ಬೆಂಗಳೂರು, ಸೆ.12 www.bengaluruwire.com : ವೈದ್ಯರು ಕನ್ನಡದಲ್ಲಿ ಔಷಧಿ ಚೀಟಿ (Prescriptions in Kannada) ಬರೆಯುವುದನ್ನು ಕಡ್ಡಾಯಗೊಳಿಸಬೇಕು ಎಂಬ ಸಲಹೆ ಅನುಷ್ಠಾನದ ಬಗ್ಗೆ ಇರುವ ತಾಂತ್ರಿಕ ತೊಂದರೆಗಳ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರಿಗೆ ಪತ್ರ ಬರೆದು ವಿವರಿಸಿದ್ದಾರೆ.
ಇತ್ತೀಚೆಗಷ್ಟೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸರ್ಕಾರಿ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯರು ರಾಜ್ಯದ ಅಧಿಕೃತ ಭಾಷೆಯಾದ ಕನ್ನಡದಲ್ಲಿ ಔಷಧಿ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಒತ್ತಾಯಿಸಿತ್ತು. ಈ ಹಿನ್ನಲೆಯಲ್ಲಿ ಆರೋಗ್ಯ ಸಚಿವರು ಪ್ರಾಧಿಕಾರಕ್ಕೆ ಬರೆದಿರುವ ಪತ್ರವು ಮಹತ್ವ ಪಡೆದುಕೊಂಡಿದೆ.
“ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ತಾವು ಮಾಡಿರುವ ಸಲಹೆ ಅತ್ಯಂತ ಮಹತ್ವಪೂರ್ಣ ವಿಷಯ ಎನಿಸಿತು. ನೂರಾರು ವೈದ್ಯರು ತಮ್ಮ ಮಾತುಗಳಿಂದ ಪ್ರೇರಿತರಾಗಿ ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ತಮ್ಮಲ್ಲಿ ಹಂಚಿಕೊಂಡಿದ್ದಾರೆ ಎನ್ನುವುದು ಸಹ ನಿಜಕ್ಕೂ ಸಂತಸದ ಸಂಗತಿ” ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
“ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸುವ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ಸಂಗತಿಗಳು ಮಿಳಿತವಾಗಿದೆ. ವೈದ್ಯರು, ರೋಗಿಗಳು, ಶುಶ್ರೂಷಕರು, ಔಷಧಿ ವರ್ತಕರು ಮುಂತಾದ ಹತ್ತು ಹಲವರು ಈ ವ್ಯವಸ್ಥೆಯಲ್ಲಿ ಒಂದು ಕೊಂಡಿಯಾಗಿದ್ದು, ಸರಿಯಾಗಿ ಕನ್ನಡವನ್ನು ಅರ್ಥೈಸಿಕೊಳ್ಳುವುದರಲ್ಲಿ ಎಡವಿದರೂ ರೋಗಿಗಳ ಜೀವನ್ಮರಣದ ಪ್ರಶ್ನೆಯಾಗುವ ಸಾಧ್ಯತೆಯೂ ಇದೆ” ಎಂಬ ಗಂಭೀರ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವೈದ್ಯ ವಿಜ್ಞಾನ ಸಾಕಷ್ಟು ವಿಶಾಲ ಮತ್ತು ಸಂಕೀರ್ಣ ಕ್ಷೇತ್ರ :
“ಜನರ ಆರೋಗ್ಯವನ್ನು ಕಾಯುವ ವೈದ್ಯಕೀಯ ವಿಜ್ಞಾನ ಕ್ಷೇತ್ರ ಅತ್ಯಂತ ವಿಶಾಲ ಮತ್ತು ಸಂಕೀರ್ಣವಾಗಿದ್ದು, ಪ್ರಮುಖ ಬದಲಾವಣೆಗಳ ಮುನ್ನ ಎಲ್ಲ ಭಾಗಿದಾರರುಗಳ ಜೊತೆಗೆ ಪೂರ್ವಸಂವಾದ ಅಗತ್ಯ ಎನ್ನುವುದು ನನ್ನ ಭಾವನೆ. ಇದು ಕೇವಲ ಒಂದು ಆದೇಶದ ಮೂಲಕ ಜಾರಿಗೆ ಬರುವ ವಿಚಾರವಲ್ಲ. ಕನ್ನಡದಲ್ಲಿ ವೈದ್ಯಕೀಯ ವ್ಯವಹಾರದ ಅನುಷ್ಠಾನ ಪೂರ್ವದಲ್ಲಿ ಸಾಧಕ ಬಾಧಕಗಳ ಬಗ್ಗೆ ವಿಸ್ತ್ರತ ಚರ್ಚೆ ಅತ್ಯಗತ್ಯ ಎನ್ನುವುದನ್ನು ತಾವೂ ಒಪ್ಪಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ.”
ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಭಾಗೀದಾರರ ಸಹಮತಿಯೊಂದಿಗೆ ಜಾರಿಗೆ ಕ್ರಮ :
“ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಔಚಿತ್ಯಪೂರ್ಣ ಸಲಹೆಯನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದು ಆಸಕ್ತರ ಸಹಮತಿಯೊಂದಿಗೆ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಮಗೆ ತಿಳಿಯಬಯಸುತ್ತೇನೆ” ಎಂದು ಪತ್ರದಲ್ಲಿ ಹೇಳಿದ್ದಾರೆ.
ಈ ಪತ್ರ ಬರೆಯುವುದಕ್ಕೂ ಮುನ್ನ, ವೈದ್ಯಕೀಯ ಪರಿಭಾಷೆ ಮತ್ತು ಔಷಧ ಚೀಟಿ ಬರೆಯುವ ವಿಷಯವು ಹೊಂದಿಕೊಳ್ಳುವಂತಿರಬೇಕು. ಕನ್ನಡ ತಿಳಿದ ವೈದ್ಯರು ಔಷಧಿ ಚೀಟಿಯನ್ನು ಕನ್ನಡದಲ್ಲಿ ಬರೆದುಕೊಟ್ಟರೆ ಸಂತೋಷ. ಆದರೆ ಆ ರೀತಿ ಬರೆಯುವಂತೆ ಕಡ್ಡಾಯಗೊಳಿಸುವುದು ಪ್ರಾಯೋಗಿಕವಾಗಿ ಸೂಕ್ತವಾದ ಕ್ರಮವಲ್ಲ ಎಂದು ಇನ್ನೊಂದು ಕಡೆ ಆರೋಗ್ಯ ಸಚಿವರು ಪ್ರತಿಕ್ರಿಯೆ ನೀಡಿದ್ದರು.
ಕನ್ನಡದಲ್ಲಿ ಔಷಧ ಚೀಟಿ ಬರೆಯುವ ವೈದ್ಯರನ್ನು ಸನ್ಮಾನಿಸಿ :
ಕೆಡಿಎ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಕನ್ನಡದಲ್ಲಿ ಔಷಧಿ ಚೀಟಿ ಬರೆದು ಕನ್ನಡ ಅಭಿಮಾನ ಮೆರೆಯುವ ವೈದ್ಯರನ್ನು ಗುರ್ತಿಸಿ ಪ್ರತಿ ವರ್ಷ ವೈದ್ಯರ ದಿನಾಚರಣೆಯಂದು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ವೈದ್ಯರಿಗೆ ಸನ್ಮಾನ ಮಾಡುವಂತೆ ಸಲಹೆ ನೀಡಿದ್ದರು. ಇದರಿಂದ ಕನ್ನಡ ಭಾಷೆಯ ಪ್ರಗತಿಗೆ ಹೆಚ್ಚಿನ ಸಹಕಾರಿಯಾಗಲಿದ್ದು, ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಈ ಮೂಲಕ ಮನವಿ ಮಾಡುತ್ತೇನೆ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ಈ ಹಿಂದೆ ತಿಳಿಸಿದ್ದರು.
ಇದಲ್ಲದೆ ಡಾ.ಪುರುಷೋತ್ತಮ ಬಿಳಿಮಲೆ ‘ಮಾಧ್ಯಮಗಳಲ್ಲಿ ಓದಿದ ನೂರಾರು ವೈದ್ಯರು ಸ್ವಯಂಪ್ರೇರಿತರಾಗಿ ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ಭಾಷೆ ಉಳಿಸಲು ಮುಂದಾಗುತ್ತೇವೆ’ ಎಂದಿದ್ದಾರೆ. ಅವರಲ್ಲಿ ಹಲವರು ಕನ್ನಡದಲ್ಲಿ ಬರೆದ ಪ್ರಿಸ್ಕ್ರಿಪ್ಷನ್‌ಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು.