ಬೆಂಗಳೂರು, ನ.29 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ 4,500 ಮೆಟ್ರಿಕ್ ಟನ್ ಗೂ ಹೆಚ್ಚು ಘನತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಕಸ ವಿಲೇವಾರಿಗೆ ಎಲ್ಲಾ ವರ್ಗಗಳ ಮನೆಗಳಿಂದ ಪ್ರತಿ ತಿಂಗಳು 200 ರೂ. ಸ್ಥಿರ ಬಳಕೆದಾರರ ಶುಲ್ಕ ವಿಧಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಅದನ್ನು ಈಗ ಮಾರ್ಪಡಿಸಿ ಆಯಾ ಕಟ್ಟಡಗಳ ವಿಸ್ತೀರ್ಣದ ಆಧಾರದ ಮೇಲೆ ಬಳಕೆದಾರರ ಶುಲ್ಕ ವಿಧಿಸುವ ಪರಿಷ್ಕೃತ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಈ ಮಧ್ಯೆ ಬೃಹತ್ ತ್ಯಾಜ್ಯ ಉತ್ಪಾದಕರ ಹೆಸರಿನಲ್ಲಿ ಅಪಾರ್ಟ್ ಮೆಂಟ್ ಗಳಿಗೆ ಅಫಿಡೆವಿಟ್ ಸಲ್ಲಿಸಿ, ದುಬಾರಿ ಶುಲ್ಕ ಕಟ್ಟುವಂತೆ ನೀಡಿರುವ ನೋಟಿಸ್ ಬಗ್ಗೆ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಗಳು, ಹೋಟೆಲ್ ಅಸೋಸಿಯೇಷನ್ ಗಳು ವಿರೋಧ ವ್ಯಕ್ತಪಡಿಸಿದೆ.
ಈ ಹಿಂದೆ ಬಿಎಸ್ ಡಬ್ಲ್ಯುಎಂಎಲ್ 11ನೇ ನಿರ್ದೇಶಕರ ಮಂಡಳಿ ಸಭೆಯ ನಿರ್ಣಯದಂತೆ ಎಲ್ಲಾ ವರ್ಗದ ಗೃಹ ಬಳಕೆ ತ್ಯಾಜ್ಯ ಉತ್ಪಾದಕರಿಂದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 200 ರೂ.ನಂತೆ ಸ್ಥಿರ ಬಳಕೆದಾರರ ಶುಲ್ಕವನ್ನು ವಿಧಿಸಲು ಸರ್ಕಾರಕ್ಕೆ ಸಂಸ್ಥೆಯು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ 12.09-2024 ರಂದು ನಡೆದ 17ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಗೃಹ ಬಳಕೆದಾರರಿಂದ ಆಯಾ ಕಟ್ಟಡದ ವಿಸ್ತೀರ್ಣದ ಆಧಾರದ ಮೇಲೆ ಶುಲ್ಕ ವಿಧಿಸಲು ಅಕ್ಟೋಬರ್ 25ರಂದು ನಗರಾಭಿವೃದ್ಧಿ ಇಲಾಖೆಗೆ ಘನತ್ಯಾಜ್ಯ ನಿರ್ವಹಣಾ ಕಂಪನಿಯು ಪ್ರಸ್ತಾವನೆ ಸಲ್ಲಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ವಾರ್ಷಿಕ 1200 ಕೋಟಿ ವ್ಯಯವಾಗುತ್ತಿದೆ. ಆದರೆ ಘನತ್ಯಾಜ್ಯ ಸೆಸ್ ನಿಂದ ಕಸ ವಿಲೇವಾರಿಗೆ ತಗಲುತ್ತಿರುವ ವೆಚ್ಚದ ಪೈಕಿ ಶೇ.5 ರಿಂದ 15ರಷ್ಟು ಮಾತ್ರ ಸಂಗ್ರಹವಾಗುತ್ತಿದೆ. ಇನ್ನುಳಿದ ವೆಚ್ಚವನ್ನು ಪಾಲಿಕೆ ತನ್ನ ಸ್ವಂತ ಸಂಪನ್ಮೂಲದಿಂದ ಭರಿಸುತ್ತಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಿದೆ.
