ಬೆಂಗಳೂರು, ಸೆ.11 www.bengaluruwire.com : ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್ ಪ್ರೆಸ್ ವೇನಲ್ಲಿ ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ (Global Navigation Satallite System – GNSS) ಅಳವಡಿಸಿಕೊಳ್ಳುವ ಖಾಸಗಿ ವಾಹನಗಳು ಪ್ರತಿದಿನ 20 ಕಿ.ಮೀ ತನಕ ಶುಲ್ಕ ಪಾವತಿಸದೇ ಸಂಚರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕಾನೂನಿಗೆ ಮಂಗಳವಾರ ತಿದ್ದುಪಡಿ ತಂದಿದೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆ 2008ರ ನಿಯಮಗಳಲ್ಲಿ ಬದಲಾವಣೆಯನ್ನು ತಂದಿದ್ದು, ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ. ಈ ಸಂಬಂಧ ಹೊಸ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದೆ. ಹೊಸ ನಿಯಮವು ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ರಸ್ತೆಗೆ ಮಾತ್ರ ಸದ್ಯಕ್ಕೆ ಅಳವಡಿಕೆಯಾಗಲಿದೆ. ಹಂತ ಹಂತವಾಗಿ ಇತರ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಾರಿಗೆ ಬರುತ್ತದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಬದಿಯ ಗ್ರಾಮಗಳ ವಾಹನ ಚಾಲಕರಿಗೆ ಅನುಕೂಲವಾಗುತ್ತೆ.
ಪ್ರಸ್ತುತ, ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ನಿಯಮಗಳಿಗೆ ಅನುಗುಣವಾಗಿ ಹೆದ್ದಾರಿಯ ಬಳಕೆದಾರರ ಶುಲ್ಕವನ್ನು ಟೋಲ್ ಪ್ಲಾಜಾಗಳಲ್ಲಿ ವಿಧಿಸಲಾಗುತ್ತಿದೆ. ಆದರೆ ಹೊಸ ನಿಯಮಗಳ ಪ್ರಕಾರ ಜಿಎನ್‌ಎಸ್‌ಎಸ್ ವ್ಯವಸ್ಥೆ ಅನ್ವಯ ಟೋಲ್ ಸಂಗ್ರಹ ಮಾಡಲಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಈ ಮಾದರಿ ಜಾರಿಗೆಯಾಗಲಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆಯ ಅನ್ವಯ ಜಿಎನ್‌ಎಸ್‌ಎಸ್ ವ್ಯವಸ್ಥೆ ಅಳವಡಿಕೆ ಮಾಡಿದ ವಾಹನಗಳಿಗೆ 20 ಕಿ. ಮೀ. ಪ್ರಯಾಣದ ಬಳಿಕ ಮಾತ್ರ ಟೋಲ್ ಪಾವತಿಸಬೇಕು. ಮೊದಲ 20 ಕಿ. ಮೀ. ಪ್ರಯಾಣಕ್ಕೆ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಇದರಿಂದಾಗಿ ವಾಹನ ಸವಾರರಿಗೆ ಅಷ್ಟರ ಮಟ್ಟಿಗೆ ಅನುಕೂಲವಾಗಲಿದೆ.
ಪ್ರಾಯೋಗಿಕವಾಗಿ ರಾಜ್ಯದಲ್ಲಿ ಜಾರಿ :
ಕರ್ನಾಟಕದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ 275, ಪಾಣಿಪತ್-ಹಿಸ್ಸಾರ್ ರಾಷ್ಟ್ರೀಯ ಹೆದ್ದಾರಿ 709 ರಸ್ತೆಯಲ್ಲಿ ಟೋಲ್ ಪ್ಲಾಜಾದಲ್ಲಿನ ಫಾಸ್ಟ್ ಟ್ಯಾಗ್ ಬದಲು ಜಿಎನ್‌ಎಸ್‌ಎಸ್ ಮೂಲಕ ಪ್ರಾಯೋಗಿಕವಾಗಿ ಟೋಲ್ ವ್ಯವಸ್ಥೆ ಜಾರಿ ಮಾಡಲು ಸಚಿವಾಲಯ ನಿರ್ಧರಿಸಿದೆ.
ಈ ಹೊಸ ನಿಯಮದ ಅನ್ವಯ ಖಾಸಗಿ ವಾಹನ ಚಾಲಕರು ರಾಷ್ಟ್ರೀಯ ಹೆದ್ದಾರಿ, ಸೇತುವೆ, ಬೈಪಾಸ್ ಅಥವಾ ಸುರಂಗ ಮಾರ್ಗದಲ್ಲಿ ನಿಗದಿಪಡಿಸಿರುವ ದೂರದವರೆಗೆ ಎರಡೂ ಬದಿಯ ಪ್ರತಿ ದಿನದ ಪ್ರಯಾಣದಲ್ಲಿ ಉಚಿತವಾಗಿ ಸಂಚರಿಸಬಹುದು.
20 ಕಿ. ಮೀ. ಉಚಿತ ಪ್ರಯಾಣ ಎಂಬುದು ಒಂದು ದಿನದ ಪ್ಯಾಕೇಜ್ ಆಗಿದೆ. ಎರಡೂ ದಿಕ್ಕಿನ ದಿನದ ಪ್ರಯಾಣಕ್ಕೆ ಈ ನಿಯಮ ಅನ್ವಯವಾಗುತ್ತದೆ. ಫಾಸ್ಟ್‌ಟ್ಯಾಗ್ ಮಾದರಿಯಲ್ಲಿ ಟೋಲ್ ವ್ಯಾಪ್ತಿಗೆ ಒಳಪಟ್ಟ ಅಷ್ಟೂ ದೂರಕ್ಕೆ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಸದ್ಯ ಕರ್ನಾಟಕದಲ್ಲಿ ಒಂದು ರಸ್ತೆಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ.
ಆಯ್ದ ಹೆದ್ದಾರಿಗಳಲ್ಲಿ ಜಿಎನ್ ಎಸ್ ಎಸ್ ವ್ಯವಸ್ಥೆ ಹಂತ ಹಂತವಾಗಿ ಜಾರಿ :
ಹೊಸ ತಿದ್ದುಪಡಿ ನಿಯಮದ ಆಧಾರಿತವಾಗಿ ಫಾಸ್ಟ್ಯಾಗ್ ವ್ಯವಸ್ಥೆ ಬಳಸಿಕೊಂಡೇ ಜಿಎನ್ ಎಸ್ ಎಸ್ – ಇಟಿಸಿ ವ್ಯವಸ್ಥೆ ಜಾರಿಗೆ ಬರಲಿದೆ. ಕೆಲ ಕಾಲ ಪ್ರಸ್ತುತ ಚಾಲ್ತಿಯಲ್ಲಿರುವ ಆರ್ ಎಫ್ ಐಡಿ (Radio Frequency Identification) ಹಾಗೂ ಇಟಿಸಿ ಮತ್ತು ನೂತನ ವ್ಯವಸ್ಥೆ ಎರಡೂ ಕೂ ಜಾರಿಯಲ್ಲಿರುತ್ತದೆ. ಆನಂತರವಷ್ಟೇ ದೇಶದ ಆಯ್ದ ಹೆದ್ದಾರಿಗಳಲ್ಲಿ ಜಿಎನ್ ಎಸ್ ಎಸ್ ಆಧಾರಿತ ಇಟಿಸಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿಳಿಸಿದೆ.
ಜಿಎನ್ ಎಸ್ ಎಸ್ ವ್ಯವಸ್ಥೆ ಸಕ್ರಿಯಗೊಳಿಸಿ ಆನ್ ಬೋರ್ಡ್ ಯೂನಿಟ್ ಗಳನ್ನು ಅಳವಡಿಸಿಕೊಂಡ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದರೆ ಅವುಗಳನ್ನು ಟ್ರಾಕ್ ಮಾಡಿ ಉಪಗ್ರಹಕ್ಕೆ ಮಾಹಿತಿ ರವಾನೆಯಾಗಲಿದೆ. ಇದನ್ನು ಆಧರಿಸಿ ಶುಲ್ಕ ವಿಧಿಸಲಾಗುತ್ತದೆ. ಇಂತಹ ವಾಹನಗಳಿಗೆಂದೇ ಪ್ರತ್ಯೇಕ ಮಾರ್ಗ ಕಲ್ಪಿಸಲಾಗುತ್ತದೆ. ಒಂದು ವೇಳೆ ಈ ಸಿಸ್ಟಮ್ ಇಲ್ಲದ ವಾಹನಗಳು ಈ ಮಾರ್ಗದಲ್ಲಿ ಸಂಚಾರ ಮಾಡಿದರೆ ಅದರ ಚಾಲಕರು ದುಪ್ಪಟ್ಟು ಶುಲ್ಕ ಕಟ್ಟಬೇಕಾಗುತ್ತದೆ.