ಬೆಂಗಳೂರು, ಜು.30 www.bengaluruwire.com : ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದಾಗಿ ಮಲೆನಾಡು ಸೇರಿದಂತೆ ಹಲವು ಸ್ಥಳಗಳಲ್ಲಿ ಇಲಾಖೆಗೆ ಸೇರಿದ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮಾರ್, ಕಂಡೆಕ್ಟರ್ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿ ಒಟ್ಟಾರೆ 96.61 ಕೋಟಿ ರೂ. ನಷ್ಟವಾಗಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಬೆಸ್ಕಾಂ ಬೆಳಕು ಭವನದಲ್ಲಿ ಮಂಗಳವಾರ ಮಳೆಗಾಲವನ್ನು ಎದುರಿಸಲು ಇಂಧನ ಇಲಾಖೆಯು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವಿಧ ಐದು ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಜೊತೆ ವಿಡಿಯೋ ಕಾನ್ಪೊರೆನ್ಸ್ ಮೂಲಕ ಸಚಿವ ಕೆ.ಜೆ.ಜಾರ್ಜ್ ಸಭೆ ನಡೆಸಿದರು. ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಮಳೆ ಮತ್ತು ಗಾಳಿಯ ಆರ್ಭಟ ಹೆಚ್ಚಾಗಿ 53,816 ವಿದ್ಯುತ್ ಕಂಬಗಳು ಹಾಳಾಗಿದೆ. ಅವುಗಳ ಪೈಕಿ 51,119 ವಿದ್ಯುತ್ ಕಂಬ ಬದಲಾಯಿಸಲಾಗಿದೆ. 2697 ಬದಲಾವಣೆ ಬಾಕಿಯಿದೆ. 3924 ಟ್ರಾನ್ಸ್ ಫಾರ್ಮರ್ ಗಳು ಮಳೆಯಿಂದ ಹಾನಿಯಾಗಿದ್ದು, ತ್ವರಿತವಾಗಿ 3918 ವಿದ್ಯುತ್ ಪರಿವರ್ತಕಗಳನ್ನು ಸರಿಪಡಿಸಲಾಗಿದೆ. ಒಟ್ಟಾರೆ ವಿದ್ಯುತ್ ಮೂಲ ಸೌಕರ್ಯಗಳಿಗೆ ಹಾನಿಯಾಗಿ ಒಟ್ಟಾರೆ 96.61 ಕೋಟಿ ರೂ. ನಷ್ಟು ಇಂಧನ ಇಲಾಖೆಗೆ ನಷ್ಟವಾಗಿದೆ ಎಂದು ಅವರು ಹೇಳಿದರು.
ಹೆಸ್ಕಾಂ ವ್ಯಾಪ್ತಿಯ ಕೃಷ್ಣಾನದಿಯಿಂದ ಬೆಳಗಾವಿ ಹಲವಾರು ಕಡೆ ನೀರು ನಿಲ್ಲುತ್ತಿದೆ. 3 ಲಕ್ಷ ಕ್ಯೂಸಿಕ್ಸ್ ನೀರು ಹೊರ ಬಿಡಲಾಗುತ್ತಿದೆ. ಹೀಗಾಗಿ ಮುಂಜಾಗ್ರತೆಯಾಗಿ ಫೀಡರ್ ನಿಲ್ಲಿಸಲಾಗಿದೆ. ಉತ್ತರ ಕನ್ನಡದಲ್ಲೂ ಶಿವಮೊಗ್ಗದಂತೆ ಸಮಸ್ಯೆಯಾಗಿದೆ. ನಮ್ಮ ಸಿಇ, ಎಸ್ ಇ, ಇಇಗಳು ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಆಡಳಿತ ನಡೆಸುವವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಗೃಹಜ್ಯೋತಿ ಗ್ಯಾರಂಟಿ ಯೋಜನೆಯಿಂದ ಇಂಧನ ಇಲಾಖೆಯ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮವಾಗಿಲ್ಲ. ಯೋಜನೆಯಿಂದ ಮಾಸಿಕ 1.60 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತಿದ್ದು 750 ಕೋಟಿ ರೂ. ಇಂಧನ ಇಲಾಖೆಗೆ ವೆಚ್ಚವಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಪಂಪ್ ಸ್ಟೋರೇಜ್ ಯೋಜನೆ :
ಇಂಧನ ಇಲಾಖೆಯು ರಾಜ್ಯದಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಬಳಸುವ ಶರಾವತಿ, ವರಾಹಿ ಹಾಗೂ ನೇತ್ರಾವತಿ ನದಿ ಮೂಲಗಳಿಂದ ಇನ್ನು ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲು ಪಂಪ್ ಸ್ಟೋರೇಜ್ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಈ ಯೋಜನೆ ಜಾರಿಯಾದರೆ ಪ್ರಸ್ತುತ ಶರಾವತಿ ಜಲ ವಿದ್ಯುತ್ ಯೋಜನೆಯಿಂದ 1000 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು, ಮುಂದೆ ಹೆಚ್ಚುವರಿಯಾಗಿ 2000 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ. ಇನ್ನೊಮ್ಮೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಅವರು ಹೇಳಿದರು.