ಗೃಹ ಬಳಕೆ ಬಳಕೆದಾರರ ಶುಲ್ಕ ನಿಗದಿ ಹೀಗಿದೆ :

ಈ ಪ್ರಸ್ತಾವನೆಯಲ್ಲಿರುವಂತೆ 600 ಚದರ ಅಡಿವರೆಗಿನ ಗೃಹ ಬಳಕೆ ಕಟ್ಟಡಗಳಿಗೆ ತಿಂಗಳಿಗೆ 20ರೂ (ವರ್ಷಕ್ಕೆ 240 ರೂ.), 600 ಚದರಡಿಯಿಂದ 1000 ಚದರಡಿಗೆ 50 ರೂ. (ವರ್ಷಕ್ಕೆ 600 ರೂ.), 1000 ಚದರಡಿಯಿಂದ 2000 ಚದರಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 100 ರೂ. (ವರ್ಷಕ್ಕೆ 1200 ರೂ.), 2000 ದಿಂದ 3000 ಚದರಡಿ ಒಳಗಿನ ಕಟ್ಟಡಗಳಿಗೆ 200 ರೂ. ( ವರ್ಷಕ್ಕೆ 2,400 ರೂ.), 3000 ದಿಂದ 4000 ಚದರಡಿ ವಿಸ್ತೀರ್ಣದ ಕಟ್ಟಡಗಳಿಗೆ ಮಾಸಿಕ 300 (ವಾರ್ಷಿಕ 3,600 ರೂ.) ಹಾಗೂ 4,000 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ತಿಂಗಳಿಗೆ 400 ರೂ. (ವಾರ್ಷಿಕ 4,800 ರೂ.) ಬಳಕೆದಾರರ ಶುಲ್ಕ ವಿಧಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈ ಶುಲ್ಕವು ಸರ್ಕಾರ ಅಥವಾ ಬಿಬಿಎಂಪಿ ಅಧಿಸೂಚಿತ ಮತ್ತು ಅನಧಿಸೂಚಿತ ಕೊಳಚೆ ಪ್ರದೇಶಗಳಿಗೆ ಅನ್ವಯವಾಗಲ್ಲ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.

2,280 ಬೃಹತ್ ತ್ಯಾಜ್ಯ ಉತ್ಪಾದಕರಿಗೆ ನೋಟಿಸ್ :
ಈ ಮಧ್ಯೆ ಬೆಂಗಳೂರಿನಲ್ಲಿನ ಬೃಹತ್ ತ್ಯಾಜ್ಯ ಉತ್ಪಾದಿಸುವ (ಪ್ರತಿ ದಿನ 100 ಕೆಜಿಗಿಂತ ಹೆಚ್ಚಿನ ತ್ಯಾಜ್ಯ ಉತ್ಪಾದಿಸುವವರು ಅಥವಾ 50,000 ಚದರ ಅಡಿ ವಿಸ್ತೀರ್ಣದ ಅಥವಾ 100 ಯೂನಿಟ್ ಗಿಂತ ಹೆಚ್ಚಿನ ಕಟ್ಟಡಗಳಿಗೆ) ಅಪಾರ್ಟ್ ಮೆಂಟ್ ಗಳು, ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣ ಮತ್ತಿತರ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯು ನೋಟಿಸ್ ಜಾರಿ ಮಾಡುತ್ತಿದೆ. ಬೃಹತ್ ತ್ಯಾಜ್ಯ ಉತ್ಪಾದಕರು ಪಾಲಿಕೆ ಸೇವೆ ಬಳಸಿಕೊಳ್ಳದೆ, ಸ್ವಯಂ ಗೊಬ್ಬರ ತಯಾರಿಕೆ ಅಥವಾ ನೋಂದಾಯಿತರಲ್ಲದ ತ್ಯಾಜ್ಯ ಸಂಸ್ಕರಣೆದಾರರ ಮುಖೇನ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಗ್ಗೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ ಅಫಿಡೆವಿಟ್ ಹಾಗೂ ಇದೇ 2024ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಬಳಕೆದಾರರ ಶುಲ್ಕವನ್ನು ಬಿಬಿಎಂಪಿಗೆ ನೀಡುವಂತೆ ನೋಟಿಸ್ ನೀಡಲಾಗುತ್ತಿದೆ.

