ಲಂಡನ್, ಸೆ.2 www.bengaluruwire.com : ರಾತ್ರಿ ವೇಳೆಯ ಕತ್ತಲೆಯಲ್ಲೂ ಭೂಮಿಯ ಮೇಲಿನ ಸೌರಫಲಕದಿಂದ ವಿದ್ಯುತ್ ಉತ್ಪಾದಿಸಬಹುದು…!! ಅರೆ ಇದೇನು ಆಶ್ಚರ್ಯ ಅಂತ ತಿಳಿದುಕೊಂಡರಾ, ಮುಂದಿನ ವರ್ಷದ ವೇಳೆಗೆ ಇದು ನಿಜವಾಗಲಿದೆ.
ಕೋಲಾರ, ಪಾವಗಡ ಮೊದಲಾದ ಕಡೆ ಇಂಧನ ಇಲಾಖೆ ಖಾಸಗಿಯವರ ಸಹಕಾರದಿಂದ ಸೌರಫಲಕದ ಪಾರ್ಕ್ ನಿರ್ಮಿಸಿದ್ದು, ಬೆಳಗಿನ ಹೊತ್ತು ವಿದ್ಯುತ್ ಉತ್ಪಾದಿಸುತ್ತಿದೆ. ಇದೇ ರೀತಿ ಜಗತ್ತಿನ ಹಲವು ದೇಶಗಳಲ್ಲ ಸೌರ ಪಾರ್ಕಿನಲ್ಲಿ ಸೂರ್ಯನ ಬೆಳಕಿರುವಷ್ಟು ಹೊತ್ತು ವಿದ್ಯುತ್ ಉತ್ಪಾದನೆಯಾಗಿ ಅವು ವಿದ್ಯುತ್ ಜಾಲಕ್ಕೆ ಸೇರುತ್ತಿದೆ.
ಕ್ಯಾಲಿಫೋರ್ನಿಯಾ ಮೂಲದ ರಿಫ್ಲೆಕ್ಟ್ ಆರ್ಬಿಟಲ್ (Reflect Orbital) ಸ್ಟಾರ್ಟ್‌ಅಪ್ (Startup) ಕಕ್ಷೆಯಲ್ಲಿ ಕನ್ನಡಿಗಳ ಸಮೂಹವನ್ನು ಹೊತ್ತ ಉಪಗ್ರಹಗಳನ್ನು ಹಾರಿಸಿ, ಕತ್ತಲೆಯ ನಂತರ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಸೌರ ವಿದ್ಯುತ್ ಸ್ಥಾವರಗಳಿಗೆ ಸೂರ್ಯನ ಬೆಳಕನ್ನು ನೀಡುವ ಯೋಜನೆ ರೂಪಿಸುತ್ತಿದೆ. ಈ ಕನ್ನಡಿಗಳನ್ನು ಹೊತ್ತ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಉಪಗ್ರಹವು ಮುಂದಿನ ವರ್ಷ ಕಕ್ಷೆಗೆ ಹಾರಿಸುವ ಆಲೋಚನೆಯನ್ನು ಸಂಸ್ಥೆ ಹೊಂದಿದೆ.
ಸೂರ್ಯನ ಬೆಳಕು ಪ್ರತಿಫಲಿಸುವ ಉಪಗ್ರಹಗಳ ಉಡಾವಣೆ :
ರಿಫ್ಲೆಕ್ಟ್ ಆರ್ಬಿಟಲ್‌ನ ಸಂಸ್ಥಾಪಕ ಮತ್ತು ಸಿಇಒ ಬೆನ್ ನೊವಾಕ್ ಅವರು ಇತ್ತೀಚೆಗೆ ನಡೆದ ಬಾಹ್ಯಾಕಾಶದಿಂದ ಶಕ್ತಿಯ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕಂಪನಿಯ ಯೋಜನೆಗಳನ್ನು ಪರಿಚಯಿಸಿದ್ದಾರೆ. 370 ಮೈಲುಗಳ (600 ಕಿಲೋಮೀಟರ್‌ಗಳು) ಎತ್ತರದಲ್ಲಿ ಸೂರ್ಯ ಕೇಂದ್ರಿತ ಧ್ರುವೀಯ ಕಕ್ಷೆಯ ರಚನೆಯಲ್ಲಿ ಭೂಮಿಯ ಸುತ್ತ ಸುತ್ತುವ ಕನ್ನಡಿಯಿಂದ ಸೂರ್ಯನ ಬೆಳಕನ್ನು ಪ್ರತಿಫಲಿಸುವ 57 ಸಣ್ಣ ಉಪಗ್ರಹಗಳ ಸಮೂಹವನ್ನು ಕಕ್ಷೆಗೆ ಹಾರಿಬಿಡಲಾಗುತ್ತದೆ. ಇವು ಆ ಕಕ್ಷೆಯಲ್ಲಿ, ಧ್ರುವದಿಂದ ಧ್ರುವಕ್ಕೆ ಭೂಮಿಯ ಮೇಲ್ಭಾಗ ಸುತ್ತುತ್ತವೆ. ಆ ಉಪಗ್ರಹಗಳು ದಿನದ ಒಂದೇ ಸಮಯದಲ್ಲಿ ಭೂಮಿಯ ಮೇಲಿನ ಪ್ರತಿಯೊಂದು ಸ್ಥಳದ ಮೇಲೆ ಹಾರುತ್ತವೆ. ಪ್ರತಿ 24 ಗಂಟೆಗಳಿಗೆ ಎರಡು ಬಾರಿ ಭೂಮಿಯನ್ನು ಸುತ್ತುತ್ತವೆ. ಇದರ ಸಂಯೋಜನೆಯಿಂದ 57 ಉಪಗ್ರಹಗಳು, ವಿದ್ಯುತ್ ಶಕ್ತಿಯು ಹೆಚ್ಚು ಅಗತ್ಯವಿರುವ ಸಮಯದಲ್ಲಿ, ವಿದ್ಯುತ್ ಸ್ಥಾವರಗಳಿಗೆ ಹೆಚ್ಚುವರಿ 30 ನಿಮಿಷಗಳ ಸೂರ್ಯನ ಬೆಳಕನ್ನು ಒದಗಿಸುತ್ತವೆ ಎಂದು ನೋವಾಕ್ ಹೇಳಿದ್ದಾರೆ.
“ಸಮಸ್ಯೆಯೆಂದರೆ ನಾವು ನಿಜವಾಗಿಯೂ ಬಯಸಿದಾಗ ಸೌರಶಕ್ತಿ ಲಭ್ಯವಿರುವುದಿಲ್ಲ. ನಾವು ಹೆಚ್ಚು ಹೆಚ್ಚು ಸೌರ ಪಾರ್ಕ್ ಗಳನ್ನು ನಿರ್ಮಿಸುತ್ತಿದ್ದೇವೆ. ಆದರೆ ಹಗಲಿನಲ್ಲಿ ಜನರಿಗೆ ಅದರ ಅಗತ್ಯ ರಾತ್ರಿಗೆ ಹೋಲಿಸಿದರೆ ಕಡಿಮೆಯಿರುತ್ತದೆ. ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತದ ನಂತರ ನಾವು ಸ್ವಲ್ಪ ಸೌರ ಶಕ್ತಿಯನ್ನು ಪಡೆದರೆ ಅದು ನಿಜವಾಗಿಯೂ ಉತ್ತಮವಾಗಿರುತ್ತದೆ. ಏಕೆಂದರೆ ಆಗ ಅಂತಹ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಬೆಲೆಗಳನ್ನು ವಿಧಿಸಬಹುದು ಮತ್ತು ಬಹಳಷ್ಟು ಕಾರ್ಯಗಳನ್ನು ಮಾಡಬಹುದು. ಹೆಚ್ಚು ಹಣ ಮತ್ತು ಪ್ರತಿಫಲಕ ಆಧಾರಿತ ತಂತ್ರಜ್ಞಾನಗಳು ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಪ್ರತಿಫಲನ ಕಕ್ಷಾ ಉಪಗ್ರಹಗಳು ಸ್ವರೂಪ ಹೇಗಿರುತ್ತೆ? :
ರಿಫ್ಲೆಕ್ಟ್ ಆರ್ಬಿಟಲ್‌ನ ಉಪಗ್ರಹಗಳು ಪ್ರತಿಯೊಂದೂ ಕೇವಲ 35 ಪೌಂಡ್‌ಗಳು (16 ಕಿಲೋಗ್ರಾಂಗಳು) ತೂಗುತ್ತವೆ ಮತ್ತು ಕಕ್ಷೆಯಲ್ಲಿ ನಿಯೋಜಿಸುವ ಗಾತ್ರದಲ್ಲಿ 33 ಅಡಿಯಿಂದ 33 ಅಡಿಗಳಷ್ಟು (9.9 ರಿಂದ 9.9 ಮೀಟರ್‌ಗಳು) ಮೈಲಾರ್ ಕನ್ನಡಿಗಳೊಂದಿಗೆ ಅಳವಡಿಸಲ್ಪಡುತ್ತವೆ. ಮೈಲಾರ್ ಬಾಹ್ಯಾಕಾಶ ಹೊದಿಕೆಗಳು, ಅವಾಹಕಗಳು ಮತ್ತು ಪ್ಯಾಕೇಜಿಂಗ್‌ಗಳಲ್ಲಿ ಬಳಸಲಾಗುವ ಪ್ಲಾಸ್ಟಿಕ್ ವಸ್ತುವಾಗಿದೆ. ಸೌರ ಫಾರ್ಮ್ ಆಪರೇಟರ್‌ಗಳ ಬೇಡಿಕೆಯ ಆಧಾರದ ಮೇಲೆ ಚಲಿಸುವ ಮತ್ತು ಕೇಂದ್ರೀಕರಿಸಬಹುದಾದ ಬಿಗಿಯಾದ ಕಿರಣಕ್ಕೆ ಬೆಳಕನ್ನು ಕೇಂದ್ರೀಕರಿಸಲು ಕನ್ನಡಿಗಳನ್ನು ವಿನ್ಯಾಸಗೊಳಿಸಲಾಗಿದೆ.
