ಬೆಂಗಳೂರು, ಅ.22 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ನಿರಂತರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ, ಮರ, ಮರಗಳ ಕೊಂಬೆ ಬಿದ್ದ, ರಸ್ತೆಗಳಲ್ಲಿ ನೀರು ನಿಂತಿರುವ ಸೇರಿದಂತೆ ಒಟ್ಟಾರೆ 1,328 ದೂರುಗಳು ಮಧ್ಯಾಹ್ನ 3 ಗಂಟೆಯವರೆಗೆ ಪಾಲಿಕೆಯ 8 ವಲಯ ನಿಯಂತ್ರಣ ಕೊಠಡಿಯಲ್ಲಿ ದಾಖಲಾಗಿದ್ದು, ಆ ಪೈಕಿ 590 ದೂರುಗಳನ್ನು ಪರಿಹರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದಿದ್ದು, ಈ ಕಟ್ಟಡ ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರಬಹುದು ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಕೆಂಗೇರಿ ಬಳಿ ಅಪ್ರಾಪ್ತ ವಯಸ್ಸಿನ ಅಣ್ಣ ತಂಗಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಾಪತ್ತೆಯಾದವರು ಶ್ರೀನಿವಾಸ್ (13) ಹಾಗೂ ಆತನ ತಂಗಿ (11) ಎಂದು ತಿಳಿದು ಬಂದಿದೆ.
ನಗರದಲ್ಲಿ ಮಂಗಳವಾರ ಮಧ್ಯಾಹ್ನದ ಮೇಲೆ ಆರಂಭವಾದ ಮಳೆ ಸಾಕಷ್ಟು ಕಡೆಗಳಲ್ಲಿ ಅವಾಂತರ ಸೃಷ್ಟಿಸಿದೆ. ಹವಾಮಾನ ಇಲಾಖೆಯು ಮಳೆ ಆರ್ಭಟದ ಮುನ್ಸೂಚನೆ ನೀಡಿದ್ದಾರೆ. ಈ ಮಧ್ಯೆ ಮಲ್ಲೇಶ್ವರದಲ್ಲಿ ಆಟೋ ಬೈಕ್ ಗಳ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ವಾಹನಗಳು ಜಖಂಗೊಂಡಿದೆ. ಈ ಸಂದರ್ಭದಲ್ಲಿ ಆಟೋದಲ್ಲಿ ಒಬ್ಬರು ಮಹಿಳೆ ಹಾಗೂ ಇಬ್ಬರು ಪುರುಷರು ಇದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊರಮಾವು, ಅಗರ ಕಡೆಗಳಲ್ಲಿ ಮಳೆನೀರು ನಿಂತು ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಈ ಮಧ್ಯೆ ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಮುಂಜಾಗ್ರತೆಯ ದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿನ ಎಲ್ಲಾ ತಾಲೂಕಿನ ಅಂಗಡವಾಡಿ ಕೇಂದ್ರ, ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಯಲಹಂಕ ವಲಯದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ :
ಇಲ್ಲಿನ ನರಸಾಪುರ ಕೆರೆ ಮತ್ತು ದೊಡ್ಡಬೊಮ್ಮಸಂದ್ರ ಕೆರೆ ತುಂಬಿ ಕೋಡಿ ಮೂಲಕ ಬರುವ ನೀರು ನೀರುಗಾಲುವೆಗಳಲ್ಲಿ ತುಂಬಿ ಹರಿಯುತ್ತಿದೆ. ಇದರ ಪರಿಣಾಮವಾಗಿ ಬ್ಯಾಟರಾಯನಪುರ ವ್ಯಾಪ್ತಿಯ ಭದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಸುರಭಿ ಲೇಔಟ್, ಸೋಮೇಶ್ವರ ಬಡಾವಣೆ ಸೇರಿದಂತೆ ಹಲವು ಕಡೆಗಳಲ್ಲಿ ಜಲಾವೃತವಾಗಿದೆ.