ಸ್ವಯಂ ರೀತಿಯಲ್ಲಿ ಗೊಬ್ಬರ ತಯಾರಿಸುವ ವ್ಯವಸ್ಥೆ ಹೊಂದಿದವರಿಗೆ ಪ್ರತಿ ಕೆಜಿಗೆ ಪ್ರತಿ ತಿಂಗಳು 3 ರೂ. ಬಳಕೆದಾರರ ಶುಲ್ಕ ಹಾಗೂ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಸೇವೆ ಬಳಸಿಕೊಳ್ಳದೆ, ನೋಂದಾಯಿತ ತ್ಯಾಜ್ಯ ಸಂಸ್ಕರಣೆದಾರರ ಮುಖೇನ ಅಥವಾ ಸ್ವಯಂ ರೀತಿಯಲ್ಲಿ ಘನತ್ಯಾಜ್ಯ ಸಂಸ್ಕರಣೆ ವ್ಯವಸ್ಥೆ ಅಳವಡಿಸಿಕೊಳ್ಳದ ಬಲ್ಕ್ ಕಸದ ಉತ್ಪಾದಕರಿಗೆ ಬಿಎಸ್ ಡಬ್ಲ್ಯುಎಂಎಲ್ ತಾನೇ ತ್ಯಾಜ್ಯ ಸಂಗ್ರಹಣೆ, ಸಾಗಣೆ ಹಾಗೂ ನಿರ್ವಹಣೆ ಮಾಡಲು ಪ್ರತಿ ಕೆಜಿಗೆ 12 ರೂ. ನಂತೆ ಬಳಕೆದಾರರ ಶುಲ್ಕವನ್ನು ಕಂಪನಿಯು ದರ ನಿಗದಿಪಡಿಸಿದೆ. ನವೆಂಬರ್ 28ರಂತೆ ಬಿಬಿಎಂಪಿ 8 ವಲಯಗಳಲ್ಲಿ ಈತನಕ 2,528 ಬೃಹತ್ ತ್ಯಾಜ್ಯ ಉತ್ಪಾದಕರನ್ನು ಬಿಎಂಡಬ್ಲ್ಯುಎಂಎಲ್ ಗುರ್ತಿಸಿದೆ. ಆ ಪೈಕಿ 2,280 ಮಂದಿಗೆ ನೋಟಿಸ್ ನೀಡಿದ್ದು, ಅದರಲ್ಲಿ 56 ಮಂದಿ ತ್ಯಾಜ್ಯ ಉತ್ಪಾದಕರು ಕಂಪನಿಗೆ ಅಫಿಡೆವಿಟ್ ಸಲ್ಲಿಕೆ ಮಾಡಿದ್ದಾರೆ. ಇದರಿಂದಾಗಿ ಸಂಸ್ಥೆಗೆ 4.57 ಲಕ್ಷ ರೂ. ಹಣ ಸಂಗ್ರಹವಾಗಿದೆ.
ತೂಕದ ಬದಲಿಗೆ ಪ್ರತಿ ಫ್ಲಾಟ್ ಗೆ ಶುಲ್ಕ ವಿಧಿಸಿ :
ಬಿಎಸ್ ಡಬ್ಲ್ಯುಎಂಎಲ್ ಬೃಹತ್ ತ್ಯಾಜ್ಯ ಉತ್ಪಾದಕರಿಂದ ದತ್ತಾಂಶ ಸಂಗ್ರಹಣೆಯ ಹಿಂದಿನ ಉದ್ದೇಶ ಒಳ್ಳೆಯದೇ ಆಗಿರಬಹುದು, ಆದಾಗ್ಯೂ, ಅಫಿಡವಿಟ್ ಸಲ್ಲಿಸುವುದನ್ನು ಕಡ್ಡಾಯಗೊಳಿಸುವುದು ಸೂಕ್ತ ವಿಧಾನವಲ್ಲ. ನೋಟಿಸ್ ನಲ್ಲಿ ಉಲ್ಲೇಖಿಸಿದ ಬಳಕೆದಾರರ ಶುಲ್ಕಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಅವರು ಆ ಶುಲ್ಕ ನಿಗದಿ ಹೇಗೆ ಮಾಡಿದರು ಎಂಬುದರ ಕುರಿತು ಸ್ಪಷ್ಟವಾಗಿಲ್ಲ. ಅದೂ ಅಲ್ಲದೆ ವಿಶೇಷವಾಗಿ ನೋಂದಾಯಿತ ತ್ಯಾಜ್ಯ ವಿಲೇವಾರಿ ಸಂಸ್ಥೆ/ಭಾಗೀದಾರರ ಅನುಪಸ್ಥಿತಿಯಲ್ಲಿ ತಾರ್ಕಿಕತೆಯಿಲ್ಲದೆ ದರ ನಿಗದಿಪಡಿಸಲಾಗಿದೆ. ತ್ಯಾಜ್ಯ ತೂಕದ ಪರಿಕಲ್ಪನೆಯು ವಾಣಿಜ್ಯ ಸಂಸ್ಥೆಗಳಿಗೆ ಮಾತ್ರ ಸೂಕ್ತವಾಗಿರುವುದರಿಂದ, ತೂಕದ ಬದಲಿಗೆ, ಅಪಾರ್ಟ್ಮೆಂಟ್ ಗಳಲ್ಲಿ ಫ್ಲಾಟ್/ಯುನಿಟ್ ಗೆ ಶುಲ್ಕಗಳನ್ನು ಅನ್ವಯಿಸಬೇಕು.
