ಬೆಂಗಳೂರು, ಆ.2 www.bengaluruwire.com : ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (Public Realtion Council Of India – PRCI)ಯ “ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ 2024” ನಿಮ್ಮ ನೆಚ್ಚಿನ ಬೆಂಗಳೂರು ವೈರ್ ಗೆ ಪ್ರಾಪ್ತವಾಗಿದೆ.
ಆ ಮೂಲಕ ಸ್ವತಂತ್ರ ಮತ್ತು ವಾಸ್ತವ ಸುದ್ದಿ ಎಂಬ ಮೂಲಮಂತ್ರವನ್ನಿಟ್ಟುಕೊಂಡು ನಾಡಿನ ಜನರಿಗೆ ಸುದ್ದಿಗಳನ್ನು ಪ್ರಮಾಣಿಕವಾಗಿ ನೀಡುತ್ತಾ ಬಂದಿರುವ ಬೆಂಗಳೂರು ವೈರ್ ಕಾಯಕ ಹೀಗೆ ಮುಂದುವರೆಯಲಿದೆ.
ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರಿ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ, ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ವೇಣುಗೋಪಾಲ್.ಕೆ.ಆರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಮ್, ಬೆಂಗಳೂರು ವೈರ್ ಸಂಪಾದಕರಾದ ಶ್ಯಾಮ್.ಎಸ್ ಅವರಿಗೆ ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು.
ಮಾಧ್ಯಮ, ಸಾರ್ವಜನಿಕ ಸಂಪರ್ಕ, ಕಲೆ ಮತ್ತಿತರ ಕ್ಷೇತ್ರದಲ್ಲಿ ಸಂವಹನ ವಿಷಯದಲ್ಲಿ ಗಣನೀಯ ಸಾಧನೆ ಮಾಡಿದ ಒಟ್ಟು 12 ಮಂದಿಗೆ ಪಿಆರ್ ಸಿಐ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ರವರು ಮಾತನಾಡಿ ಸಾರ್ವಜನಿಕ ಸಂಪರ್ಕ ಕ್ಷೇತ್ರವು ಎಲ್ಲಾ ವಲಯಗಳಲ್ಲೂ ಅತೀ ಪ್ರಮುಖ ಅಂಗವಾಗಿ ಇಂದು ಗುರುತಿಸಿಕೊಂಡಿದೆ. ಯಾವುದೇ ಸಚಿವರ ಅಥವಾ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳ ಗುರುತಿಸುವಿಕೆಗೆ ಅವರ ಸಾರ್ವಜನಿಕ ಸಂಪರ್ಕಾಧಿಯ ಮೇಲೆ ಅಳೆಯಲಾಗುತ್ತದೆ. ಸಂವಹನ ಬಹಳ ಮುಖ್ಯ ಎಂದು ಅವರು ಹೇಳಿದರು.
ಮೊದಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬಹಳಷ್ಟು ಸ್ವಾತಂತ್ರ್ಯ ಇತ್ತು. ಈಗ ಮಾಧ್ಯಮಗಳಲ್ಲಿ ನಿರ್ಭೀತಿಯಿಂದ ಹಾಗೂ ನಿಷ್ಪಕ್ಷಪಾತವಾಗಿ ವರದಿ ಮಾಡುವ ಸಂದರ್ಭವಿಲ್ಲ. ಎಲ್ಲಾ ಮಾಧ್ಯಮಗಳಲ್ಲಿ ಸಮತೋಲಿತ ವರದಿಗಳು ಬರಬೇಕು. ಮಾಧ್ಯಮಗಳಲ್ಲಿ ಸಂಪಾದಕರಿಗೆ ಪೂರ್ತಿ ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ನೈಜವಾಗಿ ಮಾಧ್ಯಮಗಳು ಕೆಲಸ ಮಾಡಲು ಸಾಧ್ಯ. ಇನ್ನು ಸಾರ್ವಜನಿಕ ಸಂಪರ್ಕದ ವಿಷಯದಲ್ಲಿ ಸಾರಿಗೆ ವಿಷಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಅವರ ಕೆಲಸ ಯಶಸ್ವಿಯಾಗಿ ನಡೆಯುತ್ತಿದ್ದರೆ ಆ ಸಂಸ್ಥೆಗಳು ಸಾರ್ವಜನಿಕ ಹತ್ತಿರವಾಗುತ್ತವೆ. ಹಾಗಾಗಿ ಸಾರಿಗೆ ಇಲಾಖೆಯ ಎಲ್ಲಾ ನಿಗಮಗಳಿಗೆ 500ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ. ಕೆಎಸ್ ಆರ್ ಟಿಸಿ ಸಂಸ್ಥೆಯೊಂದಕ್ಕೆ 356 ಪ್ರಶಸ್ತಿಗಳು ಬಂದಿವೆ. ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗ ಯಶಸ್ವಿಯಾಗಿ ಕೆಲಸ ಮಾಡಿದರ ದ್ಯೋತಕ ಎಂದರು. ಸಂವಹನ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಸಚಿವರು ಇದೇ ವೇಳೆ ಅಭಿನಂದಿಸಿದರು.
