ಬೆಂಗಳೂರು, ನ.12 www.bengaluruwire.com : ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ತೆರವುಗೊಳಿಸುವಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರು ವಿಭಿನ್ನವಾದ ಆದೇಶಗಳನ್ನು ಈ ಕೂಡಲೇ ಹಿಂಪಡೆದು 2020ರ ಸೆ.8ರಂದು (ವಿಷಯ ಸಂಖ್ಯೆ : 10(301) 2020-21) ಪಾಲಿಕೆ ಮಾಸಿಕ ಸಭೆಯಲ್ಲಿ ಕೈಗೊಂಡು ಸರ್ವಾನುಮತದ ನಿರ್ಣಯದಂತೆ ನಗರ ಯೋಜನೆಯ ವಿಭಾಗದಲ್ಲಿ ಅಧಿಕಾರ ಪ್ರತ್ಯಾಯೋಜನೆಗಳನ್ನು ಹೊರಡಿಸುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಕಟ್ಟಡಗಳ ನಕ್ಷೆ ಮಂಜೂರಾತಿಯನ್ನು ಯಾವ ಪ್ರಾಧಿಕಾರ ನೀಡುತ್ತದೆಯೋ ಆ ಪ್ರಾಧಿಕಾರವೇ ಕಟ್ಟಡ ನಿರ್ಮಾಣದ ಸಮಯದಲ್ಲಿ ಪರಿಶೀಲನೆ ಮಾಡಿ ವ್ಯತಿರಿಕ್ತ ನಿರ್ಮಾಣ ಕಂಡುಬಂದಲ್ಲಿ ಬೈಲಾಗಳಲ್ಲಿ ಇರುವಂತೆ ಕ್ರಮ ವಹಿಸುವ ಜವಾಬ್ದಾರಿ ನಿರ್ವಹಿಸತಕ್ಕದ್ದು ಎಂದು ಮುಖ್ಯ ಆಯುಕ್ತರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಉಚ್ಛ ನ್ಯಾಯಾಲಯ, ಮಾಹಿತಿ ಹಕ್ಕು ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯನ್ನು ಕಟ್ಟಡ ನಕ್ಷೆ ಮಂಜೂರಾತಿ ನೀಡಿರುವ ಪ್ರಾಧಿಕಾರವೇ ನಿರ್ವಹಿಸತಕ್ಕದ್ದು ಹಾಗೂ ಮಂಜೂರಾತಿ ನೀಡಿರುವ ಪ್ರಾಧಿಕಾರವನ್ನು ಹೊರತುಪಡಿಸಿ ಅನುಮೋದನೆ ನೀಡಿರದ ಇನ್ನೊಂದು ಪ್ರಾಧಿಕಾರಕ್ಕೆ ಅಧಿಕಾರ ಪ್ರತ್ಯಾಯೋಜಿಸತಕ್ಕದ್ದಲ್ಲ ಎಂಬುದಾಗಿ ಪಾಲಿಕೆಯ 2020ರ ಸೆ.8ರ ಮಾಸಿಕ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವಾಗಿದೆ.
ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಜನ ಪ್ರತಿನಿಧಿಗಳ ಅಧಿಕೃತ ಸಭೆಯಲ್ಲಿ ತೀರ್ಮಾನವಾದ ವಿಷಯವನ್ನು ಬದಿಗೆ ತಳ್ಳಿ ನಿಯಮಬಾಹಿರವಾದ ಪ್ರತ್ಯಾಯೋಜನೆ ನೀಡುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೌಕರರ ಹಿತಾಸಕ್ತಿಗೆ ವಿರುದ್ಧವಾದ ಆದೇಶವನ್ನು 2021ರ ನ.6 ರಂದು ಪಾಲಿಕೆ ಮುಖ್ಯ ಆಯುಕ್ತರು ವಲಯ ಆಯುಕ್ತರುಗಳ ಮೂಲಕ ನೀಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ನಗರ ಯೋಜನೆ ವಿಭಾಗದಲ್ಲಿ ಎರಡು ಪಟ್ಟು ಹೆಚ್ಚು ಅಧಿಕಾರಿಗಳ ನಿಯೋಜನೆ:
“ನಗರ ಯೋಜನೆ ಇಲಾಖೆ”ಯಲ್ಲಿ ಒಟ್ಟು ಅನುಮೋದಿತ ಹುದ್ದೆಗಳಿಗಿಂತ (Sanctioned Post) ಎರಡು ಪಟ್ಟು ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರ ಪೈಕಿ ಶೇ. 95 ರಷ್ಟು ಅಧಿಕಾರಿಗಳು ಎರವಲು ಸೇವೆ ಅಡಿಯಲ್ಲಿ ರಾಜ್ಯ ಸರ್ಕಾರದ ನಗರ ಯೋಜನೆ ಮತ್ತು ಪಿಡಬ್ಲ್ಯುಡಿ ಇಲಾಖೆಗಳಿಂದ ಬಂದವರೇ ಆಗಿದ್ದಾರೆ. ಈ ಎರವಲು ಸೇವೆ ಅಡಿಯಲ್ಲಿ ಬಿಬಿಎಂಪಿಗೆ ನಿಯೋಜನೆಯಾಗಿರುವವರ ಪೈಕಿ ಹತ್ತಾರು ಮಂದಿ ಕಾನೂನುಬಾಹಿರವಾಗಿ ಐದು ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ ಪಾಲಿಕೆಯಲ್ಲೇ ಉಳಿದುಕೊಂಡಿದ್ದಾರೆ. ಡೆನ್ಮಾರ್ಕ್ ಹುಲ್ಲುಗಾವಲಿನಂತೆ ಅಕ್ರಮ ಹಣ ಕಬಳಿಸಲು ವಿಪುಲವಾದ ಅವಕಾಶಗಳಿರುವುದರಿಂದ ಪಾಲಿಕೆಯ “ನಗರ ಯೋಜನೆ ಇಲಾಖೆ”ಗೆ ಸಚಿವರುಗಳಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿರುವ ಭ್ರಷ್ಟ ಹಿರಿಯರಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ನೀಡಿ ಬಿಬಿಎಂಪಿಗೆ ನಿಯೋಜನೆಗೊಳ್ಳುತ್ತಿದ್ದಾರೆ.
ಲಂಚದ ಮೇಲ್ಮಟ್ಟದ ಅಧಿಕಾರಿಗಳಿಗೆ- ಶಿಕ್ಷೆ ವಾರ್ಡ್ ಮಟ್ಟದ ಅಧಿಕಾರಿಗೆ :
ಇಂತಹ ಭ್ರಷ್ಟ ಎಂಜಿನಿಯರ್ ಗಳು, ಬೃಹತ್ ಕಟ್ಟಡಗಳ ನಕ್ಷೆ ಮಂಜೂರಾತಿಗೆ, ಸ್ವಾಧಿನಾನುಭವ ಪ್ರಮಾಣಪತ್ರ ( Occupancy Certificate) ಮತ್ತು ಪ್ರಾರಂಭಿಕ ಪ್ರಮಾಣಪತ್ರ (Commencement Certificate) ಗಳನ್ನು ನೀಡಲು ಪ್ರತೀ ಚದರ ಅಡಿಗೆ ನಿಯಮಬಾಹಿರವಾಗಿ ನಿಗದಿಯಾದ ಪ್ರಮಾಣದ ಹಣ ಮತ್ತು ಸಹಾಯಕ ಅಭಿಯಂತರರಿಂದ ಹಿಡಿದು ಎಡಿಟಿಪಿ (ADTP). ಜೆಡಿಟಿಪಿ ( JDTP) ಹಾಗೂ ನಗರ ಯೋಜನೆ ಹೆಚ್ಚುವರಿ ನಿರ್ದೇಶಕರು (Additional Director Town Planning) ವರೆಗಿನ ಅಧಿಕಾರಿಗಳಿಗೆಂದು ಪ್ರತ್ಯೇಕವಾಗಿ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ಎನ್.ಆರ್.ರಮೇಶ್ ಟೀಕಿಸಿದ್ದಾರೆ.