ಮಲೆನಾಡು ಜಿಲ್ಲೆಗಳಲ್ಲಿ ಮಳೆ ಮತ್ತು ಗಾಳಿಯಿಂದ ವಿದ್ಯುತ್ ಕಂಬ ಮತ್ತು ಇಂಧನ ಇಲಾಖೆಯ ಕಂಡೆಕ್ಟರ್, ಟ್ರಾನ್ಸ್ ಫಾರ್ಮರ್ ಸಹಿತ ಕೆಲವು ವಸ್ತುಗಳು ಹಾನಿಯಾಗಿವೆ. ಹೆಚ್ಚುವರಿಯಾಗಿ ಲೈನ್ ಮೆನ್ ಹಾಗೂ ಗ್ಯಾಂಗ್ ಮನ್ ಬಳಸಿ ಮಳೆಗಾಲ ಎದುರಿಸುತ್ತಿದ್ದೇವೆ, ಹೊರಗುತ್ತಿಗೆ ಮೂಲಕ ಹೆಚ್ಚುವರಿ ಜನರನ್ನು ತೆಗೆದುಕೊಂಡಿದ್ದೇವೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವಗುಪ್ತ ಹೇಳಿದ್ದಾರೆ.
ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ವ್ಯಾಪ್ತಿಯ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಸೇರಿದ ವಿದ್ಯುತ್ ಕಂಬಗಳು ಹೆಚ್ಚಾಗಿ ಬೀಳುತ್ತಿವೆ. ಚೆಸ್ಕಾಂ ವ್ಯಾಪ್ತಿಯ ಕೊಡಗು, ಹಾಸನ ಹಾಗೂ ಸಕಲೇಶಪುರದಲ್ಲಿಮಳೆಯಿಂದ ಹಾನಿಯಾಗಿವೆ. ಲಿಂಗನಮಕ್ಕಿ ಯಾವಾಗಲೂ ಭರ್ತಿಯಾಗುತ್ತಿರಲಿಲ್ಲ. ಈ ಸಲ ಭರ್ತಿಯಾಗಿದೆ. ಎಲ್ಲಾ ಜಲಾಶಯಗಳು ತುಂಬುತ್ತಿರುವುದರಿಂದ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಿದೆ.
ಇಂಧನ ಇಲಾಖೆಯಲ್ಲಿ ಈ ಬಾರಿ ತುಂಬಾ ಮಳೆಯಾಗಿ ಅನುಕೂಲವಾಗಿದೆ. ಹೆಚ್ಚು ಮಳೆಯಿಂದಾಗಿ ಜನ, ಜಾನುವಾರು ಸಾವನ್ನಪ್ಪಿರುವ ಬಗ್ಗೆ ಬೇಸರವಿದೆ. ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಸಮಸ್ಯೆಯಿದ್ದರೂ ಕೂಡಲೇ ಸರಿಪಡಿಸುವ ಕೆಲಸವನ್ನು ಎಲ್ಲಾ ಎಸ್ಕಾಂ ಅಧಿಕಾರಿಗಳು ಮಾಡುತ್ತಿದ್ದಾರೆ. ಯುಪಿ ಮತ್ತು ಪಂಜಾಬ್ ನಿಂದ ಪರಸ್ಪರ ವಿದ್ಯುತ್ ವಿನಿಮಯ ಆಧಾರದ ಮೇಲೆ ಮಳೆಗಾಲದಲ್ಲಿ ಅವರಿಗೆ ವಿದ್ಯುತ್ ಕೊಡುತ್ತಿದ್ದೇವೆ ಎಂದು ಗೌರವ ಗುಪ್ತಾ ಹೇಳಿದರು.