ರಾಮಾಯಣ – ಮಹಾಭಾರತ ಕಾಲದಿಂದಲೂ ಸಾರ್ವಜನಿಕ ಸಂಪರ್ಕಾಧಿಕಾರಿಗಳಿದ್ದರು :
ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಗಳಾದ ಡಾ.ಹೆಚ್ ಎಸ್ ಪ್ರಭಾಕರ ಶಾಸ್ತ್ರಿ ರವರು ಮಾತನಾಡಿ, ಪುರಾಣ ಕಾಲದಿಂದಲೂ ಸಾರ್ವಜನಿಕ ಸಂಪರ್ಕ ಕ್ಷೇತ್ರ ಎಂಬುದಿದೆ. ಆದರೆ ಅದರ ಪಾತ್ರಗಳು ಭಿನ್ನವಾಗಿದ್ದವು ಅಷ್ಟೆ. ರಾಮಾಯಾಣ ,ಮಹಾಭಾರತ ದಲ್ಲಿ ಕೂಡ ಸಂವಹನ ಎಂಬುದು ಪ್ರಮುಖವಾಗಿತ್ತು.
ಒಂದು ಮನೆಯಲ್ಲಿ ತಾಯಿ ಆ ಮನೆಗೆ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ, ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರೂ, ಎಲ್ಲದಕ್ಕೂ ಪಿಆರ್ ಕೆಲಸ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಜೀವನದ ಎಲ್ಲಾ ವಲಯಗಳಲ್ಲಿ ಸಾರ್ವಜನಿಕ ಸಂಪರ್ಕ ಮುಖ್ಯವಾಗಿದೆ. ಕಾರ್ಪೊರೇಟ್ ವಲಯದಲ್ಲಂತೂ ಪಿಆರ್ ನಿರ್ವಹಣೆಯಿಂದಲೇ ಆ ಸಂಸ್ಥೆಯ ಮೌಲ್ಯ ಹೆಚ್ಚಾಗಿದೆ. ಪಿಆರ್ ಸಿಐ ಮಾಧ್ಯಮ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದೆ ಎಂದು ಅವರು ಕೊಂಡಾಡಿದರು.
