ಬೆಂಗಳೂರು, ಆ.2 www.bengaluruwire.com : ಸ್ವಾತಂತ್ರ್ಯೋತ್ಸವ (Independence Day) ಅಂಗವಾಗಿ ಈ ಬಾರಿ ರಾಜಧಾನಿಯ ಲಾಲ್‌ಬಾಗ್‌ನಲ್ಲಿ ಹಲವು ವಿಶೇಷತೆಗಳನ್ನು ಹೊಂದಿರುವ 214ನೇ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show) ಭರದಿಂದ ಸಿದ್ಧತೆಗಳು ನಡೆದಿದೆ. ಇದೇ ಆಗಸ್ಟ್ 8ರಿಂದ 19 ರವರೆಗೆ ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸಲಿದೆ.
ಈ ಬಾರಿಯ ಥೀಮ್ ಹಾಗೂ ವಿಶೇಷ ಆಕರ್ಷಣೆ ಏನೆಂದರೆ, ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ (Dr BR Ambedkar) ಅವರ ಜೀವನಗಾಥೆಯನ್ನು ಫಲಪುಷ್ಪ ಹಾಗೂ ಲಕ್ಷಾಂತರ ಅಲಂಕಾರಿಕ ಸಸ್ಯಗಳಿಂದ ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದು, ಲಾಲ್ ಬಾಗಿನ ಗಾಜಿನ ಮನೆ ಅಪರೂಪದ ಸುಂದರಿಯಂತೆ ಕಂಗೊಳಿಸಲು ಸಜ್ಜಾಗುತ್ತಿದೆ.
ಈ ವರ್ಷ ಸುಮಾರು 50 ಮಾದರಿಯ ಪ್ರದರ್ಶನಕ್ಕೆ ಸಲಹೆಗಳು ಬಂದಿದ್ದು ಅಂತಿಮವಾಗಿ ಅಂಬೇಡ್ಕರ್ ಅವರ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಭಕ್ತಿ ಭಂಡಾರಿ ಬಸವಣ್ಣ ಮತ್ತು ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ನಡೆದಿತ್ತು.
ಲಾಲ್ ಬಾಗ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನದ ಉದ್ಘಾಟನೆಗೆ ಅಂಬೇಡ್ಕರ್ ರವರ ಮೊಮ್ಮಗ ಡಾ.ಭೀಮರಾವ್ ಯಶವಂತ ಅಂಬೇಡ್ಕರ್ (ಯಶವಂತರಾವ್ ಅಂಬೇಡ್ಕರ್ ರವರ ಪುತ್ರ) ರವರನ್ನು ಮುಂಬೈನ ದಾದರ್ ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಅಧಿಕೃತ ನಿವಾಸ ‘ರಾಜ್ ಗೃಹ’ದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಎಂ. ಜಗದೀಶ್ ಹಾಗೂ ತೋಟಗಾರಿಕೆ ಉಪ ನಿರ್ದೇಶಕಿ ಜಿ.ಕುಸುಮ ಅವರು ತೋಟಗಾರಿಕೆ ಇಲಾಖೆಯ ಪರವಾಗಿ ಆತ್ಮೀಯವಾಗಿ ಆಮಂತ್ರಿಸಿದ್ದಾರೆ.
ತದನಂತರ ದಾದರ್ ನ ಕಡಲಂಚಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಚೈತ್ಯ ಭೂಮಿಗೆ ತೆರಳಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಕರ್ನಾಟಕ ರಾಜ್ಯ ಉಸ್ತುವಾರಿ ಮಲ್ಲಿಕಾರ್ಜುನ ಭಾಲ್ಕಿ ಹಾಗೂ ರಾಜ್ಯಾಧ್ಯಕ್ಷರಾದ ಎಂ.ಸಿ.ಶಿವರಾಜ್ ರವರು ಜೊತೆಗಿದ್ದರು.
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯುವ ಫಲಪುಷ್ಪ ಪ್ರದರ್ಶನ (Lalbagh Flower Show) ವೀಕ್ಷಿಸಲು ಲಕ್ಷಾಂತರ ಜನರು ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ವಿಭಿನ್ನ ಥೀಮ್ನಲ್ಲಿ ಫ್ಲವರ್ ಶೋ ಆಯೋಜಿಸುವ ಮೂಲಕ ಲಾಲ್‌ಬಾಗ್ ಅಸಂಖ್ಯಾತ ಜನರನ್ನು ಆಕರ್ಷಿಸುತ್ತಲೇ ಬಂದಿದೆ.
ಈ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ವಿದೇಶಿ ಹಾಗೂ ಸ್ವದೇಶಿ ಹೂಗಳಿಂದ ಈ ಬಾರಿಯ ಫಲಪುಷ್ಪ ಪ್ರದರ್ಶನ ಕಂಗೊಳಿಸಲಿದೆ. ಇದಕ್ಕೆ ಸುಮಾರು 3 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಈಗಾಗಲೇ ಸಿದ್ಧತೆಗಳನ್ನು ಆರಂಭವಾಗಿದ್ದು ಆಗಸ್ಟ್ 8 ರಿಂದ ಪ್ರದರ್ಶನ ಆರಂಭವಾಗುವ ಎರಡು ಮೂರು ದಿನದ ಮುಂಚೆ ಪೂರ್ವಸಿದ್ಧತಾ ಕಾರ್ಯಗಳು ಪೂರ್ಣವಾಗುತ್ತದೆ.
