ಬೆಂಗಳೂರು: ಡಿ.1 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಒಟ್ಟಾರೆ 20.7 ಲಕ್ಷ ಆಸ್ತಿಗಳಿದ್ದು, ಆ ಪೈಕಿ 2024-25ನೇ ಸಾಲಿನಲ್ಲಿ ಬಿಬಿಎಂಪಿ (PPMP)ಯು ನ.30ಕ್ಕೆ ಕೊನೆಗೊಂಡಂತೆ 4284 ಕೋಟಿ ರೂ. ಭಾರೀ ಮೊತ್ತದ ಆಸ್ತಿ ತೆರಿಗೆ (Property tax)ಯನ್ನು ಸಂಗ್ರಹಿಸಿದೆ. ಇದು ಪಾಲಿಕೆಯಲ್ಲಿ ಸಂಗ್ರಹವಾದ ಇದುವರೆಗಿನ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ ಎಂದು ಪಾಲಿಕೆ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ 2025ರ ವೇಳೆಗೆ 5200 ಕೋಟಿ ರೂ. ಸಂಗ್ರಹಿಸುವ ಗುರಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ನಾಗರೀಕರಿಗೆ ಇ-ಖಾತಾ (E-Khata)ವನ್ನು ಸುಗಮವಾಗಿ ಪಡೆಯಲು ಬಿಬಿಎಂಪಿ ಬದ್ಧವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಆಫ್ ಲೈನ್ (Offline) ಮೂಲಕ 2024-25ನೇ ಆರ್ಥಿಕ ವರ್ಷದಲ್ಲಿ 521.35 ಕೋಟಿ ರೂ. ಸಂಗ್ರಹವಾದರೆ, ಆನ್ ಲೈನ್ (Online) ಮೂಲಕ 3,762.81 ಕೋಟಿ ರೂ. ಸಂಗ್ರಹವಾಗಿದೆ. ಮಹದೇವಪುರ ವಲಯದಲ್ಲಿ 1148.35 ಕೋಟಿ ರೂ. ಸಂಗ್ರಹವಾಗುವುದರೊಂದಿಗೆ ಅತಿ ಹೆಚ್ಚು ಆಸ್ತಿ ಸಂಗ್ರಹಿಸಿದ ವಲಯವಾಗಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ 136.2 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲೂ ಆಸ್ತಿ ತೆರಿಗೆ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಸ್ವತ್ತಿನ ಮಾಲೀಕರು ಆಫ್ ಲೈನ್ ನಲ್ಲಿ 36.36 ಕೋಟಿ ರೂ. ತೆರಿಗೆ ಕಟ್ಟಿದ್ದಾರೆ.
ಗುರಿ ಸಾಧನೆಯಲ್ಲಿ ವಿಫಲವಾಯ್ತು ಒಟಿಎಸ್ ಯೋಜನೆ :