– ವಿಷ್ಣು ಗಟ್ಟಪಲ್ಲಿ, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್
ಬೃಹತ್ ಕಸದ ಉತ್ಪಾದಕರಿಗೆ ವಿಧಿಸಿದ ಶುಲ್ಕ ಅವೈಜ್ಞಾನಿಕ ಮತ್ತು ಏಕಪಕ್ಷೀಯ :
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯವರು ಬಲ್ಕ್ ವೇಸ್ಟ್ ಜನರೇಟರ್ ಎಂಬ ವ್ಯಾಖ್ಯಾನವನ್ನು ಸೂಕ್ತವಾಗಿ ನೀಡಿಲ್ಲ. ಉದಾಹರಣೆಗೆ ವಾರದ ದಿನಗಳಲ್ಲಿ ಪ್ರತಿ ದಿನ 100 ಕೆಜಿ ತ್ಯಾಜ್ಯ ಉತ್ಪಾದಿಸದೆ, ಕೇವಲ ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ತ್ಯಾಜ್ಯ 100 ಕೆಜಿ ತ್ಯಾಜ್ಯ ಉತ್ಪಾದನೆಯಾದರೆ ಪಾಲಿಕೆ ಹೇಗೆ ಅವರನ್ನು ಬಲ್ಕ್ ಜನರೇಟರ್ ಅಂತ ನಿರ್ಧರಿಸುತ್ತೆ? ತಿಂಗಳಲ್ಲಿ ಪ್ರತಿ ದಿನ ಸರಾಸರಿ 100 ಕೆಜಿ ಹಾಗೂ ಅದಕ್ಕಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವವರನ್ನು ಬಲ್ಕ್ ಜನರೇಟರ್ ಎಂಬುದಾಗಿ ನಿರ್ಧರಿಸಲಾಗಿದ್ಯಾ? ಕಸ ಉತ್ಪಾದಿಸುವುದರ ಬಗ್ಗೆ ಮೇಲ್ನೋಟಕ್ಕೆ ಲೆಕ್ಕಾಚಾರ ಹಾಕಲಾಗದು ಎನ್ನುತ್ತಾರೆ ಬೆಂಗಳೂರು ಹೋಟೆಲ್ ಸಂಘದ ಸದಸ್ಯರೊಬ್ಬರು.