ಮಾಧ್ಯಮ ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದ ನಡುವೆ ದೊಡ್ಡ ಕಂದಕ :
ಮಾಧ್ಯಮ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಪಿಆರ್ ಸಿಐ ಸಾಕಷ್ಟು ಕೆಲಸ ಮಾಡುತ್ತಲೇ ಬಂದಿದೆ. ಪಿಆರ್ ಸಿಐ, ಕೊಡ ಮಾಡುವ ರಾಷ್ಟ್ರ ಮಟ್ಟದ “ಚಾಣಿಕ್ಯ ಪ್ರಶಸ್ತಿ”ಗೆ ದೇಶದಲ್ಲಿ ಬಹಳಷ್ಟು ಮೌಲ್ಯವಿದೆ. ಮಾಧ್ಯಮ ಕ್ಷೇತ್ರದಲ್ಲಿ ಹಾಗೂ ಮಾಧ್ಯಮ ಶಿಕ್ಷಣದಲ್ಲಿ, ರಂಗಭೂಮಿ, ಚಲನಚಿತ್ರ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೂ ಪಿಆರ್ ಸಿಐ ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ ನೀಡುತ್ತಾ ಬಂದಿದೆ. ಮಾಧ್ಯಮ ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದ ನಡುವಿನ ದೊಡ್ಡ ಕಂದಕ ನಿವಾರಣೆಯಾಗಲೆಂದು ಸಂವಹನ ಪ್ರಶಸ್ತಿಯನ್ನು ಪಿಆರ್ ಸಿಐ ನೀಡುತ್ತಾ ಬಂದಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ನವೆಂಬರ್ ನಲ್ಲಿ ಪಿಆರ್ ಸಿಐ ಜಾಗತಿಕ ಸಮಾವೇಶ :
ಪಿಆರ್ ಸಿಐ ಸಂಸ್ಥಾಪಕರಾದ ಜಯರಾಮ್ ಅವರು ಮಾತನಾಡಿ, ದೇಶದಲ್ಲಿ 59 ಚಾಪ್ಟರ್ ಇದೆ. ನಾನು ಕಿರುತೆರೆಯಲ್ಲಿ, ಪತ್ರಕರ್ತನಾಗಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸಮಾಜದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯ ಹುದ್ದೆ ಮಹತ್ವದ್ದಾಗಿದೆ. ಪಿಆರ್ ಸಿಐನಲ್ಲಿ 80 ವಿವಿಧ ವಲಯಗಳ ಕ್ಷೇತ್ರಗಳ ತಜ್ಞರಿದ್ದಾರೆ. ಅವರ ಸೇವೆಯನ್ನು ಶಿಕ್ಷಣ ಸಂಸ್ಥೆಗಳು ಬಳಸಿಕೊಳ್ಳಬೇಕಿದೆ. ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಪಿಆರ್ ಸಿಐ ಜಾಗತಿಕ ಸಮಾವೇಶ ಆಯೋಜಿಸುತ್ತಿದ್ದೇವೆ. ಅದರಲ್ಲಿ ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ವೇಣುಗೋಪಾಲ್.ಕೆ.ಆರ್ ಮಾತನಾಡುತ್ತಾ, ಈಗೀಗ ನ್ಯಾಯಾಂಗ ಕ್ಷೇತ್ರದಲ್ಲೂ ಪಿಆರ್ ವಿಭಾಗವಿದೆ, ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಹೆಚ್ಚಿನ ಅವಕಾಶ ಸಿಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಮಟ್ಟದ ಸಂವಹನ ಪ್ರಶಸ್ತಿಯಲ್ಲಿ ರಾಜಕೀಯ ನುಸುಳಿಲ್ಲ :
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಮ್ ಮಾತನಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಯು ಜವಾಬ್ದಾರಿಯುತವಾಗಿದೆ. ಥ್ಯಾಂಕ್ಸ್ ಲೆಸ್ ಕ್ಷೇತ್ರವಾಗಿದೆ. ಪ್ರಮಾಣಿಕವಾಗಿ, ಉತ್ತಮವಾಗಿ ವೃತ್ತಿಪರವಾಗಿ ಕೆಲಸ ಮಾಡುತ್ತಿರುವ ಪಿಆರ್ ಆಗಿರುವವರನ್ನು ಅಭಿನಂದಿಸುತ್ತೇನೆ ಎಂದರು. ಇತ್ತೀಚಿನ ದಿನಗಳಲ್ಲಿ ಹಿಂದಿನಂತಿಲ್ಲ. ಪಿಆರ್ ಅಧಿಕಾರಿಗಳು ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಪತ್ರಕರ್ತರೊಂದಿಗೆ ವೈಯುಕ್ತಿಕ ಸಂಬಂಧ ಎಂಬುದಿಲ್ಲ. ಇವತ್ತು ನೀಡಿರುವ ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ ಆಯ್ಕೆಯಲ್ಲಿ ಸರ್ಕಾರ ನೀಡಿರುವ ಪ್ರಶಸ್ತಿಯಲ್ಲಿರುವಂತೆ ರಾಜಕೀಯ ನುಸುಳಿಲ್ಲ ಎಂಬುದು ಸಮಾಧಾನದ ವಿಷಯ ಎಂದು ತಿಳಿಸಿದರು.
