ಬೆಂಗಳೂರು, ನ.08 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority) ನಾಡಪ್ರಭು ಕೆಂಪೇಗೌಡ ಬಡಾವಣೆ (NPKL) ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯ ಸೆಪ್ಟೆಂಬರ್ 2023 ರಂದು ಕೊಟ್ಟ 14 ತಿಂಗಳುಗಳ ಗಡುವಿನ ಒಳಗೆ ಸಂಪೂರ್ಣವಾಗಿ ಲೇಔಟ್ ಅಭಿವೃದ್ಧಿ ಮಾಡುತ್ತೇನೆಂಬ ವಾಗ್ದಾನವು ಹುಸಿಯಾಗಿದೆ.
ಏಕೆಂದರೆ ನ.07ಕ್ಕೆ ಸಮಿತಿ ನೀಡಿದ ಗಡುವು ಅಂತ್ಯವಾಗಿದೆ. ಅಲ್ಲಿಗೆ ಸಮಿತಿ ನೀಡಿದ ಸಮಯದ ಮಿತಿಗೂ ಬಿಡಿಎ ಅಧಿಕಾರಿಗಳು ಕ್ಯಾರೇ ಅಂದಿಲ್ಲ. ಎನ್ ಪಿಕೆಎಲ್ 1 ರಿಂದ 9ನೇ ಬ್ಲಾಕ್ ಗಳಿದ್ದು, ಆ ಪೈಕಿ ಕೇವಲ 7ನೇ ಬ್ಲಾಕ್ ನಲ್ಲಷ್ಟೇ ಶೇ.80ರಷ್ಟು ಕಾಮಗಾರಿ ಪೂರ್ಣಗೊಳಿಂಡಿದ್ದು, ಒಂದೇ ಒಂದು ಬ್ಲಾಕ್ ನಲ್ಲೂ ಶೇ.100ರಷ್ಟು ಕಾಮಗಾರಿ ಮುಗಿದಿಲ್ಲ. ಹೀಗಾಗಿ ಇದೊಂದು ರೀತಿಯಲ್ಲಿ ಬಿಡಿಎನ ಕೋಲ್ಟ್ ಸ್ಟೋರೇಜ್ ಸೇರಿದ ಯೋಜನೆಯಂತಾಗಿದೆ. ಅರ್ಜಿ ಸಮಿತಿ ಛೀಮಾರಿಯಿಂದ ತಪ್ಪಿಸಿಕೊಳ್ಳಲು ನೆಪಮಾತ್ರಕ್ಕೆ ಬಿಡಿಎ ಎಂಜಿನಿಯರಿಂಗ್ ಅಧಿಕಾರಿಗಳು 7ನೇ ಬ್ಲಾಕ್ ಒಂದರಲ್ಲಿ ಅಭಿವೃದ್ಧಿ ತೋರಿಸಿ ಉಳಿದ ಬ್ಲಾಕ್ ಗಳಲ್ಲಿ ಕೆಲಸ ನಡೆಯುತ್ತದೆಯೆಂದು ಬಿಂಬಿಸಲು ಈ ನಾಟಕ ಆಡುತ್ತಿದೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತವೇದಿಕೆ ಟೀಕಿಸಿದೆ.
ಕೇವಲ ಬ್ಲಾಕ್ 7 ರಲ್ಲಿ ಮಾತ್ರ ಎಲ್ಲಾ ರೀತಿಯ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ 5ನೇ ಬ್ಲಾಕ್ ಮತ್ತು 6 ನೇ ಬ್ಲಾಕ್ ನಲ್ಲಿ ರಸ್ತೆಯ ಕಾಮಗಾರಿಯು ಕುಂಟುತ್ತಾ ಸಾಗಿದೆ. ಅಲ್ಲದೆ ಉಳಿದ 8 ಬ್ಲಾಕ್ ಗಳ ಕಾಮಗಾರಿಗಳು ಪೂರ್ಣಗೊಳ್ಳಲು ಮತ್ತಷ್ಟು ವರ್ಷಗಳು ಬೇಕಾಗುವ ಪರಿಸ್ಥಿತಿ ಇದೆ. ರಸ್ತೆ, ವಿದ್ಯುತ್, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆಗಳ ಕೊರತೆಯಿಂದಾಗಿ 29,000 ನಿವೇಶನಗಳಲ್ಲಿ ಕೇವಲ 20 ರಿಂದ 30 ಮನೆಗಳ ನಿರ್ಮಾಣವಾಗುತ್ತಿದೆ. ಮನೆ ಕಟ್ಟಲು ಮುಂದೆ ಬರುವವರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿಕೊಳ್ಳುತ್ತದೆ ಆದರೆ ಅದು ಕೊಟ್ಟ ಭರವಸೆಗಳೆಲ್ಲಾ ಸುಳ್ಳಾಗಿದೆ. ನಿವೇಶನದಾರರು ಮೂಲಭೂತ ಸೌಕರ್ಯಗಳ ಕೊರತೆಯಲ್ಲಿಯೇ ಮನೆ ಕಟ್ಟಿ ವಾಸಮಾಡಬೇಕಾದ ಪರಿಸ್ಥಿತಿ ಇದೆ.