ಶುಲ್ಕ ಸಂಗ್ರಹಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ- ಕಿರುಕುಳ ಹೆಚ್ಚುವ ಸಾಧ್ಯತೆ :
ಬಿಎಸ್ ಡಬ್ಲ್ಯುಎಂಎಲ್ ಹೇಗೆ ಪ್ರಾಪರ್ಟಿ ಟ್ಯಾಕ್ಸ್ ಲೆಕ್ಕಾಚಾರದಲ್ಲಿ ಸೂಕ್ತ ಮಾನದಂಡ ಇದೆಯೋ ಅದೇ ರೀತಿ, ಇಲ್ಲೂ ಕೂಡ ಸೂಕ್ತ ಅಳತೆಗೋಲು ಅಥವಾ ಮಾನದಂಡವಿರಬೇಕು. ಬಲ್ಕ್ ಜನರೇಟರ್ ಗೆ ಪ್ರತಿ ಕೆಜಿಗೆ 12 ರೂ. ದರ ನಿರ್ಧಾರ ಅವೈಜ್ಞಾನಿಕವಾಗಿದೆ. ಈ ಬಗ್ಗೆ ದರ ನಿರ್ಧಾರಕ್ಕೂ ಮುನ್ನ ಸಾರ್ವಜನಿಕ ಪ್ರಕಟಣೆ ನೀಡಿದ್ದಾಗಿ ಪಾಲಿಕೆ ಬಲ್ಕ್ ಜನರೇಟರ್ಸ್ ಗೆ ನೀಡಿರುವ ನೋಟಿಸ್ ನಲ್ಲಿ ತಿಳಿಸಿದೆ. ದರ ನಿರ್ಧರಿಸುವಾಗ ಭಾಗಿದಾರರನ್ನು ಗಣನೆಗೆ ತೆಗೆದುಕೊಳ್ಳದೇ ಪಾಲಿಕೆ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಏರಿದರೆ ಬಿಬಿಎಂಪಿಗೆ ಸೋಲಾಗಲಿದೆ. ಬೃಹತ್ ತ್ಯಾಜ್ಯ ಉತ್ಪಾದಕರ ಎಂಬುದಕ್ಕೆ ಸೂಕ್ತ ವ್ಯಾಖ್ಯಾನ, ವೈಜ್ಞಾನಿಕ ದರ ನಿಗದಿಯಾಗದಿದ್ರೆ ಇದು ದೊಡ್ಡ ಮಟ್ಟದ ವ್ಯಾಪಕ ಭ್ರಷ್ಟಾಚಾರ, ಶುಲ್ಕ ಕಟ್ಟುವವರಿಗೆ ಕಿರುಕುಳ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಬೆಂಗಳೂರು ವೈರ್ ಬಳಿ ಕಳವಳ ವ್ಯಕ್ತಪಡಿಸಿದ್ದಾರೆ.
ದುಬಾರಿ ಶುಲ್ಕದ ಅನ್ಯಾಯವನ್ನು ಸರಿಪಡಿಸಲು ಆಗ್ರಹ :
“ಅಪಾರ್ಟ್ ಮೆಂಟ್ ಗಳಿಂದ ಈತನಕ ಖಾಸಗಿ ತ್ಯಾಜ್ಯ ವಿಲೇವಾರಿ ಸಂಸ್ಥೆಗಳು ಅತಿ ಕಡಿಮೆ ದರದಲ್ಲಿ ಕಸ ತೆಗೆದುಕೊಂಡು ಹೋಗುತ್ತಿದ್ದವು. ಇದೀಗ ಬಿಬಿಎಂಪಿ ಮತ್ತು ಬಿಎಸ್ ಡಬ್ಲ್ಯುಎಂಎಲ್ ಕಂಪನಿಯು ಬೃಹತ್ ತ್ಯಾಜ್ಯ ಉತ್ಪಾದಕರೆಂದು, ಬಳಕೆದಾರರ ಶುಲ್ಕ ಸಂಗ್ರಹದ ಹೆಸರಿನಲ್ಲಿ ಅಪಾರ್ಟ್ ಮೆಂಟ್ ಗಳಿಗೆ ನೋಟಿಸ್ ನೀಡುತ್ತಿದೆ. ಈ ಶುಲ್ಕ ಸಂಗ್ರಹದಿಂದಾಗಿ ಸಣ್ಣಪುಟ್ಟ ಅಪಾರ್ಟ್ ಮೆಂಟ್ ನಿವಾಸಿಗಳು ಹೆಚ್ಚಿನ ಶುಲ್ಕ ಭರಿಸಬೇಕಾದ ಅನಿವಾರ್ಯತೆ ಬಂದಿರುವುದು ದುರದೃಷ್ಟಕರ. ಉದಾಹರಣೆಗೆ ಪ್ರತಿ ತಿಂಗಳಿಗೆ 15 ರಿಂದ 20 ಸಾವಿರ ರೂ. ನೀಡುವ ಜಾಗದಲ್ಲಿ 80,000 ರೂ. ನಿಂದ 1 ಲಕ್ಷ ರೂ. ತನಕ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಒದಗಿಬಂದಿದೆ. ಈ ಅನ್ಯಾಯವನ್ನು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸರಿಪಡಿಸಲು ಆಗ್ರಹಿಸುತ್ತೇವೆ.”