ಸುಸ್ತಿದಾರರ ಅನುಕೂಲಕ್ಕಾಗಿ ಜಾರಿಗೆ ತಂದ ಒಟಿಎಸ್ (One Time Settlement – OTS) ಅವಕಾಶ ನ.30ಕ್ಕೆ ಕೊನೆಗೊಂಡಿದೆ. ಪಾಲಿಕೆ ಸಂಗ್ರಹಿಸಿದ ಒಟ್ಟಾರೆ ಆಸ್ತಿ ತೆರಿಗೆಗಳ ಪೈಕಿ, ನಗರದಲ್ಲಿನ 4.2 ಕೋಟಿ ಆಸ್ತಿಗಳಿಂದ ಅಂದಾಜು 1,150 ಕೋಟಿ ರೂ. ನಿಂದ 1200 ಕೋಟಿ ರೂ. ಬಾಕಿ ತೆರಿಗೆಗಳ ಪೈಕಿ ಒಟಿಎಸ್ ಯೋಜನೆಯಡಿ ಪಾಲಿಕೆಗೆ ಅಂದಾಜು 2 ಲಕ್ಷ ಆಸ್ತಿಗಳಿಂದ 700 ರಿಂದ 750 ಕೋಟಿ ರೂ. ಹಣ ಸಂಗ್ರಹವಾಗಿದೆ. ಫೆಬ್ರವರಿಯಲ್ಲಿ ಜಾರಿಗೆ ತಂದ ಒಟಿಎಸ್ ಯೋಜನೆಯನ್ನು ಹಲವು ಬಾರಿ ವಿಸ್ತರಣೆ ಮಾಡಿದರೂ ಬಾಕಿ ಆಸ್ತಿ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಡಿಸೆಂಬರ್ ಒಂದರಿಂದ ತೆರಿಗೆ ಬಿಸಿ ತಟ್ಟಲಿದೆ ಎಂದು ಬೆಂಗಳೂರು ವೈರ್ ಗೆ ಪಾಲಿಕೆ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
90 ಸಾವಿರ ಆಸ್ತಿ ತೆರಿಗೆ ಸುಸ್ತಿದಾರರ ಬ್ಯಾಂಕ್ ಅಟ್ಯಾಚ್ ಮೆಂಟ್ :
ಡಿಸೆಂಬರ್ 1ರಿಂದ ಬಾಕಿಯ ಬಡ್ಡಿ ದಂಡ ಸೇರಿ ಬಾಕಿ ತೆರಿಗೆಯ ಎರಡು ಮೂರು ಪಟ್ಟು ಹೆಚ್ಚಳವಾಗಬಹುದು. ಈನತಕ ಆಸ್ತಿ ತೆರಿಗೆ ಪಾವತಿಸದ 90,000 ಆಸ್ತಿಮಾಲೀಕರಿಗೆ, ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ನೋಟಿಸ್ ಜಾರಿ ಮಾಡಲಾಗಿದೆ. ಈ ಮೂಲಕ ಆಸ್ತಿ ತೆರಿಗೆ ಬಾಕಿಯನ್ನು ಬಡ್ಡಿ ಸಮೇತ ವಸೂಲಿ ಮಾಡುತ್ತಿದೆ. ಇದಲ್ಲದೆ ಇದುವರೆಗೆ 10,000 ಆಸ್ತಿಗಳಿಗೆ ಬೀಗಮುದ್ರೆ ಹಾಕಿದೆ ಎಂದು ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ಬೆಂಗಳೂರು ವೈರ್ ಗೆ ಮಾಹಿತಿ ನೀಡಿದ್ದಾರೆ.
ಅಲ್ಲದೆ ಇಂದಿನಿಂದ ಜಾರಿಗೆ ಬರುವಂತೆ ಸುಸ್ತಿದಾರರು ಕಟ್ಟುವ ಆಸ್ತಿ ತೆರಿಗೆ ದರವು ಬಡ್ಡಿ ಮತ್ತು ದಂಡದೊಂದಿಗೆ ದುಪ್ಪಟ್ಟಾಗಲಿದೆ. ಉದಾಹರಣೆಗೆ ಒಟಿಎಸ್ ಯೋಜನೆಯಲ್ಲಿ 25,000 ರೂ. ಪರಿಷ್ಕೃತ ತೆರಿಗೆ, ಬಡ್ಡಿ ದರವಿಲ್ಲದೆ ಪ್ರತಿ ವರ್ಷಕ್ಕೆ ಕೇವಲ 100 ರೂ. ದಂಡ ಸೇರಿ ಕೇವಲ 25,100 ರೂ. ತೆರಿಗೆ ಕಟ್ಟಿದರೆ ಸಾಕಿತ್ತು. ಆದರೆ ಡಿ.1ರಿಂದ ಇದೇ 25,000 ರೂ. ಪರಿಷ್ಕೃತ ತೆರಿಗೆ ಜೊತೆಗೆ 13,000 ರೂ. ಬಡ್ಡಿ ಹಾಗೂ ಪರಿಷ್ಕೃತ ತೆರಿಗೆ ಮೊತ್ತದಷ್ಟೇ 25,000 ರೂ. ಸೇರಿ ಒಟ್ಟಾರೆ 63,500 ರೂ.ಗಳನ್ನು ಸುಸ್ತಿದಾರ ಆಸ್ತಿ ಮಾಲೀಕರು ಕಟ್ಟಬೇಕಿದೆ.
