ಬೆಂಗಳೂರು, ನ.09 www.bengaluruwire.com : ಆಕರ್ಷಕವಾಗಿ ಕಾಣುವ ಕುರುಕಲು, ಸಿಹಿ ತಿಂಡಿಗಳೆಲ್ಲಾ ಸುರಕ್ಷಿತವಲ್ಲ ಜಾಗೃತೆವಹಿಸಿ. ಕೇರಳ ರಾಜ್ಯದಲ್ಲಿ ತಯಾರಿಕೆಯಾಗಿ ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ 31 ತಿನಿಸುಗಳ ಮಾದರಿಗಳಲ್ಲಿ ಕೃತಕ ಬಣ್ಣ (Artificial Colour)ಗಳನ್ನು ಬಳಸಿದ್ದ ಹಿನ್ನಲೆಯಲ್ಲಿ ಅದರ ತಯಾರಕರ ಮೇಲೆ ಕ್ರಮ ಕೈಗೊಳ್ಳುವಂತೆ ಕೇರಳಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.
ಕಳೆದ ಮೂರು ತಿಂಗಳಲ್ಲಿ ಕೇರಳದಲ್ಲಿ ತಯಾರಿಸಲ್ಪಟ್ಟ ಒಣ ಹಣ್ಣುಗಳು, ಖಾರಾ ಮಿಕ್ಸರ್, ಚಿಪ್ಸ್, ಹಲ್ವಾ, ಮುರುಕು ಹಾಗೂ ಸಿಹಿ ತಿಂಡಿಗಳಲ್ಲಿ ಅಲುರಾ ರೆಡ್, ಕಾರ್ಮೊಸೈನ್, ಸನ್‌ಸೆಟ್ ಟಾರ್ಟಜೈನ್, ಯೆಲ್ಲೊದಂತಹ ಕೃತಕ ಬಣ್ಣ ಬಳಸಲಾಗಿದೆ. 90 ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸ ಲಾಗಿತ್ತು. 31 ಮಾದರಿಗಳಲ್ಲಿ ಕೃತಕ ಬಣ್ಣ ಬಳಸಲಾಗಿತ್ತು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಪಾಸಣೆ ವೇಳೆ ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲದೇ ಇರುವುದು, ಆಹಾರ ತಯಾರಿಕಾ ದಿನಾಂಕವನ್ನು ಮುಂಚಿತವಾಗಿ ನಮೂದು ಮಾಡದೇ ಇರುವುದು, ಎಫ್‌ಎಸ್‌ಎಸ್‌ಎಐ (FSSAI) ನೋಂದಣಿ ಅಥವಾ ಪರವಾನಿಗೆ ಸಂಖ್ಯೆ (Licence Number) ಮುದ್ರಿತವಾಗಿಲ್ಲ ಕಂಡು ಬಂದಿದೆ ಎಂದು ಆಯುಕ್ತರು ವಿವರಿಸಿದ್ದಾರೆ.
ಗೋಲ್ ಗಪ್ಪಾ ಮಾದರಿ ವಿಶ್ಲೇಷಣೆ :
ಹೊರ ರಾಜ್ಯಗಳಲ್ಲಿ ಗೋಲ್ ಗಪ್ಪಾ ರುಚಿಯನ್ನು ಹೆಚ್ಚಿಸಲು ಅದಕ್ಕೆ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರ ಬಳಸುತ್ತಿರುವ ಮತ್ತು ಗೋಲ್ ಗಪ್ಪಾ ಹಿಟ್ಟನ್ನು ಕಾಲಿನಲ್ಲಿ ತುಳಿದು ತಯಾರಿಸುತ್ತಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ವಾಗುತ್ತಿದ್ದು, ಈ ಸಂಬಂಧ ರಾಜ್ಯ ದಾದ್ಯಂತ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ದೀಪಾವಳಿ ಸಿಹಿತಿಂಡಿ 9 ಮಾದರಿಗಳಲ್ಲಿ ಕೃತಕ ಬಣ್ಣ :
ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನ ಸಿಹಿ ತಿಂಡಿ ಮಾರಾಟವಾಗುವ ಕಾರಣ 151 ಸಿಹಿತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಗೊಳಪಡಿಲಾಗಿದೆ. 143 ಮಾದರಿಗಳು ಸುರಕ್ಷಿತ ಎಂದು 9 ಮಾದರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಕಂಡು ಬಂದಿದ್ದು, ಅಸುರಕ್ಷಿತ ಎಂದು ವರದಿಯಾಗಿದೆ ಎಂದು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ 1201 ಆಹಾರ ಮಾದರಿಗಳ ವಿಶ್ಲೇಷಣೆ :
ಅಕ್ಟೋಬರ್ ಕೊನೆಯ ವಾರದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ 1201 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಅವುಗಳಲ್ಲಿ 65 ಆಹಾರ ಮಾದರಿಗಳ ವಿಶ್ಲೇಷಣಾ ಕಾರ್ಯವು ಮುಗಿದಿದೆ. 65 ಮಾದರಿಗಳೂ ಸುರಕ್ಷಿತ ಎಂಬ ವರದಿ ಬಂದಿದೆ. ಉಳಿದ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಚೀನಾ ಬೆಳ್ಳುಳ್ಳಿ ಸುರಕ್ಷಿತ ಎಂದ ಇಲಾಖೆ :
ಚೀನಾದ ಕೃತಕ ಮತ್ತು ನಿಷೇಧಿತ ಬೆಳ್ಳುಳ್ಳಿ ರಾಜ್ಯದಲ್ಲಿ ಮಾರಾಟವಾಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬೆನ್ನಲ್ಲೇ, ರಾಜ್ಯದ ವಿವಿಧೆಡೆ 154 ಬೆಳ್ಳುಳ್ಳಿ ಮಾದರಿ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸ ಲಾಗಿದ್ದು, 147 ಮಾದರಿಗಳು ಸುರಕ್ಷಿತವಾಗಿದ್ದು, 7 ಮಾದರಿಗಳಲ್ಲಿ ಮಾತ್ರ ಫಂಗಸ್ ಬೆಳೆದಿತ್ತು, ಕೊಳೆತಿದ್ದ ಕಾರಣ ಅಸುರಕ್ಷಿತ ಎಂದು ವರದಿ ತಿಳಿಸಿದೆ ಎಂದು ಆಹಾರ ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ತಮ್ಮ ಅಧಿಕಾರಿ, ಸಿಬ್ಬಂದಿಯಿಂದ ಸೂಕ್ತ ರೀತಿ ಕೆಲಸ ತೆಗೆಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣ, ಸಾರ್ವಜನಿಕ ದೂರು ಹಾಗೂ ಮಾಧ್ಯಮಗಳಲ್ಲಿ ವರದಿಯಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ಕ್ರಮವಹಿಸುತ್ತಿರುವ ಬಗ್ಗೆ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರಕೃಪೆ : ಗೂಗಲ್ ಸರ್ಚ್ ಎಂಜಿನ್)