– ಎಂ.ಎಸ್.ಹರೀಶ್, ಕಾರ್ಯದರ್ಶಿ, ಜಾಲಹಳ್ಳಿ ಕ್ರಾಸ್ ಬಳಿಯ ಅಪಾರ್ಟ್ ಮೆಂಟ್
ವಾಣಿಜ್ಯ ಮತ್ತು ಸಾಂಸ್ಥಿಕ ತ್ಯಾಜ್ಯ ಉತ್ಪಾದಕರಿಗೆ ತಿಂಗಳಿಗೆ ಗರಿಷ್ಠ 14 ಸಾವಿರ ಶುಲ್ಕ :

ಬೆಂಗಳೂರು ನಗರದಲ್ಲಿ ಇಷ್ಟು ದಿನ ಉತ್ಪತ್ತಿಯಾಗುವ ವಾಣಿಜ್ಯ ಕಸವನ್ನು ಪಾಲಿಕೆಯಿಂದ ನೋಂದಾಯಿತ ವಾಣಿಜ್ಯ ತ್ಯಾಜ್ಯ ವಿಲೇವಾರಿ ಸಂಸ್ಥೆ ಹಾಗೂ ಅನಧಿಕೃತ ತ್ಯಾಜ್ಯ ಸಂಗ್ರಹಣೆದಾರರು ಸಹ ಪಾಲಿಕೆ ಭ್ರಷ್ಟ ಅಧಿಕಾರಿಗಳ ಜೊತೆ ಶಾಮೀಲಾಗಿ ಕಸವನ್ನು ನಿಗಧಿತ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳಿಗೆ ಸಾಗಿಸದೆ, ಅಂತಿಮವಾಗಿ ಅದು ಬಿಬಿಎಂಪಿ ಸಾಗಿಸುವ ತ್ಯಾಜ್ಯ ವಾಹನಗಳಲ್ಲಿ ಮಿಶ್ರ ಕಸದ ಜೊತೆ ಸೇರ್ಪಡೆಯಾಗುತ್ತಿತ್ತು. ಇದರಿಂದಾಗಿ ಪಾಲಿಕೆ ನಗರದ ತ್ಯಾಜ್ಯ ನಿರ್ವಹಣೆ ವೆಚ್ಚ ಹೆಚ್ಚಾಗಿ ಸೂಕ್ತ ರೀತಿ ತ್ಯಾಜ್ಯ ವಿಲೇವಾರಿಯಾಗುತ್ತಿರಲಿಲ್ಲ. ವಾಣಿಜ್ಯ ತ್ಯಾಜ್ಯ ಉತ್ಪಾದಕರು ನೀಡುತ್ತಿದ್ದ ಶುಲ್ಕವೂ ಪಾಲಿಕೆಯಿಂದ ಕೈತಪ್ಪುತ್ತಿತ್ತು. ಇದನ್ನು ತಪ್ಪಿಸಲು ಇನ್ನು ಮುಂದೆ ವಾಣಿಜ್ಯ ಮತ್ತು ಸಾಂಸ್ಥಿಕ ತ್ಯಾಜ್ಯ ಉತ್ಪಾದಕರು ನೇರವಾಗಿ ಬಿಎಸ್ ಡಬ್ಲ್ಯುಎಂಎಲ್ ಸಂಸ್ಥೆಗೆ ತಮ್ಮ ವಿದ್ಯುತ್ ಮೀಟರ್ ಸಂಖ್ಯೆ ಜೊತೆ ಸಂಯೋಜಿಸಿ ತ್ಯಾಜ್ಯ ಪ್ರಮಾಣದ ಮಾಹಿತಿಯನ್ನು ಅಫಿಡೆವಿಟ್ ನೀಡಿ, ಕಂಪನಿಗೇ ನೇರವಾಗಿ ಶುಲ್ಕವನ್ನು ಪಾವತಿಸುವ ಹೊಸ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗಲಿದೆ.
