ನವದೆಹಲಿ, ಆ.1 www.bengaluruwire.com : ದೇಶದ ಸುಮಾರು 300 ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣಗಳ ಬ್ಯಾಂಕಿಂಗ್ ಜಾಲದ ಮೇಲೆ ರ್ಯಾನ್ ಸಮ್ ವೇರ್ ದಾಳಿಯಿಂದಾಗಿ ಪಾವತಿ ವ್ಯವಸ್ಥೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ (Temporary shutdown of payment system) ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತಿಳಿಸಿದೆ.
ಈ ಬ್ಯಾಂಕ್‌ಗಳ ಗ್ರಾಹಕರು ಎಟಿಎಂಗಳಲ್ಲಿ ನಗದು ಹಿಂಪಡೆಯುವುದು ಅಥವಾ ಯುಪಿಐ ಬಳಸುವಂತಹ ಪಾವತಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ಹೆಚ್ಚಾಗಿ ಸೇವೆ ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಲಿಮಿಟೆಡ್ (C-Edge Technologies) ಎಂಬ ತಂತ್ರಜ್ಞಾನ ಸೇವಾ ಪೂರೈಕೆದಾರರು, ತಮ್ಮ ಕೆಲವು ಸಿಸ್ಟಮ್‌ಗಳ ಮೇಲೆ ಪರಿಣಾಮ ಬೀರುವ ರ್ಯಾನ್ ಸಮ್ ವೇರ್ (Ransomware) ದಾಳಿಯಿಂದ ಇಲ್ಲಿನ ಬ್ಯಾಂಕಿಂಗ್ ಸೇವೆಗೆ ತೊಡಕುಂಟಾಗಿದೆ ಎಂದು ಎನ್ ಪಿಸಿಐ ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಹೀಗಾಗಿ ಪಾವತಿ ಪರಿಸರ ವ್ಯವಸ್ಥೆಗೆ ದೊಡ್ಡ ಪರಿಣಾಮವನ್ನು ತಡೆಗಟ್ಟಲು, ಎನ್ ಪಿಸಿಐ ನಿರ್ವಹಿಸುವ ಚಿಲ್ಲರೆ ಪಾವತಿ ವ್ಯವಸ್ಥೆಗಳನ್ನು ಪ್ರವೇಶಿಸುವುದರಿಂದ ಸಿ-ಎಡ್ಜ್ ಟೆಕ್ನಾಲಜೀಸ್ ಅನ್ನು ತಾತ್ಕಾಲಿಕವಾಗಿ ಟೆಕ್ನಾಲಜೀಸ್ ಅನ್ನು ಪ್ರತ್ಯೇಕಿಸಿದೆ. ಹೀಗಾಗಿ ಈ ಸಂಸ್ಥೆಯಿಂದ ಸೇವೆ ಸಲ್ಲಿಸಿದ ಬ್ಯಾಂಕ್‌ಗಳ ಗ್ರಾಹಕರು ಈ ಅವಧಿಯಲ್ಲಿ ಪಾವತಿ ವ್ಯವಸ್ಥೆಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಎನ್ ಪಿಸಿಐ ಹೇಳಿದೆ.
ಸಿ-ಎಡ್ಜ್ ಟೆಕ್ನಾಲಜೀಸ್ ಜೊತೆಗೆ ಮರುಸ್ಥಾಪನೆ ಕಾರ್ಯವು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಮತ್ತು ಅಗತ್ಯ ಭದ್ರತಾ ಪರಿಶೀಲನೆ ಪ್ರಕ್ರಿಯೆಯಲ್ಲಿದೆ. ಈ ರ್ಯಾನ್ ಸಮ್ ವೇರ್ ಬಾಧಿತ ಬ್ಯಾಂಕ್‌ಗಳಿಗೆ ಸಂಪರ್ಕವನ್ನು ಆದಷ್ಟು ಬೇಗ ಮರುಸ್ಥಾಪಿಸಲಾಗುವುದು ಎಂದು ಅದು ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದೆ.
ಈ ದಾಳಿಯಿಂದಾಗಿ RTGS ಮತ್ತು UPI ಪಾವತಿಗಳಂತಹ ಎಲ್ಲಾ ಆನ್‌ಲೈನ್ ವಹಿವಾಟುಗಳು ಪರಿಣಾಮ ಬೀರಲಿದೆ. ಸಿ-ಎಡ್ಜ್ ಅನ್ನು ಅವಲಂಬಿಸಿರುವ ಗುಜರಾತ್‌ನ 17 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ಭಾರತದ ಸುಮಾರು 300 ಬ್ಯಾಂಕ್‌ಗಳು ಕಳೆದ ಎರಡು ಮೂರು ದಿನಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಭಾರತದ ರಾಷ್ಟ್ರೀಯ ಸಹಕಾರಿ ಒಕ್ಕೂಟದ ಅಧ್ಯಕ್ಷ ದಿಲೀಪ್ ಸಂಘಾನಿ ಹೇಳಿದರು.
ಸಿ-ಎಡ್ಜ್ ಸಂಸ್ಥೆಯು ಎಸ್ ಬಿಐ (SBI) ಹಾಗೂ (TCS) ಟಿಸಿಎಸ್ ನಡುವಿನ ಜಂಟಿ ಉದ್ಯಮವಾಗಿದೆ. ಈಗಾಗಲೇ ransomware ಅನ್ನು ಪತ್ತೆಹಚ್ಚಲಾಗಿದ್ದು ಮತ್ತು ಬ್ಯಾಂಕಿಂಗ್ ಸೇವೆ ಸಹಜ ಸ್ಥಿತಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಈ ಘಟನೆಯಿಂದ ಹೊರತಾಗಿಯೂ ಯಾವುದೇ ಆರ್ಥಿಕ ನಷ್ಟ ಸಂಭವಿಸಿಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ.