ಹುಬ್ಬಳ್ಳಿ, ನ.07 www.bengaluruwire.com : ರಾಜ್ಯದಲ್ಲಿ ವಕ್ಪ್ ಬೋರ್ಡ್ ನಿಂದ ರೈತರಿಗೆ ನೊಟೀಸ್ ನೀಡಿರುವುದನ್ನು ವಕ್ಪ್ ಕಾಯ್ದೆ ತಿದ್ದುಪಡಿ ಕುರಿತು ಪರಿಶೀಲಿಸಲು ರಚನೆಯಾಗಿರುವ ಸಂಸತ್ತಿನ ಜಂಟಿ ಸದನ ಸಮಿತಿ ಗಮನಕ್ಕೆ ತಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಹೇಳಿದರು.
ವಕ್ಪ್ ಕಾಯ್ದೆ ತಿದ್ದುಪಡಿ ಕುರಿತು ನೇಮಕವಾಗಿರುವ ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರನ್ನು ಇಂದು ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರ ನಿಯೋಗದೊಂದಿಗೆ ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಶಿಗ್ಗಾವಿ, ಸವಣೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ವಕ್ಪ್ ಬೋರ್ಡ್ ನಿಂದ ರೈತರಿಗೆ, ಆಸ್ಪತ್ರೆ, ಶಾಲೆ, ಕಾಗಿನೆಲೆ ಮಠಕ್ಕೆ ನೊಟೀಸ್ ನೀಡಿದ್ದಾರೆ. ಇದನ್ನು ಜೆಪಿಸಿ ಅಧ್ಯಕ್ಷ ಗಮನಕ್ಕೆ ತಂದಿದ್ದೇವೆ.
ಕೇವಲ ಹಾವೇರಿ ಜಿಲ್ಲೆಯಷ್ಟೇ ಅಲ್ಲ ಧಾರವಾಡ, ಬಿಜಾಪುರ, ಕೊಪ್ಪಳ, ಗದಗ, ಹಳೆ ಮೈಸೂರಿನ ಮಂಡ್ಯ, ಮೈಸೂರು ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ರೈತರಿಗೆ ನೊಟೀಸ್ ಕೊಟ್ಟಿದ್ದಾರೆ. ವಕ್ಪ್ ಕಾಯಿದೆ ದುರ್ಬಳಕೆ ಮಾಡಿಕೊಂಡಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಈ ಬಗ್ಗೆ ಸಮಿತಿ ಗಮನಕ್ಕೆ ತಂದಿದ್ದೇವೆ. ಈ ಸಮಿತಿ ತಳಮಟ್ಟದಲ್ಲಿ ವಾಸ್ತವ ಏನಿದೆ ಎನ್ನುವುದನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿ ಕಾಯ್ದೆ ತಿದ್ದುಪಡಿಗೆ ಸದನಕ್ಕೆ ಸಲ್ಲಿಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ತರಾತುರಿಯಲ್ಲಿ ವಕ್ಪ್ ಅದಾಲತ್ ಮಾಡಿ, ಕೇಂದ್ರದಲ್ಲಿ ವಕ್ಪ್ ಕಾಯ್ದೆ ತಿದ್ದುಪಡಿಯಾಗುವ ಮೊದಲೇ ರೈತರ ಭೂಮಿಯನ್ನು ವಕ್ಪ್ ಆಸ್ತಿಯನ್ನಾಗಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಕೇವಲ ಹಿಂದುಗಳಲ್ಲ, ಮುಸ್ಮೀಂ ಸಮುದಾಯದ ರೈತರ ಜಮೀನಿಗೂ ನೊಟಿಸ್ ಕೊಟ್ಟಿದ್ದಾರೆ. ಇಡೀ ರೈತ ಸಮುದಾಯ ಆಕ್ರೋಶಗೊಂಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಈ ಚುನಾವಣೆಯಲ್ಲಿ ಮಂತ್ರಿಗಳು, ಶಾಸಕರ ದಂಡೇ ಬಂದು ಕುಳಿತಿದೆ. ಅಧಿಕಾರಿಗಳ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಅಲ್ಲದೇ ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.