ಬೀದಿ ದೀಪ ಬೇಕೆಂದರೆ ಮನೆಗಳ ಮೀಟರ್ ಗೆ ಸಂಪರ್ಕ ಕೊಡ್ತಾರೆ :
ಇಡೀ 1 ರಿಂದ 9ನೇ ಬ್ಲಾಕ್ ನಲ್ಲಿ 29,000 ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿದ್ದರೂ ಇನ್ನೂ ಪರಿಪೂರ್ಣವಾಗಿ ವಿದ್ಯುತ್ ಜಾಲ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ಮನೆ ಕಟ್ಟುವವರು ಬೆಸ್ಕಾಂ ದೂರದಲ್ಲೆಲ್ಲೋ ಹಾಕಿರುವ ವಿದ್ಯುತ್ ವೈರ್ ನಿಂದ ಕರೆಂಟ್ ಪಡೆದುಕೊಳ್ಳಬೇಕಾಗಿದೆ. ಇದರಿಂದ ಅಲ್ಲಿ ಮನೆ ಕಟ್ಟುವವರು ಹೆಚ್ಚುವರಿಯಾಗಿ 20 ರಿಂದ 30 ಸಾವಿರ ಕರ್ಚು ಮಾಡುವಂತಾಗಿದೆ. ಒಂದು ವಿದ್ಯುತ್ ಉಪ ಕೇಂದ್ರವು ನಿರ್ಮಾಣ ಹಂತದಲ್ಲಿದೆ. ಆದರೆ ಕಳೆದ ಎರಡುವರೆ ವರ್ಷಗಳಿಂದ ಆ ಕೇಂದ್ರದ ಕೆಲಸವು ಪೂರ್ಣಗೊಳ್ಳದೆ ನಿವೇಶನದಾರರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವಂತಾಗಿದೆ. ಮನೆ ಕಟ್ಟುವ ರಸ್ತೆಯಲ್ಲಿ ಬೀದಿ ದೀಪವಿದ್ದರೆ ಮನೆ ಕಟ್ಟುತ್ತಿರುವವ ಮನೆ ಮೀಟರ್ ಸಂಪರ್ಕಿಸಲಾಗುತ್ತಿದೆ ಎಂದರೆ ಇಲ್ಲಿನ ಅಭಿವೃದ್ಧಿ ಕೆಲಸಗಳು ಎಷ್ಟು ಹಳ್ಳ ಹಿಡಿದಿದೆ ಎಂಬುದು ಮನದಟ್ಟಾಗುತ್ತದೆ.
