ಬೆಂಗಳೂರು, ನ.27 www.bengaluruwire.com : ಫೆಂಗಲ್ ಚಂಡಮಾರುತದ ಪರಿಣಾಮ ತಮಿಳುನಾಡು ಹಾಗೂ ಶ್ರೀಲಂಕಾದಲ್ಲಿ ಮಾತ್ರ ಇರಲಿದ್ದು, ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆಯಾಗುವುದಿಲ್ಲ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ನಿನ್ನೆ ಸಂಜೆ ಹಾಗೂ ರಾತ್ರಿ ವೇಳೆ ಬೆಂಗಳೂರು ನಗರದಲ್ಲಿ ತಂಡಿಯಿಂದ ಕೆಲಸ ಮುಗಿಸಿ ಮನೆಗೆ ತೆರಳುವವರಿಗೆ ಸಾಕಷ್ಟು ತೊಂದರೆಯಾಯಿತು. ಇಂದು ಮೋಡ ಕವಿದ ವಾತಾವರಣದಿಂದ ಅಲ್ಲಲ್ಲಿ ತುಂತುರು ಮಳೆ ಹಾಗೂ ಚಳಿಯಿದ್ದು ಸಂಜೆ ವೇಳೆಗೆ ಕನಿಷ್ಠ ತಾಪಮಾನ 18 ಡಿಗ್ರಿಯಿದ್ದು ಚಳಿಯ ಪ್ರಮಾಣ ಹೆಚ್ಚಿರಲಿದೆ. ಮಂಗಳವಾರದ ಕೊರೆಯುವ ಚಳಿಯ ಅನುಭವ ಇಂದು ಸಂಜೆಯೂ ಮುಂದುರವರೆಯುವ ನಿರೀಕ್ಷೆಯಿದೆ. ಬೆಳಗ್ಗೆ 23 ರಿಂದ 25 ಡಿಗ್ರಿ ತನಕ ಗರಿಷ್ಠ ಉಷ್ಣಾಂಶವಿದಲಿದೆ. ನಾಳೆಯಿಂದ ಬೆಳಗಿನ ಉಷ್ಣಾಂಶ ಹೆಚ್ಚಾಗುತ್ತೆ. ಸಂಜೆ ಹಾಗೂ ರಾತ್ರಿ ವೇಳೆ ಚಳಿಯ ಅನುಭವ ನಿನ್ನೆ ಮತ್ತು ಇಂದಿಗಿಂತ ಕಡಿಮೆಯಿರಲಿದೆ ಎಂದು ಅವರು ಹೇಳಿದ್ದಾರೆ.
ಫೆಂಗಲ್ ಸೈಕ್ಲೋನ್ ತಮಿಳುನಾಡಿಗೆ ಸಂಪೂರ್ಣವಾಗಿ ದೃಢೀಕರಿಸಲ್ಪಟ್ಟಿದೆ. ಎಲ್ಲಾ ಹವಾಮಾನ ಮಾದರಿಗಳ ಪ್ರಕಾರ ಚೆನ್ನೈ ಮತ್ತು ನಾಗಪಟ್ಟನಂ ನಡುವೆ ಮಳೆಯಾಗುತ್ತವೆ. ಈ ವ್ಯವಸ್ಥೆಯಿಂದ ಇತರ ರಾಜ್ಯಗಳೂ ಪ್ರಯೋಜನ ಪಡೆಯಲಿವೆ. ಚೆನ್ನೈ ನಾಗಪಟ್ಟನಂ ಕರಾವಳಿ ಪ್ರದೇಶಗಳಲ್ಲಿ ನವೆಂಬರ್ 29 ಅಥವಾ 30 ರವರೆಗೆ ಭಾರೀ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಇಂದು ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣಹವೆಯಿರುವ ಮುನ್ಸೂಚನೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ದ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆಯಂತೆ, ರಾಜ್ಯದ ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ನ.30 ಹಾಗೂ ಡಿ.1 ರಂದು ಅಲ್ಲಲ್ಲಿ ಗುಡುಗು ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಇನ್ನುಳಿದ ದಿನಗಳಲ್ಲಿ ಒಣಹವೆ ಇರುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಡಿ.1 ರಂದು ಗುಡುಗು ಮಿಂಚು ಹಾಗೂ ಜೋರಾದ ಗಾಳಿಯೊಂದಿಗೆ ಭಾರೀ ಮಳೆಯಾಗಲಿದ್ದು, ಇನ್ನುಳಿದ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.