ಬೆಂಗಳೂರು, ಅ.14 www.bengaluruwire.com : ರಾಜಧಾನಿ ಬೆಂಗಳೂರಿನ ಹವಾಮಾನದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಏರುಪೇರುಗಳಾಗುತ್ತಿದೆ. ಈ ಸಂಬಂಧ ಪಾಲಿಕೆಯು ಬೆಂಗಳೂರು ಹವಾಮಾನ ಕ್ರಿಯಾ ಕೋಶ (Bengaluru climate action cell – CAC)ವನ್ನು ಈಗಾಗಲೇ ಪ್ರಾರಂಭಿಸಿದೆ. ನಗರದ ಹವಾಮಾನ ಪರಿಸ್ಥಿತಿ ಸುಧಾರಿಸಲು ಸೂಕ್ತ ಪಾಲುದಾರರೊಂದಿಗೆ ಸಮನ್ವಯ, ಪ್ರತ್ಯೇಕ ವೆಬ್ ಸೈಟ್, ನಗರದಲ್ಲಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶಗಳ ದತ್ತಾಂಶ ಸಂಗ್ರಹ, ಹವಾಮಾನ ಕುರಿತ ವಿವಿಧ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಸ್ನೇಹಿತರ ವೇದಿಕೆ, ಫೆಲೋಶಿಪ್ ನೀಡಿಕೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ರಾಜಧಾನಿಯಲ್ಲಿ ಬಿಬಿಎಂಪಿಯು ಈಗಾಗಲೇ ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ (Bengaluru Climate Action and Resilience Plan- BCAP) ಒಂದು ಮಹತ್ವಾಕಾಂಕ್ಷೆಯ ಸಮಗ್ರ ವಿಧಾನವನ್ನು ಪ್ರಾರಂಭಿಸಿದೆ. ಅಲ್ಲದೆ ಈ ವಿಧಾನ ಕಾರ್ಯಗತಗೊಳಿಸಲು ಬೆಂಗಳೂರು ಹವಾಮಾನ ಕ್ರಿಯಾ ಕೋಶವನ್ನು ಫೆಬ್ರವರಿ 2024ರಲ್ಲಿ ಸ್ಥಾಪಿಸಲಾಗಿತ್ತು. ನಗರದಲ್ಲಿ ಹಸಿರು ಮನೆ ಅನಿಲ (Green house gases – GHG) ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನದಿಂದ ಉಂಟಾಗುವ ಅಪಾಯಗಳಿಗೆ ನಗರದ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಅನೇಕ ಕಾರ್ಯಗಳನ್ನು ಕೈಗೊಂಡಿದೆ. ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಅವರ ಮೇಲ್ವಿಚಾರಣೆಯಲ್ಲಿ ಸಿಎಸಿ ಕಾರ್ಯನಿರ್ವಹಿಸುತ್ತಿದೆ.
ಹವಾಮಾನ ಕ್ರಿಯಾ ಕೋಶವು, ಹವಾಮಾನ ಕ್ರಮಗಳ ಪ್ರಗತಿಯ ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ವರದಿಯನ್ನು ಮಾಡುತ್ತದೆ ಮತ್ತು ಹವಾಮಾನ ಆಯವ್ಯಯದೊಂದಿಗೆ ಪಾಲಿಕೆ ಮತ್ತು ಇತರೆ ಸರ್ಕಾರಿ ಇಲಾಖೆಗಳೊಂದಿಗೆ ಸಂಯೋಜನೆ ಕಲ್ಪಿಸುವ ಕಾರ್ಯ ಕೈಗೊಂಡಿದೆ.
ಸಿಎಸಿಗಾಗಿ ಪ್ರತ್ಯೇಕ ವೆಬ್ ಸೈಟ್:
ಹವಾಮಾನ ಕ್ರಿಯಾ ಕೋಶವು ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹವಾಮಾನ ಕ್ರಿಯಾ ಯೋಜನೆಯ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಪಾಲಿಕೆ ವೆಬ್ ಸೈಟಿನಲ್ಲಿ ಸಿಎಸಿ ಗಾಗಿ ಹೊಸ ಮೈಕ್ರೋ ವೆಬ್ಸೈಟ್ ( https://apps.bbmpgov.in/bcap/ ) ಅನ್ನು ತೆರೆಯಲಾಗಿದೆ. ಇದರಲ್ಲಿ ಬಿಕ್ಯಾಪ್ ಮತ್ತು ಸಿಎಸಿ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಆದ್ಯತೆಯ ಮೇಲೆ ವಿನ್ಯಾಸಗೊಳಿಸಲಾಗಿದೆ. ಇದು ಬಿಕ್ಯಾಪ್ ಮತ್ತು ಸಂಬಂಧಿತ ಸಂಪನ್ಮೂಲಗಳು, ಸಭೆಯಗಳ ವಿವರ, ಚಟುವಟಿಕೆಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಇಲ್ಲಿಯವರೆಗೆ 20ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ.
ಸ್ಥಳೀಯ ಸಮುದಾಯಗಳ ಸಹಯೋಗ :
ಸ್ಥಳೀಯ ಸಮುದಾಯಗಳ ಸಹಯೋಗ ಹಾಗೂ ತಂತ್ರಜ್ಞಾನದೊಂದಿಗೆ ನಗರದಾದ್ಯಂತ ನೀರಿನ ಅಭಾವವನ್ನು ನೀಗಿಸಲು ತೆರೆದ ಬಾವಿಗಳನ್ನು ಮರುಸ್ಥಾಪಿಸುವ, ಕೆರೆಗಳು, ಉದ್ಯಾನವನಗಳು ಹಾಗೂ ಸಮುದಾಯಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವುದು, ಅಲ್ಲದೇ ಸಸಿಗಳನ್ನು ನೆಡಲು ಸೂಕ್ತವಾದ ಸ್ಥಳಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಈ ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ತೆರೆದ ಸ್ಥಳಗಳುಮ ಕೆರೆಗಳು, ಉದ್ಯಾನವನಗಳಲ್ಲಿ 80000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ.
ಹ್ಯಾಕಥಾನ್ ಆಯೋಜನೆ:
ಬಿಬಿಎಂಪಿಯ ವಿವಿಧ ವಾರ್ಡ್ ಗಳು ಹಾಗೂ ಪ್ರದೇಶಗಳಲ್ಲಿ ಸ್ಥಳೀಯವಾಗಿ ಹೆಚ್ಚು ಶಾಖೋತ್ಪನ್ನವಾಗುವುದ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ನಗರದಲ್ಲಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶಗಳ ಬಗ್ಗೆ ಗಮನ ಹರಿಸಲು, ನಾಗರಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಹ್ಯಾಕಥಾನ್(ಡೇಟಾ ಜಾಮ್) ಅನ್ನು ನಡೆಸಲಾಗಿದೆ.
ಹವಾಮಾನ ಕ್ರಿಯಾ ಕೋಶದ ಸ್ನೇಹಿತರ ವೇದಿಕೆ ರಚನೆ:
ಬೆಂಗಳೂರಿನಲ್ಲಿ ಹವಾಮಾನ ಕ್ರಮಗಳಲ್ಲಿ ಈಗಾಗಲೇ ನಾಗರೀಕರು ಹಾಗೂ ವಿವಿಧ ಸಂಸ್ಥೆಗಳು ಕೈಜೋಡಿಸಿವೆ. ಇವರನ್ನೆಲ್ಲ ಒಟ್ಟುಗೂಡಿಸಲು ಮತ್ತು ಬಿಸಿಎಪಿ ನಲ್ಲಿ ವಿವರಿಸಿರುವ ಹವಾಮಾನ ಕ್ರಿಯೆಗಳೊಂದಿಗೆ ಅವರ ಕಾರ್ಯಗಳನ್ನು ಕೈ ಜೋಡಿಸಲು, ‘ಸಿಎಸಿ ಸ್ನೇಹಿತರು’ ಎಂಬ ಹೊಸ ವೇದಿಕೆಯನ್ನು ರಚಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಾಗರೀಕರು ಮತ್ತು ಸಾಮಾಜಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಸೇರಿದಂತೆ 500ಕ್ಕೂ ಹೆಚ್ಚು ಸಂಸ್ಥೆಗಳು ಮತ್ತು ಕಾರ್ಪೊರೇಟ್ ಘಟಕಗಳು ನಮ್ಮ ಜೊತೆ ಕೈ ಜೋಡಿಸಿವೆ. ಇದರಿಂದ ಉತ್ತಮ ಕಾರ್ಯಗಳ ಕುರಿತು ಹಂಚಿಕೊಳ್ಳಲು ಮತ್ತು ಪರಸ್ಪರ ಕಲಿಯಲು ಒಂದು ಸೂಕ್ತ ವೇದಿಕೆಯಾಗಿದೆ ಎಂದು ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9 ಪ್ರಸ್ತಾವನೆಗಳ ಸ್ವೀಕಾರ:
ಸಿಎಸಿ ಸ್ನೇಹಿತರಾಗುವ ಸಲುವಾಗಿ ನಗರದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಸಿಎಸಿಯಿಂದ ವಿವಿಧ ಸಂಸ್ಥೆಗಳಿಂದ ಸಹಯೋಗವನ್ನು ಆಹ್ವಾನಿಸಿದ್ದು, ಇದುವರೆಗೆ ಅಂತಹ 9 ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಸಿಎಸಿನ ಸ್ನೇಹಿತರಾಗಲು, bit.ly/friendsofcac ಲಿಂಕ್ ಗೆ ತೆರಳಿ ನೋಂದಣಿ ಮಾಡಿಕೊಳ್ಳಬಹುದು.
ಸಿಎಸಿಗಾಗಿ 7 ಮಂದಿ ಫೆಲೋಶಿಪ್ ಗಳ ನಿಯೋಜನೆ :
ಹವಾಮನಾ ಬದಲಾವಣೆ ಹಾಗೂ ನಾಗರೀಕರ ಸಮಸ್ಯೆಗಳನ್ನು ಪರಿಹರಿಸಲು ಹೊಸ ಆಲೋಚನೆ, ಕೌಶಲ್ಯ ಹಾಗೂ ನಾವೀನ್ಯತೆಗಳಿಂದ ನಗರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹವಾಮಾನ ಕ್ರಿಯಾ ಕೋಶಕ್ಕೆ ಸಹಾಯ ಮಾಡಲು ಹಾಗೂ ಸಬಲಗೊಳಿಸುವ ಸಲುವಾಗಿ “ಹವಾಮಾನ ಕ್ರಿಯಾ ಯೋಜನೆ ಫೆಲೋಶಿಪ್” ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಅದಕ್ಕೆ ಅರ್ಹರಾದ ಏಳು ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ಫೆಲೋಶಿಪ್ ನೀಡಲಾಗಿದೆ. ನವೆಂಬರ್ ತಿಂಗಳಿಂದ ಇವರು ಸಿಎಸಿಗಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಉದ್ಯಾನವನಗಳ ಸಮಯ ಬದಲು:
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಜೂನ್ 2024ರಲ್ಲಿ ಉದ್ಯಾನವನಗಳ ಸಮಯವನ್ನು ಪರಿಷ್ಕರಿಸಲು ಸಿಎಸಿ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ಉದ್ಯಾನವನಗಳು ತೆರೆದಿರುತ್ತದೆ.