ಬಡಾವಣೆಯಾದ್ಯಂತ ಇನ್ನೂ ಮಣ್ಣಿನ ಕಚ್ಚಾ ರಸ್ತೆಗಳೆ ಇದೆ. ಮನೆಯಲ್ಲಿ ವಾಸ ಮಾಡಲು ಹಾಗೂ ಸಾಮಗ್ರಿ ಸಾಗಿಸಲು ಮಳೆಗಾಲದಲ್ಲಿ ಯಾವುದೇ ಬೆಟ್ಟ ಪ್ರದೇಶಗಳಲ್ಲಿ ಸರ್ಕಸ್ ಮಾಡಿಕೊಂಡು ಹೋಗುವ ಪರಿಸ್ಥಿತಿ ಇಲ್ಲೂ ಬಂದೊದಗಿದೆ. ಎಂಟು ತಿಂಗಳಗಳ ಹಿಂದೆ ಬಡಾವಣೆಯ ಬ್ಲಾಕ್ 5,6,7ನೇ ಬ್ಲಾಕ್ ಗಳಲ್ಲಿನ ರಸ್ತೆ ಡಾಂಬರೀಕರಣಕ್ಕಾಗಿ ಟೆಂಡರ್ ಅನ್ನು ಕರೆಯಲಾಗಿತ್ತು. ಆದರೆ ಕೇವಲ 7ನೇ ಬ್ಲಾಕ್ ನಲ್ಲಷ್ಟೇ ಕಾಮಗಾರಿಯು ನಡೆಯುತ್ತಿದೆ. 6ನೇ ಬ್ಲಾಕ್ ನಲ್ಲಿ ಈಗಷ್ಟೇ ಕಾಮಗಾರಿ ಆರಂಭವಾಗಿದೆ. 5ನೇ ಬ್ಲಾಕ್ ನಲ್ಲಿ ಡಾಂಬರೀಕರಣ ಕಾಮಗಾರಿ ಆರಂಭವಾಗಿಲ್ಲ. ಇನ್ನು ಉಳಿದ ಬಡಾವಣೆಗಳಲ್ಲಿ ಬೇರೆ ಕಾಮಗಾರಿಗಳು ಬಾಕಿಯಿರುವುದರಿಂದ ಇನ್ನೂ ಡಾಂಬರೀಕರಣದ ಟೆಂಡರನ್ನು ಕರೆಯಲಾಗಿಲ್ಲ ಎಂದು ಬಡಾವಣೆ ನಿವಾಸಿಗಳು ಎನ್ ಪಿಕೆಎಲ್ ಬಡಾವಣೆ ದುಸ್ಥಿತಿಯನ್ನು ವಿವರಿಸಿದ್ದಾರೆ.
ಮೂರೇ ತಿಂಗಳಲ್ಲಿ ಉಕ್ಕಿ ಬರುತ್ತೆ ಮ್ಯಾನ್ ಹೋಲ್ :
ಯೋಜಿತ 4040 ಎಕರೆ ಬಡಾವಣೆಯಲ್ಲಿ, ಬಿಡಿಎ 2010 ರಿಂದ ಇಲ್ಲಿಯವರೆಗೆ 2200 ಎಕರೆ ಬಡಾವಣೆ ರೂಪಿಸುವಲ್ಲಿ ಯಶಸ್ವಿಯಾಗಿದೆ ಮತ್ತು 29000 ಸೈಟ್‌ಗಳನ್ನು ಹಂಚಿಕೆ ಮಾಡಿದೆ. ಆದರೆ ಇನ್ನೂ 9 ಬ್ಲಾಕ್‌ಗಳ ಪೈಕಿ 8 ಬ್ಲಾಕ್‌ಗಳಲ್ಲಿ ಕಚ್ಚಾ ರಸ್ತೆಗಳಿವೆ. ಮನೆಗಳಲ್ಲಿನ ಮ್ಯಾನ್ ಹೋಲ್ ಮೂರೇ ತಿಂಗಳಲ್ಲಿ ಉಕ್ಕಿಬರುತ್ತದೆ. ಮನೆ ಪೂರ್ಣವಾಗುವ ತನಕ ಒಳಚರಂಡಿ ವ್ಯವಸ್ಥೆಗೆ ಕಲ್ಪಿಸಲು ಬಿಡಿಎ ಅವಕಾಶ ಕಲ್ಪಿಸುವುದಿಲ್ಲ.ಕುಡಿಯಲು, ಇತರ ಕಾರ್ಯಕ್ಕೆ ಕುಡಿಯುವ ನೀರಿನ ಸರಬರಾಜಿನ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಬೋರ್ ವೆಲ್ ನೀರೇ ಗಟ್ಟಿ. ಬಿಡಿಎ ನಿಯಮಾವಳಿಗಳ ಪ್ರಕಾರ ಮನೆ ಕಟ್ಟಲು ನೀರನ್ನು ಪೂರೈಸುವುದಿಲ್ಲ ಆದರೆ ಮನೆ ಕಟ್ಟಿದ ನಂತರವೂ ಬಡಾವಣೆಯಲ್ಲಿ ನೀರನ್ನು ಪೂರೈಸಲು ಸಾಧ್ಯವಾಗಿರುವುದಿಲ್ಲ ಎಂದು ನಿವೇಶನದಾರರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ : BW EXCLUSIVE | ರಾಜ್ಯ ಸರ್ಕಾರ- ಬೆಂಗಳೂರು ವಿವಿ ನಿಯಮ ಉಲ್ಲಂಘನೆ : ಜ್ಞಾನಭಾರತಿ ಕ್ಯಾಂಪಸ್ 673 ಎಕರೆ ಜೀವ ವೈವಿಧ್ಯತಾ ವನಕ್ಕೆ ಗಂಡಾಂತರ!!
ರಿಯಲ್ ಎಸ್ಟೇಟ್ ಪ್ರಾಧಿಕಾರ ನೀಡಿದ ಗಡುವು ಪಾಲಿಸಲು ವಿಫಲ :
ರಿಯಲ್ ಎಸ್ಟೇಟ್ ಪ್ರಾಧಿಕಾರವು 2018, 2020 ಹಾಗೂ 2021ರಲ್ಲಿ ಹೀಗೆ ಮೂರು ಬಾರಿ ನಾಡಪ್ರಭು ಕೆಂಪೇಗೌಡ ಬಡಾವಣೆ ಪೂರ್ಣಗೊಳಿಸಲು ಗಡುವು ವಿಸ್ತರಣೆ ಮಾಡಿದರೂ ಈ ತನಕವೂ ಅದನ್ನೂ ಬಿಡಿಎ ಅಧಿಕಾರಿಗಳು ಪಾಲಿಸಿಲ್ಲ. ಇನ್ನು ಕೂಡ 1,300 ಎಕರೆ ಭೂ ಸ್ವಾಧೀನ ಸಮಸ್ಯೆಯೂ ಬಗೆಹರಿದಿಲ್ಲ. ಒಂದರಿಂದ 5ನೇ ಬಡಾವಣೆ ವರೆಗಿನ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಎಲ್ ಎಂಡ್ ಟಿ ತೆಗೆದುಕೊಂಡಿದ್ದರೆ, 6 ರಿಂದ 9ನೇ ಬ್ಲಾಕ್ ಅಭಿವೃದ್ಧಿಪಡಿಸುವ ಕಾಮಗಾರಿ ಟೆಂಡರನ್ನು ಅಮೃತ ಕನ್ ಸ್ಟ್ರಕ್ಷನ್ ಎಂಬ ಸಂಸ್ಥೆಯು ಪಡೆದುಕೊಂಡಿದೆ. ಒಟ್ಟಾರೆ 1,600 ಕೋಟಿ ರೂ. ಮೊತ್ತದ ಯೋಜನೆಯಿದಾಗಿದ್ದರೂ. ಗುತ್ತಿಗೆದಾರರಿಗೂ ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದರಿಂದಾಗಿ ಹಾಗೂ ಸೂಕ್ತ ರೀತಿಯಲ್ಲಿ ಭೂಸ್ವಾಧೀನ ಮಾಡದ ಕಾರಣದಿಂದಾಗಿ ಕಾಮಗಾರಿಗಳು ಕುಂಟುತ್ತಾ ಸಾಗಿದ್ದರೆ, ಕೆಲವು ಕಡೆ ಕಾಮಗಾರಿಗಳು ನಿಂತು ಬಡಾವಣೆ ರಸ್ತೆಯಲ್ಲಿ ಆಳೆತ್ತರದ ಹುಲ್ಲುಗಳು ಬೆಳೆದು ಸಾರ್ವಜನಿಕರು ಆ ಭಾಗಗಳಲ್ಲಿ ಸರಿಯಾಗಿ ಸಂಚರಿಸದಂತಾಗಿದೆ.