ಕುಸುಮ್ ಯೋಜನೆಯಡಿ 26,238 ರೈತರು ನೋಂದಣಿ :
2004ನೇ ಇಸವಿಯಿಂದ ಇಲ್ಲಿಯ ತನಕ ರಾಜ್ಯದಲ್ಲಿ 4,30,000 ಅಕ್ರಮ ಪಂಪ್ ಸೆಟ್ ಗಳಿದೆ. ಕುಸುಮ್ ಯೋಜನೆಯಡಿ 500 ಮೀಟರ್ ಗಿಂತ ಹೆಚ್ಚಿಗೆ ದೂರವಿರುವ ರೈತರ ಜಮೀನುಗಳಿಗೆ ಸೌರ ಆಧಾರಿತ ಪಂಪ್ ಸೆಟ್ ಅಳವಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಶೇ.80 ರಷ್ಟು ಸಬ್ಸೀಡಿ, ಕೇವಲ 20ರಷ್ಟು ಹಣವನ್ನು ರೈತರು ಕಟ್ಟಬೇಕಿದೆ. ಇದಕ್ಕಾಗಿ ಇಂಧನ ಇಲಾಖೆಯ ವೆನ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಲು ಅವಕಾಶವಿದೆ. ಹೀಗಾಗಿ ವಿದ್ಯುತ್ ಪರಿವರ್ತಕದಿಂದ 500 ಮೀಟರ್ ಗಿಂತ ದೂರವಿರುವ 10,073 ಅಕ್ರಮ ಪಂಪ್ ಸೆಟ್ ಗಳನ್ನು ಕುಸುಮ್ ಯೋಜನೆಯಡಿ ಸ್ವಯಂಚಾಲಿತವಾಗಿ ಆನ್ ಲೈನ್ ನಲ್ಲಿ ನೋಂದಣಿ ಮಾಡಲಾಗಿದೆ. ಉಳಿದಂತೆ 26,238 ರೈತರು ಕುಸುಮ್ ಯೋಜನೆಯಡಿ ನೋಂದಣಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಕೆಪಿಸಿಎಲ್ ವಿದ್ಯುತ್ ಉತ್ಪಾದನೆ- ವಹಿವಾಟು ಶೇ.17ರಷ್ಟು ಏರಿಕೆ :
ರಾಜ್ಯದಲ್ಲಿ ಕೆಪಿಸಿಎಲ್ 2022-23ರಲ್ಲಿ 18,419 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿ 9,326 ಕೋಟಿ ರೂ. ವಹಿವಾಟು ನಡೆಸಿತ್ತು. 2023-24ನೇ ಸಾಲಿನಲ್ಲಿ 22,313 ಮಿಲಿಯನ್ ಯೂನಿಟ್ ನಷ್ಟು ವಿದ್ಯುತ್ ಉತ್ಪಾದಿಸಿ 10,916 ಕೋಟಿ ರೂ. ವಹಿವಾಟು ನಡೆಸಿದೆ. 2022-23ರ ಇಸವಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ವಹಿವಾಟು ಶೇ.17ರಷ್ಟು ಹೆಚ್ಚಳವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿದ್ಯುತ್ ಮಿತವ್ಯಯ ಹಾಗೂ ಲಾಭದಾಯಕ ಮಾರಾಟಕ್ಕೆ ಎಐ ತಂತ್ರಜ್ಞಾನ ಪೈಲಟ್ ಯೋಜನೆ ಜಾರಿ :
ರಾಜ್ಯದಲ್ಲಿ ಬೇಡಿಕೆ ಆಧಾರಿತ ವಿದ್ಯುತ್ ಸರಬರಾಜು ಹಾಗೂ ಇಂಧನ ಉಳಿತಾಯ ಮಾಡಿ, ಪೀಕ್ ಹವರ್ ನಲ್ಲಿ ವಿದ್ಯುತ್ ಮಾರಾಟ ಮಾಡುವ ದೃಷ್ಟಿಯಿಂದ ಜು.10 ರಿಂದ ಪ್ರಾಯೋಗಿಕ ಆಧಾರದ ಮೇಲೆ ಕೃತಕ ಬುದ್ಧಿಮತ್ತೆ ಆಧಾರಿತ ಮೆಕಾನಿಕಲ್ ಲೋಡಿಂಗ್ (Artificial Intelligence Mechanical Loading -AIML) ವ್ಯವಸ್ಥೆ ಬಳಸಿ ವಿದ್ಯುತ್ ಬೇಡಿಕೆ ನಿರ್ವಹಿಸಲಾಗುತ್ತಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.
