿಸಿದ್ದರು. ಈ ಕಾರ್ಯತಂತ್ರದ ಗಮನವು ಜಿಲ್ಲೆಗಳು ಎದುರಿಸುತ್ತಿರುವ ವಿದ್ಯುತ್ ಸವಾಲುಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದರು. ಆದರೆ ಇಂಧನ ಇಲಾಖೆಯಾಗಲಿ, ಕೆಆರ್ ಇ ಡಿಎಲ್ ಯೋಜನೆ ಜಾರಿಗೆ ಆಸಕ್ತಿವಹಿಸಿಲ್ಲ. ಹೀಗಾಗಿ ಕುಸುಮ್ -ಬಿ ಯೋಜನೆಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಬಕಪಕ್ಷಿಗಳಂತೆ ಕಾಯುತ್ತಿರುವ ಅರ್ಜಿದಾರರು ಹಾಗೂ ಹೊಸದಾಗಿ ಅಪ್ಲಿಕೇಶನ್ ಹಾಕಲು ಕಾಯುತ್ತಿರುವವರು ಸರ್ಕಾರದ ನಡೆಯ ಬಗ್ಗೆ ಕಿಡಿಕಾರಿದ್ದಾರೆ.
ಕುಸುಮ್ ಬಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 30 ಸಹಾಯಧನ ಮತ್ತು ರಾಜ್ಯ ಸರ್ಕಾರದಿಂದ ಶೇ. 50 ಸಬ್ಸೀಡಿ ದೊರೆತರೆ ಇನ್ನುಳಿದ ಕೇವಲ ಶೇ.20ರಷ್ಟು ವೆಚ್ಚವನ್ನು ರೈತರು ಭರಿಸಬೇಕಿದೆ. ಈ ಯೋಜನೆಯಲ್ಲಿ ಹೊಸದಾಗಿ ಸೋಲಾರ್ ಪಂಪ್ ಸೆಟ್ ಹಾಕಲು ಆಸಕ್ತಿಯಿದ್ದವರಿಗೆ ಸಕಾಲದಲ್ಲಿ ಸಬ್ಸೀಡಿಯಲ್ಲಿ ಈ ಯೋಜನೆ ಲಭ್ಯವಾಗದಿರುವುದು ವ್ಯಾಪಕ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಈಗಲಾದರೂ ತುರ್ತು ಗಮನ ಹರಿಸಿ ಈ ಸಮಸ್ಯೆ ಬಗೆಹರಿಸಬೇಕು.