ಬೆಂಗಳೂರು, ಸೆ.18 www.bengaluruwire.com : ನೆಲಮಂಗಲ ರೈಲು ನಿಲ್ದಾಣದಲ್ಲಿ ಬುಧವಾರ ರೈಲಿನ ಬೋಗಿಗಳು ಹಳಿತಪ್ಪಿದ್ದವು. ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸುವ ಕೆಲಸದಲ್ಲಿ ರೈಲ್ವೆ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಆಂಬುಲೆನ್ಸ್, ಅಗ್ನಿಶಾಮಕ ಪಡೆ ನಿರತವಾಗಿದ್ದವು.
ಆದರೆ ಇಲ್ಲಿ ರೈಲು ಅಪಘಾತವಾಗಿರಲಿಲ್ಲ. ಬದಲಿಗೆ ಅಂತಹ ಪರಿಸ್ಥಿತಿಯ ತದ್ರೂಪು ಸೃಷ್ಟಿಸಿ, ಬೃಹತ್ ಸನ್ನದ್ಧತೆಯ ಅಣುಕು ಪ್ರದರ್ಶನ ಇದಾಗಿತ್ತು. ನೈಋತ್ಯ ರೈಲ್ವೆಯ ಬೆಂಗಳೂರು ರೈಲ್ವೆ ವಿಭಾಗವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ಅಧಿಕಾರಿಗಳ ಸಹಯೋಗದೊಂದಿಗೆ ಬುಧವಾರ, ನೆಲಮಂಗಲ ರೈಲು ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ಅಣಕು ಡ್ರಿಲ್ ಅನ್ನು ಆಯೋಜಿಸಿತ್ತು.
ಅನುಕರಿಸಿದ ರೈಲ್ವೆ ಅಪಘಾತದ ಸನ್ನಿವೇಶ:
ರೈಲು ಅಪಘಾತವನ್ನು ಅನುಕರಿಸಲು ಮೂರು ಹಳೆಯ ಕೋಚ್‌ಗಳನ್ನು ಇರಿಸಲಾಗಿತ್ತು, ಎರಡು ಹಳಿತಪ್ಪಿದ ಮತ್ತು ಒಂದು ಮಗುಚಿದ ಮತ್ತು ಬೆಂಕಿ ಹೊತ್ತಿಕೊಂಡ ಬೋಗಿಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ತುರ್ತು ಸ್ಪಂದನಾ ತಂಡಗಳು ತ್ವರಿತವಾಗಿ ಸ್ಪಂದಿಸಿದವು. ಪ್ರಯಾಣಿಕರನ್ನು ರಕ್ಷಿಸಲು ಸುಧಾರಿತ ಸಾಧನಗಳನ್ನು ಬಳಸಿ ಅವರನ್ನು ಆ ಬೋಗಿಗಳಿಂದ ಹೊರತಂದವು.
ವಿವಿಧ ಇಲಾಖೆ- ತಂಡಗಳ ಸಮನ್ವಯತೆ :
ಡೆಪ್ಯುಟಿ ಕಮಾಂಡೆಂಟ್ ಅಖಿಲೇಶ್ ಕುಮಾರ್ ಚೌಬೆ ನೇತೃತ್ವದ ಎನ್‌ಡಿಆರ್‌ಎಫ್ ತಂಡವು ರೈಲ್ವೆ ಸಿಬ್ಬಂದಿ, ಅಗ್ನಿಶಾಮಕ ಸೇವೆಗಳು ಮತ್ತು ಆಂಬ್ಯುಲೆನ್ಸ್ ಸೇವೆಗಳೊಂದಿಗೆ ಪರಿಣಾಮಕಾರಿ ಸಮನ್ವಯ ಮತ್ತು ರಕ್ಷಣಾ ಸಾಧನಗಳ ತ್ವರಿತ ನಿಯೋಜನೆಯನ್ನು ಪ್ರದರ್ಶಿಸಲು ಕೆಲಸ ಮಾಡಿದವು.
ಪ್ರಯಾಣಿಕರ ಸುರಕ್ಷತೆಗೆ ಸಿದ್ಧತೆಯ ಕೀಲಿ ಕೈ:
ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಸನ್ನದ್ಧತೆಯು ನಿರ್ಣಾಯಕ ಪ್ರಾಮುಖ್ಯತೆಯನ್ನು ಈ ಅಣುಕು ಪ್ರದರ್ಶನವು ಎತ್ತಿ ತೋರಿಸಿದೆ. ರೈಲ್ವೆ ಇಲಾಖೆ, ಎನ್‌ಡಿಆರ್‌ಎಫ್ ಮತ್ತು ಇತರ ಏಜೆನ್ಸಿಗಳು ಅಣಕು ಡ್ರಿಲ್‌ನಲ್ಲಿ ತಮ್ಮ ಕೌಶಲ್ಯ ಮತ್ತು ತಂತ್ರಗಳನ್ನು ಪ್ರದರ್ಶಿಸಿದವು.
ಉಪ ಕಮಾಂಡೆಂಟ್ ಅಖಿಲೇಶ್ ಕುಮಾರ್ ಚೌಬೆ ನೇತೃತ್ವದ ಎನ್‌ಡಿಆರ್‌ಎಫ್ ತಂಡವು 30 ರಕ್ಷಣಾ ಸಿಬ್ಬಂದಿಯನ್ನು ಒಳಗೊಂಡಿತ್ತು. ಜೊತೆಗೆ ಅಗ್ನಿಶಾಮಕ ಸೇವೆಗಳು, 108 ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ, ಕ್ಯಾರೇಜ್ ಮತ್ತು ವ್ಯಾಗನ್, ಸಿಗ್ನಲ್ ಮತ್ತು ಟೆಲಿಕಾಂ, ಎಲೆಕ್ಟ್ರಿಕಲ್, ಸರ್ಕಾರಿ ರೈಲ್ವೆ ಪೊಲೀಸ್ ಸೇರಿದಂತೆ ವಿವಿಧ ರೈಲ್ವೆ ಸಿಬ್ಬಂದಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಈ ತಂಡದಲ್ಲಿದ್ದರು.
ಬೆಂಗಳೂರಿನ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹಾಗೂ ಕಾರ್ಯಾಚರಣೆಯ ಮುಖ್ಯಸ್ಥರಾದ ಪರೀಕ್ಷಿತ್ ಮೋಹನಪುರಿಯವರ ಮೇಲ್ವಿಚಾರಣೆಯಲ್ಲಿ ಈ ಅಣುಕು ಪ್ರದರ್ಶನ ನಡೆಯಿತು. ಜೊತೆಗೆ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ (ಡೀಸೆಲ್ ಮತ್ತು ವಿಪತ್ತು ನಿರ್ವಹಣೆ) ಎಸ್‌ಡಬ್ಲ್ಯೂಆರ್ ಎಚ್. ವಿಜಯ ಕುಮಾರ್ ಮತ್ತು ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ಎಂ. ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.