ಏನಿದು ಒಟಿಎಸ್ ಯೋಜನೆ? :
ಒಂದು ಬಾರಿ ಪರಿಹಾರ (One Time Settlement – OTS) ಸುಸ್ತಿದಾರರ ಅನುಕೂಲಕ್ಕಾಗಿ ಒಟಿಎಸ್ (ಒನ್ ಟೈಮ್ ಸೆಟ್ಲ್ ಮೆಂಟ್) ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾಗಿತ್ತು. ಈ ಮೂಲಕ ತೆರಿಗೆದಾರರಿಗೆ ಬಾಕಿ ಮೇಲಿನ ಬಡ್ಡಿ ಚಕ್ರಬಡ್ಡಿ ಮತ್ತು ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವ ಯೋಜನೆ ಇದಾಗಿತ್ತು. ನಂತರ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿತ್ತು. ಮೊದಲು ಸೆಪ್ಟಂಬರ್ 30 ಮತ್ತು ನಂತರ ನವಂಬರ್ 30 ರವೆಗೆ ಗಡುವು ವಿಸ್ತರಿಸಲಾಗಿತ್ತು. ಇನ್ನು ಮುಂದೆ ಒಟಿಎಸ್ ಯೋಜನೆ ಅವಕಾಶ ಸುಸ್ತಿದಾರರಿಗಿಲ್ಲವಾಗಿದೆ.
ಅಪಾರ್ಟ್ ಮೆಂಟ್ ನಿವಾಸಿಗಳ ಹೆಸರಿಗೆ ಖಾತೆಯಾಗುತ್ತಿಲ್ಲ ಯಾಕೆ? :
ಬೆಂಗಳೂರಿನಲ್ಲಿ ಪ್ರತಿ ವರ್ಷ ನೂರಾರು ಅಪಾರ್ಟ್ ಮೆಂಟ್ ಗಳು ಪೂರ್ಣವಾಗುತ್ತವೆ. ಅವುಗಳನ್ನು ಡೆವಲಪ್ ಮಾಡಿದ ಡೆವಲಪರ್ ಗಳು ಎಷ್ಟೋ ಅಪಾರ್ಟ್ ಮೆಂಟ್ ಯೂನಿಟ್ ಅಥವಾ ಫ್ಲಾಟ್ ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದರೂ, ಸಾವಿರಾರು ಪ್ರಕರಣಗಳಲ್ಲಿ ಇನ್ನೂ ಕೂಡ ವಿದ್ಯುತ್ ಬಿಲ್ ಹಾಗೂ ಪಾಲಿಕೆ ಖಾತೆಗಳನ್ನು ಫ್ಲಾಟ್ ಖರೀದಿಸಿದ ಗ್ರಾಹಕರಿಗೆ ವರ್ಗಾವಣೆ ಮಾಡದೆ ಡೆವಲಪರ್ ಗಳು ಅಥವಾ ಆ ಭೂಮಿಯ ಮೂಲ ಮಾಲೀಕರ ಹೆಸರಲ್ಲೇ ಇರುತ್ತಿದೆ. ಹೀಗಾಗಿ ಫ್ಲಾಟ್ ಖರೀದಿಸಿದವರ ಹೆಸರಿಗೆ ಖಾತಾ ವರ್ಗಾವಣೆಯಾದರೆ ವರ್ಷಂಪ್ರತಿ ಬಿಬಿಎಂಪಿಗೆ ಆಸ್ತಿ ತೆರಿಗೆ ರೂಪದಲ್ಲಿ ವರ್ಷಪ್ರತಿ ಕೋಟ್ಯಾಂತರ ರೂಪಾಯಿ ಹಣ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಅಪಾರ್ಟ್ ಮೆಂಟ್ ಡೆವಲಪರ್ ಗಳು ಮತ್ತು ಪಾಲಿಕೆ ಕಂದಾಯ ಸಿಬ್ಬಂದಿ, ಅಧಿಕಾರಿಗಳ ಒಳ ಒಪ್ಪಂದದಿಂದಾಗಿ ನೂತನ ಖರೀದಿದಾರರ ಹೆಸರಿಗೆ ಮಾರಾಟವಾಗಿ ಹಲವು ವರ್ಷಗಳಾದರೂ ಪಾಲಿಕೆ ಖಾತೆ ದಾಖಲೆಗಳಲ್ಲಿ ಕಂಡು ಬರುವುದೇ ಇಲ್ಲ. ಇದರಿಂದ ಪಾಲಿಕೆಗೆ ನೂರಾರು ಕೋಟಿ ರೂ. ಆಸ್ತಿ ತೆರಿಗೆ ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಕಂದಾಯ ವಿಶೇಷ ಆಯುಕ್ತರು ಸೂಕ್ತ ಕ್ರಮ ವಹಿಸಬೇಕಿದೆ ಎಂದು ನಾಗರೀಕ ಸಂಘ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.