ಲಕ್ಷಾಂತರ ವಾಣಿಜ್ಯ ಉತ್ಪಾದಕರಿರುವ ಬೆಂಗಳೂರಿನಲ್ಲಿ ಸಾವಿರಾರು ಹೋಟೆಲ್ ಗಳು, ಸ್ಕೂಲ್, ಕಾಲೇಜು, ಕಲ್ಯಾಣ ಮಂಟಪ, ಪಾರ್ಟಿ ಹಾಲ್ ನಂತಹ ವಾಣಿಜ್ಯ ಮತ್ತು ಇನ್ನಿತರ ಸಂಸ್ಥೆಗಳಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯು ಪ್ರತಿ ದಿನ 5 ಕೆಜಿಯಿಂದ 100 ಕೆಜಿ ವರೆಗೆ ತ್ಯಾಜ್ಯ ಉತ್ಪಾದಿಸುವವರಿಗೆ ತಿಂಗಳಿಗೆ 500 ರೂ. ನಿಂದ 14,000 ರೂ. ಶುಲ್ಕ ವಿಧಿಸಲು ಬಿಎಸ್ ಡಬ್ಲ್ಯುಎಂಎಲ್ ಪ್ರಸ್ತಾವನೆಯಲ್ಲಿ ತಿಳಿಸಿದೆ. ಇನ್ನು ಖಾಲಿ ನಿವೇಶನಗಳಿಗೆ ಪ್ರತಿ ತಿಂಗಳಿಗೆ ಪ್ರತಿ ಚದರಡಿಗೆ 20 ಪೈಸೆಯಷ್ಟು ಶುಲ್ಕವನ್ನು ವಿಧಿಸಿದೆ.
ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಪ್ರತಿ ಕೆಜಿಗೆ ವಿಧಿಸುವ 12 ರೂ. ಬಳಕೆದಾರರ ಶುಲ್ಕ 2025-26ನೇ ಸಾಲಿನಿಂದ ಜಾರಿಗೆ ಬರುವಂತೆ ಪ್ರತಿ ವರ್ಷ ಪ್ರತಿ ಕೆಜಿಗೆ 5 ರೂ. ಏರಿಕೆ ಮಾಡಲು ಹಾಗೂ ವಾಣಿಜ್ಯ ಮತ್ತು ಸಾಂಸ್ಥಿಕ ತ್ಯಾಜ್ಯ ಉತ್ಪಾದಕರಿಗೆ ಪ್ರತಿ ವರ್ಷ ಶೇ.5ರಷ್ಟು ಶುಲ್ಕ ಏರಿಕೆಗೂ ಕಂಪನಿಯು ಸರ್ಕಾರಕ್ಕೆ ಸಲ್ಲಿಸಿದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಕೋರಿದೆ.
ಸಣ್ಣ ಪುಟ್ಟ ದರ್ಶನಿ ಹೋಟೆಲ್ ಗಳಿಗೆ ಬಿಸಿ ತುಪ್ಪವಾಗಲಿದೆ ಶುಲ್ಕ :
ರಾಜಧಾನಿಯಲ್ಲಿ ಸಣ್ಣ ಹಾಗೂ ದರ್ಶಿನಿ ಹೋಟೆಲ್ ಗಳಲ್ಲಿ ಸರಾಸರಿಯಾಗಿ ಪ್ರತಿ ದಿನ 50-60 ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತವೆ. ಇವುಗಳೆಲ್ಲಾ ವಾಣಿಜ್ಯ ತ್ಯಾಜ್ಯ ಉತ್ಪಾದಕರ ವರ್ಗಕ್ಕೆ ಬರುತ್ತವೆ. ಇಲ್ಲೂ ಕೂಡ ಪಾಲಿಕೆಯು ಪ್ರತಿ ದಿನ 50 ಕೆಜಿಗಿಂತ ಮೇಲೆ ಹಾಗೂ 100 ಕೆಜಿಗಿಂತ ಒಳಗೆ ತ್ಯಾಜ್ಯ ಉತ್ಪಾದಿಸುವ ವರ್ಗಕ್ಕೆ ತಿಂಗಳಿಗೆ 14,000 ರೂ. ನಿಗದಿಪಡಿಸುತ್ತಿದ್ದು, ಸದ್ಯದಲ್ಲೇ ವಾಣಿಜ್ಯ ಮತ್ತು ಸಾಂಸ್ಥಿಕ ತ್ಯಾಜ್ಯ ಉತ್ಪಾದಕರಿಗೂ ನೋಟಿಸ್ ಜಾರಿ ಮಾಡಿ ಬಳಕೆದಾರರ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳುತ್ತಿದೆ. ಇದು ಸಣ್ಣ ಪುಟ್ಟ ಹೋಟೆಲ್ ನಡೆಸುತ್ತಿರುವವರಿಗೆ ಬಿಸಿ ತುಪ್ಪವಾಗುವ ಸಾಧ್ಯತೆಯಿದೆ. ಒಟ್ಟಾರೆ ಎಲ್ಲಾ ವರ್ಗದ ಬಳಕೆದಾರರ ಶುಲ್ಕ ಸಂಗ್ರಹದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಗೆ 500 ಕೋಟಿ ರೂ. ಹೆಚ್ಚು ಹಣ ಶುಲ್ಕ ರೂಪದಲ್ಲಿ ಲಭಿಸಲಿದೆ.
