ಬೆಂಗಳೂರು, ಅ.12 www.bengaluruwire.com : ನಗರದಲ್ಲಿ ಸುಮಾರು 2.79 ಲಕ್ಷ ಬೀದಿ ನಾಯಿಗಳಿವೆ. ಮಾನವ- ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಯೋಜನೆಯೊಂದನ್ನು ಸಿದ್ದಪಡಿಸಿದೆ. ಮತ್ತೊಂದೆಡೆ ಅ.17ರಂದು “ನಾಯಿಗಳಿಗಾಗಿ ಉತ್ಸವ (Kukur Tihar)” ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಹಾಗು ಪ್ರಾಣಿ ಪಾಲಕರನ್ನು ಒಟ್ಟುಗೂಡಿಸುವ ಮೂಲಕ ಪಾಲಿಕೆಯು ನಾಯಿಗಳಿಗೆಂದು ಉತ್ಸವ(Kukur Tihar)ವನ್ನು ಆಚರಿಸಲು ನಿರ್ಧರಿಸಿದೆ.
ನಿತ್ಯ ಶ್ವಾನಗಳಿಗೆ ಆಹಾರ ವಿತರಣೆಗೆ ಪೌರಕಾರ್ಮಿಕರ ಸಹಯೋಗ:
ಬಿಬಿಎಂಪಿಯು ಆಯಾ ವಾರ್ಡಿನ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಸಮುದಾಯದ ನಾಯಿಗಳಿಗೆ ಉಳಿದ ಆಹಾರವನ್ನು ನೀಡುವಲ್ಲಿ ಸಹಾಯ ಮಾಡಲು ಪೌರಕಾರ್ಮಿಕರ ಸಹಕಾರ ಪಡೆದು ನಾಯಿಗಳಿಗೆ ನಿತ್ಯ ಒಂದು ಹೊತ್ತಿನ ಆಹಾರ ನೀಡಲು ಪಾಲಿಕೆ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಇದೇ ಉತ್ಸವದ ದಿನದಂದು 4 ವಾರ್ಡ್‌ಗಳ ಪೌರಕಾರ್ಮಿಕರ ಸಹಯೋಗದೊಂದಿಗೆ ಆಹಾರ ನೀಡುವ ಕಾರ್ಯವನ್ನು ಪ್ರಾರಂಭಿಸಲಿದೆ.
ಈ ಯೋಜನೆಯು ಮುಂದುವರೆದಂತೆ, ಆಯಾ ವಾರ್ಡ್ ಗಳ ಹೋಟೆಲ್ ಗಳಲ್ಲಿ ಉಳಿದ ಆಹಾರವನ್ನು ಸದುಪಯೋಗಿಸುವ ನಿರ್ಧಾರವನ್ನು ಪಾಲಿಕೆಯು ಮಾಡಿದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರವಾಗಿ ಪ್ರತಿದಿನ ಒಂದು ಬಾರಿ ಆಹಾರವನ್ನು ನೀಡಲು ಪಾಲಿಕೆ ಯೋಜನೆ ರೂಪಿಸಿದೆ.
ಪ್ರಾಣಿ ಪಾಲಕರ ನೋಂದಣಿ :
ಪ್ರತಿ ವಾರ್ಡ್‌ನಿಂದ ಸ್ವಯಂಸೇವಕರಾಗಿ ಈ ಯೋಜನೆಯ ಎಲ್ಲಾ ಉಪಕ್ರಮಗಳಲ್ಲಿ ಬಾಗಿಯಾಗಲು ಉತ್ಸುಕರಾಗಿದ್ದರೆ, ಅ.15ರ ಒಳಗೆ ಭರ್ತಿ ಮಾಡಿ ಪಾಲಿಕೆಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 1533 ನಂಬರ್ ಅನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾನವ-ಪ್ರಾಣಿ ಸಂಘರ್ಷ ಕಡಿಮೆ ಮಾಡುವ ಉದ್ದೇಶದ ಯೋಜನೆ :
ಸಹವರ್ತಿನ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಮತ್ತು ಇತರ ಆಸಕ್ತ ಸಂಸ್ಥೆಗಳೊಂದಿಗೆ ಪಾಲಿಕೆಯ ಪಶುಸಂಗೋಪನೆ ವಿಭಾಗವು ಮುಂಬರುವ ದಿನಗಳಲ್ಲಿ COEXISTENCE CAMPUS ON LOCALITY & #BITEFREELOCALITY ಎಂಬ ಯೋಜನೆಯ ಅಡಿಯಲ್ಲಿ, ಪ್ರಾಣಿಗಳಿಗೆ ಮಾನವೀಯ ವಾತಾವರಣವನ್ನು ನಿರ್ಮಿಸುವಲ್ಲಿ ಹಾಗೂ ಮಾನವ-ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡಲು ಅನೇಕ ಉಪಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಕಾರ್ಯಕ್ರಮದ ಮೂಲಕ ಪ್ರತಿ ವಾರ್ಡ್ ಗಳಲ್ಲಿ ಸಹಬಾಳ್ವೆಯ ಚಾಂಪಿಯನ್ ಗಳನ್ನು ಸಕ್ರಿಯಗೊಳಿಸುವ ನಿರ್ಧಾರ ಸಹ ಮಾಡಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ಪ್ರಾಣಿಗಳೊಂದಿಗೆ ಸಾಮರಸ್ಯದ ಸಹಬಾಳ್ವೆಯು ನಮ್ಮ ಸುತ್ತಲಿನ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಪ್ರಾಣಿಗಳ ಜನನ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್‌ಗಳ ಹೊರತಾಗಿ, ಪ್ರಾಣಿಗಳ ನಡವಳಿಕೆಯನ್ನು ಅರ್ಥಮಾಡಿಕೊಂಡು, ಪ್ರಕೃತಿ ಅವುಗಳನ್ನು ರಚಿಸಿದ ರೀತಿಯಲ್ಲಿ ಅವುಗಳನ್ನು ಒಪ್ಪಿಕೊಳ್ಳುವುದು ಸಹ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.