ನಗರ ಯೋಜನೆ ವಿಭಾಗದ ಮೇಲ್ಮಟ್ಟದ ಅಧಿಕಾರಿಗಳು ಲಂಚ ಪಡೆದು, ಯಾವುದೇ ನಿಯಮಗಳನ್ನು ಪಾಲಿಸದೆಯೇ ನಕ್ಷೆ ಮಂಜೂರಾತಿ ನೀಡುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ನೋಟಿಸ್ ಗಳನ್ನು ನೀಡುವ, ಆರ್ ಟಿಐ ಅರ್ಜಿಗಳಿಗೆ ಉತ್ತರಿಸುವುದು, ಆರ್ ಟಿಐ ನ್ಯಾಯಾಲಯದಲ್ಲಿ ಸಾವಿರಾರು ರೂಪಾಯಿ ದಂಡವನ್ನು ಪಾವತಿಸುವುದು ಮತ್ತು ಅಮಾನತು ದಂಡನೆಗೆ ಒಳಗಾಗುವುದು ಮಾತ್ರ ವಾರ್ಡ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಎಂಬುದು ವಿಪರ್ಯಾಸ ಎಂದು ವಾಸ್ತವವನ್ನು ರಮೇಶ್ ತಮ್ಮ ಮನವಿ ಪತ್ರದಲ್ಲಿ ಬಿಚ್ಚಿಟ್ಟಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಈ ಕೆಳಗಿನ ಅಂಶಗಳತ್ತ ಗಮನಹರಿಸಬೇಕಿದೆ :
1) ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ನೀಡಲಾಗುವ ಪ್ರಾಧಿಕಾರವು ತಮ್ಮ ವತಿಯಿಂದ ಮಂಜೂರಾತಿ ನೀಡುವ ಕಟ್ಟಡದ ಪ್ರಾರಂಭಿಕ ಹಂತದಿಂದ ಮುಕ್ತಾಯದವರೆಗೂ ಮೇಲ್ವಿಚಾರಣೆ ಹಾಗೂ ಕೆ.ಎಂ.ಸಿ. ಕಾಯ್ದೆ ಮತ್ತು ಕಟ್ಟಡ ನಿರ್ಮಾಣ ಬೈಲಾಗಳ (Building Byelaws) ಪಾಲನೆಯ ಜವಾಬ್ದಾರಿ ನಿಭಾಯಿಸಬೇಕಾಗಿರುತ್ತದೆ.
2) ಪಾಲಿಕೆಯಲ್ಲಿ ಚಾಲ್ತಿಯಲ್ಲಿರುವ ಕೆ.ಎಂ.ಸಿ. ಕಾಯ್ದೆ 1976 ರ ಕಲಂ. 321(1) & (2), 321(3) ಹಾಗೂ 462 ಅಡಿಯಲ್ಲಿ ಪಾಲಿಸಲಾಗುವ ನಿಯಮಗಳನ್ನು ಕಟ್ಟಡ ನಿಯಮ ಉಲ್ಲಂಘನೆ ಸಂಧರ್ಭದಲ್ಲಿ ಜಾರಿಗೊಳಿಸುವ ಅಧಿಕಾರವು ನಕ್ಷೆ ಮಂಜೂರಾತಿ ಪ್ರಾಧಿಕಾರಕ್ಕೆ ವಹಿಸಿಕೊಡಬೇಕಾಗಿರುತ್ತದೆ.
3) ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಕಲಂ 321(B) ಅನ್ವಯ ತಿದ್ದುಪಡಿ ನಿಯಮಾವಳಿಗಳಲ್ಲಿ ಸೂಚಿಸಲಾಗಿರುವಂತೆ ಕಟ್ಟಡಗಳ ಬೈಲಾ ಉಲ್ಲಂಘನೆಯಾದ ಸಂಧರ್ಭದಲ್ಲಿ ತತ್ಸಸಂಬಂಧ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಸಾಬೀತಾದಲ್ಲಿ ವಿಧಿಸಲಾಗುವ ದಂಡ ಹಾಗೂ ಶಿಕ್ಷೆಗಳ ವ್ಯಾಪ್ತಿಗೆ ನಕ್ಷೆ ಮಂಜೂರಾತಿ ಪ್ರಾಧಿಕಾರವೇ ಹೊಣೆಯಾಗ ಬೇಕಾಗಿರುತ್ತದೆ.
4) ಕಟ್ಟಡ ಮಾಲೀಕರು ಮಾಡಲ್ಪಡುವ ನಕ್ಷೆ ಉಲ್ಲಂಘನೆಗೆ ಮಾಲೀಕರು ಹಾಗೂ ಸಂಬಂಧಪಟ್ಟ ನಕ್ಷೆಗಾರರನ್ನು (Architects) ಹೊಣೆಯಾಗಿಸಿ ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಕ್ಷೆ ಮಂಜೂರಾತಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಅವಶ್ಯಕವಾಗಿರುತ್ತದೆ.