“2018, 2020 ಮತ್ತು 2021 ರ ರೇರಾ ಗಡುವುಗಳನ್ನು ಪಾಲಿಸಿಲ್ಲ, ಹೀಗಾಗಿ ಎನ್ ಪಿಕೆಎಲ್ ಪ್ರಾಜೆಕ್ಟ್, ರೇರಾ ಪ್ರಕಾರ ಡೀಫಾಲ್ಟ್ ಯೋಜನೆಯಾಗಿದೆ. ಅರ್ಜಿ ಸಮಿತಿಯು ನೀಡಿದ 2023 ಡಿಸೆಂಬರ್ ನಿಂದ 14 ತಿಂಗಳಲ್ಲಿ ಕೆಂಪೇಗೌಡ ಬಡಾವಣೆ ಸಂಪೂರ್ಣ ಅಭಿವೃದ್ಧಿಪಡಿಸುವಂತೆ ನೀಡಿದ ಅಂತಿಮ ಗಡುವನ್ನು ಪಾಲಿಸಲಾಗಿಲ್ಲ”
- ಎಂ ಅಶೋಕ್, ಕಾರ್ಯದರ್ಶಿ, ಎನ್ ಪಿಕೆಎಲ್ ಮುಕ್ತ ವೇದಿಕೆ
2025ರ ಮಾರ್ಚ್ ವೇಳೆಗೆ ಬಡಾವಣೆ ನಿರ್ಮಾಣ ಕಾರ್ಯ ಪೂರ್ಣ!!! :
ಈ ಬಗ್ಗೆ ಬಿಡಿಎ ಎಂಜಿನಿಯರಿಂಗ್ ಸದಸ್ಯ ಶಾಂತಾರಾಜಣ್ಣ ಅವರನ್ನು ಪ್ರಶ್ನಿಸಿದರೆ, “ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿಗಾಗಿ 1,600 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಗುತ್ತಿಗೆದಾರರಿಗೆ ಕೆಲ ವಾರಗಳ ಹಿಂದೆ ಬಾಕಿ ಹಣ ಪಾವತಿಸಲಾಗಿದೆ. ಬಡಾವಣೆಯಲ್ಲಿ ಇನ್ನು ಕಾಮಗಾರಿಗಳು ವೇಗ ಗತಿಯಲ್ಲಿ ನಡೆಯಲಿದೆ. ಹೈಕೋರ್ಟ್ ನಿಂದ 500 ಎಕರೆ ಭೂಸ್ವಾಧೀನಪಡಿಸಿಕೊಳ್ಳಲು ಬಿಡಿಎ ಪರವಾಗಿ ತೀರ್ಪು ಬಂದಿದೆ. ಹೀಗಾಗಿ ಹಂತ ಹಂತವಾಗಿ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಬಡಾವಣೆಯ ಅಭಿವೃದ್ಧಿಯನ್ನು ಮಾಡುತ್ತೇವೆ. ಮಾರ್ಚ್ 2025ರ ವೇಳೆಗೆ ಸಂಪೂರ್ಣವಾಗಿ ಕೆಂಪೇಗೌಡ ಲೇಔಟ್ ನಲ್ಲಿನ ಕಾಮಗಾರಿಗಳು ಪೂರ್ಣವಾಗಲಿದೆ. ಅರ್ಜಿ ಸಮಿತಿಗೂ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ” ಎಂದು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಪದೇ ಪದೇ ಗಡುವು ಮೀರುವ ಪ್ರಾಧಿಕಾರದ ಹೇಳಿಕೆ ಎಷ್ಟು ಸರಿ? :
“ಕಳೆದ 8 ವರ್ಷಗಳಿಂದ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಪ್ರಾಧಿಕಾರ ಹೇಳುತ್ತಿದ್ದರೂ, 9 ಬ್ಲಾಕ್‌ಗಳ ಎಲ್ಲಾ ನಿವೇಶನದಾರರಿಂದ ಹಂತ ಹಂತವಾಗಿ ಹಣ ಪಡೆಯದೆ, 2016 ಮತ್ತು 2018ರಲ್ಲಿ ಅರ್ಹ ಫಲಾನುಭವಿಗಳಿಂದ ಬಿಡಿಎ ಪ್ರಾಧಿಕಾರವು, ನಿವೇಶನ ಹಂಚಿಕೆಗೆ ಎದುರಾಗಿ ಒಂದೇ ಬಾರಿಗೆ ಹಣ ಪಡೆದು ಕಾಮಗಾರಿ ಪೂರ್ಣಗೊಳಿಸದೆ ಪದೇ ಪದೇ ಗಡುವನ್ನು ಮೀರಿದ ಪ್ರಾಧಿಕಾರದ ಹೇಳಿಕೆ ಎಷ್ಟು ಸರಿ?”
- ಚನ್ನಬಸವರಾಜ, ಅಧ್ಯಕ್ಷರು, ಎನ್ ಪಿಕೆಎಲ್ ಮುಕ್ತ ವೇದಿಕೆ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.