ತರಹೇವಾರಿ ಹೂಗಳಿಂದ ಅಲಂಕಾರ :
ಸಾಮಾನ್ಯವಾಗಿ ಆಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್‌ಬೆರಾ, ಸೇವಂತಿಗೆ, ನಂದಿ ಗಿರಿಧಾಮದ ಇಂಪೇಷನ್ಸ್ ಹೂಗಳು, ರೆಡ್‌ಹಾಟ್ ಪೋಕರ್, ಆಲ್‌ಸ್ಟೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಸುಗಂಧ ರಾಜ ಮುಂತಾದ ಹೂಗಳಿಂದ ಅಂಬೇಡ್ಕರ್ ಅವರ ಪ್ರತಿಕೃತಿ ಅರಳಲಿದೆ. ಹತ್ತು ಹನ್ನೆರಡು ದೇಶಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತಿದೆ. ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳು ಲಾಲ್‌ಬಾಗ್‌ಗೆ ಆಗಮಿಸುತ್ತಿವೆ. ಹೂಗಳನ್ನು 12 ದಿನಗಳಿಗೂ ಹೆಚ್ಚು ಕಾಲ ಸಂರಕ್ಷಿಸಲು ಅನುವಾಗುವಂತೆ ನೀರು ಹಿಡಿದಿಡುವ ಸ್ಪಂಜ್ ಗಳನ್ನು ತಂದು ಸ್ಟ್ಯಾಂಡ್ ಗಳಲ್ಲಿ ಜೋಡಿಸುವ ಕಾರ್ಯ ನಡೆಯುತ್ತಿದೆ.
15 ಲಕ್ಷದಷ್ಟು ಹೂಗಳ ಬಳಕೆ :
ಫ್ಲವರ್ ಶೋನಲ್ಲಿ 60ಕ್ಕೂ ಹೆಚ್ಚು ಜಾತಿಯ ಸುಮಾರು 15 ಲಕ್ಷದಷ್ಟು ಹೂಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಸದ್ಯ ಲಾಲ್ ಬಾಗ್ ಉದ್ಯಾನವನದ ತೋಟದಲ್ಲಿ 4 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಹೂಗಳನ್ನು ಸಿದ್ಧಮಾಡಿಕೊಳ್ಳಲಾಗುತ್ತಿದೆ. ಫ್ಲವರ್ ಶೋ ಅಲ್ಲದೆ ವಿವಿಧ ಬಗೆಯ ಆಕರ್ಷಕ ಬೋನ್ಸಾಯ್, ಇಕೆಬಾನ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ, ತೋಟಗಳ ಸ್ಪರ್ಧೆ ಮತ್ತು ನಾನಾ ಹೂವಿನ ಜೋಡಣೆ ಕಲೆಗಳ ಪ್ರದರ್ಶನವೂ ಇರಲಿದೆ.
ಪ್ರದರ್ಶನದ ಟಿಕೆಟ್ ದರ ಎಷ್ಟು?
ಫ್ಲವರ್ ಶೋ ಪ್ರದರ್ಶನ ಆಗಸ್ಟ್ 8ರಿಂದ 19 ರವರೆಗೆ ನಡೆಯಲಿದೆ. ಇದಕ್ಕೆ ಭೇಟಿ ನೀಡಿ ವೀಕ್ಷಿಸಲು ವಯಸ್ಕರಿಗೆ 80 ರೂ. ಹಾಗೂ ವಾರಾಂತ್ಯದಲ್ಲಿ 100 ರೂಪಾಯಿ ಪ್ರವೇಶ ದರ ನಿಗದಿಯಾಗಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಸ್ವಚ್ಛತೆಗೆ ಮೊದಲ ಆದ್ಯತೆ :
ಲಾಲ್‌ಬಾಗ್‌ನಲ್ಲಿ ಪೇಪರ್ ಬ್ಯಾಗ್‌ಗಳು ಮತ್ತು ಬಾಟಲ್ ನೀರನ್ನು ಸಹ ಅನುಮತಿಸಲಾಗುವುದಿಲ್ಲ. ಹೀಗಾಗಿ ಫ್ಲವರ್ ಶೋನಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವಂತ ಚೀಲಗಳು ಮತ್ತು ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ತರಲು ಒತ್ತಾಯಿಸಲಾಗಿದೆ. ನಾಡಿನ ಪ್ರಸಿದ್ಧ ಫಲಪುಷ್ಪ ಪ್ರದರ್ಶನನಕ್ಕೆ 12 ದಿನಗಳಲ್ಲಿ ಲಕ್ಷಾಂತರ ಜನರು ಆಗಮಿಸುವ ಹಿನ್ನಲೆಯಲ್ಲಿ ತೋಟಗಾರಿಕೆ ಇಲಾಖೆಯು ಸ್ವಚ್ಛತೆ ಕಾಪಾಡಲು ಮತ್ತು ಕಸದ ಬುಟ್ಟಿಗಳನ್ನು ನಿಗದಿತ ಸ್ಥಳಗಳಲ್ಲಿಟ್ಟು, ನಿಯಮಿತವಾಗಿ ಕಸ ತೆಗೆಯಲು ಹೆಚ್ಚಿನ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿದೆ.