ಬೆಂಗಳೂರು, ಸೆ.19 www.bengaluruwire.com : “ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ”ಯಲ್ಲಿ ಗಣನೀಯ ಕೊಡುಗೆ ನೀಡಿದ ಮೈಸೂರು ಹುಲಿ ಸಂರಕ್ಷಣಾ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಅವರಿಗೆ ಭಾರತೀಯ ಅರಣ್ಯ ಸೇವೆ ಸಂಘ ಹಾಗೂ ಇಂಡಿಯನ್ ಮಾಸ್ಟರ್ ಮೈಂಡ್ಸ್ ಕೊಡ ಮಾಡುವ “ಇಕೋ ವಾರಿಯರ್ ಅವಾರ್ಡ್ 2024” (“Eco Warrior Award 2024”) ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.
ನವದೆಹಲಿಯ ಜನಪಥ್ ನಲ್ಲಿನ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಂದ್ರ ಅರಣ್ಯ ಮಹಾನಿರ್ದೇಶಕರು ಮತ್ತು ವಿಶೇಷ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಅವರು ಡಾ.ಪಿ.ರಮೇಶ್ ಕುಮಾರ್ ಅವರಿಗೆ ಪ್ರಶಸ್ತಿಯನ್ನು ವಿತರಿಸಿದರು.
ಎರಡನೇ ವರ್ಷದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಾದ್ಯಂತ ಅರಣ್ಯ ಕ್ಷೇತ್ರದಲ್ಲಿ ಅರಣ್ಯ ರಕ್ಷಣೆ, ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಭದ್ರತೆ, ತಂತ್ರಜ್ಞಾನದ ಬಳಕೆ ಹಾಗೂ ಸಮುದಾಯ ಸಂಪರ್ಕ ವಿಭಾಗಗಳಲ್ಲಿ ಅನುಕರಣೀಯ ಕೆಲಸ ಮಾಡಿದ ಐಎಫ್‌ಎಸ್ ಅಧಿಕಾರಿಗಳಿಗೆ ನೀಡುವ ಪ್ರಶಸ್ತಿಯಾಗಿದೆ.
ಡಾ.ಪಿ.ರಮೇಶ್ ಕುಮಾರ್ ಕರ್ನಾಟಕ ಕೇಡರ್‌ನ 2008 ಬ್ಯಾಚ್‌ನ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯಾಗಿದ್ದಾರೆ. ರಾಜ್ಯದ ವನ್ಯಜೀವಿ ಪ್ರದೇಶ ಹಾಗೂ ಸಂರಕ್ಷಿತ ಪ್ರದೇಶಗಳಲ್ಲಿ 14 ವರ್ಷಗಳ ಕಾಲ ಕರ್ನಾಟಕದ ಅನೇಕ ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಜೀವಿಗಳನ್ನು ಒಳಗೊಂಡಂತೆ ವನ್ಯಜೀವಿಗಳ ರಕ್ಷಣೆ, ಸಂರಕ್ಷಣೆ ಮತ್ತು ವೈಜ್ಞಾನಿಕ ನಿರ್ವಹಣೆಗಾಗಿ ತಮ್ಮ ಸಂಪೂರ್ಣ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ.
“ಬಂಡಿಪುರ ಯುವ ಮಿತ್ರ” ಜನಸ್ಪಂದನ ಕಾರ್ಯಕ್ರಮ :
ಬಂಡೀಪುರದಲ್ಲಿ ಕಾರ್ಯನಿರ್ವಹಿಸುವಾಗ ಸ್ಥಳೀಯ ಜನರಲ್ಲಿ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು “ಬಂಡಿಪುರ ಯುವ ಮಿತ್ರ” ಎಂಬ ನವೀನ ಜನಸ್ಪಂದನ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿ, ಹಮ್ಮಿಕೊಂಡು ಈ ವನ್ಯಜೀವಿ ಜಾಗೃತಿಯಲ್ಲಿ ಗರಿಷ್ಠ ಮಟ್ಟದಲ್ಲಿ ಜನರು ಭಾಗವಹಿಸಿದ್ದರು. ಈ ಜನಸ್ಪಂದನಾ ಕಾರ್ಯಕ್ರಮವು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ (IBR) ನಿಂದ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.
