ಅಬುದಾಬಿ, ಡಿ.1 www.bengaluruwire.com : ಚಾಂಪಿಯನ್ಸ್ ಟ್ರೋಫಿ 2025 ರ ಸ್ಥಳದ ಕುರಿತು ಭಾರತ ಮತ್ತು ಪಾಕಿಸ್ತಾನ ಇನ್ನೂ ಒಮ್ಮತಕ್ಕೆ ಬರದಿರುವ ಸಮಯದಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಜಯ್ ಶಾ (Jay shah) ಅಧಿಕಾರ ಭಾನುವಾರ ವಹಿಸಿಕೊಂಡಿರು.
2024ರ ಆಗಸ್ಟ್ 27ರಂದು ಜಯ್ ಶಾ ಐಸಿಸಿ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2020ರಿಂದ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ (Greg Barclay) ಮೂರನೇ ಅವಧಿಯನ್ನು ಬಯಸದಿರಲು ನಿರ್ಧರಿಸಿದ ನಂತರ ಜಯ್ ಶಾ ಆ ಸ್ಥಾನಕ್ಕೆ ಏಕೈಕ ನಾಮನಿರ್ದೇಶಿತರಾಗಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಭಾಷಣ ಮಾಡಿದ ಜಯ್ ಶಾ, ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ (Olympics 2028) ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ, ಮಹಿಳಾ ಕ್ರಿಕೆಟ್ ಆಟದಲ್ಲಿ ಮತ್ತಷ್ಟು ಬೆಳವಣಿಗೆ ತರಬೇಕೆಂಬ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ತೆರೆದಿಟ್ಟರು.
ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಿರುವುದು ನನಗೆ ಹೆಮ್ಮೆ. ಐಸಿಸಿ ನಿರ್ದೇಶಕರು ಹಾಗೂ ಸದ್ಯರ ಬೆಂಬಲ ಮತ್ತು ಅಪಾರವಾದ ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ. 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಯಾರಿ ಮಾಡಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಇದರಿಂದ ಕ್ರಿಕೆಟ್ ವಿಶ್ವದಾದ್ಯಂತ ಇನ್ನೂ ಹೆಚ್ಚಿನ ಅಭಿಮಾನಿಗಳನ್ನು ಒಳಗೊಳ್ಳಲಿದೆ. ಮುಂದಿನ ಎಲ್ಲ ಅವಕಾಶಗಳನ್ನ ಬಳಸಿಕೊಂಡು ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಐಸಿಸಿ ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
36 ವರ್ಷದ ಜಯ್ ಷಾ, ಪ್ರಸ್ತುತ ಐಸಿಸಿಯ ಸರ್ವಶಕ್ತ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ (F&CA) ಉಪ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಒಟ್ಟು 16 ಮತಗಳಲ್ಲಿ 9 ಮತಗಳ ಸರಳ ಬಹುಮತವನ್ನು ಪಡೆಯಬೇಕಾಗಿತ್ತು. ಅವರು ಕ್ರಿಕೆಟ್ ಆಡಳಿತ ಮಂಡಳಿಯ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ. ಪ್ರಮುಖವಾಗಿ, ಜಗಮೋಹನ್ ದಾಲ್ಮಿಯಾ ಮತ್ತು ಶರದ್ ಪವಾರ್ ಈ ಹಿಂದೆ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಅವರ ನಾಯಕತ್ವದಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದಾಖಲೆ-ಮುರಿಯುವ ಮಾಧ್ಯಮ ಹಕ್ಕುಗಳ ಒಪ್ಪಂದವನ್ನು ಪಡೆದುಕೊಂಡಿತು, ಇದು ಪ್ರತಿ ಪಂದ್ಯದ ಮೌಲ್ಯದ ದೃಷ್ಟಿಯಿಂದ ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್ ಆಗಲು ಪ್ರೇರೇಪಿಸಿತು. ಭಾರತದಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಶಾ ಪ್ರಮುಖ ಪಾತ್ರ ವಹಿಸಿದ್ದರು. ಇದು ಇತಿಹಾಸದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಅವರು ಒಲಿಂಪಿಕ್ಸ್‌ಗೆ ಕ್ರಿಕೆಟ್‌ನ ವಾಪಸ್ ಸೇರ್ಪಡೆ ಮಾಡುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಲಾಸ್ ಏಂಜಲೀಸ್ 2028 ರ ಒಲಂಪಿಕ್ ನಲ್ಲಿ ಕ್ರಿಕೆಟ್ ಕ್ರೀಡೆಯನ್ನು ಸೇರಿಸುವಲ್ಲಿ ಕೆಲಸ ಮಾಡುತ್ತಿದ್ದಾರೆ.
2009ರಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಸೇರಿದ ಜಯ್ ಶಾ 2019ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಿರಿಯ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಐಸಿಸಿಯ ಪ್ರಭಾವಯುತ ಸ್ಥಾನವಾಗಿರುವ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ ಪ್ರಮುಖ ಕ್ರಿಕೆಟ್ ಸಂಸ್ಥೆಗಳನ್ನು ಮುನ್ನಡೆಸುವ ಸಾಮರ್ಥ್ಯ ತೋರಿದ್ದರು. ಇದೀಗ 2024ರಲ್ಲಿ ಐಸಿಸಿ ಮುಖ್ಯಸ್ಥರಾಗಿದ್ದಾರೆ.