ಸದ್ಯದಲ್ಲೇ ವಾಣಿಜ್ಯ ಉತ್ಪಾದಕರಿಂದ ಶುಲ್ಕ ಸಂಗ್ರಹ ಆರಂಭ :

“ಬಿಬಿಎಂಪಿ ವ್ಯಾಪ್ತಿಯಲ್ಲಿ ಗೃಹ ಬಳಕೆ ತ್ಯಾಜ್ಯ ಉತ್ಪಾದಕರಿಗೆ 1ನೇ ಏಪ್ರಿಲ್ 2024ರಿಂದ ಜಾರಿಗೆ ಬರುವಂತೆ ಬಳಕೆದಾರರ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ ಕೂಡಲೇ ಆಸ್ತಿ ತೆರಿಗೆ ಜೊತೆಗೆ ಶುಲ್ಕ ಸಂಗ್ರಹಿಸಲಾಗುತ್ತದೆ. ಈಗಾಗಲೇ ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸುತ್ತಿರುವ ಘನತ್ಯಾಜ್ಯ ಸಂಗ್ರಹ ಸೆಸ್ ರಸ್ತೆ ಸ್ವಚ್ಛ ಮಾಡುವ ಪೌರಕಾರ್ಮಿಕ ಕಲ್ಯಾಣಕ್ಕೆ ಬಳಕೆಯಾಗುತ್ತಿದೆ. ಇದನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ನಗರದಲ್ಲಿರುವ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಗುರ್ತಿಸಿ, ಅವರುಗಳಿಗೆ ನೋಟಿಸ್ ನೀಡುವ ಕೆಲಸವಾಗುತ್ತಿದೆ. ಅನಧಿಕೃತ ತ್ಯಾಜ್ಯ ಸಂಗ್ರಹಿಸುವವರನ್ನು ದೂರವಿಟ್ಟು, ನಮ್ಮಿಂದಲೇ ಕಸ ಸಂಗ್ರಹಿಸಿ, ವಿಂಗಡಿಸಿ, ವಿಲೇವಾರಿ ಮಾಡಲು ಅವರನ್ನು ನಮ್ಮ ವ್ಯವಸ್ಥೆಗೆ ತರಲಾಗುತ್ತದೆ. ಸದ್ಯದಲ್ಲೇ ವಾಣಿಜ್ಯ ಮತ್ತು ಸಾಂಸ್ಥಿಕ ತ್ಯಾಜ್ಯ ಉತ್ಪಾದಕರನ್ನು ಬಿಎಸ್ ಡಬ್ಲ್ಯುಎಂಎಲ್ ವ್ಯಾಪ್ತಿಗೆ ತಂದು ಶುಲ್ಕ ಸಂಗ್ರಹಿಸಲಾಗುತ್ತದೆ.”
- ಬಸವರಾಜ ಕಬಾಡೆ, ಪ್ರಧಾನ ವ್ಯವಸ್ಥಾಪಕರು, ಬಿಎಸ್ ಡಬ್ಲ್ಯುಎಂಎಲ್