ರಾತ್ರಿ ಸೂರ್ಯನ ಬೆಳಕು ಬೇಕಾದರೆ ನಿಮ್ಮ ಸ್ಥಳದ ಮಾಹಿತಿ ಕೊಡಿ :
“ನಾವು ಅದನ್ನು ಸಾಧ್ಯವಾದಷ್ಟು ಭೂಮಿ ಮೇಲಿನ ಸೌರಫಲಕಗಳಿಗೆ ರಾತ್ರಿ ವೇಳೆ ಸೂರ್ಯನ ಬೆಳಕು ನೀಡುವ ಸೇವೆ ಸುಲಭಗೊಳಿಸಲು ಬಯಸುತ್ತೇವೆ. ನಮ್ಮ ವೆಬ್‌ಸೈಟಿಗೆ ಲಾಗ್ ಇನ್ ಮಾಡಿ, ಅತಗ್ಯವಿರುವ ಸ್ಥಳದ ಜಿಪಿಎಸ್ ಕೋ ಆರ್ಡಿನೇಟ್ಸ್ ನಿರ್ದೇಶಾಂಕಗಳನ್ನು ನಮಗೆ ತಿಳಿಸಿದರೆ, ಕತ್ತಲೆಯ ನಂತರ ನಾವು ನಿಮಗೆ ಸೂರ್ಯನ ಬೆಳಕನ್ನು ನೀಡುತ್ತೇವೆ. ಬೆಳಕಿನ ಮಾಲಿನ್ಯವನ್ನು ತಡೆಗಟ್ಟಲು ಕನ್ನಡಿಗಳನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
“ನೀವು ಸೌರ ಪಾರ್ಕಿನ ಅಂಚಿನಿಂದ ಸುಮಾರು 10 ಕಿಲೋಮೀಟರ್ [6 ಮೈಲುಗಳು] ದೂರದಲ್ಲಿದ್ದರೆ, ನೀವು ನೇರವಾಗಿ ಆಕಾಶಕ್ಕೆ ನೋಡಿದರೆ ನಿಮಗೆ ಯಾವುದೇ ಬೆಳಕು ಕಾಣುವುದಿಲ್ಲ. ನೀವು ಸೌರ ಫಾರ್ಮ್‌ನ ದಿಕ್ಕಿನಲ್ಲಿ ನೋಡಿದರೆ ಮಾತ್ರ ಕೆಲವು ನಿರ್ಮಾಣ ಕಾರ್ಯಗಳು ನಡೆಯುತ್ತಿರುವಂತೆ ಕೆಲವು ರೀತಿಯ ಹೊಳೆಯುವ ಬೆಳಕನ್ನು ನೋಡಬಹುದು” ಎಂದು ವಿವರಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ, ರಿಫ್ಲೆಕ್ಟ್ ಆರ್ಬಿಟಲ್ ತನ್ನ ಕನ್ನಡಿಯನ್ನು ಸೌರ ಫಾರ್ಮ್‌ನ ಮೇಲೆ 1.7 ಮೈಲಿಗಳಿಂದ (3 ಕಿಮೀ) ತೇಲುತ್ತಿರುವ ಬಿಸಿ ಗಾಳಿಯ ಬಲೂನ್‌ನಲ್ಲಿ ಪರೀಕ್ಷಿಸಿತು. ಕಂಪನಿಯು, ಪ್ರತಿ ಚದರ ಮೀಟರ್‌ಗೆ 500 ವ್ಯಾಟ್‌ಗಳ ವಿದ್ಯುತ್ ಶಕ್ತಿಯನ್ನು (11 ಚದರ ಅಡಿ) ಸೌರ ಫಲಕದ ಮೂಲಕ ಉತ್ಪಾದಿಸಲು ಸಾಧ್ಯವಾಯಿತು. ನಮ್ಮ ಪ್ರಕಾರ ಇದು ಸೂರ್ಯನ ಅರ್ಧದಷ್ಟು ಪ್ರಕಾಶಮಾನವಾಗಿದೆ. ಮುಂದಿನ ವರ್ಷ ಬಾಹ್ಯಾಕಾಶದಲ್ಲಿ ತನ್ನ ಮೊದಲ ಪರೀಕ್ಷಾ ಉಪಗ್ರಹವನ್ನು ಹಾರಿಸಲು ಕಂಪನಿಯು ಹಣವನ್ನು ಪಡೆದುಕೊಂಡಿದೆ ಎಂದು ಬೆನ್ ನೋವಾಕ್ ತಿಳಿಸಿದ್ದಾರೆ.