ಅದೇ ರೀತಿ ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಹಿಂದುಳಿದ ಬುಡಕಟ್ಟುಗಳಿಗಾಗಿ ಅನೇಕ ಸಮುದಾಯ ಆಧಾರಿತ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ಅದನ್ನು ಜಾರಿಗೊಳಿಸಿದ್ದಾರೆ.
9 ವನ್ಯಜೀವಿ ನಿರ್ವಹಣೆ ಯೋಜನೆಗಳನ್ನು ಜಾರಿಗೊಳಿಸಿದ ಪ್ಲಾನರ್ :
ಇವರೊಬ್ಬ ಅನುಭವಿ ವನ್ಯಜೀವಿ ಮತ್ತು ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶ ಸೇರಿದಂತೆ 9 ವನ್ಯಜೀವಿ ನಿರ್ವಹಣೆ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಕ್ಷೇತ್ರದ ಅನುಭವದೊಂದಿಗೆ, ಅನೇಕ ಅಳಿವಿನಂಚಿನಲ್ಲಿರುವ, ವಿಮರ್ಶಾತ್ಮಕವಾಗಿ ಅಳಿವಿನಂಚಿನಲ್ಲಿರುವ ಮತ್ತು ರಾಜ್ಯದಲ್ಲಿ
ದುರ್ಬಲ ಜಾತಿಯ ವನ್ಯಜೀವಿಗಳ ಬಗ್ಗೆ ಅವರು ಬರೆದ 17 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿದೆ.
ಅಳಿವಿನಂಚಿನ ವನ್ಯಜೀವಿ ಸಂರಕ್ಷಣೆ :
ಮಾನವ-ವನ್ಯಜೀವಿ ಸಂಘರ್ಷವನ್ನು ನಿರ್ವಹಿಸುವಲ್ಲಿ, ಹುಲಿ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸುವಲ್ಲಿ ಅಪಾರ ಅನುಭವ ಮತ್ತು ಕೌಶಲ್ಯವನ್ನು ಹೊಂದಿದ್ದಾರೆ. ಗ್ರೇಟ್ ಇಂಡಿಯನ್ ಬಸ್ಟರ್ಡ್, ಲಯನ್-ಟೈಲ್ಡ್ ಮಕಾಕ್, ಗ್ರಿಜ್ಲ್ಡ್ ಜೈಂಟ್ ಅಳಿಲು, ಗೂನು ಬೆನ್ನಿನ ಮಹಾಸೀರ್ ಇತ್ಯಾದಿ ಪ್ರಾಣಿ- ಪಕ್ಷಿಗಳ ವನ್ಯಜೀವಿ ನಿರ್ವಹಣೆ ಯೋಜನೆ, ಚೇತರಿಕೆ ಮತ್ತು ಮೇಲ್ವಿಚಾರಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ.
ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ.ರಮೇಶ್ ಕುಮಾರ್ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತಂತೆ ಸವಿವರವಾಗಿ ವಿವರಿಸಿ ಇಲ್ಲಿನ ಕಾಡಿನ ಪರಿಚಯ ಮಾಡಿದ್ದರು.
ಇಕೋ ವಾರಿಯರ್ ಅವಾರ್ಡ್ ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಡೈರೆಕ್ಟರ್ ಜನರಲ್ ಎಸ್.ಪಿ ಯಾದವ್, ಸುಪ್ರೀಮ್ ಕೋರ್ಟ್ ಸೆಂಟ್ರಲ್ ಎಂಪವರ್ಡ್ ಕಮಿಟಿ (CEC) ಸದಸ್ಯ ಸಿ.ಪಿ. ಗೋಯಲ್, ಐಎಫ್ ಎಸ್ ಅಸೋಸಿಯೇಷನ್ ಅಧ್ಯಕ್ಷ ಅವಸ್ತಿ, ನಟ ರಣದೀಪ್ ಹೂಡಾ ಹಾಗೂ ಹಲವು ಐಎಫ್ ಎಸ್ ಅಧಿಕಾರಿಗಳು ಈ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.