ಬೆಂಗಳೂರು, ನ.28 www.bengaluruwire.com : ಬಿಬಿಎಂಪಿಯು ಆಸ್ತಿ ಮಾಲೀಕರಿಗಾಗಿ ಜಾರಿಗೆ ತಂದ ಇ-ಖಾತಾ (E-Khata) ಆನ್ ಲೈನ್ ಅರ್ಜಿಗಳು ಸಕಾಲದಲ್ಲಿ ವಿಷಯ ನಿರ್ವಾಹಕರು ಹಾಗೂ ಸಹಾಯ ಕಂದಾಯ ಅಧಿಕಾರಿಗಳು ಸೂಕ್ತ ರೀತಿ ವಿಲೇವಾರಿ ಮಾಡದ ಕಾರಣ ಪಾಲಿಕೆ ಮುಖ್ಯ ಆಯುಕ್ತರು ಹಾಗೂ ರಾಜ್ಯ ಸರ್ಕಾರ ಪಾಲಿಕೆ ನೌಕರರ ಕಾರ್ಯನಿರ್ವಹಣೆ ಬಗ್ಗೆ ಗರಂ ಆಗಿದ್ದಾರೆ.
ಪಾಲಿಕೆಯ 8 ವಲಯಗಳಲ್ಲಿ ನ.27ರ ತನಕದ ಮಾಹಿತಿಯಂತೆ ಒಟ್ಟು 30,508 ಅರ್ಜಿಗಳು ಸ್ವೀಕೃತವಾಗಿದ್ದು, ಆ ಪೈಕಿ ಒಟ್ಟು 17,331 ಅರ್ಜಿಗಳು ಇನ್ನು ವಿಲೇವಾರಿಯಾಗಿಲ್ಲ. ಇದರಿಂದಾಗಿ ಕೇಸ್ ವರ್ಕರ್ ಮತ್ತು ಎಆರ್ ಒ ಲಾಗಿನ್‌ಗಳಲ್ಲಿ ಸಿಟಿಜನ್ ಇ-ಖಾತಾ ಅರ್ಜಿಗಳ ದೊಡ್ಡ ಬಾಕಿಯನ್ನು ಮುಖ್ಯ ಆಯುಕ್ತರು ಮತ್ತು ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ನ.27 ರಂದು ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿಗಳಿಗೆ, ವಿಷಯ ನಿರ್ವಾಹಕರಿಗೆ, ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಎಲ್ಲಾ ಕೇಸ್ ವರ್ಕರ್ ಗಳು ಹಾಗೂ ಎಆರ್ ಒ ಗಳಿಗೆ ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಗುರಿ ನಿಗದಿಪಡಿಸಿದ್ದಾರೆ.
ಎಲ್ಲಾ ಕೇಸ್ ವರ್ಕರ್‌ಗಳು ದಿನಕ್ಕೆ ಕನಿಷ್ಠ 10 ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಇ-ಖಾತಾಗಾಗಿ ಆನ್ ಲೈನ್ ನಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳು ಎಆರ್ ಒ ಕಚೇರಿಯಲ್ಲಿ ಎಲ್ಲಾ ಕೇಸ್ ವರ್ಕರ್‌ಗಳಿಗೆ ಗೋಚರಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ದಿನಕ್ಕೆ 10 ಪ್ರಕರಣಗಳನ್ನು ತೆಗೆದುಕೊಂಡು ವಿಲೇವಾರಿ ಮಾಡಬಹುದು. ಅದೇ ರೀತಿ ಎಆರ್ ಒಗಳು ದಿನಕ್ಕೆ ಕನಿಷ್ಠ 50 ಪ್ರಕರಣಗಳನ್ನು ವಿಲೇವಾರಿ ಮಾಡಬೇಕು ಏಕೆಂದರೆ ಕೇಸ್ ವರ್ಕರ್ಸ್ ಗರಿಷ್ಠ ಕೆಲಸ ಮಾಡುತ್ತಾರೆ.
ದಿನಕ್ಕೆ 10 ಪ್ರಕರಣಗಳನ್ನು ವಿಲೇವಾರಿ ಮಾಡಲು ವಿಫಲರಾದ ಎಆರ್‌ಒಗಳು ಮತ್ತು ಕೇಸ್ ವರ್ಕರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಗಂಭೀರ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇ-ಖಾತೆಗಾಗಿ ಬಿಬಿಎಂಪಿ ವಿವಿಧ ವಲಯ ಕಚೇರಿಗಳಲ್ಲಿ ಸ್ವೀಕರಿಸಿರುವ ಒಟ್ಟು 30,508 ಅರ್ಜಿಗಳ ಪೈಕಿ 8,288 ಅರ್ಜಿಗಳನ್ನು ಎಆರ್ ಒ ವಿಲೇವಾರಿ ಮಾಡಿದ್ದರೆ, 4,889 ಅರ್ಜಿಗಳು ಸ್ವಯಂಚಾಲಿತವಾಗಿ ಒಪ್ಪಿಗೆ ಪಡೆದುಕೊಂಡಿವೆ. ಕೇಸ್ ವರ್ಕರ್ ಗಳ ಬಳಿ 13,672 ಅರ್ಜಿಗಳು ಹಾಗೂ ಎಆರ್ ಒಗಳ ಬಳಿ 3,659 ಅಪ್ಲಿಕೇಶನ್ ಗಳು ಬಾಕಿ ಉಳಿದಿದೆ.
ಇ-ಖಾತಾ ಅರ್ಜಿಗಳು ಹೆಚ್ಚು ಬಾಕಿ ಉಳಿದಿರುವುದರಿಂದ ಹಾಗೂ ಆಸ್ತಿ ಮಾಲೀಕರ ಅನುಕೂಲಕ್ಕಾಗಿ ಪ್ರತಿ ವಲಯದ ಜಂಟಿ ಆಯುಕ್ತರು, ಕಂದಾಯ ಉಪ ಆಯುಕ್ತರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಪ್ರತಿ ಬುಧವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಂದಾಯ ಹಾಗೂ ಕುಂದುಕೊರತೆಗಳ ಅದಾಲತ್ ನಡೆಸಲು ತಮ್ಮ ಕಚೇರಿಯಲ್ಲಿ ಕ್ಯಾಂಪ್ ಮಾಡಿ, ಕಚೇರಿಯಲ್ಲಿ ಲಭ್ಯವಿದ್ದು, ಸಾರ್ವಜನಿಕರ ಕುಂದುಕೊರತೆ ಹಾಗೂ ಮನವಿಗಳನ್ನು ವಿಲೇವಾರಿ ಮಾಡಬೇಕು. ಈ ಕಾರ್ಯದ ಉಸ್ತುವಾರಿಯನ್ನು ಆಯಾ ವಲಯಗಳ ಆಯುಕ್ತರು ಹಾಗೂ ಜಂಟಿ ಆಯುಕ್ತರು ವಹಿಸಬೇಕು ಎಂದು ಕಂದಾಯ ವಿಶೇಷ ಆಯುಕ್ತರು ನ.26 ರಂದು ಕಚೇರಿ ಆದೇಶ ಹೊರಡಿಸಿದ್ದಾರೆ.