ಮಾನವಕುಲಕ್ಕೆ ಸೌರಶಕ್ತಿ ಅಗ್ಗದ ವಿದ್ಯುತ್ :
ಇಂಟರ್ನ್ಯಾಷನಲ್ ರಿನ್ಯೂವಬಲ್ ಎನರ್ಜಿ ಏಜೆನ್ಸಿ (International Renewable Eenergy Agency)ಯ ಪ್ರಕಾರ ಕಳೆದ 15 ವರ್ಷಗಳಲ್ಲಿ ಸೌರ ಫಲಕಗಳ ಬೆಲೆ ಶೇ.90 ರಷ್ಟು ಕಡಿಮೆಯಾಗಿದೆ ಮತ್ತು ದ್ಯುತಿ ವಿದ್ಯುಜ್ಜನಕ ತಂತ್ರಜ್ಞಾನ (photovoltaic technology)ದಲ್ಲಿನ ಪ್ರಗತಿಯಾಗಿದೆ. ಅವುಗಳ ದಕ್ಷತೆಯು ಹೆಚ್ಚಾಗುತ್ತಲೇ ಇದೆ. ಕಾರ್ಬನ್ ಬ್ರೀಫ್ ಪ್ರಕಾರ ಸೌರಶಕ್ತಿ ಈಗ ಮಾನವಕುಲಕ್ಕೆ ಲಭ್ಯವಿರುವ ಅಗ್ಗದ ವಿದ್ಯುತ್ ರೂಪವಾಗಿದೆ ಎಂದಿದೆ.
ಆದರೆ ಸೌರಶಕ್ತಿ ಉತ್ಪಾದನೆಯ ಮಧ್ಯಂತರ ಸ್ವಭಾವವು ತಜ್ಞರು ಇನ್ನೂ ಪರಿಹರಿಸಲು ಹೆಣಗಾಡುತ್ತಿರುವ ಸಮಸ್ಯೆಯಾಗಿದೆ. ಮೋಡ ಕವಿದ ದಿನಗಳಲ್ಲಿ, ಸೌರ ವಿದ್ಯುತ್ ಸ್ಥಾವರಗಳು ಆಕಾಶವು ಸ್ಪಷ್ಟವಾಗಿರುವಾಗ ಕಡಿಮೆ ಉತ್ಪಾದಕತೆಯನ್ನು ಹೊಂದಿರುತ್ತವೆ. ರಾತ್ರಿಯಲ್ಲಿ ಸೌರಶಕ್ತಿ ಉತ್ಪಾದನೆ ಸಂಪೂರ್ಣವಾಗಿ ನಿಲ್ಲುತ್ತದೆ. ಬ್ಯಾಟರಿ ವ್ಯವಸ್ಥೆಗಳು ಮತ್ತು ಇತರ ನವೀಕರಿಸಬಹುದಾದ ಇಂಧನದಿಂದ ಕೆಲವು ಕೊರತೆಯನ್ನು ಸರಿದೂಗಿಸಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಪರಮಾಣು ವಿದ್ಯುತ್, ಕಲ್ಲಿದ್ದಲು ಹಾಗೂ ಅನಿಲ ಆಧಾರಿತ ವಿದ್ಯುತ್ ಸ್ಥಾವರಗಳು ಸಹಾಯಕವಾಗಿದ್ದವು.