ವಿವಿಧ ಪ್ರದೇಶಗಳಲ್ಲಿ ಆಯಾ ಋತುಮಾನ, ಬೆಳೆ, ನೀರಾವರಿ ಪದ್ಧತಿ ಆಧರಿಸಿ ವಿದ್ಯುತ್ ಬೇಡಿಕೆ ಅಂದಾಜಿಸುವ, ವಿದ್ಯುತ್ ಮಿತವ್ಯಯ, ಸೌರ ಹಾಗೂ ಪವನ ವಿದ್ಯುತ್ ಯಶಸ್ವಿ ಬಳಕೆ, ವಿದ್ಯುತ್ ಮಾರುಕಟ್ಟೆಯಲ್ಲಿ ಪೀಕ್ ಹವರ್ ನಲ್ಲಿ ಲಾಭದಾಯಕವಾಗಿ ವಿದ್ಯುತ್ ಮಾರಾಟ ಮಾಡುವ ಉದ್ದೇಶದಿಂದ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಈ ತಂತ್ರಜ್ಞಾನ ಪೇಟೆಂಟ್ ಹೊಂದಿದ ಕ್ಯೂನೆಸ್ಟ್ ಸಂಸ್ಥೆಗೆ ಆರು ತಿಂಗಳ ಕಾಲ ಕೆಪಿಟಿಸಿಎಲ್ ನ ಸ್ಟೇಟ್ ಲೋಡ್ ಡಿಸ್ಪ್ಯಾಚಿಂಗ್ ಸೆಂಟರ್ (SLDC) ನಲ್ಲಿ ಪೈಲೆಟ್ ಯೋಜನೆಯಾಗಿ ಜಾರಿಗೆ ತರಲಾಗುತ್ತಿದೆ. ವಿದ್ಯುತ್ ಮಿತವ್ಯಯ ಆಧಾರದ ಮೇಲೆ ಸೇವಾ ಶುಲ್ಕ ನೀಡಲಾಗುತ್ತದೆ ಎಂದು ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.
ಬೇಸಿಗೆಯ ಅವಧಿಯಲ್ಲಿ 1083 ಕೋಟಿ ರೂ. ವಿದ್ಯುತ್ ಖರೀದಿ :
ನಾವು ಏಪ್ರಿಲ್ ರಿಂದ ಮೇ ತನಕ 1083 ಕೋಟಿ ರೂ. ಇಂಧನ ಖರೀದಿ ಮಾಡಿದ್ದೇವೆ. ಎಕ್ಸೇಂಜ್ ಮೂಲಕ ವಿದ್ಯುತ್ ಅಗತ್ಯತೆಗಾಗಿ ಖರೀದಿ ಮಾಡಿದ್ದೆವು. ಮೇ 19 ರಿಂದ ರಿಂದ ಜುಲೈ ತನಕ 1389 ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಿದ್ದೇವೆ. ಮೇ 18 ತನಕ ವಿದ್ಯುತ್ ಖರೀದಿ ಜಾಸ್ತಿಯಾಗಿತ್ತು. ಆನಂತರ ಮಳೆ ರಾಜ್ಯದಲ್ಲಿ ಪ್ರಾರಂಭವಾಯಿತು. ಇದೀಗ ಪೀಕ್ ಹವರ್ಸ್ ನಲ್ಲಿ ವಿದ್ಯುತ್ ಮಾರಾಟ ಮಾಡುತ್ತಿದ್ದೇವೆ. ಎಐ ತಂತ್ರಜ್ಞಾನದ ಮೂಲಕ ವಿದ್ಯುತ್ ಖರೀದಿ- ಮಾರಾಟ ಮಾಡುತ್ತಿದ್ದೇವೆ. ಸದ್ಯ ರಾಜ್ಯದಲ್ಲಿ 10,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದೆ.
ಪ್ರತಿ ದಿನ ಈಗ 20 ಮಿಲಿಯನ್ ವಿದ್ಯುತ್ ಬಾರ್ಟರ್ ವ್ಯವಸ್ಥೆಯಡಿ ಈ ಹಿಂದೆ ವಿದ್ಯುತ್ ಒದಗಿಸಿದ ಪಂಜಾಬ್ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಪ್ರಸ್ತುತ 180 ಮಿಲಿಯನ್ ಯೂನಿಟ್ ವಿದ್ಯುತ್ ಬಳಸುತ್ತಿದ್ದಾರೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹೇಳಿದರು.
ಬೆಂಗಳೂರಿನ ಬಿಎಂಎಜೆಡ್ ವ್ಯಾಪ್ತಿಯಲ್ಲಿ ಹೈವೋಲ್ಟೇಜ್ ಲೈನ್ ಗಳ ಭೂಗತ ಸಂಪರ್ಕ ಮಾರ್ಗ ಕಲ್ಪಿಸುವ ಯೋಜನೆ ಶೇ. 97ರಷ್ಟು ಪೂರ್ಣವಾಗಿದೆ. ಲೋ ಟೆನ್ಷನ್ ವರ್ಗದಲ್ಲಿ ವಿದ್ಯುತ್ ಕಂಬದ ಮೇಲ್ಭಾಗದಲ್ಲಿ ಎಬಿಸಿ ಕೇಬಲ್ ಅಳವಡಿಸುವ ಕಾರ್ಯ ಶೇ.98.56ರಷ್ಟು ಪೂರ್ಣವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ ತಿಳಿಸಿದರು.