ಇನ್ನು ಯಲಹಂಕ ವಲಯದಲ್ಲಿ ಮಳೆಯಿಂದಾಗಿ ವಿದ್ಯಾರಣ್ಯಪುರ, ಬ್ಯಾಟರಾಯನಪುರ ಉಪವಿಭಾಗ, ಕೊಡಿಗೇನಹಳ್ಳಿ, ಯಲಹಂಕ ಉಪವಿಭಾಗ ಹಾಗೂ ಯಲಹಂಕ ಉಪನಗರ ಉಪವಿಭಾಗದಲ್ಲಿ ಒಟ್ಟಾರೆ 1030 ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ. ಯಲಹಂಕ ವಲಯದಲ್ಲಿನ ಭದ್ರಪ್ಪ ಲೇಔಟ್/ಟಾಟಾನಗರ, ಬಸವಸಮಿತಿ (ತಿಂಡ್ಲು ರಸ್ತೆ). ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಕಡೆಗಳಲ್ಲಿ ಅಗ್ನಿ ಶಾಮಕ ವಾಹನ, ಜನರೇಟರ್, ಫ್ಲೋಟಿಂಗ್ ಪಂಪ್ ಗಳು, ಬೋಟ್ ಮತ್ತಿತರ ಸಿಬ್ಬಂದಿ ಮತ್ತು ಸಾಧನಗಳನ್ನು ಬಿಬಿಎಂಪಿ ಅಧಿಕಾರಿಗಳು ನಿಯೋಜಿಸಿದ್ದಾರೆ. ಇದಲ್ಲದೆ ತೊಂದರೆಗೊಳಿಗಾದ ಸಾರ್ವಜನಿಕರಿಗಾಗಿ ಯಲಹಂಕ ವಿಭಾಗ, ಬ್ಯಾಟರಾಯನಪುರ ವಿಭಾಗದಲ್ಲಿ ನೀರಿನ ಬಾಟಲ್ ಹಾಗೂ ಊಟ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ಈ ನಡುವೆ ನಿರಂತರ ಮಳೆಯಿಂದಾಗಿ ತೊಂದರೆಗೊಳಗಾಗಿರುವ ಅಪಾರ್ಟ್ ಮೆಂಟ್ ಗಳನ್ನು 8 ದಿನಗಳ ಕಾಲ ಮುಚ್ಚಲು ನಿರ್ದೇಶನ ನೀಡಲಾಗಿದೆ. ಅಧಿಕಾರಿಗಳ ತಂಡ ಮಳೆಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಸ್ ಡಿಆರ್ ಎಫ್ ಹಾಗೂ ಎನ್ ಡಿಆರ್ ಎಫ್ ತಂಡಗಳ ನಿಯೋಜನೆ :
“ಚೌಡೇಶ್ವರಿ ನಗರದಲ್ಲಿ 150 ಎಂಎಂ ಮಳೆಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ವಾಡಿಕೆಗಿಂತ ಶೇ 300ರಷ್ಟು ಹೆಚ್ಚಿನ ಮಳೆಯಾಗಿದೆ. ಈ ವಿಚಾರವಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ. ಕೆಲವು ಪ್ರದೇಶದ ಜನರಿಗೆ ಸ್ಥಳಾಂತರ ಮಾಡಲು ಹೇಳಿದ್ದೇವೆ. ಕೇಂದ್ರಿಯ ವಿದ್ಯಾಲಯ ಹಾಗೂ ಟಾಟಾನಗರದಿಂದ ಸುಮಾರು 600 ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಹೇಳಿದ್ದೇವೆ. 5 ಎಸ್ ಡಿಆರ್ ಎಫ್ ಹಾಗೂ ಎನ್ ಡಿಆರ್ ಎಫ್ ತಂಡಗಳ ನಿಯೋಜನೆ ಮಾಡಲಾಗಿದೆ. ಕಳೆದ 48 ಗಂಟೆಗಳಿಂದ ನಮ್ಮ ಅಧಿಕಾರಿಗಳ ತಂಡ ಮಳೆ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗ ಪರಿಹಾರ ಕಾರ್ಯ ನಡೆಯುವುದು ಮುಖ್ಯವೇ ಹೊರತು, ನಾನು ಸ್ಥಳಕ್ಕೆ ಭೇಟಿ ನೀಡುವುದಲ್ಲ” ಎಂದು ಮಾಹಿತಿ ನೀಡಿದರು.
“ಕೆಲವು ಅಪಾರ್ಟ್ಮೆಂಟ್ ಗಳನ್ನು ಮುಂಜಾಗ್ರತೆಯ ಕ್ರಮವಾಗಿ 8 ದಿನಗಳ ಕಾಲ ಮುಚ್ಚಲು ಸೂಚನೆ ನೀಡಲಾಗಿದೆ. 20-25 ಹೆಚ್ ಪಿ ಯಂತ್ರಗಳನ್ನು ಹಾಕಿ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ. 20 ಕಡೆಗಳಲ್ಲಿ ನೀರನ್ನು ತೆಗೆಯಲಾಗುತ್ತಿದೆ. ಪ್ರಕೃತಿಯನ್ನು ತಡೆದು ನಿಲ್ಲಿಸಲು ಆಗುವುದಿಲ್ಲ. ದುಬೈನಲ್ಲಿ ಪ್ರವಾಹ, ದೆಹಲಿಯಲ್ಲಿ ಮಾಲಿನ್ಯದ ವಿಚಾರ ನೀವು ನೋಡುತ್ತಿದ್ದೀರಿ. ನಮ್ಮ ತಂಡ ಹಗಲಿರುಳು ಶ್ರಮಿಸುತ್ತಿದೆ. ನಾನು ಕೂಡ ಪರಿಹಾರ ಕಾರ್ಯಗಳ ಪರಿಶೀಲನೆ ಮಾಡಿದ್ದೇನೆ. ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಹೆಚ್ಚು ಸಮಸ್ಯೆಯಾಗಿದೆ. ದಾಸರಹಳ್ಳಿಯಲ್ಲಿ ಟ್ಯಾಂಕ್ ಒಡೆದಿದೆ. ಮಹದೇವಪುರ ವಲಯದಲ್ಲಿ 5 ಬಡಾವಣೆಗಳು ಸಮಸ್ಯೆಗೆ ಸಿಲುಕಿವೆ. ಈ ಎಲ್ಲಾ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ” ಎಂದರು.
ಇಬ್ಬರು ಮಕ್ಕಳು ಕೆರೆಯಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಕೇಳಿದಾಗ, “ನಾನು ಈ ವಿಚಾರ ನೋಡಿದೆ. ಆ ತಾಯಿಯ ಗೋಳು ಕಂಡೆ. ಮಕ್ಕಳ ಶೋಧ ಕಾರ್ಯ ನಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.