ಸಮಾರಂಭದಲ್ಲಿ ಕೆಎಸ್ ಆರ್ ಟಿ ಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಉಪಾಧ್ಯಕ್ಷೆ ಡಾ.ಲತಾ ಟಿ.ಎಸ್, ಪಿಆರ್ ಸಿಐ ಬೆಂಗಳೂರು ವಲಯ ಅಧ್ಯಕ್ಷರಾದ ರಾಮಕೃಷ್ಣ,, ಸ್ವಾಮಿ, ಆನಂದ್ ಹಾಗೂ ಚಿನ್‌ಯ್ ಪ್ರವೀಣ್ ಉಪಸ್ಥಿತರಿದ್ದರು.
“ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ 2024” ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ :
1) ಶ್ರೀ ಡಿ.ಪಿ ಮುರುಳಿಧರ್,
ನಿವೃತ್ತ ನಿರ್ದೇಶಕರು,
ಸಾರ್ವಜನಿಕ ಸಂಪರ್ಕ ಇಲಾಖೆ
2) ಶ್ರೀ ಸುದರ್ಶನ ಚನ್ನಂಗಿಹಳ್ಳಿ,
ಮುಖ್ಯ ಸಂಪಾದಕರು,
ವಿಜಯ ಕರ್ನಾಟಕ
3) ಶ್ರೀ ಬಿ.ಎಸ್ ಸತೀಶ್ ಕುಮಾರ್,
ಬ್ಯೂರೋ ಉಪಮುಖ್ಯಸ್ಥರು ಹಾಗೂ ಹಿರಿಯ ಉಪ ಸಂಪಾದಕರು, ದ ಹಿಂದು
4) ಶ್ರೀ ಶ್ಯಾಮ್.ಎಸ್,
ಸಂಪಾದಕರು,
ಬೆಂಗಳೂರು ವೈರ್
5) ಶ್ರೀಮತಿ ರಜಿನಿ ಎಂ ಜಿ,
ಮೆಟ್ರೋ ಮುಖ್ಯಸ್ಥೆ,
ಏಷ್ಯಾನೆಟ್ ಸುವರ್ಣ ನ್ಯೂಸ್
6) ಡಾ. ರಾಜೇಶ್ವರಿ ತಾರೇಶ್,
ಅಸೋಸಿಯೇಟ್ ಪ್ರೊಫೆಸರ್, ಮಾಧ್ಯಮ ವಿದ್ಯುನ್ಮಾನ ಇಲಾಖೆ, ಬೆಂಗಳೂರು ವಿಶ್ವವಿದ್ಯಾನಿಲಯ
7) ಶ್ರೀ ಅಲ್ವಿನ್ ಮೆಂಡೊನ್ಸಾ,
ಅಧ್ಯಕ್ಷರು,
ಕರ್ನಾಟಕ ಮಾಧ್ಯಮ ಸಮಿತಿ
8) ಶ್ರೀ ರಾವಣನ್ ರಾಘವೇಂದ್ರ,
ಸಾರ್ವಜನಿಕ ಸಂಪರ್ಕ ಅಧಿಕಾರಿ
9) ಡಾ. ಸಂದೇಶ್ ನಾಗರಾಜ್,
ಸಂಯೋಜಕರು ಹಾಗೂ ಕಲಾವಿದರು
10) ಶ್ರೀಮತಿ ಎಸ್ ಕವಿತಾ,
ಅಧ್ಯಕ್ಷರು,
ಕಲೆ ಮತ್ತು ಕರಕುಶಲ ಕಾರ್ಮಿಕ ಸಂಘ, ಬಿಬಿಎಂಪಿ
11) ಕುಮಾರಿ ಪ್ರಾಚಿ ಗೌಡ,
ಅಧ್ಯಕ್ಷರು,
ಯುವ ಬಲ ಜಾಗೃತಿ ಪರಿಷತ್,
ಯುವ ಸಬಲೀಕರಣ
12) ಕುಮಾರಿ ರಮ್ಯಾ ಜೋಶಿ,
ಕಥೆ ನಿರ್ಮಾಪಕರು,
ವೈಸಿಸಿ