ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಜೈಲಿನಿಂದ ಬಿಡುಗಡೆಯಾಗಿದ ಸಂದರ್ಭದಲ್ಲಿ ತಾನು ಬಿಡುಗಡೆಯಾಗಿ ಹೊರಬಂದ ಖುಷಿಯಲ್ಲಿ ಜೈಲಿನ ಮುಂದೆಯೇ ತನ್ನ ವಿಶಿಷ್ಟ ನೃತ್ಯ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆತ ದಂಡವನ್ನು ಪಾವತಿಸಲು ವಿಫಲವಾದ ನಂತರ ಜೈಲಿನಲ್ಲಿದ್ದು, ಹೆಚ್ಚುವರಿ ಸಮಯದ ಜೈಲು ಶಿಕ್ಷೆ ಪೂರೈಸಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು.
ಎನ್‌ಡಿಟಿವಿಯಲ್ಲಿನ ವರದಿಯೊಂದು ಈ ಘಟನೆಯು ಕನೌಜ್‌ನಲ್ಲಿ ನಡೆದಿದ್ದಾಗಿ ಹೇಳಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿ ಜೈಲು ಕಟ್ಟಡದ ಹೊರಗೆ ಕಲರ್ ಟಿಶರ್ಟ್ ಮತ್ತು ತಿಳಿ ನೀಲಿ ಜೀನ್ಸ್ ಧರಿಸಿ ಫ್ರೀಸ್ಟೈಲಿಂಗ್ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಎಕ್ಸ್ ಜಾಣತಾಣದಲ್ಲಿ @News1IndiaTweet ಎಂಬ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೆಲವು ಜೈಲು ಅಧಿಕಾರಿಗಳು ಅವನ ಪಕ್ಕದಲ್ಲಿ ನಿಂತು ಆತನ ಪ್ರದರ್ಶನವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಾರೆ. .
ಹಿಂದಿಯಲ್ಲಿರುವ ಎಕ್ಸ್ ಪೋಸ್ಟ್‌ನ ಶೀರ್ಷಿಕೆಯನ್ನು ಈ ರೀತಿ ಅನುವಾದಿಸಲಾಗಿದೆ, “ಕೈದಿ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದ ತಕ್ಷಣ, ಅವನು ಗೇಟ್‌ನಲ್ಲಿ ನೃತ್ಯ ಮಾಡಿದ್ದಾನೆ ಮತ್ತು ಜೈಲು ಸಿಬ್ಬಂದಿ ಅವನನ್ನು ಶ್ಲಾಘಿಸಿದರು. 9 ತಿಂಗಳ ಕಾಲ ಜೈಲಿನಲ್ಲಿದ್ದರು. 1,000 ರೂ. ದಂಡವನ್ನು ಪಾವತಿಸಲು ಸಾಧ್ಯವಾಗದ ಕಾರಣ ಆತನನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ” ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಈ ವೈರಲ್ ವಿಡಿಯೋವನ್ನು ಈತನಕ 49.3 ಸಾವಿರ ಜನರು ವೀಕ್ಷಿಸಿದ್ದು, ವಿವಿಧ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು, “ಇದು ಆಶ್ಚರ್ಯಕರವಾಗಿದೆ! ಅತ್ಯಾಚಾರಿಗಳು ಮತ್ತು ಕೊಲೆಗಾರರು 3 ತಿಂಗಳಲ್ಲಿ ಬಿಡುಗಡೆಯಾಗುತ್ತಾರೆ ಮತ್ತು 1000 ರೂ. ದಂಡವನ್ನು ಪಾವತಿಸದವನು 9 ತಿಂಗಳು ಜೈಲಿನಲ್ಲಿ ಇರುತ್ತಾನೆ” ಎಂದರೆ, ಮತ್ತೊಬ್ಬ ಬಳಕೆದಾರರು, “ಕೇವಲ 1000 ರೂ.ಗೆ 9 ತಿಂಗಳ ಜೈಲುವಾಸ? ಈ ವ್ಯಕ್ತಿ ಕ್ರಿಮಿನಲ್ ಅಲ್ಲ ಮತ್ತು ಯಾವುದೋ ನಿಯಮವನ್ನು ಉಲ್ಲಂಘಿಸಿ ಜೈಲಿಗೆ ಹೋಗಿದ್ದರೆ ಅದು ನಾಚಿಕೆಗೇಡಿನ ಸಂಗತಿ” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಕೋಟ್ಯಂತರ ರೂಪಾಯಿ ಅಥವಾ ವಂಚನೆಗಳನ್ನು ಮಾಡಿ ಓಡಿಹೋದವರು ಸ್ವತಂತ್ರವಾಗಿ ತಿರುಗುತ್ತಿದ್ದಾರೆ ಮತ್ತು ಒಬ್ಬ ಬಡ ವ್ಯಕ್ತಿಯನ್ನು 9 ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಯಿತು. ಸಾಮಾನ್ಯ ಮನುಷ್ಯನನ್ನು ಕಾನೂನಿನಿಂದ ಮೂರ್ಖರನ್ನಾಗಿ ಮಾಡಲಾಗುತ್ತಿದೆ”ಎಂದು ಮೂರನೇ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ನೆಟ್ಟಿಗ, “ಅವನು ತುಂಬಾ ಕೆಟ್ಟದಾಗಿ ನೃತ್ಯ ಮಾಡಿದ್ದಾನೆ, ಅವನನ್ನು ಮತ್ತೆ ಜೈಲಿಗೆ ಕಳುಹಿಸಿ” ಎಂದು ಕಿಚಾಯಿಸಿದ್ದಾರೆ.