ಬೆಂಗಳೂರು, ಜು.30 www.bengaluruwire.com : ರಾಜ್ಯದ ಸುಮಾರು 25 ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಜಮಾರ್ಗವಾಗಿರುವ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ (Peenya Flyover)ಯಲ್ಲಿ ಮೂರು ವರ್ಷಗಳ ಬಳಿಕ ನಿನ್ನೆಯಿಂದ ಭಾರೀ ವಾಹನಗಳ (Heavy vehicles) ಓಡಾಟ ಆರಂಭವಾಗಿರುವುದರಿಂದ ಈ ಭಾಗಗಳಲ್ಲಿ ಕಂಡು ಬರುತ್ತಿದ್ದ ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಿದೆ.
ಪೀಣ್ಯ ಫ್ಲೈಓವರ್ ಅನ್ನು ಭಾರೀ ವಾಹನಗಳ ಓಡಾಟಕ್ಕೆ ಮುಕ್ತಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಟ್ರಾಫಿಕ್ ಪೊಲೀಸರು ಹಸಿರು ನಿಶಾನೆ ತೋರಿಸಿದ್ದಾರೆ. ಆದರೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದ್ದಾರೆ. ವಾರದಲ್ಲಿ 6 ದಿನ ಪೀಣ್ಯ ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ವಿಶೇಷ ದುರಸ್ತಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ಮೇಲ್ಸೇತುವೆ ಎರಡೂ ಬದಿಗಳಲ್ಲಿ ಭಾರಿ ವಾಹನಗಳ ಓಡಾಟ ನಿಷೇಧಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರಿ ವಾಹನಗಳು ಮಾತ್ರ ಮೇಲ್ಸೇತುವೆ ಎರಡೂ ಬದಿ, ಎಡಪಥದಲ್ಲಿ ಗರಿಷ್ಠ 40 ಕಿ.ಮೀ ವೇಗ ಮಿತಿಯಲ್ಲಿ ಸಂಚರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಟ್ಟಪ್ಪಣೆ ಮಾಡಿದೆ. ಒಂದೊಮ್ಮೆ ನಿಗದಿತ ವೇಗ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಸಾಗಿದರೆ ಅಂತಹ ವಾಹನ ಚಾಲಕರ ವಿರುದ್ಧ ಮುಲಾಜಿಲ್ಲದೆ ಎಫ್ ಐಆರ್ ದಾಖಲು ಮಾಡುವುದಾಗಿ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನಗರದ ತುಮಕೂರು ರಸ್ತೆಯಲ್ಲಿರುವ 15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆಯಲ್ಲಿ 8ನೇ ಮೈಲಿಯ ಜಂಕ್ಷನ್ ಸಮೀಪದ 102 ಮತ್ತು 103ನೇ ಪಿಲ್ಲರ್ ಕೇಬಲ್ ಗಳು ಬಾಗಿ ಹಾನಿಯಾಗಿತ್ತು. ಹೀಗಾಗಿ 2021ರ ಡಿಸೆಂಬರ್ನಿಂದಲೂ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯ ಅನ್ನುವಂತಾಗಿತ್ತು.
ಆನಂತರ ತಜ್ಞರ ಅನುಮತಿ ಪಡೆದು ಭಾರೀ ವಾಹನಗಳ ಓಡಾಟ ನಿಷೇಧಿಸಿ, ಕೇವಲ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಎಲ್ಲಾ ರೀತಿಯ ವಾಹನಗಳ ಸಂಚಾರ ಆರಂಭವಾದಂತಾಗಿದೆ. ಹೀಗಾಗಿ ಬಸ್ಗಳು ಮತ್ತು ಟ್ರಕ್ಗಳಂತಹ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.
ಫ್ಲೈಓವರ್ನಲ್ಲಿ ಅಳವಡಿಸಿದ್ದ ಕೇಬಲ್ಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ರಿಪೇರಿ ಮಾಡುವ ಅಗತ್ಯವಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 38.5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕೇಬಲ್ಗಳ ಅಳವಡಿಕೆ ಕಾರ್ಯ ನಡೆದಿತ್ತು. ಇದೀಗ ಪೀಣ್ಯ ಮೇಲ್ಸೇತುವೆ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಇದರ ಪರಿಣಾಮ ಪೀಣ್ಯ ಸುತ್ತಮುತ್ತಲ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಕೊಂಚ ಪರಿಹಾರ ದೊರೆತಂತಾಗಿದೆ.
ಇನ್ನು ಪೀಣ್ಯ ಫ್ಲೈಓವರ್ ಮೇಲೆ ನಿರ್ಬಂಧವಿದ್ದರಿಂದ ಕಳೆದ ಮೂರು ವರ್ಷಗಳಿಂದ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ದಿನ ನಿತ್ಯದ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದರು. ಎನ್ಎಚ್ಎಐ ಕಳೆದ ವರ್ಷ 38.5 ಕೋಟಿ ರೂಪಾಯಿಯಲ್ಲಿ ಮೇಲ್ಸೇತುವೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿತು. ಪ್ರತಿ ಸ್ಪ್ಯಾನ್ನಲ್ಲಿ ಎರಡು ಕೇಬಲ್ಗಳನ್ನು ಹೆಚ್ಚುವರಿ ಸ್ಲಾಟ್ಗಳಲ್ಲಿ ಸೇರಿಸಲು ಮತ್ತು ಮೇಲ್ಸೇತುವೆಯನ್ನು ಬಲಪಡಿಸಲು ಈ ಕಾಮಗಾರಿಗಳಲ್ಲಿ ಆದ್ಯ ಗಮನ ನೀಡಿತ್ತು.