ಬೆಂಗಳೂರು, ಜು.27 www.bengaluruwire.com : ಸಿದ್ಧಾರ್ಥನಾಗಿ ಸ್ಯಾಂಡಲ್ ವುಡ್ ಸೀಮೆಗೆ ಬಲಗಾಲಿಟ್ಟ ದೊಡ್ಮನೆಯ ಮೂರನೇ ತಲೆಮಾರಿನ ಭರವಸೆಯ ನಟ ವಿನಯ್ ರಾಜ್ ಕುಮಾರ್ ಈಗ ಮೆಗಾ ಮಾಸ್ ಹೀರೋ ಆಗೋ ಸೂಚನೆ ಕೊಡುತ್ತಿದ್ದಾರೆ. ತನ್ನ ದೊಡ್ಡಪ್ಪ ಚಿಕ್ಕಪ್ಪನ ರೀತಿ ಕ್ಲಾಸ್ಗೂ ಸೈ ಮಾಸ್ಗೂ ಜೈ ಅನ್ನೋದು ಪಕ್ಕ. ಒಂದು ಸರಳ ಪ್ರೇಮ ಕಥೆ ಸಿನಿಮಾದ ಮೂಲಕ ತಾನೆಂಥ ಕ್ಲಾಸ್ ಹೀರೋ ಅನ್ನೋದನ್ನ ಚೆಂದವಾಗಿ ಚಂದನವನದ ಅಭಿಮಾನಿ ದೇವರುಗಳಿಗೆ ತೋರಿಸಿದ ವಿನಯ್ ಈ ಬಾರಿ ಮಾಸ್ ಅವತಾರವನ್ನ ‘ಪೆಪೆ‘ ಚಿತ್ರದ ಮೂಲಕ ಸಾಬೀತು ಮಾಡಲಿದ್ದಾರೆ.
‘ಪೆಪೆ‘ ಸಂಪೂರ್ಣ ಹೊಸಬರ ಹೊಸ ಫೀಲ್ ಕೋಡೋ ಸಿನಿಮಾ. ಈ ಹಿಂದೆ ಒಂದು ಖಡಕ್ ಟೀಸರ್ ಬಿಟ್ಟು ಕಣ್ಣರಳಿಸುವಂತೆ ಮಾಡಿದ ಪೆಪೆ ಟೀಮ್ ಥಿಯೇಟರ್ ಅಡ್ಡಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ಇಂಟ್ರೆಸ್ಟಿಂಗ್ ಏನಪ್ಪ ಅಂದ್ರೆ ‘ಪೆಪೆ’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ಕೊಟ್ಟು ಗುಡ್ ಲಕ್ ಅಂತ ಹರಸಿ ಕಳುಹಿಸಿಕೊಟ್ಟಿದೆ.
‘ಪೆಪೆ‘ ಅವತಾರದಲ್ಲಿ ವಿನಯ್ ರಾಜ್ ಕುಮಾರ್ ನೆಕ್ಸ್ಟ್ ಲೆವಲ್ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ. ‘ಎ’ ಸರ್ಟಿಫಿಕೇಟ್ ಸಿಕ್ಕಿರೋ ವಿಚಾರವನ್ನು ತನ್ನದೇ ದಾಟಿಯಲ್ಲಿ ‘ಪೆಪೆ‘ ಫಿಲ್ಮ್ ಟೀಮ್ ಪ್ರೇಕ್ಷಕರ ಕುತೂಹಲದ ಮನೆ ಬಾಗಿಲಿಗೆ ಪೋಸ್ಟ್ ಮಾಡಿದೆ.
ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಕಲ್ಪನೆಯಲ್ಲಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ‘ಪೆಪೆ’ ಅದ್ಧೂರಿಯಾಗಿ ಮೂಡಿಬಂದಿದೆ. ಅದ್ಯಾಕೆ ‘ಎ’ ಸರ್ಟಿಫಿಕೇಟನ್ನು ಸೆನ್ಸಾರ್ ಮಂಡಳಿ ದಯಪಾಲಿಸಿದೆ ಅನ್ನೋದೆ ಸದ್ಯದ ಕುತೂಹಲ. ಶೀಘ್ರದಲ್ಲಿಯೇ ‘ಪೆಪೆ’ ಪ್ರೇಕ್ಷಕರ ಬಳಿ ಬಂದು ನಿಲ್ಲೋ ದಿನಾಂಕ ನಿಗದಿಯಾಗಲಿದ್ದು ಯಾವ ಕಾರಣಕ್ಕೆ ‘ಪೆಪೆ‘ಗೆ ‘ಎ’ ಸರ್ಟಿಫಿಕೇಟು? ಈ ಸಿನಿಮಾ ಎಷ್ಟು ವಿಭಿನ್ನ ಅನ್ನುವುದು ಗೊತ್ತಾಗಲಿದೆ.