5) ನಕ್ಷೆ ಮಂಜೂರಾತಿ ಪ್ರಾಧಿಕಾರವು ಪ್ರಮುಖವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹಾಲಿ ಇರುವ ಹಾಗೂ ಮುಚ್ಚಲಾಗಿರುವ ಮಳೆ ನೀರುಗಾಲುವೆಯ ಸಂಪೂರ್ಣ ನಕ್ಷೆಯನ್ನು ಗೂಗಲ್ ನಕ್ಷೆ (Google Map) ರೀತಿಯ ಡೇಟಾಬೇಸ್ ತಯಾರಿಸಿಕೊಂಡು ಕೇಂದ್ರ ಸರ್ಕಾರದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಿಯಮಾವಳಿಗಳನ್ನು ಪಾಲಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
6) ನಕ್ಷೆ ಮಂಜೂರಾತಿ ಪ್ರಾಧಿಕಾರವು ಕಟ್ಟಡ ನಿರ್ಮಾಣದ ಪ್ರಾರಂಭದಲ್ಲಿ ನೀಡಲಾಗುವ ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರ (Commencement Certificate) ಹಾಗೂ ಮುಕ್ತಾಯದ ನಂತರ ನೀಡಲಾಗುವ ಸ್ವಾಧೀನಾನುಭವ ಪ್ರಮಾಣ ಪತ್ರ (Occupational Certificate) ಗಳನ್ನು ನೀಡುವ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಗಳನ್ನು ಒಳಗೊಂಡ ತಂಡ ರಚನೆಯಾದಲ್ಲಿ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಗೂ ನಿಯಮಗಳ ಸ್ಪಷ್ಟ ಪಾಲನೆ ಸಾಧ್ಯವಿದೆ.
7) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದಲ್ಲಿರುವಂತೆ ಹಾಗೂ ಬಿಎಂಟಿಎಫ್ (BMTF) ಇಲಾಖೆಯಂತಹ ಕಾನೂನು ಸುವ್ಯವಸ್ಥೆಯ ತಂಡವೊಂದನ್ನು ರಚಿಸಿ ನಕ್ಷೆ ಮಂಜೂರಾತಿ ಪ್ರಾಧಿಕಾರದ ಅಧೀನದಲ್ಲಿ ನೇಮಿಸಿದಲ್ಲಿ ನಿಯಮಗಳ ಪಾಲನೆ ಹಾಗೂ ದಂಡ ಸಂಹಿತೆಯ ಪಾಲನೆ ಮಾಡಿದಲ್ಲಿ ಅನಧಿಕೃತ ನಿರ್ಮಾಣಗಳಿಗೆ ಕಡಿವಾಣ ಹಾಕಬಹುದಾಗಿದೆ.
“ನಗರ ಯೋಜನೆ ಇಲಾಖೆ”ಗೆ ಎರವಲು ಸೇವೆ ಅಡಿಯಲ್ಲಿ ನಿಯೋಜನೆಗೊಂಡಿರುವ ಪರಮ ಭ್ರಷ್ಟ ಅಧಿಕಾರಿಗಳ ಹಿತಾಸಕ್ತಿಯನ್ನೇ ಪರಿಗಣಿಸಿರುವ ಪಾಲಿಕೆಯ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳು, ಬಿಬಿಎಂಪಿಯ ಮೂಲ ಅಧಿಕಾರಿಗಳಿಗೆ ಶಿಕ್ಷೆ ನೀಡುತ್ತಿರುವುದು ನಿಜಕ್ಕೂ ದುರಂತ. ಈ ಹಿನ್ನಲೆಯಲ್ಲಿ ಕೂಡಲೇ 2020ರ ಸೆ.8ರಂದು ಪಾಲಿಕೆ ಮಾಸಿಕ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ ನಗರ ಯೋಜನೆಯ ವಿಭಾಗದಲ್ಲಿ ಅಧಿಕಾರ ಪ್ರತ್ಯಾಯೋಜನೆಗಳನ್ನು ಹೊರಡಿಸುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.